Kantara Prequel: ಶತದಿನೋತ್ಸವ ಕಾರ್ಯಕ್ರಮದಲ್ಲಿ 'ಕಾಂತಾರ' ಪ್ರೀಕ್ವೆಲ್ ಬಗ್ಗೆ ಮಾಹಿತಿ ನೀಡಿದ ರಿಷಬ್ ಶೆಟ್ಟಿ
ಕಾಂತಾರದ ಗೆಲುವು ಖುಷಿ ಕೊಟ್ಟಿದೆ. ಮೊದಲು ಕಾರ್ತಿಕ್ ಗೌಡ ನಂತರ ವಿಜಯ್ ಸರ್ ಬಳಿ ಚಿತ್ರದ ಕಥೆ ಹೇಳಿದೆ. ತಕ್ಷಣ ಒಪ್ಪಿ, ಸಿನಿಮಾವನ್ನು ನಿರ್ಮಿಸಲು ಒಪ್ಪಿಗೆ ನೀಡಿದರು. ಈ ಸಿನಿಮಾವನ್ನು ನಾನು ಅಂದುಕೊಂಡಂತೆ ತರಲು ಸಂಪೂರ್ಣ ಸಹಕಾರ ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ನಾನು ಆಭಾರಿ.
ಕಳೆದ ವರ್ಷ ಸೆಪ್ಟೆಂಬರ್ 30 ರಂದು ತೆರೆ ಕಂಡು ರಾಜ್ಯ ಮಾತ್ರವಲ್ಲ ಪರಭಾಷೆ ಸಿನಿಮಾಭಿಮಾನಿಗಳ ಮನಸ್ಸು ಗೆದ್ದ 'ಕಾಂತಾರ' ಸಿನಿಮಾ ಕೆಲವು ದಿನಗಳ ಹಿಂದಷ್ಟೇ ನೂರು ದಿನಗಳನ್ನು ಪೂರೈಸಿತ್ತು. ಇದೀಗ ಚಿತ್ರತಂಡ ಸಿನಿಮಾದ 100ನೇ ದಿನದ ಕಾರ್ಯಕ್ರಮವನ್ನು ಸಂಭ್ರಮಿಸಿದೆ.
ಟ್ರೆಂಡಿಂಗ್ ಸುದ್ದಿ
ಈ ಚಿತ್ರದ ಶತದಿನೋತ್ಸವ ಸಮಾರಂಭವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನ ನಿರ್ಮಾಪಕ ವಿಜಯ್ ಕಿರಗಂದೂರು ಇತ್ತೀಚೆಗೆ ಬೆಂಗಳೂರಿನ ಬಂಟರ ಸಂಘದಲ್ಲಿ ಅದ್ಧೂರಿಯಾಗಿ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಚಿತ್ರದ ಕಲಾವಿದರು, ತಂತ್ರಜ್ಞರು, ವಿತರಕರು, ಪ್ರದರ್ಶಕರು, ಚಿತ್ರಮಂದಿರ ಮಾಲೀಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ, ನಾಯಕ ರಿಷಭ್ ಶೆಟ್ಟಿ''ಕಾಂತಾರದ ಗೆಲುವು ಖುಷಿ ಕೊಟ್ಟಿದೆ. ಮೊದಲು ಕಾರ್ತಿಕ್ ಗೌಡ ನಂತರ ವಿಜಯ್ ಸರ್ ಬಳಿ ಚಿತ್ರದ ಕಥೆ ಹೇಳಿದೆ. ತಕ್ಷಣ ಒಪ್ಪಿ, ಸಿನಿಮಾವನ್ನು ನಿರ್ಮಿಸಲು ಒಪ್ಪಿಗೆ ನೀಡಿದರು. ಈ ಸಿನಿಮಾವನ್ನು ನಾನು ಅಂದುಕೊಂಡಂತೆ ತರಲು ಸಂಪೂರ್ಣ ಸಹಕಾರ ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ನಾನು ಆಭಾರಿ. ಯಶಸ್ಸಿಗೆ ಕಾರಣರಾದ ನನ್ನ ಚಿತ್ರತಂಡ, ಮಾಧ್ಯಮ ಮಿತ್ರರಿಗೆ ಹಾಗೂ ಸಮಸ್ತ ಜನತೆಗೆ ನನ್ನ ಧನ್ಯವಾದ. ನನ್ನ ಮಡದಿ ಪ್ರಗತಿ ಅವರಿಗೆ ವಿಶೇಷ ಧನ್ಯವಾದ ಹೇಳಲು ಬಯಸುತ್ತೇನೆ. ಹಾಗೇ ಎಲ್ಲರೂ 'ಕಾಂತಾರ ಭಾಗ 2' ಯಾವಾಗ ಎಂದು ಕೇಳುತ್ತಿದ್ದಾರೆ. ಈಗ ನೀವು ನೋಡಿದ್ದೇ ಕಾಂತಾರ. ಮುಂದೆ ಕಾಂತಾರ ಪ್ರೀಕ್ವೆಲ್ ಬರಲಿದೆ'' ಎಂದು ಚಿತ್ರದ ಬಗ್ಗೆ ಅಧಿಕೃತವಾಗಿ ಘೋಷಿಸಿದರು. ಕಾರ್ಯಕ್ರಮದಲ್ಲಿ ವಿಜಯ್ ಕಿರಗಂದೂರು ಹಾಗೂ ಕುಟುಂಬ, ರಿಷಬ್ ಶೆಟ್ಟಿ ಪತ್ನಿ ಹಾಗೂ ಮಕ್ಕಳು, ಪ್ರಮೋದ್ ಶೆಟ್ಟಿ, ನಟಿ ಸಪ್ತಮಿ ಗೌಡ, ಶೈನ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಚಿತ್ರತಂಡದ ಎಲ್ಲಾ ಸದಸ್ಯರು ಹಾಜರಿದ್ದರು.
