ಭವಿಷ್ಯದ ಪೀಳಿಗೆಗೆ ನಿಮ್ಮ ಸಂದೇಶವೇನು? ರಿಷಬ್ ಶೆಟ್ಟಿಯ ಜೈ ಹನುಮಾನ್ ಚಿತ್ರಕ್ಕೆ ಕಾನೂನು ಸಂಕಷ್ಟ
Rishab Shetty Jai Hanuman: ರಿಷಬ್ ಶೆಟ್ಟಿ ನಾಯಕನಾಗಿ ನಟಿಸಲಿರುವ ಜೈ ಹನುಮಾನ್ ಸಿನಿಮಾ ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಈ ಸಿನಿಮಾದಲ್ಲಿ ಹನುಮನ ಪಾತ್ರವನ್ನೇ ತಿರುಚಲಾಗಿದೆ ಎಂದು ವಕೀಲರೊಬ್ಬರು ಹೈದರಾಬಾದ್‌ನ ನಾಂಪಲ್ಲಿ ಕೋರ್ಟ್‌ನಲ್ಲಿ ಚಿತ್ರದ ನಿರ್ಮಾಪಕರ ವಿರುದ್ಧ ದಾವೆ ಹೂಡಿದ್ದಾರೆ.
Jai Hanuman: ಟಾಲಿವುಡ್ ಅಂಗಳದಲ್ಲಿ ಕಳೆದ ವರ್ಷದ ಸಂಕ್ರಾಂತಿ ಸಮಯದಲ್ಲಿ ತೆರೆಕಂಡಿದ್ದ ಹನುಮಾನ್ ಸಿನಿಮಾ, ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್ ಬೇಟೆಯಾಡಿತ್ತು. 50 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ, ಬರೋಬ್ಬರಿ 230 ಕೋಟಿ ಕಲೆಕ್ಷನ್ ಕಂಡಿತ್ತು. ಅದರಂತೆ, ಆ ಅಮೋಘ ಗೆಲುವಿನ ಬೆನ್ನಲ್ಲೇ ಕಳೆದ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ಜೈ ಹನುಮಾನ್ ಸಿನಿಮಾ ಘೋಷಣೆ ಮಾಡಿದ್ದರು ನಿರ್ದೇಶಕ ಪ್ರಶಾಂತ್ ವರ್ಮಾ. ಪುಷ್ಪ 2 ಸಿನಿಮಾ ಮೂಲಕ ಸದ್ದು ಮಾಡಿದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈಗ ಇದೇ ಸಿನಿಮಾಕ್ಕೆ ಕಾನೂನು ತೊಡಕು ಎದುರಾಗಿದೆ.
ಸ್ಯಾಂಡಲ್‌ವುಡ್ ನಟ, ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ ರಿಷಬ್ ಶೆಟ್ಟಿ, ಜೈ ಹನುಮಾನ್ ಸಿನಿಮಾದಲ್ಲಿ ಶೀರ್ಷಿಕೆ ಪಾತ್ರ ಮಾಡುತ್ತಿದ್ದಾರೆ. ಫಸ್ಟ್ ಲುಕ್ ಬಿಡುಗಡೆ ಆದ ದಿನವೇ ಒಂದಷ್ಟು ಕಾರಣಕ್ಕೆ ಟೀಕೆಗಳನ್ನು ಈ ಸಿನಿಮಾ ಎದುರಿಸಿತ್ತು. ಈಗ ಅದರ ಮುಂದುವರಿದ ಭಾಗ ಎಂಬಂತೆ, ಇದೇ ಸಿನಿಮಾದ ಲುಕ್ ವಿರುದ್ಧ ಹೈದರಾಬಾದ್‌ನ ನಾಂಪಲ್ಲಿ ಕೋರ್ಟ್‌ನಲ್ಲಿ ವಕೀಲರೊಬ್ಬರು ಕೇಸ್ ದಾಖಲಿಸಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಇದೀಗ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿರುವಂತೆ ತೋರುತ್ತಿದೆ. ಪುಷ್ಪ 2 ಸೇರಿದಂತೆ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಣ ಸಂಸ್ಥೆಯು, ಜೈ ಹನುಮಾನ್ ಚಿತ್ರಕ್ಕೆ ಸಂಬಂಧಿಸಿದಂತೆ ವಕೀಲರಿಂದ ಕ್ರಮ ಎದುರಿಸುತ್ತಿದೆ ಎಂದು ವರದಿಯಾಗಿದೆ. ಈ ಸಂಬಂಧ ವಕೀಲ ತಿರುಮಲ ರಾವ್ ಎಂಬುವವರು ನಾಂಪಲ್ಲಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ರಿಪಬ್ಲಿಕ್ ವರ್ಲ್ಡ್ ವರದಿ ಮಾಡಿದೆ.
