ಕನ್ನಡದ ವೆಬ್‌ ಸಿರೀಸ್‌ಗಳ ಕೊರತೆಯನ್ನು ನೀಗಿಸಿದ ʻಅಯ್ಯನ ಮನೆʼ; ರಾಜೀವ್‌ ಹೆಗಡೆ ಬರಹ
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡದ ವೆಬ್‌ ಸಿರೀಸ್‌ಗಳ ಕೊರತೆಯನ್ನು ನೀಗಿಸಿದ ʻಅಯ್ಯನ ಮನೆʼ; ರಾಜೀವ್‌ ಹೆಗಡೆ ಬರಹ

ಕನ್ನಡದ ವೆಬ್‌ ಸಿರೀಸ್‌ಗಳ ಕೊರತೆಯನ್ನು ನೀಗಿಸಿದ ʻಅಯ್ಯನ ಮನೆʼ; ರಾಜೀವ್‌ ಹೆಗಡೆ ಬರಹ

ಯಾವುದೇ ಸ್ಟಾರ್‌ ಕಲಾವಿದರನ್ನು ಹಾಕಿಕೊಳ್ಳದೇ, ಉತ್ತಮ ಪ್ರಯತ್ನ ಮಾಡಿರುವ ರಮೇಶ್‌ ಇಂದಿರಾ ಸಾಹಸ ಮೆಚ್ಚುವಂಥದ್ದು. ಹೊಸ ಮಾರುಕಟ್ಟೆಗೆ ಧುಮುಕುವಾಗ ಇಂತಹ ಪ್ರಯತ್ನಗಳೇ ಯಶಸ್ಸು ತಂದುಕೊಡಬಹುದು. ಅಯ್ಯನ ಮನೆ ವೆಬ್‌ ಸಿರೀಸ್‌ ಬಗ್ಗೆ ರಾಜೀವ್‌ ಹೆಗಡೆ ಬರಹ.

ಕನ್ನಡದ ವೆಬ್‌ ಸಿರೀಸ್‌ಗಳ ಕೊರತೆಯನ್ನು ನೀಗಿಸಿದ ʻಅಯ್ಯನ ಮನೆʼ; ರಾಜೀವ್‌ ಹೆಗಡೆ ಬರಹ
ಕನ್ನಡದ ವೆಬ್‌ ಸಿರೀಸ್‌ಗಳ ಕೊರತೆಯನ್ನು ನೀಗಿಸಿದ ʻಅಯ್ಯನ ಮನೆʼ; ರಾಜೀವ್‌ ಹೆಗಡೆ ಬರಹ

ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಸಿರೀಸ್‌ಗಳನ್ನು ನೋಡಿದಾಗಲೆಲ್ಲ, ಕನ್ನಡ ಸಿನಿ ಉದ್ಯಮದ ಬಗ್ಗೆ ಬೇಸರವಾಗುತ್ತಿತ್ತು. ಅದರೆ ಜೀ5ನಲ್ಲಿ ʻಅಯ್ಯನ ಮನೆʼ ಬರುತ್ತಿದೆ ಎನ್ನುವ ಟ್ರೇಲರ್‌ ನೋಡಿದಾಗ ಖುಷಿಯಾಯಿತು. ಅಷ್ಟಕ್ಕೂ ಕನ್ನಡಕ್ಕೆ ಇದೇನು ಮೊದಲ ಸಿರೀಸ್‌ ಆಗಿರಲಿಲ್ಲ. ಈ ಹಿಂದೆ ವೂಟ್‌ನಲ್ಲಿ ಎರಡು ಸಿರೀಸ್‌ಗಳು ಬಂದಿದ್ದವು. ಅದಾದ ಬಳಿಕ ತಮ್ಮದೇ ಆದ ವೆಬ್‌ಸೈಟ್‌ನಲ್ಲಿ ಒಂದು ಸಿರೀಸ್‌ನ್ನು ರಕ್ಷಿತ್‌ ಶೆಟ್ಟಿ ತಂಡ ಬಿಡುಗಡೆ ಮಾಡಿತ್ತು.

