TN Seshan: ಗೇಮ್‌ ಚೇಂಜರ್‌ ಸಿನಿಮಾ ಸತ್ಯ ಘಟನೆ ಆಧರಿತವೇ? ಟಿಎನ್‌ ಶೇಷನ್‌ ಬದುಕಿನ ಕಥೆ ಕೇಳಿದ್ರೆ ನೀವು ಥ್ರಿಲ್ಲಾಗುವುದು ಖಚಿತ
ಕನ್ನಡ ಸುದ್ದಿ  /  ಮನರಂಜನೆ  /  Tn Seshan: ಗೇಮ್‌ ಚೇಂಜರ್‌ ಸಿನಿಮಾ ಸತ್ಯ ಘಟನೆ ಆಧರಿತವೇ? ಟಿಎನ್‌ ಶೇಷನ್‌ ಬದುಕಿನ ಕಥೆ ಕೇಳಿದ್ರೆ ನೀವು ಥ್ರಿಲ್ಲಾಗುವುದು ಖಚಿತ

TN Seshan: ಗೇಮ್‌ ಚೇಂಜರ್‌ ಸಿನಿಮಾ ಸತ್ಯ ಘಟನೆ ಆಧರಿತವೇ? ಟಿಎನ್‌ ಶೇಷನ್‌ ಬದುಕಿನ ಕಥೆ ಕೇಳಿದ್ರೆ ನೀವು ಥ್ರಿಲ್ಲಾಗುವುದು ಖಚಿತ

TN Seshan Lifestory: ರಾಮ್‌ ಚರಣ್‌ ನಟನೆಯ ಗೇಮ್‌ ಚೇಂಜರ್‌ ಸಿನಿಮಾ ಇಂದು (ಜ 10) ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ರಾಜಕಾರಣಿಗಳು ಮತ್ತು ಜಿಲ್ಲಾಧಿಕಾರಿ ನಡುವಿನ ಜಿದ್ದಾಜಿದ್ದಿ ಇದೆ. ಈ ಸಿನಿಮಾದ ಕಥೆ ಮಧುರೈನ ಐಎಎಸ್‌ ಅಧಿಕಾರಿ ದಿವಂಗತ ಟಿಎನ್‌ ಶೇಷನ್‌ ಬದುಕಿನ ಕಥೆಯೇ? ಹಿಂದೂಸ್ತಾನ್‌ ಟೈಮ್ಸ್‌ನ ಅಭಿಮನ್ಯು ಮಾಥುರ್ ಬರೆದ ವಿಶೇಷ ವರದಿ ಇಲ್ಲಿದೆ.

