Kantara 2 Update: ಯುಗದ ಆದಿಯ ದಿನವೇ ‘ಕಾಂತಾರ’ ಪ್ರೀಕ್ವೆಲ್‌ಗೆ ಕೈಯಿಟ್ಟ ರಿಷಬ್ ಶೆಟ್ಟಿ..
ಕನ್ನಡ ಸುದ್ದಿ  /  ಮನರಂಜನೆ  /  Kantara 2 Update: ಯುಗದ ಆದಿಯ ದಿನವೇ ‘ಕಾಂತಾರ’ ಪ್ರೀಕ್ವೆಲ್‌ಗೆ ಕೈಯಿಟ್ಟ ರಿಷಬ್ ಶೆಟ್ಟಿ..

Kantara 2 Update: ಯುಗದ ಆದಿಯ ದಿನವೇ ‘ಕಾಂತಾರ’ ಪ್ರೀಕ್ವೆಲ್‌ಗೆ ಕೈಯಿಟ್ಟ ರಿಷಬ್ ಶೆಟ್ಟಿ..

‘ಕಾಂತಾರ’ ಚಿತ್ರದ ಪ್ರೀಕ್ವೆಲ್‌ನ ಬರವಣಿಗೆಯನ್ನು ಯುಗದ ಆದಿಯ ದಿನವೇ ಶುಭಾರಂಭ ಮಾಡಿದ್ದಾರೆ ರಿಷಬ್‌ ಶೆಟ್ಟಿ.

ಯುಗದ ಆದಿಯ ದಿನವೇ ‘ಕಾಂತಾರ’ ಪ್ರೀಕ್ವೆಲ್‌ಗೆ ಕೈಯಿಟ್ಟ ರಿಷಬ್..
ಯುಗದ ಆದಿಯ ದಿನವೇ ‘ಕಾಂತಾರ’ ಪ್ರೀಕ್ವೆಲ್‌ಗೆ ಕೈಯಿಟ್ಟ ರಿಷಬ್..

Kantara 2 Update: ಸ್ಯಾಂಡಲ್‌ವುಡ್‌ನ ‘ಕಾಂತಾರ’ ಸಿನಿಮಾದ ಯಶಸ್ಸಿನ ಬಳಿಕ ಆ ಚಿತ್ರದ ಪ್ರೀಕ್ವೆಲ್‌ ಆಗುತ್ತಿರುವುದು ಈಗಾಗಲೇ ಅಧಿಕೃತವಾಗಿದೆ. ಇತ್ತ ತೆರೆಹಿಂದೆ ಆ ಚಿತ್ರದ ಕೆಲಸಗಳಲ್ಲಿ ರಿಷಬ್‌ ಶೆಟ್ಟಿ ಮತ್ತವರ ತಂಡ ಬಿಜಿಯಾಗಿದೆ. ಯುಗಾದಿ ಹಬ್ಬದ ದಿನದಂದೇ ಈ ವಿಚಾರವನ್ನು ಅಧಿಕೃತವಾಗಿ ರಿಷಬ್‌ ಶೆಟ್ಟಿ ಘೋಷಿಸಿದ್ದಾರೆ.

ಕಾಂತಾರ ಸಿನಿಮಾ ಕೇವಲ ಕನ್ನಡ, ಕರ್ನಾಟಕ ಮಾತ್ರವಲ್ಲದೆ ಪರಭಾಷೆಗಳಲ್ಲಿಯೂ ದೊಡ್ಡ ಮಟ್ಟದ ಯಶಸ್ಸು ಗಳಿಸಿದ ಚಿತ್ರ. ಅದರಲ್ಲೂ ಹಿಂದಿ ಭಾಷಿಕರನ್ನು ಸೆಳೆದ ಕನ್ನಡದ ಸಿನಿಮಾ. ಈ ಸಿನಿಮಾದ ಕ್ಲೈಮ್ಯಾಕ್ಸ್‌ ನೋಡಿದ ಎಷ್ಟೋ ಮಂದಿ, ಈ ಚಿತ್ರದ ಮುಂದುವರಿದ ಭಾಗ ಯಾವಾಗ? ಎಂದು ಪ್ರಶ್ನಿಸಿದ್ದರು. ಅದಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದಿದ್ದರು. ಇದೀಗ ‘ಕಾಂತಾರ’ ಚಿತ್ರದ ಪ್ರೀಕ್ವೆಲ್‌ಗೆ ಯುಗದ ಆದಿಯ ದಿನವೇ ಶುಭಾರಂಭ ಮಾಡಿದ್ದಾರೆ.

