ಕಾಮಿಡಿ ಕಿಲಾಡಿಗಳು 3ರ ವಿಜೇತ ರಾಕೇಶ್ ಪೂಜಾರಿ ಯಾರು, ಸಿನಿಮಾ, ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಕಾಮಿಡಿ ಸ್ಟಾರ್‌ ವಿಶ್ವರೂಪ್
ಕನ್ನಡ ಸುದ್ದಿ  /  ಮನರಂಜನೆ  /  ಕಾಮಿಡಿ ಕಿಲಾಡಿಗಳು 3ರ ವಿಜೇತ ರಾಕೇಶ್ ಪೂಜಾರಿ ಯಾರು, ಸಿನಿಮಾ, ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಕಾಮಿಡಿ ಸ್ಟಾರ್‌ ವಿಶ್ವರೂಪ್

ಕಾಮಿಡಿ ಕಿಲಾಡಿಗಳು 3ರ ವಿಜೇತ ರಾಕೇಶ್ ಪೂಜಾರಿ ಯಾರು, ಸಿನಿಮಾ, ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಕಾಮಿಡಿ ಸ್ಟಾರ್‌ ವಿಶ್ವರೂಪ್

ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ ಯಾರು?: ಕಾಮಿಡಿ ಕಿಲಾಡಿಗಳು 3ರ ವಿಜೇತ ರಾಕೇಶ್ ಪೂಜಾರಿ ಇಂದು (ಮೇ 12) ನಸುಕಿನ ವೇಳೆ ನಿಧನರಾದರು. ಅವರ ದಿಢೀರ್ ಅಗಲುವಿಕೆ ಆಪ್ತರಿಗೆ, ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ಕಾಮಿಡಿ ಕಿಲಾಡಿಗಳು 3ರ ವಿಜೇತ ರಾಕೇಶ್ ಪೂಜಾರಿ ಯಾರು?, ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಕಾಮಿಡಿ ಸ್ಟಾರ್‌ ವಿಶ್ವರೂಪ್ ಹೀಗಿದ್ದರು ನೋಡಿ.

ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ
ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ

ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ ಯಾರು?: ರಂಗಭೂಮಿ, ಕಿರುತೆರೆ, ಸಿನಿಮಾ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸುತ್ತ ವಿಶ್ವರೂಪ್ ಎಂದೇ ಜನಪ್ರಿಯರಾಗಿದ್ದ ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ (34) ಅವರು ಇಂದು (ಮೇ 12) ನಸುಕಿನ 3.30ರ ವೇಳೆಗೆ ಮೃತಪಟ್ಟಿರುವುದಾಗಿ ನಟ ಶಿವರಾಜ್‌ ಕೆಆರ್‌ ಪೇಟೆ ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ತಿಳಿಸಿದರು. ಲೋಬಿಪಿ ಸಮಸ್ಯೆ ಕಾಡಿದ್ದು, ಪಲ್ಸ್ ರೇಟ್ ಕಡಿಮೆಯಾಗಿ ಚಿಕಿತ್ಸೆ ಫಲಕಾರಿಯಾಗದೇ ರಾಕೇಶ್ ಪೂಜಾರಿ ಮೃತಪಟ್ಟಿರುವುದಾಗಿ ಶಿವರಾಜ್ ಕೆಆರ್‌ ಪೇಟೆ ತಿಳಿಸಿದ್ದರು.

