‘ಶಾಂತಿ ಕ್ರಾಂತಿ’ ಸಿನಿಮಾ ಗೆಲ್ಲುವುದಿಲ್ಲ ಎಂದು ರವಿಚಂದ್ರನ್‍ಗೆ ಗೊತ್ತಿತ್ತಂತೆ; ಆದರೂ ಮುಂದುವರೆಸಿದ್ದೇಕೆ? ಇಲ್ಲಿದೆ ಕಾರಣ
ರವಿಚಂದ್ರನ್ ಅವರ ಮಹತ್ವಾಕಾಂಕ್ಷೆಯ ಚಿತ್ರಗಳಲ್ಲೊಂದು ‘ಶಾಂತಿ ಕ್ರಾಂತಿ' ಸಿನಿಮಾ ನಷ್ಟ ಅನುಭವಿಸಿದ್ದರ ಬಗ್ಗೆ, ಹಾಗೂ ಸಿನಿಮಾ ಗೆಲ್ಲುವುದಿಲ್ಲ ಎಂದು ತಿಳಿದಿದ್ದರೂ ಸಿನಿಮಾ ಮಾಡಿದ್ದರ ಬಗ್ಗೆ ರವಿಚಂದ್ರನ್ ಹಂಚಿಕೊಂಡ ವಿಷಯಗಳು ಇಲ್ಲಿದೆ.

ರವಿಚಂದ್ರನ್ ಅವರ ಮಹತ್ವಾಕಾಂಕ್ಷೆಯ ಚಿತ್ರಗಳಲ್ಲೊಂದು ‘ಶಾಂತಿ ಕ್ರಾಂತಿ’. ಅದಕ್ಕೂ ಮುನ್ನ ಇಡೀ ಭಾರತೀಯ ಚಿತ್ರರಂಗದಲ್ಲೇ ಅಂಥದ್ದೊಂದು ಪ್ರಯೋಗ ಆಗಿರಲಿಲ್ಲ. ಈ ಚಿತ್ರವನ್ನು ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ತಯಾರಿಸಿದ್ದರು ರವಿಚಂದ್ರನ್. ತಮಿಳು, ಹಿಂದಿ ಮತ್ತು ತೆಲುಗಿನಲ್ಲಿ ಕ್ರಾಂತಿ ಪಾತ್ರವನ್ನು ರಜನಿಕಾಂತ್ ಮತ್ತು ನಾಗಾರ್ಜುನ ಮಾಡಿದರೆ, ಕನ್ನಡದಲ್ಲಿ ರವಿಚಂದ್ರನ್ ಅವರೇ ಮಾಡಿದ್ದರು. ಬಹಳ ಕಷ್ಟಪಟ್ಟು, ಕೋಟ್ಯಂತರ ರೂಪಾಯಿ ಹಾಕಿ ಮಾಡಿದ ಈ ಚಿತ್ರ ಗೆಲ್ಲಲಿಲ್ಲ.
ಆದರೆ, ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಈ ಚಿತ್ರ ರವಿಚಂದ್ರನ್ ಅವರಿಗೆ ಸಾಕಷ್ಟು ನಷ್ಟ ತಂದುಕೊಟ್ಟಿತ್ತು. ಅದನ್ನೆಲ್ಲಾ ತೀರಿಸುವುದಕ್ಕೆ ಸ್ವಲ್ಪ ಸಮಯವೇ ಬೇಕಾಯಿತು. ಈ ಚಿತ್ರ ಮಾಡುವಾಗಲೇ ಇದು ಗೆಲ್ಲುವುದಿಲ್ಲ ಎಂದು ರವಿಚಂದ್ರನ್ ಅವರಿಗೆ ಗೊತ್ತಿತ್ತಂತೆ. ಆದರೆ, ಚಿತ್ರವನ್ನು ಮುಂದುವರೆಸುವುದಕ್ಕೆ ಅವರಿಗೆ ಕಾರಣವಿತ್ತು. ಆ ಕಾರಣವೇನೆಂದು ಕೆಲವು ವರ್ಷಗಳ ಹಿಂದೆ ನಡೆದ ಟಿವಿ 9 ವಿಶೇಷ ಸಂದರ್ಶನದಲ್ಲಿ ರವಿಚಂದ್ರನ್ ಹೇಳಿಕೊಂಡಿದ್ದಾರೆ.