ಪ್ರಕೃತಿಯೊಂದಿಗಿನ ನಮ್ಮ ಸಂಬಂಧ ಮುಂದುವರಿಯಲಿದೆ…

ಬರವಣಿಗೆಯ ಆದಿ.. ಎಂಬ ಕ್ಯಾಪ್ಷನ್‌ ನೀಡಿರುವ ರಿಷಬ್‌ ಹೊಸ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಸಹ ‌ಪೋಸ್ಟ್‌ ಹಂಚಿಕೊಂಡಿದೆ. "ಯುಗಾದಿ ಮತ್ತು ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ, ಕಾಂತಾರ ಚಿತ್ರದ ಎರಡನೇ ಭಾಗದ ಬರವಣಿಗೆ ಪ್ರಾರಂಭವಾಗಿದೆ ಎಂದು ಘೋಷಿಸಲು ಸಂತಸವಾಗುತ್ತಿದೆ. ಪ್ರಕೃತಿಯೊಂದಿಗಿನ ನಮ್ಮ ಸಂಬಂಧವನ್ನು ಪ್ರದರ್ಶಿಸುವ ಮತ್ತೊಂದು ಆಕರ್ಷಕ ಕಥೆಯನ್ನು ನಿಮ್ಮ ಮುಂದೆ ತರಲು ಉತ್ಸುಕರಾಗಿದ್ದೇವೆ. ಹೆಚ್ಚಿನ ಅಪ್‌ಡೇಟ್‌ಗಾಗಿ ಕಾಯುತ್ತಿರಿ" ಎಂದಿದೆ. ಈ ಮೂಲಕ ಅಧಿಕೃತವಾಗಿ ‘ಕಾಂತಾರ 2’ ಶುರುವಾಗಿದೆ.

ಈ ಹಿಂದೆ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಂತೆ, ಮೊದಲ ‘ಕಾಂತಾರ’ಕ್ಕಿಂತ ದೊಡ್ಡ ಮಟ್ಟದಲ್ಲಿ ಮತ್ತು ಅಷ್ಟೇ ಅದ್ದೂರಿಯಾಗಿಯೇ ತೆರೆಮೇಲೆ ತರುವ ಉದ್ದೇಶ ನಿರ್ದೇಶಕರದ್ದು. ಅದರಂತೆ ಇಡೀ ತಂಡ ಈಗಾಗಲೇ ಕಥೆಯ ಬರೆಯುವಿಕೆಯಲ್ಲಿ ತೊಡಗಿಸಿಕೊಂಡಿದೆ. ಇದೀಗ ತಾನೇ ಕಥೆ ಬರೆಯುವಿಕೆಯಲ್ಲಿ ನಿರತರಾಗಿರುವ ರಿಷಬ್‌ ಶೆಟ್ಟಿ, ಇದೇ ವರ್ಷ ಶೂಟಿಂಗ್‌ ಆರಂಭಿಸುವ ಸಾಧ್ಯತೆ ಇದೆ. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರಲಿದೆ.

ಕಥೆ ಎಲ್ಲಿಂದ ಶುರು...

