ಅಣ್ಣ-ತಂಗಿಯರ ಬಂಧ ಗಟ್ಟಿಗೊಳಿಸಿದ ಚಿತ್ರಗಳಿವು; ರಕ್ಷಾಬಂಧನದಂದು ಒಟಿಟಿಯಲ್ಲಿ ಮಿಸ್ ಮಾಡದೆ ನೋಡಿ
Raksha Bandhan Movies in OTT: ಅಣ್ಣ ತಂಗಿಯರ ಮಧುರ ಬಂಧವನ್ನು ಬಿಂಬಿಸುವ ರಾಖಿ ಹಬ್ಬದಂದು ಸಹೋದರರು ಒಟ್ಟಿಗೆ ಕುಳಿತು ವೀಕ್ಷಿಸಲು ಒಟಿಟಿಯಲ್ಲಿ ಹಲವು ಚಿತ್ರಗಳಿವೆ. ಕನ್ನಡ ಚಿತ್ರಗಳ ಕುರಿತು ನಿಮಗೆ ಈಗಾಗಲೇ ತಿಳಿದಿದೆ. ಉಳಿದಂತೆ ತೆಲುಗು ಹಾಗೂ ಹಿಂದಿ ಸಿನಿಮಾಗಳ ಪಟ್ಟಿ ಇಲ್ಲಿದೆ.
ಇಂದು ಅಣ್ಣ-ತಂಗಿಯರು ಖುಷಿಯಿಂದ ಆಚರಿಸುವ ರಕ್ಷಾಬಂಧನ. ಭ್ರಾತೃತ್ವದ ಮೌಲ್ಯ ಸಾರುವ ವಿಶೇಷ ಹಬ್ಬದ ದಿನದಂದು, ಸಂಭ್ರಮ ಹಾಗೂ ಆಚರಣೆಯ ಜೊತೆಗೆ ರಕ್ಷಾಬಂಧನಕ್ಕೆ ಸಂಬಂಧಿಸಿದ ಸಿನಿಮಾಗಳನ್ನು ನೋಡುವ ಯೋಚನೆ ನಿಮ್ಮದಾಗಿದ್ದರೆ, ಈ ಸುದ್ದಿ ನಿಮಗಾಗಿ. ಸಹೋದರತ್ವದ ಭಾವನೆ ಬಿಂಬಿಸುವ ಹಲವು ಚಲನಚಿತ್ರಗಳು ಒಟಿಟಿಯಲ್ಲಿ ಲಭ್ಯವಿವೆ. ಆಗಸ್ಟ್ 19ರ ಸೋಮವಾರ ರಾಖಿ ಹಬ್ಬದ ದಿನ ಕುಟುಂಬ ಸಮೇತರಾಗಿ ನೋಡಲೇಬೇಕಾದ ಸಿನಿಮಾಗಳಿವು. ತೆಲುಗು ಚಿತ್ರರಂಗದ ಜನಪ್ರಿಯ ಸ್ಟಾರ್ ನಟರು, ಹೀರೋ ಎಂಬ ಪಟ್ಟದ ಹೊರತಾಗಿ ಸಹೋದರನ ಭಾವದಿಂದ ಈ ಚಿತ್ರಗಳಲ್ಲಿ ನಟಿಸಿದರು.
ಕನ್ನಡದಲ್ಲಿ ಅಣ್ಣ-ತಂಗಿ, ತವರಿಗೆ ಬಾ ತಂಗಿ ಸೇರಿದಂತೆ ಹಲವು ಚಿತ್ರಗಳು ಜನಪ್ರಿಯ. ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್ ಅಣ್ಣನಾಗಿ ಮಿಂಚುತ್ತಿರುವವರು. ಕನ್ನಡ ಹೊರತಾಗಿ ತೆಲುಗು ಹಾಗೂ ಹಿಂದಿಯಲ್ಲಿ ನೀವು ನೋಡಬಹುದಾದ ಚಿತ್ರಗಳು ಇಲ್ಲಿವೆ.
ರಾಖಿ ಹಬ್ಬದ ದಿನದಂದು ನೋಡಬೇಕಾದ ಚಲನಚಿತ್ರಗಳು
ಸ್ಟಾರ್ ನಟರಾದ ಪವನ್ ಕಲ್ಯಾಣ್, ಮಹೇಶ್ ಬಾಬು, ಚಿರಂಜೀವಿ, ಜೂನಿಯರ್ ಎನ್‌ಟಿಆರ್ ಮೊದಲಾದ ನಟರು ಅಣ್ಣ-ತಂಗಿ ಸೆಂಟಿಮೆಂಟ್‌ನಿಂದ ನಟಿಸಿದ ಚಿತ್ರಗಳು ಯಾವ ಒಟಿಟಿ ವೇದಿಕೆಯಲ್ಲಿ ಲಭ್ಯವಿದೆ ಎಂಬುದನ್ನು ನೋಡೋಣ.
ರಾಖಿ - YouTube
ಜೂನಿಯರ್ ಎನ್ ಟಿಆರ್ ಅಭಿನಯದ ರಾಖಿ ಸಿನಿಮಾ ಅಣ್ಣ-ತಂಗಿಯರ ಮಧುರ ಬಂಧವನ್ನು ವಿವರಿಸುವ ಚಿತ್ರ. ಕೃಷ್ಣವಂಶಿ ನಿರ್ದೇಶನದ ಈ ಚಿತ್ರ ಭಾರಿ ಯಶಸ್ಸು ಕಂಡಿತ್ತು. ಯೂಟ್ಯೂಬ್‌ನಲ್ಲಿ ಈ ಸಿನಿಮಾವನ್ನು ನೋಡಬಹುದು.