ಆದರೆ ʻಅಯ್ಯನ ಮನೆʼಯನ್ನು ಕನ್ನಡದಲ್ಲಿ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಬಿಡುಗಡೆಯಾದ ಮೊದಲ ಸಿರೀಸ್‌ ಎಂದು ಹೇಳಬಹುದು. ಶೃತಿ ನಾಯ್ಡು ನಿರ್ಮಾಣದಲ್ಲಿ ರಮೇಶ್‌ ಇಂದಿರಾ ನಿರ್ದೇಶಿಸಿರುವ ʻಅಯ್ಯನ ಮನೆʼ ಸಿರೀಸ್‌ನಲ್ಲಿ ದಕ್ಷಿಣ ಕನ್ನಡದ ದೈವದ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಮೊದಲ ಎಪಿಸೋಡ್‌ನಿಂದ ಕೊನೆಯವರೆಗೂ ದೈವದ ಮೇಲೆ ಕಥೆ ಹೋಗುತ್ತದೆ ಎಂದೆನಿಸಿದರೂ, ಅಂತಿಮವಾಗಿ ಚಿತ್ರಣವೇ ಬದಲಾಗುತ್ತದೆ. ಈ ಮೂಲಕ ಒಟಿಟಿ ಸಿರೀಸ್‌ನಲ್ಲಿ ಇರಬೇಕಾದ ಮಾರ್ಕೆಟಿಂಗ್‌ ಹಾಗೂ ಸಸ್ಪೆನ್ಸ್‌ ಗುಣಗಳಿವೆ. ಹಾಗೆಯೇ ʼಅಯ್ಯನ ಮನೆʼ ಯಶಸ್ವಿಯಾದರೆ ಇನ್ನಷ್ಟು ಸಿರೀಸ್‌ ನಿರೀಕ್ಷಿಸಬಹುದಾದ ಸುಳಿವು ಕೂಡ ಇವೆ.

ಪಕ್ಕಾ ಮನೋರಂಜನೆಗಾಗಿ ʻಅಯ್ಯನ ಮನೆʼಯನ್ನು ಖಂಡಿತವಾಗಿಯೂ ಒಮ್ಮೆ ನೋಡಬಹುದು. ಹಾಗೆಯೇ ಕನ್ನಡ ಒಟಿಟಿ ಮಾರುಕಟ್ಟೆ ಇನ್ನಷ್ಟು ಬೆಳೆಯಲು ಇದು ನೆರವಾಗಬಹುದು. ಐಎಂಡಿಬಿ ರೇಟಿಂಗ್ಸ್‌ ಕೂಡ ಉತ್ತಮವಾಗಿದೆ. ಸಿರೀಸ್‌ನಲ್ಲಿ ಬಳಸಿದ ಕರಾವಳಿ ಊರಿನ ಸೊಗಡು, ಭಾಷೆ ಇಷ್ಟವಾಯಿತು. ಅಲ್ಲಿಯ ಸಂಸ್ಕೃತಿಯನ್ನು ಇನ್ನಷ್ಟು ತೋರಿಸಿದ್ದರೆ, ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುವ ಸಾಧ್ಯತೆಯಿತ್ತು. ʻಕಾಂತಾರʼ ಮಾಡಿದ ಮ್ಯಾಜಿಕ್‌ನಿಂದ ಇಂತಹ ನಿರೀಕ್ಷೆಗಳು ಸಾಮಾನ್ಯ ಪ್ರೇಕ್ಷಕರಲ್ಲಿ ಹುಟ್ಟಿಕೊಳ್ಳುವುದು ಸಾಮಾನ್ಯ.

ಅಂದ್ಹಾಗೆ ಕಾಂತಾರ ಖ್ಯಾತಿಯ ಮಾನಸಿ ಸುಧೀರ್‌, ಖುಷಿ ರವಿ ಹಾಗೂ ಅಕ್ಷಯ್‌ ನಾಯಕ್‌ ನಟನೆ ಇಷ್ಟವಾಗುತ್ತದೆ. ನಟನೆಯಲ್ಲಿ ರಣ ಭಯಂಕರವಾಗಿ ಮಿಂಚಿದ್ದ ರಮೇಶ್‌ ಇಂದಿರಾ ಅವರು ಮೊದಲ ಪ್ರಯತ್ನದಲ್ಲಿ ಮನ ಗೆಲ್ಲುತ್ತಾರೆ.