ರಾಮ್‌ ಚರಣ್‌ ಮತ್ತು ಟಿಎನ್‌ ಶೇಷನ್‌
ರಾಮ್‌ ಚರಣ್‌ ಮತ್ತು ಟಿಎನ್‌ ಶೇಷನ್‌

ರಾಮ್‌ ಚರಣ್‌ ನಟನೆಯ ಗೇಮ್‌ ಚೇಂಜರ್‌ ಸಿನಿಮಾ ಬಿಡುಗಡೆಯಾಗಿದೆ. ಶಂಕರ್‌ ಎಸ್‌ ನಿರ್ದೇಶನದ ರಾಜಕೀಯ ಥ್ರಿಲ್ಲರ್‌ ಸಿನಿಮಾದಲ್ಲಿ ರಾಮ್‌ ಚರಣ್‌ ದ್ವಿಪಾತ್ರದಲ್ಲಿ ನಟಿಸಿದ್ದು, "ತಂದೆ ಮತ್ತು ಮಗ"ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಐಪಿಎಸ್‌ ಆಗಿ ಆಯ್ಕೆಯಾದ ವ್ಯಕ್ತಿ ಬಳಿಕ ಐಎಎಸ್‌ ಆದದ್ದು, ಬಳಿಕ ಮುಖ್ಯ ಚುನಾವಣಾ ಅಧಿಕಾರಿಯಾಗಿ ರಾಜಕೀಯವನ್ನು ಕ್ಲೀನ್‌ ಮಾಡಲು ಪ್ರಯತ್ನಿಸುವ ಕಥಾಹಂದರ ಗೇಮ್‌ ಚೇಂಜರ್‌ ಸಿನಿಮಾದಲ್ಲಿದೆ. ಈ ಚಿತ್ರದ ಟ್ರೇಲರ್‌ ಬಿಡುಗಡೆಯಾದ ಸಮಯದಲ್ಲಿಯೇ ಸಾಕಷ್ಟು ಜನರು, ‘ಇದು ಮಾಜಿ ಮುಖ್ಯ ಚುನಾವಣಾಧಿಕಾರಿ ಟಿಎನ್‌ ಶೇಷನ್‌ ಬದುಕಿನ ಕಥೆಯಂತೆ ಇದೆಯಲ್ವ’ ಎಂದು ಅಂದುಕೊಂಡಿದ್ದರು. ಟಿಎನ್‌ ಶೇಷನ್‌ ಅವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಸಮಯದಲ್ಲಿ ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದ್ದರು. ಹದಿನಾಲ್ಕು ಸಾವಿರ ಅಭ್ಯರ್ಥಿಗಳನ್ನು ಚುನಾವಣೆಯಿಂದ ಅನರ್ಹಗೊಳಿಸಿದ್ದರು. ಅವರ ಬದುಕಿನ ಕಥೆ ಸಿನಿಮಾ ಕಥೆಗಿಂತ ಹೆಚ್ಚು ಥ್ರಿಲ್ ಉಂಟುಮಾಡುವಂಥದ್ದು.

ಗೇಮ್‌ ಚೇಂಜರ್‌ ಟಿಎನ್‌ ಶೇಷನ್‌ ಬದುಕಿನ ಕಥೆಯೇ?

ಗೇಮ್‌ ಚೇಂಜರ್‌ ಸಿನಿಮಾದಲ್ಲಿ ರಾಮ್‌ ಚರಣ್‌ ಅವರು ರಾಮ್‌ ನಂದನ್‌ ಆಗಿ ನಟಿಸಿದ್ದಾರೆ. ಐಎಎಸ್‌ ಅಧಿಕಾರಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡು ಪವರ್‌ಫುಲ್‌ ರಾಜಕಾರಣಿಗಳ ಜತೆ ಕಾದಾಡುತ್ತ ಇರುತ್ತಾನೆ. "ಮಧುರೈನ ಕಲೆಕ್ಟರ್‌ ಒಬ್ಬರ ಬದುಕಿನ ನಿಜ ಘಟನೆಯನ್ನು ಆಧರಿಸಿ ಕಾರ್ತಿಕ್‌ ಸುಬ್ಬರಾಜು ಈ ಸಿನಿಮಾದ ಕಥೆ ಹೆಣೆದಿದ್ದಾರೆ. ರಾಜಕಾರಣಿಗಳು ಮತ್ತು ಜಿಲ್ಲಾಧಿಕಾರಿಯ ನಡುವೆ ನಡೆದ ಘಟನೆಗಳನ್ನು ನಿರ್ದೇಶಕ ಶಂಕರ್‌ ಅವರು ದೊಡ್ಡಮಟ್ಟದಲ್ಲಿ ತೆರೆ ಮೇಲೆ ತಂದಿದ್ದಾರೆ" ಎಂದು ಈ ಸಿನಿಮಾದ ಪ್ರಮೋಷನ್‌ ಸಮಯದಲ್ಲಿ ಎಸ್‌ಜೆ ಸೂರ್ಯ ಹೇಳಿದ್ದರು.

