Chhaava Film: ಛಾವಾ ಸಿನಿಮಾದಲ್ಲಿ ಮಹಾರಾಣಿ ಯೇಸುಬಾಯಿ ಪಾತ್ರಕ್ಕೆ ನ್ಯಾಯ ಒದಗಿಸಿದ ರಶ್ಮಿಕಾ ಮಂದಣ್ಣ; ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ
ಛಾವಾ ಸಿನಿಮಾದಲ್ಲಿ ಮಹಾರಾಣಿ ಯೇಸುಬಾಯಿ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ನ್ಯಾಯ ಒದಗಿಸಿದ್ದಾರೆ. ಪ್ಯಾನ್-ಇಂಡಿಯನ್ ನಟಿಯರಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.

Rashmika mandanna in chhaava film: ಛಾವಾ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರ ಪಾತ್ರ ಹಾಗೂ ಅವರ ಅಭಿನಯ ಜನಮೆಚ್ಚುಗೆ ಗಳಿಸಿದೆ. ರಶ್ಮಿಕಾ ಮಂದಣ್ಣ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದಾಗಲೇ ಸಾಕಷ್ಟು ಜನ ಈ ಸಿನಿಮಾದ ಬಗ್ಗೆ ಹಾಗೂ ರಶ್ಮಿಕಾ ಅವರ ಪಾತ್ರದ ಬಗ್ಗೆ ಕುತೂಹಲ ಹೊಂದಿದ್ದರು. ಹಿಂದೆಂದೂ ಅಭಿನಯಿಸಿರದ ರೀತಿಯ ಪಾತ್ರದಲ್ಲಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ ಎಂದು ಎಲ್ಲರ ಗಮನ ‘ಛಾವಾ’ ಸಿನಿಮಾದತ್ತ ನೆಟ್ಟಿತ್ತು. ರಶ್ಮಿಕಾ ಆ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ. ‘ಛಾವಾ’ ಸಿನಿಮಾದಲ್ಲಿ ಯೇಸುಬಾಯಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ಯಾನ್-ಇಂಡಿಯನ್ ನಟಿಯರಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.
ಮಹಾರಾಣಿ ಯೇಸುಬಾಯಿ ಪಾತ್ರಕ್ಕೆ ನ್ಯಾಯ ಒದಗಿಸಿದ ರಶ್ಮಿಕಾ
ಛಾವಾ ಚಿತ್ರದಲ್ಲಿ, ರಶ್ಮಿಕಾ ಛತ್ರಪತಿ ಸಂಭಾಜಿ ಮಹಾರಾಜರ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆಗಿನ ಕಾಲದ ಸೀರೆ, ಆಭರಣ ಹಾಗೂ ಹಾವ ಭಾವದ ಮೂಲಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಯೇಸುಬಾಯಿ ಪಾತ್ರ ವೀಕ್ಷಕರ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ತೋರಿದ ಸಮರ್ಪಣೆ ಎದ್ದು ತೋರುತ್ತಿದೆ. ಮರಾಠರ ರಾಣಿ ಹೇಗಿರಬೇಕು ಎಂದು ಅಧ್ಯಯನ ಮಾಡಿ ಅವರು ಅಭಿನಯಿಸಿದಂತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ
ಭಾಷೆಯ ಬಳಕೆಯಿಂದ ಹಿಡಿದು, ರಾಜಮನೆತನಕ್ಕೆ ಸೂಕ್ತವಾದ ನಡವಳಿಕೆಯನ್ನು ಅಳವಡಿಸಿಕೊಳ್ಳುವವರೆಗೆ ರಶ್ಮಿಕಾ ಸೂಕ್ಷ್ಮವಾಗಿ ಅಭಿನಯಿಸಿದ್ದಾರೆ. ಒಂದು ಸಂದರ್ಶನದಲ್ಲಿ ರಶ್ಮಿಕಾ “ನಾವು ಈ ಬಗ್ಗೆ ಓದಿದ್ದೇವೆ. ಆದರೆ, ನಾವು ಅವರನ್ನು ಎಂದಿಗೂ ನೋಡಿಲ್ಲ. ಮಹಾರಾಣಿ ಹೇಗೆ ನಡೆದರು, ಮಾತನಾಡಿದರು ಅಥವಾ ಯಾವ ರೀತಿ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು? ಎನ್ನುವುದನ್ನು ನಾವು ಎಂದಿಗೂ ಕಣ್ಣಾರೆ ಕಂಡಿಲ್ಲ. ಇದೆಲ್ಲವನ್ನೂ ಲೆಕ್ಕಾಚಾರ ಮಾಡಿ ನಾನು ಅಭಿನಯಿಸಬೇಕು" ಎಂದು ಹೇಳಿದ್ದರು. ಆದರೆ ರಶ್ಮಿಕಾ ತಮ್ಮ ಅಭಿಮಾನಿಗಳ ಮನಗೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ರಶ್ಮಿಕಾ ಅಭಿನಯದ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್
ಛತ್ರಪತಿ ಶಿವಾಜಿಯ ಮಗ, ಮರಾಠ ಸಾಮ್ರಾಜ್ಯದ ಎರಡನೇ ದೊರೆಯಾಗಿ ಆಳ್ವಿಕೆ ನಡೆಸಿದವರೇ ಸಂಭಾಜಿ. ಮೇ 14, 1657 ರಂದು ಪುಣೆ ಬಳಿಯ ಪುರಂದರಗಡದಲ್ಲಿ ಸಂಭಾಜಿ ಜನನವಾಗುತ್ತದೆ. ಛತ್ರಪತಿ ಶಿವಾಜಿಯ ಮೊದಲ ಪತ್ನಿ ಸಾಯಿಬಾಯಿ ಸಂಭಾಜಿಯ ತಾಯಿ. ಸಾಯಿಬಾಯಿಯ ಮರಣದ ನಂತರ ಜೀಜಾಬಾಯಿ ಸಂಭಾಜಿಯವರನ್ನು ಬೆಳೆಸುತ್ತಾರೆ. ‘ಛಾವಾ’ ಸಿನಿಮಾ ಕಥೆ ಇರುವುದೇ ಸಂಭಾಜಿ ಮಹಾರಾಜರ ಜೀವನದ ಸುತ್ತ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಸಂಭಾಜಿ ಮಹಾರಾಜರ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಚಿತ್ರತಂಡ
ಲಕ್ಷ್ಮಣ್ ಉಟೇಕರ್ ನಿರ್ದೇಶನ ಛಾವಾ ಸಿನಿಮಾವನ್ನು ದಿನೇಶ್ ವಿಜನ್ ಅವರು ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಿಸಿದ್ದಾರೆ. ಛಾವಾ ಸಿನಿಮಾ ಛತ್ರಪತಿ ಸಂಭಾಜಿ ಮಹಾರಾಜ ಕಥೆಯನ್ನು ಒಳಗೊಂಡಿದೆ. ಛತ್ರಪತಿ ಸಂಭಾಜಿ ಮಹಾರಾಜರ ಪಾತ್ರದಲ್ಲಿ ವಿಕ್ಕಿ ಕೌಶಲ್, ಮಹಾರಾಣಿ ಯೇಸುಬಾಯಿಯಾಗಿ ರಶ್ಮಿಕಾ ಮಂದಣ್ಣ ಮತ್ತು ಔರಂಗಜೇಬ್‌ನ ಪಾತ್ರದಲ್ಲಿ ಅಕ್ಷಯ್ ಖನ್ನಾ ಅಭಿನಯಿಸಿದ್ದಾರೆ. ಇದು ಐತಿಹಾಸಿಕ ಕಥೆಯ ಚಿತ್ರವಾದ ಕಾರಣ ಹಲವರಿಗೆ ಈ ಸಿನಿಮಾವನ್ನು ನೋಡಲೇಬೇಕು ಎಂಬ ಬಯಕೆಯಾಗಿದೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ಅಭಿನಯದ 'ಛಾವಾ' ಸಿನಿಮಾದ ಭರ್ಜರಿ ಆರಂಭ ಪಡೆದುಕೊಂಡಿದೆ.