ಅಷ್ಟಕ್ಕೂ ಆಗಿದ್ದೇನು?
ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ವಿರುದ್ಧ ವಕೀಲರಿಂದ ಕಾನೂನು ಕ್ರಮಕ್ಕೆ ಕಾರಣ ಏನು? ಜೈ ಹನುಮಾನ್ ಟೀಸರ್ ಕ್ಲಿಪ್‌ನಲ್ಲಿ ಹನುಮನನ್ನು ಅಗೌರವಿಸುವ ದೃಶ್ಯಗಳಿವೆ. ರಿಷಬ್ ಶೆಟ್ಟಿ ಅವರ ಮುಖವನ್ನು ಹನುಮಾನ್ ಎಂದು ಚಿತ್ರಿಸಲಾಗಿದ್ದು, ಆದರೆ, ಅವರ ಮುಖ ಹನುಮನನ್ನು ಹೋಲುವಂತೆ ಇಲ್ಲ. ಈ ಮೂಲಕ ಭವಿಷ್ಯದ ಪೀಳಿಗೆಯ ದಾರಿ ತಪ್ಪಿಸುವ ಕೆಲಸ ಈ ಸಿನಿಮಾದಿಂದ ಆಗಲಿದೆ ಎಂದು ವಕೀಲರು ದೂರಿನಲ್ಲಿ ನಮೂದಿಸಿದ್ದಾರೆ. ಈ ಕೂಡಲೇ ಟೀಸರ್‌ನಲ್ಲಿನ ದೃಶ್ಯಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಉತ್ತರ ಬಂದಿಲ್ಲ.
ಕಾಂತಾರ ಚಾಪ್ಟರ್ 1ರಲ್ಲಿ ರಿಷಬ್
ಕಾಂತಾರ ಸಿನಿಮಾದ ಯಶಸ್ಸಿನ ಬಳಿಕ ನಟ ರಿಷಬ್ ಶೆಟ್ಟಿಗೆ ಬೇಡಿಕೆ ಹೆಚ್ಚಿದೆ. ಈಗಾಗಲೇ ಅದರ ಪ್ರೀಕ್ವೆಲ್ ಕೆಲಸಗಳಲ್ಲಿ ರಿಷಬ್ ತೊಡಗಿಸಿಕೊಂಡಿದ್ದಾರೆ. ಕುಂದಾಪುರದಲ್ಲಿಯೇ ಈ ಸಿನಿಮಾ ಸಂಬಂಧಿ ಚಿತ್ರೀಕರಣ ಆರಂಭವಾಗಿದೆ. ಹೀಗಿರುವಾಗಲೇ ಟಾಲಿವುಡ್‌ನಲ್ಲಿ ಜೈ ಹನುಮಾನ್ ಸಿನಿಮಾ ಒಪ್ಪಿಕೊಂಡಿರುವ ರಿಷಬ್, ಹಿಂದಿಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಲಿರುವ ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರದಲ್ಲಿಯೂ ರಿಷಬ್ ಶಿವಾಜಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಸಂದೀಪ್ ಸಿಂಗ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ರಿಷಬ್ ಕೈಯಲ್ಲಿರುವ ಈ ಮೂರು ಸಿನಿಮಾಗಳು ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ ಸಿನಿಮಾಗಳೇ ಎಂಬುದು ವಿಶೇಷ.