ಕನ್ನಡ ಸುದ್ದಿ  /  Entertainment  /  Rishi Kumaraswamy Fire On Mata Movie Team

Kali Swamy on Mata film: ಈ ಚಿತ್ರಕ್ಕೆ ಮದರಸಾದಲ್ಲಿ ನಡೆಯೋ ಗಿಲಗಿಲ ಅಂತ ಏಕೆ ಹೆಸರಿಟ್ಟಿಲ್ಲ..'ಮಠ' ಚಿತ್ರದ ವಿರುದ್ಧ ಕಾಳಿಸ್ವಾಮಿ ಫೈರ್‌

ಸಿನಿಮಾದಲ್ಲಿ ಮಠ, ಮಠಾಧೀಶರ ಬಗ್ಗೆ ವ್ಯಂಗ್ಯ ಮಾಡಲಾಗುತ್ತಿದೆ. ಇದರಿಂದ ನಾಳಿನ ಯುವಜನತೆಗೆ ಏನು ಸಂದೇಶ ನೀಡಿದಂತೆ ಆಗುತ್ತದೆ..? ಸಿನಿಮಾಗೆ ಹೆಸರಿಡಲು ನಮ್ಮ ಧರ್ಮವೇ ಬೇಕೇ..? ಮದರಸಾದಲ್ಲಿ ನಡೆಯುವ ಗಿಲಗಿಲ ಎಂಬ ಟೈಟಲ್‌ ಏಕೆ ಇಡೋದಿಲ್ಲ..? ಎಂದು ಕಾಳಿ ಸ್ವಾಮಿ, ಚಿತ್ರತಂಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಮಠ' ಚಿತ್ರದ ವಿರುದ್ಧ ಕಾಳಿಸ್ವಾಮಿ ಫೈರ್‌
'ಮಠ' ಚಿತ್ರದ ವಿರುದ್ಧ ಕಾಳಿಸ್ವಾಮಿ ಫೈರ್‌

ರವೀಂದ್ರ ವೆಂಶಿ ನಿರ್ದೇಶನದಲ್ಲಿ ಸಂತೋಷ್ ದಾವಣಗೆರೆ ನಾಯಕನಾಗಿ ನಟಿಸುತ್ತಿರುವ 'ಮಠ' ಸಿನಿಮಾ ನವೆಂಬರ್‌ 18 ರಂದು ತೆರೆ ಕಾಣುತ್ತಿದೆ. 2006 ರಲ್ಲಿ ತೆರೆ ಕಂಡ ಜಗ್ಗೇಶ್‌ ಅಭಿನಯದ 'ಮಠ' ಸಿನಿಮಾಗೂ ಈ ಸಿನಿಮಾ ಕಥೆಗೂ ವ್ಯತ್ಯಾಸ ಇದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಈ ನಡುವೆ, 'ಮಠ' ಚಿತ್ರದ ಬಗ್ಗೆ ಋಷಿಕುಮಾರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

''ದೇವರನ್ನು ನಾವು ಕಣ್ಣಿಂದ ನೋಡಿಲ್ಲ, ಇನ್ನೊಬ್ಬರಿಗೆ ಸಹಾಯ ಮಾಡುವವರೇ ದೇವರು. ನನ್ನ ಗುರುಗಳು ನನಗೆ ದೇವರು. ಆದರೆ ಸಿನಿಮಾದಲ್ಲಿ ಮಠ, ಮಠಾಧೀಶರ ಬಗ್ಗೆ ವ್ಯಂಗ್ಯ ಮಾಡಲಾಗುತ್ತಿದೆ. ಇದರಿಂದ ನಾಳಿನ ಯುವಜನತೆಗೆ ಏನು ಸಂದೇಶ ನೀಡಿದಂತೆ ಆಗುತ್ತದೆ..? ಸಿನಿಮಾಗೆ ಹೆಸರಿಡಲು ನಮ್ಮ ಧರ್ಮವೇ ಬೇಕೇ..? ಮದರಸಾದಲ್ಲಿ ನಡೆಯುವ ಗಿಲಗಿಲ ಎಂಬ ಟೈಟಲ್‌ ಏಕೆ ಇಡೋದಿಲ್ಲ..? ಚರ್ಚ್‌ನಲ್ಲಿ ನಡೆಯುವ ಪಾದ್ರಿ ಪಂಟ್ಲಾ ಎಂದು ಏಕೆ ಟೈಟಲ್‌ ಇಡೋಲ್ಲ..? ಮಠದಲ್ಲೇ ನಡೆಯುವ ವಿಚಾರಗಳನ್ನೇ ಏಕೆ ಸಿನಿಮಾ ಮಾಡ್ತೀರ..? ಹಾಸ್ಯ ಕಲಾವಿದರು ಸಿನಿಮಾ ಮಾಡಿದರೆ ನನಗೆ ಅಭ್ಯಂತರ ಇಲ್ಲ. ಆದರೆ ಮಠವನ್ನು, ಸ್ವಾಮಿಗಳನ್ನು ಹಾಸ್ಯ ಮಾಡುವುದು ಸರಿಯಲ್ಲ.''

