Dhoom 4: ಏಪ್ರಿಲ್ 2026ರಲ್ಲಿ ಆರಂಭವಾಗುತ್ತಾ 'ಧೂಮ್ 4' ಚಿತ್ರೀಕರಣ; ಕಳ್ಳನ ಪಾತ್ರದಲ್ಲಿ ಅಭಿನಯಿಸುತ್ತಾರಾ ರಣಬೀರ್ ಕಪೂರ್?
ಏಪ್ರಿಲ್ 2026ರಲ್ಲಿ ಧೂಮ್ 4 ಚಿತ್ರೀಕರಣ ಆರಂಭವಾಗಬಹುದು ಎಂದು ಹೇಳಲಾಗಿದೆ. ಇದರಲ್ಲಿ ರಣಬೀರ್ ಕಪೂರ್ ಮುಖ್ಯ ಪಾತ್ರವಹಿಸಲಿದ್ದು, ಜನರಿಗೆ ಮನರಂಜೆ ನೀಡಲು ಮತ್ತೆ ಧೂಮ್ ಸರಣಿ ತೆರೆಗೆ ಬರಲಿದೆ ಎಂಬ ವದಂತಿ ಇದೆ.

ಕೊನೆಗೂ ‘ಧೂಮ್’ ಸರಣಿ ಚಿತ್ರಗಳ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. 2013ರಲ್ಲಿ ‘ಧೂಮ್ 3’ ಚಿತ್ರವು ಬಂದಿತ್ತು. ಸಾಕಷ್ಟು ಯಶಸ್ವಿಯೂ ಆಗಿತ್ತು. ಆ ನಂತರ ಈ ಸರಣಿಯಲ್ಲಿ ಯಾವೊಂದು ಚಿತ್ರ ಸಹ ಬಂದಿರಲಿಲ್ಲ, ‘ಧೂಮ್ 4’ ಯಾವಾಗ ಎಂಬ ಪ್ರಶ್ನೆ ಕೇಳಿ ಬರುತ್ತಲೇ ಇತ್ತು. ಇದೀಗ ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ‘ಧೂಮ್ 4’ ಚಿತ್ರವು ಮುಂದಿನ ವರ್ಷ ಅಂದರೆ 2026ರ ಏಪ್ರಿಲ್‍ನಲ್ಲಿ ಪ್ರಾರಂಭವಾಗಲಿದ್ದು, ಈ ಬಾರಿ ಕಳ್ಳನಾಗಿ ರಣಬೀರ್ ಕಪೂರ್ ನಟಿಸುತ್ತಿರುವುದು ವಿಶೇಷ.
ರಣಬೀರ್ ಕಪೂರ್ ಕಳ್ಳನ ಪಾತ್ರದಲ್ಲಿ ನಟಿಸಲಿದ್ದಾರಾ?
ರಣಬೀರ್ ಕಪೂರ್ ಸದ್ಯ ‘ರಾಮಾಯಣ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಆ ನಂತರ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲಿ ನಟಿಸಲಿದ್ದಾರಂತೆ. ಈ ಎರಡೂ ಚಿತ್ರಗಳ ಕೆಲಸಗಳು ಮುಂದಿನ ವರ್ಷದವರೆಗೂ ನಡೆಯಲಿದ್ದು, ಆ ನಂತರ ‘ಧೂಮ್ 4’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಈ ಮಧ್ಯೆ, ರಣಬೀರ್ ಕಪೂರ್ ಒಂದಿಷ್ಟು ತಯಾರಿಗಳನ್ನು ಮಾಡಿಕೊಂಡು, ‘ಧೂಮ್ 4’ ಅಖಾಡಕ್ಕೆ ಇಳಿಯುತ್ತಾರಂತೆ. ಕಳ್ಳನ ಪಾತ್ರದಲ್ಲಿ ರಣಬೀರ್ ನಟಿಸಲಿದ್ದಾರೆ.
