ರಾಮ್ ಚರಣ್ ಬರ್ತ್‌ಡೇಗೆ RC16 ಚಿತ್ರದ ಶೀರ್ಷಿಕೆ ಜತೆಗೆ ಫಸ್ಟ್ ಲುಕ್ ರಿಲೀಸ್; ಮಜವಾಗಿದೆ ಸಿನಿಮಾ ಟೈಟಲ್
ರಾಮ್ ಚರಣ್ ಅವರ ಜನ್ಮದಿನದ ಪ್ರಯುಕ್ತ, RC16 ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಈ ಚಿತ್ರಕ್ಕೆ 'ಪೆದ್ದಿ' ಎಂಬ ಶೀರ್ಷಿಕೆ ಇಡಲಾಗಿದ್ದು, ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ಈ ಸಿನಿಮಾ ಸಾಗಲಿದೆ.

Ram charan Birthday: ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ತೇಜ ಅವರಿಗಿಂದು (ಮಾ. 27) ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದ ಪ್ರಯುಕ್ತ ಅವರ ಮುಂಬರುವ RC16 ಸಿನಿಮಾ ತಂಡದಿಂದ ಫ್ಯಾನ್ಸ್‌ಗೆ ಸರ್ಪ್ರೈಸ್ ಸಿಕ್ಕಿದೆ. ಈ ವರೆಗೂ ಕೌತುಕವಾಗಿಯೇ ಉಳಿದಿದ್ದ RC16 ಚಿತ್ರದ ಶೀರ್ಷಿಕೆ ರಿವೀಲ್ ಆಗಿದ್ದು, ಹೊಸ ಮೇಕ್‌ಓವರ್ ಜತೆಗೆ ರಾಮ್‌ಚರಣ್ ರಗಡ್ ಆಗಿಯೇ ಎದುರಾಗಿದ್ದಾರೆ. ಈ ಮಾಸ್ ಆಕ್ಷನ್ ಚಿತ್ರಕ್ಕೆ ʻಪೆದ್ದಿʼ ಎಂಬ ಶೀರ್ಷಿಕೆ ಇಡಲಾಗಿದೆ. ಉದ್ದ ಮೀಸೆ, ಹರಡಿದ ಗಡ್ಡದೊಂದಿಗೆ ಬೀಡಿ ಸೇದುತ್ತಿರುವ ಲುಕ್‌ನಲ್ಲಿ ರಾಮ್‌ಚರಣ್ ಮಾಸ್ ಲುಕ್‌ನಲ್ಲಿ ಕಂಡಿದ್ದಾರೆ.
ರಾಮ್ ಚರಣ್ ಬರ್ತ್‌ಡೇಗೆ ಪೆದ್ದಿ ಚಿತ್ರದಿಂದ ಒಟ್ಟು ಎರಡು ಪೋಸ್ಟರ್‌ಗಳು ಬಿಡುಗಡೆ ಆಗಿವೆ. ಒಂದರಲ್ಲಿ ಬೀಡಿ ಸೇದುತ್ತಿದ್ದರೆ, ಇನ್ನೊಂದರಲ್ಲಿ ಕೈಲ್ಲಿ ಬ್ಯಾಟ್ ಹಿಡಿದು, ಗಂಭೀರ ನೋಟದಲ್ಲಿ ಪೋಸ್ ನೀಡಿದ್ದಾರೆ. ಸದ್ಯ ಈ ಎರಡು ಪೋಸ್ಟರ್‌ಗಳೀಗ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್‌ಗೆ ಹಬ್ಬದೂಟ ಹಾಕಿಸಿವೆ. ರಾಮ್ ಚರಣ್ ಹೊಸ ಲುಕ್‌ಗೂ ಅಭಿಮಾನಿಗಳು ಫಿದಾ ಆಗಿದ್ದಾರೆ. ಪೋಸ್ಟರ್ ಗಮನಿಸಿದರೆ ಇದೊಂದು ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಕಥೆ ಎಂಬುದು ಗೊತ್ತಾಗುತ್ತದೆ.
ಗ್ರಾಮೀಣ ಹಿನ್ನೆಲೆಯ ಸಿನಿಮಾ
ಪೆದ್ದಿ ಚಿತ್ರದ ಕ್ರೀಡೆ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ. ಇದಕ್ಕೆ ಗ್ರಾಮೀಣ ಭಾಗದ ಟಚ್ ಕೂಡ ಇರಲಿದೆ. ಈ ಹಿಂದೆ ಉಪ್ಪೇನ ಸಿನಿಮಾ ನಿರ್ದೇಶನ ಮಾಡಿದ್ದ ಬುಚ್ಚಿಬಾಬು ಸನಾ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ರಾಮ್‌ಚರಣ್‌ಗೆ ಜೋಡಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ದಿವ್ಯೇಂದ್ರ ಶರ್ಮಾ, ಜಗಪತಿಬಾಬು ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ.
ಎ.ಆರ್ ರೆಹಮಾನ್ ಸಂಗೀತ
ಸುಮಾರು 200 ಕೋಟಿ ರೂಪಾಯಿ ಬಜೆಟ್‌ನಲ್ಲಿ ವೃದ್ಧಿ ಸಿನಿಮಾಸ್ ಬ್ಯಾನರ್‌ನಡಿ ವೆಂಕಟ್ ಸತೀಶ್ ಕಿಲಾರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೈತ್ರಿ ಮೂವಿ ನಿರ್ಮಾಪಕರು, ಸುಕುಮಾರ್ ಈ ಸಿನಿಮಾ ಹಿಂದೆ ನಿಂತಿದ್ದಾರೆ. 'ಪೆದ್ದಿ' ಚಿತ್ರಕ್ಕೆ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಪೆದ್ದಿ ಚಿತ್ರದ ಮೂಲಕ ಸುದೀರ್ಘ ವರ್ಷಗಳ ಬಳಿಕ ಎ. ಆರ್. ರೆಹಮಾನ್ ಟಾಲಿವುಡ್‌ಗೆ ಮರಳುತ್ತಿದ್ದಾರೆ. ರತ್ನವೇಲು ಛಾಯಾಗ್ರಾಹಕರಾಗಿದ್ದಾರೆ. 2026ರ ಮಾರ್ಚ್‌ನಲ್ಲಿ 'ಪೆದ್ದಿ' ಚಿತ್ರ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.
ಗೇಮ್ ಚೇಂಜರ್ ವೈಫಲ್ಯ
ರಾಮ್‌ಚರಣ್ ಅವರ ಕೊನೆಯ ಚಿತ್ರ 'ಗೇಮ್ ಚೇಂಜರ್' ಹೀನಾಯವಾಗಿ ಸೋತಿತ್ತು. ರಾಜಕೀಯ ಥ್ರಿಲ್ಲರ್ ಆಗಿ ನಿರ್ಮಾಣವಾದ ಈ ಚಿತ್ರಕ್ಕೆ ಶಂಕರ್ ನಿರ್ದೇಶನ ಮಾಡಿದ್ದರು. ಸುಮಾರು 350 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ 150 ಕೋಟಿ ರೂಪಾಯಿಗಿಂತ ಕಡಿಮೆ ಕಲೆಕ್ಷನ್ ಮಾಡಿ ಮಕಾಡೆ ಮಲಗಿತ್ತು. 'ಪೆದ್ದಿ' ನಂತರ ಪುಷ್ಪ 2 ನಿರ್ದೇಶಕ ಸುಕುಮಾರ್ ಅವರೊಂದಿಗೆ ರಾಮ್‌ಚರಣ್ ಚಿತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