''ನಾನು ಚಿತ್ರದ ಟ್ರೇಲರ್‌ ನೋಡಿದ್ದೇನೆ. ಅದರಲ್ಲಿ ಸ್ವಾಮೀಜಿಗಳು ಒಳಜಾತಿ ಪಂಗಡಗಳನ್ನು ಒಡೆಯುತ್ತಾರೆ ಎಂಬ ಡೈಲಾಗ್‌ ಇದೆ. ಎಷ್ಟೋ ಸ್ವಾಮೀಜಿಗಳು ಮೀಸಲಾತಿಗೆ ಹೋರಾಟ ನಡೆಸಿದ್ದಾರೆ. ಆದರೆ ಸಿನಿಮಾದಲ್ಲಿ ಈ ರೀತಿ ತೋರಿಸುವ ಮೂಲಕ ಎಲ್ಲಾ ಮಠಾಧೀಶರು ತಲೆ ತಗ್ಗಿಸುವ ಕೆಲಸ ಮಾಡಬೇಡಿ. 'ಮಠ' ಅನ್ನೋದು ಒಂದು ದೊಡ್ಡ ಹೆಸರು. ಆದರೆ ಆ ಹೆಸರಿಟ್ಟುಕೊಂಡು ಈ ರೀತಿ ಸಿನಿಮಾ ಮಾಡಬೇಡಿ. ನಿಜ ಜೀವನದಲ್ಲಿ ಆ ರೀತಿ ಕೆಲಸ ಮಾಡಿರುವ ಸ್ವಾಮೀಜಿಗಳ ಹೆಸರನ್ನು ಟೈಟಲ್‌ ಆಗಿ ಬಳಸಿಕೊಂಡು ಸಿನಿಮಾ ಮಾಡಿ'' ಎಂದು ಕಾಳಿ ಸ್ವಾಮೀಜಿ, ಮಠ ಚಿತ್ರತಂಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಟ್ರೇಲರ್ ಪ್ರಾಮಿಸಿಂಗ್ ಆಗಿ ಮೂಡಿ ಬಂದಿದ್ದು, ಕುತೂಹಲವನ್ನೂ ಹುಟ್ಟು ಹಾಕಿದೆ. ಫಿಲಾಸಫಿಕಲ್ ಹಾಗೂ ಕಾಮಿಡಿ ಮಿಶ್ರಿತ ಕಥಾಹಂದರ ಸಿನಿಮಾದಲ್ಲಿದೆ. ಕರ್ನಾಟಕದಲ್ಲಿರುವ ಮಠಗಳ ಬಗ್ಗೆ ಹಾಗೂ ಅಲ್ಲಿ ನಡೆದಂತ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ರವೀಂದ್ರ ವೆಂಶಿ ಚಿತ್ರಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ. ರವೀಂದ್ರ ವೆಂಶಿ ಇದಕ್ಕೂ ಮುನ್ನ 'ಪುಟಾಣಿ ಸಫಾರಿ', 'ವರ್ಣಮಯ', 'ವಾಸಂತಿ ನಲಿದಾಗ' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು ಈ ಬಾರಿ 'ಮಠ' ಮೂಲಕ ವಿಭಿನ್ನ ಕಥಾವಸ್ತುವನ್ನು ಕೈಗೆತ್ತಿಕೊಂಡಿದ್ದಾರೆ.

ವಿ.ಆರ್‌. ಕಂಬೈನ್ಸ್ ಬ್ಯಾನರ್ ಅಡಿ 'ಮಠ' ಚಿತ್ರವನ್ನು ಆರ್. ರಮೇಶ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಸಂತೋಷ್ ದಾವಣಗೆರೆ ನಾಯಕ ನಟನಾಗಿ ನಟಿಸಿದ್ದಾರೆ. ಉಳಿದಂತೆ ಸಾಧುಕೋಕಿಲ, ರಮೇಶ್ ಭಟ್, ತಬಲಾ ನಾಣಿ, ಶರತ್ ಲೋಹಿತಾಶ್ವ, ಬ್ಯಾಂಕ್ ಜನಾರ್ಧನ್, ರಾಜು ತಾಳಿಕೋಟೆ, ಮಂಡ್ಯ ರಮೇಶ್, ನಿರ್ದೇಶಕ ಗುರುಪ್ರಸಾದ್, ಬಿರಾದರ್ ಹಾಗೂ ಇನ್ನಿತರರು ನಟಿಸಿದ್ದಾರೆ. 'ಮಠ' ಚಿತ್ರಕ್ಕೆ ಜೀವನ್ ಗೌಡ ಛಾಯಾಗ್ರಾಹಣ, ಸಿ. ರವಿಚಂದ್ರನ್ ಸಂಕಲನ, ಶ್ರೀ ಗುರು ಸಂಗೀತ ನಿರ್ದೇಶನವಿದೆ. ಚಿತ್ರದ ಹಾಡುಗಳಿಗೆ ಯೋಗ ರಾಜ್ ಭಟ್, ವಿ. ನಾಗೇಂದ್ರ ಪ್ರಸಾದ್, ಗೌಸ್‌ಫೀರ್ ಸಾಹಿತ್ಯ ಬರೆದಿದ್ದಾರೆ. ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಒಳಗೊಂಡಿರುವ 'ಮಠ' ಸಿನಿಮಾ ನವೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಿದೆ.

IPL_Entry_Point