ಧೂಮ್ ಸರಣಿಗಿದ್ದಾರೆ ಅಭಿಮಾನಿಗಳು
ಬಾಲಿವುಡ್‍ನ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಯಶ್‍ರಾಜ್ ಫಿಲಂಸ್‍ನ ಜನಪ್ರಿಯ ಸರಣಿ ಈ ‘ಧೂಮ್’ ಸರಣಿ. ಈ ಸರಣಿಯ ಮೊದಲ ಚಿತ್ರ 2004ರಲ್ಲಿ ಬಿಡುಗಡೆಯಾಗಿತ್ತು. ಚಿತ್ರದ ಮೊದಲ ಭಾಗದಲ್ಲಿ ಜಾನ್ ಅಬ್ರಹಾಂ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ಸಿಕ್ಕ ಯಶಸ್ಸು ಮತ್ತು ಜನಪ್ರಿಯತೆಯಿಂದಾಗಿ, ಎರಡು ವರ್ಷಗಳಲ್ಲೇ ಸರಣಿಯ ಎರಡನೆಯ ಭಾಗ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಹೃತಿಕ್ ರೋಶನ್ ಮತ್ತು ಐಶ್ವರ್ಯಾ ರೈ ನಟಿಸಿದ್ದರು. ಹೃತಿಕ್ ರೋಶನ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರ ದೊಡ್ಡ ಯಶಸ್ಸು ಪಡೆದಿತ್ತು. ಇದಾದ ಮೇಲೆ 2013ರಲ್ಲಿ ಸರಣಿಯ ಮೂರನೆಯ ಭಾಗ ಬಂದಿತ್ತು. ಈ ಚಿತ್ರದಲ್ಲಿ ಆಮೀರ್ ಖಾನ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
‘ಧೂಮ್ 3’ ನಂತರ ಇನ್ನೊಂದು ಚಿತ್ರಕ್ಕೆ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರೂ, ಕಾರಣಾಂತರಗಳಿಂದ ಒಂದು ದಶಕದಿಂದ ಈ ಸರಣಿಯಲ್ಲಿ ಯಾವುದೇ ಚಿತ್ರ ಬಂದಿರಲಿಲ್ಲ. ಈ ಮೂರೂ ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಮತ್ತು ‘ಧೂಮ್ 3’ ಚಿತರವನ್ನು ನಿರ್ದೇಶಿಸಿದ್ದ ವಿಜಯ್ ಕೃಷ್ಣ ಆಚಾರ್ಯ, ಈಗೊಂದು ಕಥೆ ಮಾಡಿಟ್ಟುಕೊಂಡಿದ್ದು, ‘ಧೂಮ್ 4’ ಹೆಸರಿನಲ್ಲಿ ನಿರ್ದೇಶನ ಮಾಡುವುದಕ್ಕೆ ತಯಾರಿ ನಡೆಸಿದ್ದಾರಂತೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರೂ ಇರಲಿದ್ದಾರೆ ಎಂದು ಹೇಳಲಾಗುತ್ತಿದ್ದು, ದಕ್ಷಿಣದ ಜನಪ್ರಿಯ ನಟರೊಬ್ಬರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇದೆ.
ಸದ್ಯಕ್ಕೆ ಇವೆಲ್ಲವೂ ಅಂತೆ-ಕಂತೆಗಳು. ಚಿತ್ರತಂಡವೇ ಯಾವಾಗ ಈ ಕುರಿತು ಅಧಿಕೃತ ಘೋಷಣೆ ಹೊರಡಿಸಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಚಿತ್ರಕ್ಕೆ ಇಬ್ಬರು ಮಹಿಳಾ ನಾಯಕಿಯರು ಬೇಕಾಗಿದ್ದು, ಆ ಇಬ್ಬರು ಯಾರು ಎಂಬ ಹುಡುಕಾಟ ನಡೆಯುತ್ತಿದೆ ಎಂಬ ಸುದ್ದಿಯೂ ಇದೆ. ಒಟ್ಟಿನಲ್ಲಿ ಚಿತ್ರತಂಡ ಅಧಿಕೃತ ಮಾಹಿತಿ ನೀಡಿದ ನಂತರವೇ ಎಲ್ಲವೂ ಸ್ಪಷ್ಟವಾಗಲಿದೆ.
ವರದಿ: ಚೇತನ್ ನಾಡಿಗೇರ್
ಇದನ್ನೂ ಓದಿ: OTT Release This Week: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾಗಳಿವು; ಸಾಲು ಸಾಲು ಕ್ರೈಂ ಥ್ರಿಲ್ಲರ್ ಚಿತ್ರ ಬಿಡುಗಡೆ