ಐಎಎಸ್‌ ಅಧಿಕಾರಿ ಟಿಎನ್‌ ಶೇಷನ್‌ ಅವರು ಆರಂಭದಲ್ಲಿ ಮಧುರೈನ ಕಲೆಕ್ಟರ್‌ ಆಗಿದ್ದರು. ಇವರ ಕಾರ್ಯವೈಖರಿ, ಇವರ ಸಾಧನೆ ಅಮೋಘವಾಗಿತ್ತು. 1990ರ ದಶಕದಲ್ಲಿ ಮುಖ್ಯ ಚುನಾವಣಾಧಿಕಾರಿಯಾಗಿ ಆಯ್ಕೆಯಾಗಿದ್ದರು. ಈ ಸಿನಿಮಾವು ಟಿಎನ್‌ ಶೇಷನ್‌ ಅವರ ಬದುಕಿನ ಕಥೆಯಿಂದ ಸ್ಪೂರ್ತಿ ಪಡೆದಿರುವುದು ನಿಜ. ಆದರೆ, ಸಿನಿಮಾದಲ್ಲಿ ಸಾಕಷ್ಟು ಕಾಲ್ಪನಿಕ ಅಂಶಗಳು ಇವೆ.

ಟಿಎನ್‌ ಶೇಷನ್‌ ಯಾರು?

ಟಿಎನ್‌ ಶೇಷನ್‌ ಅವರು 1993ರಲ್ಲಿ ತಮಿಳುನಾಡಿನಲ್ಲಿ (ಮದ್ರಾಸ್‌ ಪ್ರೆಸಿಡೆನ್ಸಿ) ಜನಿಸಿದರು. 1953ರಲ್ಲಿ ಮದ್ರಾಸ್‌ ಪೊಲೀಸ್‌ ಸರ್ವೀಸ್‌ ಪರೀಕ್ಷೆ ಉತ್ತೀರ್ಣರಾದರು. ಆದರೆ, ಈ ಉದ್ಯೋಗಕ್ಕೆ ಸೇರಲಿಲ್ಲ. 1954ರಲ್ಲಿ ಯುಪಿಎಸ್‌ಸಿ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ತಮಿಳುನಾಡು ಕೇಡರ್‌ನ 1955ರ ಐಎಎಸ್‌ ಅಧಿಕಾರಿಯಾದರು. ಇವರು ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಆಟೋಮಿಕ್‌ ಎನರ್ಜಿ ಕಮಿಷನ್‌ನ ಕಾರ್ಯದರ್ಶಿಯಾಗಿ, ಬಾಹ್ಯಾಕಾಶ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ, ಪರಿಸರ ಮತ್ತು ಅರಣ್ಯ ಸಚಿವಾಲಯದ ಕಾರ್ಯದರ್ಶಿಯಾಗಿ, ಕ್ಯಾಬಿನೆಟ್‌ ಸೆಕ್ರೆಟರಿಯಾಗಿ (ಭಾರತೀಯ ನಾಗರಿಕ ಸೇವೆಯ ಹೈರಾರ್ಕಿಯಲ್ಲಿ ಅತ್ಯಂತ ಹಿರಿಯ ಹುದ್ದೆ) ಕಾರ್ಯನಿರ್ವಹಿಸಿದ್ದಾರೆ.

ಟಿಎನ್‌ ಶೇಷನ್‌ ಅವರು ಭಾರತದ ಚುನಾವಣಾ ಕ್ಷೇತ್ರದಲ್ಲಿ ನಡೆಸಿದ ಸುಧಾರಣೆಗಳ ಕುರಿತು ಹಿಂದೂಸ್ತಾನ್‌ ಟೈಮ್ಸ್‌ ವರದಿ (ಎಚ್‌ಟಿ ಆರ್ಕೈವ್ಸ್‌ 1995)
ಟಿಎನ್‌ ಶೇಷನ್‌ ಅವರು ಭಾರತದ ಚುನಾವಣಾ ಕ್ಷೇತ್ರದಲ್ಲಿ ನಡೆಸಿದ ಸುಧಾರಣೆಗಳ ಕುರಿತು ಹಿಂದೂಸ್ತಾನ್‌ ಟೈಮ್ಸ್‌ ವರದಿ (ಎಚ್‌ಟಿ ಆರ್ಕೈವ್ಸ್‌ 1995)