ಅಣ್ಣಾವರಂ - ZEE5
ತೆಲುಗು ಭಾಷಿಕರ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಅಣ್ಣಾವರಂ ಚಿತ್ರ ಕೂಡಾ ಅಣ್ಣ-ತಂಗಿಯರ ಮಧುರ ಬಾಂಧವ್ಯಕ್ಕೆ ಕನ್ನಡಿ ಹಿಡಿಯುವ ಚಿತ್ರ ಎಂದೇ ಹೇಳಬಹುದು. ಈ ಸಿನಿಮಾದಲ್ಲಿ ಸಂಧ್ಯಾ ಅವರು ಪವನ್ ಅವರ ತಂಗಿಯಾಗಿ ನಟಿಸಿದ್ದಾರೆ. ಪ್ರಸ್ತುತ ಈ ಚಲನಚಿತ್ರವನ್ನು ZEE5 ಒಟಿಟಿಯಲ್ಲಿ ನೋಡಬಹುದಾಗಿದೆ.
ಅರ್ಜುನ್ - ಡಿಸ್ನಿ ಪ್ಲಸ್ ಹಾಟ್‌ಸ್ಟಾರ್
ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಅರ್ಜುನ್ ಸಿನಿಮಾ ಕೂಡಾ ಭ್ರಾತೃತ್ವದ ಸೆಂಟಿಮೆಂಟ್ ಇರುವ ಚಲನಚಿತ್ರ. ಈ ಚಿತ್ರ ಅಷ್ಟೊಂದು ಹಿಟ್ ಆಗದಿದ್ದರೂ, ರಾಖಿ ಹಬ್ಬದಂದು ಮನೆಯವರು ಕುಳಿತು ನೋಡಲೇಬೇಕಾದ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಚಲನಚಿತ್ರವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.
ಗೋರಿಂಟಾಕು - ZEE5 OTT
ಗೋರಿಂಟಾಕು ಚಿತ್ರದಲ್ಲಿ ರಾಜಶೇಖರ್, ಮೀರಾ ಜಾಸ್ಮಿನ್ ಅಣ್ಣ ತಂಗಿಯರ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದ ಜನಪ್ರಿಯ ಚಿತ್ರ ಅಣ್ಣ-ತಂಗಿಯ ರಿಮೇಕ್ ಚಿತ್ರವು ಪ್ರಸ್ತುತ ZEE5 ಒಟಿಟಿ ಹಾಗೂ YouTube ನಲ್ಲಿ ಲಭ್ಯವಿದೆ.
ಪುಟ್ಟಿಂಟಿಕಿ ರಾ ಚೆಲ್ಲಿ - YouTube
ಆಕ್ಷನ್ ಕಿಂಗ್ ಅರ್ಜುನ್ ಅಭಿನಯದ ಪುಟ್ಟಿಂಟಿಕಿ ರಾ ಚೆಲ್ಲಿ ಚಿತ್ರ ಕೂಡ ರಕ್ಷಾ ಬಂಧನದ ದಿನ ನೋಡಬೇಕಾದ ಸಿನಿಮಾ. 2004ರಲ್ಲಿ ಬಿಡುಗಡೆಯಾದ ಈ ಚಲನಚಿತ್ರವು ಪ್ರಸ್ತುತ ಯೂಟ್ಯೂಬ್‌ನಲ್ಲಿ ಲಭ್ಯವಿದೆ.
ಹಿಟ್ಲರ್ - YouTube
ಸುಮಾರು 27 ವರ್ಷಗಳ ನಂತರ ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸಿದ ಚಿತ್ರ ಹಿಟ್ಲರ್. ಐವರು ಸಹೋದರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ಇರುವ ಅಣ್ಣನಾಗಿ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇದನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು.
ಹಿಂದಿಯಲ್ಲೂ ಅಣ್ಣ-ತಂಗಿ ಭಾವನೆ ಬಿಂಬಿಸುವ ಹಲವು ಸಿನಿಮಾಗಳಿವೆ. ಇವುಗಳಲ್ಲಿ ದಿಲ್ ಧಡಕ್ನೆ ದೋ (ನೆಟ್‌ಫ್ಲಿಕ್ಸ್), ರಕ್ಷಾಬಂಧನ್ (Zee5 OTT), ಸರಬ್ಜಿತ್ (ಯೂಟ್ಯೂಬ್), ಭಾಗ್ ಮಿಲ್ಕಾ ಭಾಗ್ (ಡಿಸ್ನಿ ಪ್ಲಸ್ ಹಾಟ್‌ಸ್ಟಾರ್) ಚಿತ್ರಗಳು ಸೇರಿವೆ.
ರಕ್ಷಾಬಂಧನ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ರಕ್ಷಾಬಂಧನದಂದು ನೆನಪಿಸಿಕೊಳ್ಳಲೇಬೇಕಾದ ಬಾಲಿವುಡ್ನ ಅಣ್ಣ-ತಂಗಿ; ಮಲತಂದೆ ಬಂದ್ರೂ ನೀನೆನಗೆ ಸಹೋದರ-ಸಹೋದರಿ