ಜೂನ್‌ನಿಂದ ಕಾಂತಾರ ಪ್ರೀಕ್ವೆಲ್ ಚಿತ್ರೀಕರಣ ಆರಂಭ
'ಕಾಂತಾರ' ಚಿತ್ರತಂಡ ಹೋದಲ್ಲಿ ಬಂದಲ್ಲಿ ಭಾಗ 2ರ ಬಗ್ಗೆಯೇ ಪ್ರಶ್ನೆಗಳು ಎದುರಾಗುತ್ತಿದ್ದವು. ಆದರೆ ಚಿತ್ರತಂಡ ಮಾತ್ರ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರ ನೀಡುತ್ತಿತ್ತು. ಆದರೆ ಇದೀಗ ಶತದಿನೋತ್ಸವ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ 'ಕಾಂತಾರ' ಪ್ರೀಕ್ವೆಲ್ ಅಧಿಕೃತವಾಗಿ ಘೋಷಿಸಿದ್ದಾರೆ. ಜೂನ್ ತಿಂಗಳಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಮಳೆಗಾಲದ ಸೀಸನ್‌ನಲ್ಲಿ ಬಹುಭಾಗದ ಚಿತ್ರೀಕರಣ ಆಗಲಿದೆ. ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ 2024 ಏಪ್ರಿಲ್‌ನಲ್ಲಿ ತೆರೆಗೆ ತರಲು ನಿರ್ಧರಿಸಿರುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ.
ಸದ್ಯಕ್ಕೆ ನಟ ಮತ್ತು ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಈ ಸಿನಿಮಾ ಕಥೆ ಬರೆಯುವುದರಲ್ಲಿ ನಿರತರಾಗಿದ್ದಾರೆ. ಅದೇ ರೀತಿ ಲೊಕೇಶನ್ ಹುಡುಕಾಡಲು ಕಾಡು ಮೇಡು ಅಲೆದಾಡುತ್ತಿದ್ದಾರಂತೆ. ಮೊದಲ ಚಿತ್ರಕ್ಕಿಂತ ಇನ್ನೂ ದೊಡ್ಡ ಬಜೆಟ್‌ನಲ್ಲೇ ಈ ಸಿನಿಮಾ ಮೂಡಿಬರಲಿದೆ ಎನ್ನಲಾಗುತ್ತಿದೆ. ಮೊದಲ ಚಿತ್ರದಲ್ಲಿನ ಸೊಗಡು, ಛಾಯಾಗ್ರಹಣ, ಮೂಡಿ ಬಂದ ಸ್ಟೈಲ್‌ನಲ್ಲಿ ಪ್ರೀಕ್ವೆಲ್ ಇರಲಿದೆಯಂತೆ. ಈ ಚಿತ್ರದಲ್ಲಿ ಇತರ ಸ್ಟಾರ್ ಕಲಾವಿದರು ಕೂಡಾ ಇರಲಿದ್ದಾರೆ ಎಂದು ರಿಷಬ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ 'ಕಾಂತಾರ' ಪ್ರೀಕ್ವೆಲ್ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಅಭಿಮಾನಿಗಳು ಕೂಡಾ ಕಾಯುತ್ತಿದ್ದಾರೆ.