ತನ್ನ ಕಾರ್ಯಾವಧಿಯಲ್ಲಿ ಇವರು ಹಿರಿಯ ರಾಜಕಾರಣಿಗಳು ಮತ್ತು ಸರಕಾರದ ಜತೆ ವೈಮನಸ್ಸು ಕಟ್ಟಿಕೊಂಡರು. ತನ್ನ ಕೆಲಸದ ರೀತಿಯಿಂದ ರಾಜಕಾರಣಿಗಳ ಚಳಿ ಬಿಡಿಸಿದ್ದರು. 1970ರಲ್ಲಿ ಇವರು ತಮಿಳುನಾಡಿನ ಕೈಗಾರಿಕೆ, ಕೃಷಿ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಮುಖ್ಯಮಂತ್ರಿ ಜತೆ ಭಿನ್ನಾಭಿಪ್ರಾಯ ಉಂಟಾಗಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪರಿಸರ ಮತ್ತು ಅರಣ್ಯ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಇವರು ತೆಹ್ರಿ ಅಣೆಕಟ್ಟು ಮತ್ತು ಸರ್ದಾರ್‌ ಸರೋವರ್‌ ಅಣೆಕಟ್ಟು ನಿರ್ಮಿಸುವ ಕೇಂದ್ರ ಸರಕಾರದ ಯೋಜನೆಯನ್ನು ವಿರೋಧಿಸಿದ್ದರು. ಗೇಮ್‌ ಚೇಂಜರ್‌ ಸಿನಿಮಾದಲ್ಲಿಯೂ ಇಂತಹ ಘಟನೆಗಳನ್ನು ಹೋಲುವ ಹಲವು ದೃಶ್ಯಗಳು ಇವೆ. ಸಿನಿಮಾದಲ್ಲಿ ಅಪ್ಪಣ್ಣ ಅವರು ಉಕ್ಕಿನ ಘಟಕ ನಿರ್ಮಾಣಕ್ಕೆ ವಿರೋಧಿಸುತ್ತಾರೆ. ರಾಮ್‌ ನಂದನ್‌ ಅವರು ಸಿಎಂ ಜತೆ ಭಿನ್ನಾಭಿಪ್ರಾಯ ಹೊಂದಿರುತ್ತಾರೆ.

ಮುಖ್ಯ ಚುನಾವಣಾಧಿಕಾರಿಯಾಗಿ ಟಿಎನ್‌ ಶೇಷನ್‌ ಸಾಧನೆ

1990-96ರ ಅವಧಿಯಲ್ಲಿ ಟಿಎನ್‌ ಶೇಷನ್‌ ಅವರು ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಚುನಾವಣೆಯ ಸುಧಾರಣೆಗೆ ಪ್ರಮುಖ ಪಾತ್ರವಹಿಸಿದ್ದರು. ಮತದಾರರಿಗೆ ಲಂಚ ನೀಡುವುದು, ಬೆದರಿಸುವುದು, ಚುನಾವಣೆಯ ಸಮಯದಲ್ಲಿ ಮದ್ಯ ವಿತರಣೆ, ಪ್ರಚಾರಕ್ಕಾಗಿ ಸರಕಾರದ ನಿಧಿ ಮತ್ತು ವಾಹನಗಳ ಬಳಕೆ, ಮತದಾರರ ಜಾತಿ, ಕೋಮು ಭಾವನೆಗಳನ್ನು ಕೆರಳಿಸುವುದು, ಪ್ರಚಾರಕ್ಕಾಗಿ ಪೂಜಾ ಸ್ಥಳಗಳ ಬಳಕೆ, ಅನುಮತಿಯಿಲ್ಲದೆ ಧ್ವನಿವರ್ಧಕ ಬಳಕೆ ಮುಂತಾದವುಗಳನ್ನು ನಿಗ್ರಹಿಸಿದ್ದರು. ಚುನಾವಣಾ ನೀತಿ ಸಂಹಿತೆ, ಮತದಾರರ ಗುರುತಿನ ಚೀಟಿಗಳು, ಚುನಾವಣಾ ವೆಚ್ಚ ಮಿತಿ ಮುಂತಾದವುಗಳನ್ನು ಶೇಷನ್‌ ಪರಿಚಯಿಸಿದ್ದರು.