‘ಶಾಂತಿ ಕ್ರಾಂತಿ' ಸಿನಿಮಾ ಬಗ್ಗೆ ರವಿಚಂದ್ರನ್ ಮಾತು
ಈ ಕುರಿತು ಮಾತನಾಡಿರುವ ಅವರು, ‘ಶಾಂತಿ ಕ್ರಾಂತಿ’ ಚಿತ್ರದ ಸಂದರ್ಭದಲ್ಲಿ, ಒಂದು ಕಡೆ ಅಪ್ಪ ಆಸ್ಪತ್ರೆಯಲ್ಲಿದ್ದರು. ಇನ್ನೊಂದು ಕಡೆ ಕುಟುಂಬದಲ್ಲೊಂದು ಟೆನ್ಶನ್ ಇತ್ತು. ದುಡ್ಡು ಎಂದರೇನು ಎಂದು ಗೊತ್ತಿಲ್ಲದ ಸಮಯ ಅದು. ನನಗೆ ದುಡ್ಡಿನ ಬಗ್ಗೆ ಮೋಹವೂ ಇಲ್ಲ, ದಾಹವೂ ಇಲ್ಲ. ಸಿನಿಮಾ ಮಾಡೋಕೆ ದುಡ್ಡು ಬೇಕಿತ್ತೇ ಹೊರತು, ಅದನ್ನು ಹೊರತುಪಡಿಸಿದರೆ, ನನಗೆ ದುಡ್ಡಿನ ಬಗ್ಗೆ ಮೋಹ ಈಗಲೂ ಇಲ್ಲ. ನನಗೆ ಮೊದಲಿನಿಂದಲೂ ಕೈತುಂಬಾ ದುಡ್ಡಿತ್ತು. ಕಾಲೇಜಿಗೆ ಹೋಗುವಾಗಲೇ ದುಡ್ಡು ಬೇಕಾದರೆ ನಮ್ಮಪ್ಪ (ಖ್ಯಾತ ನಿರ್ಮಾಪಕ ವೀರಾಸ್ವಾಮಮಿ) ಕೊಡುತ್ತಿದ್ದರು. ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದವನು ನಾನು. ಅದನ್ನು ತಂದು ಅಪ್ಪನಿಗೇ ಕೊಡುತ್ತಿದ್ದೆ. ಅದರಲ್ಲಿ ಸ್ವಲ್ಪ ಬೇಕು ಎಂದರೂ ಅವರು ಯಾವತ್ತೂ ಅದನ್ನು ಏನು ಮಾಡುತ್ತೀಯ ಎಂದು ಕೇಳಲಿಲ್ಲ. ‘ಶಾಂತಿ ಕ್ರಾಂತಿ’ ಚಿತ್ರದಿಂದ ತುಂಬಾ ದುಡ್ಡು ಕಳೆದುಕೊಂಡಿದ್ದೆ. ಆದರೆ, ಆ ಸಿನಿಮಾದಿಂದ ತುಂಬಾ ಕಲಿತೆ’ ಎಂದು ನೆನಪಿಸಿಕೊಂಡಿದ್ದಾರೆ ಅವರು.
ಚಿತ್ರ ಮಾಡುವಾಗಲೇ ಇದು ಗೆಲ್ಲಲ್ಲ, ನಾವಂದುಕೊಂಡಂತೆ ಆಗುತ್ತಿಲ್ಲ ಎಂದು ಗೊತ್ತಾಗಿತ್ತು ಎಂದಿರುವ ಅವರು, ‘ಈ ವಿಷಯವನ್ನು ಅಪ್ಪನಿಗೆ ಹೇಳಿದ್ದೆ. ಅವರು ಒಂದು ಮಾತು ಹೇಳಿದರು. ನಿನ್ನನ್ನು ನಂಬಿ ರಜನಿಕಾಂತ್ ಕಾಲ್‍ಶೀಟ್ ಕೊಟ್ಟಿದ್ದಾರೆ. ರಜನಿಕಾಂತ್ ಎರಡು ಭಾಷೆಯ ಸಿನಿಮಾ ಮಾಡುತ್ತಿರಲಿಲ್ಲ. ನಿನಗೆ ಮೊದಲ ಬಾರಿಗೆ ತಮಿಳು ಮತ್ತು ಹಿಂದಿಯ ಸಿನಿಮಾ ಮಾಡೋದಕ್ಕೆ ಕರೆದು ಕಾಲ್‍ಶೀಟ್ ಕೊಟ್ಟಿದ್ದರು. ನೀನು ಈಗ ನಿಲ್ಲಿಸುತ್ತೀನಿ ಎನ್ನುವುದು ಸರಿಯಲ್ಲ. ಈ ಚಿತ್ರವನ್ನು ಮುಗಿಸಬೇಕು. ಇದು ಈಶ್ವರಿ ಪ್ರೊಡಕ್ಷನ್ಸ್ ಪ್ರತಿಷ್ಠೆಯ ಪ್ರಶ್ನೆ’ ಎಂದರು. ಹಾಗಾಗಿ, ಚಿತ್ರವನ್ನು ಮುಂದುವರೆಸಿದೆ’ ಎಂದಿದ್ದಾರೆ.