ಹಾಗೆಯೇ ಯಾವುದೇ ಸ್ಟಾರ್‌ ಕಲಾವಿದರನ್ನು ಹಾಕಿಕೊಳ್ಳದೇ, ಉತ್ತಮ ಪ್ರಯತ್ನ ಮಾಡಿರುವ ರಮೇಶ್‌ ಇಂದಿರಾ ಸಾಹಸ ಮೆಚ್ಚುವಂಥದ್ದು. ಹೊಸ ಮಾರುಕಟ್ಟೆಗೆ ಧುಮುಕುವಾಗ ಇಂತಹ ಪ್ರಯತ್ನಗಳೇ ಯಶಸ್ಸು ತಂದುಕೊಡಬಹುದು. ಆದರೆ ಬೇಸರದ ಸಂಗತಿಯೆಂದರೆ ಕೇವಲ ಕನ್ನಡ ಹಾಗೂ ಹಿಂದಿಯಲ್ಲಿ ಮಾತ್ರ ಆಡಿಯೋ ಲಭ್ಯವಿದೆ. ಕನ್ನಡ ಸಿನಿ ಉದ್ಯಮವಾಗಿ ಒಟಿಟಿ ಮಾರುಕಟ್ಟೆಯನ್ನು ಬೆಳೆಸಿಕೊಳ್ಳಲು ದಕ್ಷಿಣ ಭಾರತದ ಉಳಿದ ಭಾಷೆಯಲ್ಲಿ ಇದ್ದರೆ ಒಳ್ಳೆಯದಿತ್ತು ಎನಿಸುತ್ತದೆ. ಏಕೆಂದರೆ ಇಂತಹ ಕಥೆಗಳನ್ನು ಕೇರಳ, ಆಂಧ್ರ ಹಾಗೂ ತಮಿಳುನಾಡಿನ ಪ್ರೇಕ್ಷಕರು ಇಷ್ಟಪಡುವ ಸಾಧ್ಯತೆ ಹೆಚ್ಚಿರುತ್ತದೆ. ನಮ್ಮ ಕಥೆಗಳು ಪ್ರತಿ ಭಾಷೆಯಲ್ಲೂ ಇತರ ಪ್ರದೇಶಗಳಿಗೆ ತಲುಪಿದಾಗ ಮಾತ್ರ, ಒಟಿಟಿಯಲ್ಲಿ ನಮಗೂ ಬೇಡಿಕೆ ಹೆಚ್ಚಬಹುದು.

ಆದಾಗ್ಯೂ ಧಾರಾವಾಹಿ ಲೋಕದಲ್ಲಿ ಈಗಾಗಲೇ ತಮ್ಮದೇ ಛಾಪು ಮೂಡಿಸಿರುವ ಶೃತಿ ನಾಯ್ಡುಗೆ ಇಂತಹ ಸಾಹಸ ಮಾಡಲು ಮುಂದಾಗಿರುವುದು ಶ್ಲಾಘನೀಯ. ಕನ್ನಡದ ಇನ್ನಿತರ ಖ್ಯಾತ ನಿರ್ಮಾಣ ಸಂಸ್ಥೆಗಳು ನಮ್ಮ ನೆಲದ ಕಥೆಗಳ ಮೂಲಕ ಇನ್ನಷ್ಟು ಸಿರೀಸ್‌ ಮಾಡುವಂತಾಗಲಿ. ಆ ಮೂಲಕ ಅದೆಷ್ಟೋ ಯುವ ಪ್ರತಿಭಾನ್ವಿತ ನಿರ್ದೇಶಕ, ಕಥೆಗಾರರು ಹಾಗೂ ಕಲಾವಿದರಿಗೆ ವೇದಿಕೆ ಸೃಷ್ಟಿಯಾಗಲಿ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.