ಇವರ ನೇತೃತ್ವದಲ್ಲಿ ಚುನಾವಣಾ ಆಯೋಗವು 1992ರಲ್ಲಿ ಬಿಹಾರ ಮತ್ತು ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಗಳನ್ನು ಧೈರ್ಯವಾಗಿ ರದ್ದುಗೊಳಿಸಿತ್ತು. ಸುಮಾರು 40 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ಪ್ರೊಫೈಲ್‌ ಪರಿಶೀಲಿಸಿದ್ದರು. ಸುಳ್ಳು ಮಾಹಿತಿ ನೀಡಿರುವ 14 ಸಾವಿರ ಅಭ್ಯರ್ಥಿಗಳನ್ನು ಚುನಾವಣೆ ಸ್ಪರ್ಧೆಯಿಂದ ಅನರ್ಹಗೊಳಿಸಿದ್ದರು. ಚುನಾವಣಾ ಸುಧಾರಣೆಗಳಿಗಾಗಿ ಟಿಎನ್‌ ಶೇಷನ್‌ ಅವರಿಗೆ 1996ರಲ್ಲಿ ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅಂದಹಾಗೆ, ಗೇಮ್‌ ಚೇಂಜರ್‌ ಸಿನಿಮಾದಲ್ಲಿಯೂ ರಾಮ್‌ ನಂದನ್‌ ಮುಖ್ಯ ಚುನಾವಣಾಧಿಕಾರಿಯಾಗಿ ರಾಜಕಾರಣಿಗಳಿಗೆ ಅನ್‌ಪ್ರಿಡೆಕ್ಟೆಬಲ್‌ ಆಘಾತಗಳನ್ನು ನೀಡುತ್ತ ಇರುತ್ತಾನೆ.

ಟಿಎನ್‌ ಶೇಷನ್‌  ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದ ಸಮಯದ ಹಿಂದೂಸ್ತಾನ್‌ ಟೈಮ್ಸ್‌ ವರದಿ.
ಟಿಎನ್‌ ಶೇಷನ್‌ ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದ ಸಮಯದ ಹಿಂದೂಸ್ತಾನ್‌ ಟೈಮ್ಸ್‌ ವರದಿ.

ಟಿಎನ್‌ ಶೇಷನ್‌ ಅವರು 1996ರಲ್ಲಿ ಮುಖ್ಯ ಚುನಾವಣಾಧಿಕಾರಿ ಹುದ್ದೆಯಿಂದ ನಿವೃತ್ತಿ ಪಡೆದರು. ಇವರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಕೆಆರ್‌ ನಾರಾಯಣ್‌ ವಿರುದ್ಧ ಸೋತರು. 1999ರಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಗಾಂಧಿನಗರದಿಂದ ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಎಲ್‌ಕೆ ಅಡ್ವಾಣಿ ವಿರುದ್ಧ ಸೋತರು. ಇದಾದ ಬಳಿಕ ಇವರು ಸಾರ್ವಜನಿಕ ಬದುಕಿನಿಂದ ನಿವೃತ್ತಿಯಾದರು. ಇದಾದ ಬಳಿಕ ಚೆನ್ನೈನ ಗ್ರೇಟ್‌ ಲೇಕ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ ನಾಯಕತ್ವದ ಪಾಠ ಮಾಡುತ್ತಿದ್ದರು. ಇದಾದ ಬಳಿಕ ಮಸ್ಸೂರಿಗೆ ತೆರಳಿದರು. ಚೆನ್ನೈನಲ್ಲಿ 2019ರಲ್ಲಿ ತನ್ನ 86ನೇ ವಯಸ್ಸಿನಲ್ಲಿ ನಿಧನರಾದರು.

ಲೇಖನ: ಅಭಿಮನ್ಯು ಮಾಥುರ್, ಹಿಂದೂಸ್ತಾನ್‌ ಟೈಮ್ಸ್‌

Whats_app_banner