ಬಹಳ ಒದ್ದಾಟದಲ್ಲೇ ಚಿತ್ರೀಕರಣ ಮುಗಿಸಬೇಕಾಯಿತು ಎಂದಿರುವ ಅವರು, ‘ಮೂರು ಭಾಷೆಗಳಿಗೆ ಮೂರು ಹೀರೋಗಳು. ಎಲ್ಲರಿಗೂ ಅವರದ್ದೇ ಆದ ಇಮೇಜ್ ಇದೆ. ನನಗೆ ನಾನು ಬರೆದುಕೊಳ್ಳುವ ದೃಶ್ಯ, ರಜನಿಕಾಂತ್ ಅವರಿಗೆ ಒಪ್ಪುತ್ತಿಲ್ಲ. ರಜನಿಕಾಂತ್ ಅವರಿಗೆ ಬರೆದಿದ್ದು ನನಗೆ ಆಗುತ್ತಿರಲಿಲ್ಲ. ಏನೋ ಒದ್ದಾಟದಲ್ಲಿ ಚಿತ್ರೀಕರಣ ಮಾಡುತ್ತಲೇ ಇದ್ದೆ. ಚಿತ್ರವೇನೋ ತಯಾರಾಯಿತು. ಆದರೆ, ಚಿತ್ರ ಓಡುವುದಿಲ್ಲ ಎಂದು ಬಹಳ ಸ್ಪಷ್ಟವಾಗಿ ಗೊತ್ತಿತ್ತು. ಅದರಂತೆ ಚಿತ್ರ ಅಷ್ಟಾಗಿ ಹೋಗಲಿಲ್ಲ. ಬಹಳ ಕಷ್ಟದ ಸಮಯದಲ್ಲಿದ್ದಾಗ, ನನ್ನನ್ನು ಎತ್ತಿದ್ದು ‘ರಾಮಾಚಾರಿ’. ಅದು ನನ್ನ ಜೀವನವನ್ನು ಬ್ಯಾಲೆನ್ಸ್ ಮಾಡಿತ್ತು. ‘ರಾಮಾಚಾರಿ’ ಬರದೆ ‘ಶಾಂತಿ ಕ್ರಾಂತಿ’ ಬಂದಿದ್ದರೆ, ಮತ್ತೆ ಏಳುವುದು ಕಷ್ಟವಾಗುತ್ತಿತ್ತು. ಒಂದು ಸೋಲಿನ ಪಕ್ಕದಲ್ಲಿ ದೊಡ್ಡ ಗೆಲುವನ್ನು ತಂದುಕೊಟ್ಟಿತು’ ಎಂದು ಅವರು ನೆನಪಿಸಿಕೊಂಡಿದ್ದಾರೆ.
ಬರಹ: ಚೇತನ್ ನಾಡಿಗೇರ್
ಇದನ್ನೂ ಓದಿ: ಕನ್ನಡದಲ್ಲೂ ಬಿಡುಗಡೆಯಾಗಲಿದೆ ಮಾಧವನ್ ಹಾಗೂ ನಯನತಾರಾ ಅಭಿನಯದ ‘ಟೆಸ್ಟ್’ ಸಿನಿಮಾ; ಈ ಒಟಿಟಿಯಲ್ಲಿ ವೀಕ್ಷಿಸಿ