ಕಾಮಿಡಿ ಕಿಲಾಡಿಗಳು 3ರ ವಿಜೇತ ರಾಕೇಶ್ ಪೂಜಾರಿ ಯಾರು

ನಾಲ್ಕು ವರ್ಷಗಳ ಹಿಂದೆ ಉದಯವಾಣಿ ಡಿಜಿಟಲ್ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ರಾಕೇಶ್ ಪೂಜಾರಿ, ತಮ್ಮ ರಂಗ ಬದುಕಿನ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದರು. ಬಾಲ್ಯದಲ್ಲಿ ಓದಿನಲ್ಲಿ ಮುಂದಿದ್ದ ರಾಕೇಶ್ ಪೂಜಾರಿ, ಡಾಕ್ಟರ್ ಆಗಬೇಕು ಎಂಬ ಕನಸು ಕಂಡಿದ್ದೆ, ಹತ್ತನೇ ತರಗತಿಗೆ ಬಂದಾಗ ಓದು ಕಷ್ಟವೆನಿಸಿತು. ಎಂಜಿನಿಯರ್ ಕೂಡ ಆಗುವುದು ಸಾಧ್ಯವಿಲ್ಲ ಎಂಬ ಭಾವನೆ ಮೂಡಿತು. ಬಳಿಕ ಪಿಯುಸಿ ಓದು ಮುಗಿಸಿ, ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ ಕೋರ್ಸ್, ಆನಿಮೇಶನ್ ಕೋರ್ಸ್ ಮಾಡಿ, ಬಳಿಕ ಪದವಿಗೆ ಸೇರಿದ್ದನ್ನು ನೆನಪಿಸಿಕೊಂಡಿದ್ದಾರೆ.

ಪದವಿ ವ್ಯಾಸಂಗ ಮಾಡುತ್ತಿರುವಾಗ ಇಂಟರ್ ಕ್ಲಾಸ್ ನಾಟಕ ಸ್ಪರ್ಧೆಗೆ ಕ್ಲಾಸ್ ಲೀಡರ್, ರಾಕೇಶ್ ಶೆಟ್ಟಿ ಮತ್ತು ತಂಡ ಅಂತ ಹೆಸರು ಕೊಟ್ಟಿದ್ದರು. ಸ್ಕ್ರಿಪ್ಟ್ ಇಲ್ಲದೇ ಒಂದೇ ದಿನದಲ್ಲಿ ನಾಟಕ ಪ್ರದರ್ಶನ ನೀಡಿದ್ದೆವು. ಅದಕ್ಕೆ ದ್ವಿತೀಯ ಬಹುಮಾನ ಬಂತು. ಅಲ್ಲಿಂದ ನಾಟಕ ಮಾಡಬೇಕು ಎಂಬ ಅಭಿನಯದ ತುಡಿತ ಹೆಚ್ಚಾಯಿತು ಎಂಬ ಅಂಶವನ್ನೂ ರಾಕೇಶ್ ಪೂಜಾರಿ ಹಂಚಿಕೊಂಡಿದ್ದರು.

ಕಾಮಿಡಿ ಶೋಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ರಾಕೇಶ್ ಪೂಜಾರಿ ಆಪ್ತವಲಯದಲ್ಲಿ ವಿಶ್ವರೂಪ್ ಎಂದೇ ಜನಪ್ರಿಯರು. ಕೆಲವೇ ವರ್ಷಗಳಲ್ಲಿ ಅವರು ಮನೆಮಾತಾಗಿದ್ದು, ಕಾಮಿಡಿ ಕಿಲಾಡಿಗಳು 3ರಲ್ಲಿ ವಿಜೇತರಾಗುವ ಮೂಲಕ ಇಡೀ ಕರ್ನಾಟಕಕ್ಕೆ ಪರಿಚಿತರಾದರು. ಇದಾದ ಬಳಿಕ ಧಾರಾವಾಹಿ, ಸಿನಿಮಾಗಳ ಮೂಲಕ ತೆರೆ ಮೇಲೆ ರಂಜಿಸುವುದಕ್ಕೆ ಶುರುಮಾಡಿದರು.

ರಾಕೇಶ್ ಪೂಜಾರಿ ಅವರು ವಿಶ್ವರೂಪ್ ಆದದ್ದು ಹೇಗೆ?

ರಾಕೇಶ್ ಪೂಜಾರಿ ಅವರು 2022ರಲ್ಲಿ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ಅವರ ಪಾತ್ರದ ಹೆಸರು ವಿಶ್ವರೂಪ್. ಆ ಪಾತ್ರದಲ್ಲಿ ಹಾಸ್ಯದ ಹೊನಲು ಹರಿಸಿದ್ದ ರಾಕೇಶ್ ಪೂಜಾರಿ ಮನೆಮಂದಿ ಹೊಟ್ಟೆ ಹುಣ್ಣಾಗುವಷ್ಟು ನಗುವಂತೆ ಮಾಡಿದ್ದರು. ಹೀಗಾಗಿ ಅವರು ವಿಶ್ವರೂಪ್ ಎಂದೇ ಜನಪ್ರಿಯರಾಗಿದ್ದರು.