ಈಗಾಗಲೇ ನೋಡಿರುವ ಕಾಂತಾರ ಸಿನಿಮಾದಲ್ಲಿ ಹಲವು ಕೌತುಕಗಳಿದ್ದವು. ಆ ಪೈಕಿ ಕಾಡಬೆಟ್ಟು ಶಿವನ ತಂದೆ ಇದ್ದಕ್ಕಿಂದಂತೆ ದೈವ ವೇಷ ಧರಿಸಿ ಕಾಡಿನಲ್ಲಿ ಕಣ್ಮರೆಯಾಗುತ್ತಾನೆ. ಆ ಎಳೆಯನ್ನೇ ವಿಸ್ತರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ ರಿಷಬ್‌ ಶೆಟ್ಟಿ. ಎಂದಿನಂತೆ ಮೊದಲ ಭಾಗದಲ್ಲಿದ್ದ ಕೆಲವರು ಪ್ರೀಕ್ವೆಲ್‌ನಲ್ಲಿಯೂ ಮುಂದುವರಿಯಲಿದ್ದಾರೆ. ಹೊಸದಾಗಿ ಯಾರೆಲ್ಲ ತಂಡ ಸೇರಿಕೊಳ್ಳಲಿದ್ದಾರೆ ಎಂಬುದು ಕಥೆ ಸಿದ್ಧವಾದ ಬಳಿಕವಷ್ಟೇ ಗೊತ್ತಾಗಬೇಕಿದೆ.

ವಿದೇಶಿ ಭಾಷೆಗಳಿಗೆ ಡಬ್‌..

ಎಲ್ಲೆಡೆಯಿಂದ ಮೆಚ್ಚುಗೆ ಪಡೆದ ‘ಕಾಂತಾರ’ ಸಿನಿಮಾ ವಿದೇಶದ ಹಲವು ಭಾಷೆಗಳಿಗೆ ಡಬ್‌ ಆಗುತ್ತಿದೆ. ಈ ವಿಚಾರವನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಇತ್ತೀಚಿನ ಕೆಲ ದಿನಗಳಿಂದ ‘ಕಾಂತಾರ’ ಸಿನಿಮಾ ಸರಣಿ ಸುದ್ದಿಯಲ್ಲಿದೆ. ವಿಶ್ವಸಂಸ್ಥೆಯಲ್ಲಿಯೂ ಈ ಚಿತ್ರ ಸದ್ದು ಮಾಡಿದೆ. ಅಲ್ಲಿನ ವಿದೇಶಿ ಗಣ್ಯರೂ ಈ ಚಿತ್ರ ಕಣ್ತುಂಬಿಕೊಂಡಿದ್ದಾರೆ. ಇದೆಲ್ಲದರ ನಡುವೆಯೇ ಇಟಾಲಿಯನ್‌ ಮತ್ತು ಸ್ಪ್ಯಾನಿಷ್‌ ಭಾಷೆಗೆ ಚಿತ್ರವನ್ನು ಡಬ್‌ ಮಾಡುತ್ತಿದೆ ಹೊಂಬಾಳೆ ಫಿಲಂಸ್.‌

ಈ ಹಿಂದೆ ಇಂಗ್ಲಿಷ್‌ ವರ್ಷನ್‌ಅನ್ನು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಮಾಡಲಾಗಿತ್ತು. ಇದೀಗ ಇಟಾಲಿಯನ್‌ ಮತ್ತು ಸ್ಪ್ಯಾನಿಷ್‌ ಅವತರಣಿಕೆಯ ‘ಕಾಂತಾರ’ ಚಿತ್ರವನ್ನು ಅಲ್ಲಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಹೊಂಬಾಳೆ ಫಿಲಂಸ್‌ ನಿರ್ಧರಿಸಿದೆ. ಈಗಾಗಲೇ ಡಬ್ಬಿಂಗ್‌ ಕೆಲಸಗಳಿಗೂ ಚಾಲನೆ ದೊರಕಿದ್ದು, ಶೀಘ್ರದಲ್ಲಿ ಚಿತ್ರ ತೆರೆಕಾಣಲಿದೆ.

Whats_app_banner