ರಾಕೇಶ್ ಪೂಜಾರಿ ಸಿನಿಮಾ, ಕಿರುತೆರೆ, ರಂಗಭೂಮಿ ಬದುಕು

ರಾಕೇಶ್ ಅವರು ಕನ್ನಡ ಮತ್ತು ತುಳು ಸಿನಿಮಾಗಳಲ್ಲಿ ನಟಿಸಿದ್ದರು. ರಾಕೇಶ್ ಪೂಜಾರಿ 'ಪೈಲ್ವಾನ್', 'ಇದು ಎಂಥಾ ಲೋಕವಯ್ಯ' ಎಂಬ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ತುಳು ಭಾಷೆಯ 'ಪೆಟ್ಕಮ್ಮಿ', 'ಅಮ್ಮೆರ್ ಪೊಲೀಸ್', 'ಪಮ್ಮನ್ನೆ ದಿ ಗ್ರೇಟ್', 'ಉಮಿಲ್', 'ಇಲ್ಲೋಕ್ಕೆಲ್' ಸೇರಿ ಹಲವು ಸಿನಿಮಾಗಳಿಗೆ ನಟಿಸಿದ್ದರು. ಕರಾವಳಿಯ ರಿಯಾಲಿಟಿ ಶೋಗಳಾದ 'ಬಲೆ ತೇಲಿಪಾಲೆ', 'ಮೇ 22', 'ಸ್ಟಾರ್', 'ತುಯಿನಾಯೆ ಪೋಯೆ' ಸೇರಿ ಕೆಲ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಕನ್ನಡದ ಕಿರುತೆರೆಯಲ್ಲಿ ಕಾಮಿಡಿ ಸ್ಟಾರ್ ಆಗಿ ಮಿಂಚಿದ್ದರು.

ರಾಕೇಶ್ ಪೂಜಾರಿ ಬಾಲ್ಯ, ಕುಟುಂಬ ಮತ್ತು ಇತರೆ ವಿವರ

ರಾಕೇಶ್ ಪೂಜಾರಿ ಅವರು ಉಡುಪಿ ಮೂಲದವರು. ತಂದೆ ದಿನಕರ ಪೂಜಾರಿ, ತಾಯಿ ಶಾಂಭವಿ. ಅವರಿಗೊಬ್ಬ ಸಹೋದರಿಯೂ ಇದ್ದಾರೆ. ಮನೆಯ ಸಮೀಪವೇ ಹಲವು ಸಿನಿಮಾ ಶೂಟಿಂಗ್ ನಡೆದಿದ್ದು, ಬಾಲ್ಯದಲ್ಲಿ ಶಿವರಾಜ್ ಕುಮಾರ್ ಮತ್ತು ಇತರೆ ಸ್ಟಾರ್ ನಟರನ್ನು ನೋಡಿ ಬೆಳೆದವರು. ಅವರೆಲ್ಲ ಹೇಗೆ ಅಭಿನಯಿಸುತ್ತಾರೆ ಎಂದು ಅಚ್ಚರಿ ಪಟ್ಟಿದ್ದ ರಾಕೇಶ್ ಪೂಜಾರಿ, ಪದವಿ ವ್ಯಾಸಂಗ ಮಾಡುತ್ತಿದ್ದಾಗ ದಿಢೀರ್ ಆಗಿ ಹೊರಬಂದಿದ್ದ ಅವರೊಳಗಿದ್ದ ಕಲಾವಿದೆ. ಕಾಮಿಡಿ ಕಿಲಾಡಿಗಳು 3ರಲ್ಲಿ ವಿಜೇತರಾದ ರಾಕೇಶ್ ಅವರು ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪು ಬೀರಲಾರಂಭಿಸಿದ ವೇಳೆಯೇ ಜೀವನ ಪಯಣ ಮುಗಿಸಿಬಿಟ್ಟರು.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.