Saif Ali Khan: ಸೈಫ್ ಅಲಿ ಖಾನ್‌ಗೆ ಚೂರಿ ಇರಿದ ಪ್ರಕರಣ; ಮಧ್ಯಪ್ರದೇಶ, ಛತ್ತೀಸ್‌ಗಡಗಳಲ್ಲಿ ಶಂಕಿತರನ್ನು ಬಂಧಿಸಿದ ರೈಲ್ವೆ ಪೊಲೀಸರು
Saif Ali Khan: ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚೂರಿ ಇರಿದು ಪರಾರಿಯಾಗಿರುವ ಶಂಕಿತನನ್ನು ಮಧ್ಯ ಪ್ರದೇಶದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಅದೇ ರೀತಿ ಛತ್ತೀಸ್‌ಗಡದಲ್ಲೂ ಒಬ್ಬನನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಆದಾಗ್ಯೂ, ಅದೇ ವ್ಯಕ್ತಿ ಸೈಫ್ ಅಲಿ ಖಾನ್‌ಗೆ ಚೂರಿ ಇರಿದದ್ದು ಎಂದು ಬಾಂದ್ರಾ ಪೊಲೀಸರು ಖಚಿತಪಡಿಸಬೇಕಷ್ಟೆ.
Saif Ali Khan: ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚೂರಿ ಇರಿದ ಪ್ರಕರಣದ ಆರೋಪಿ ಪತ್ತೆಗೆ ಪೊಲೀಸರು ತಂಡೋಪತಂಡವಾಗಿ ಶೋಧ ನಡೆಸುತ್ತಿರುವಾಗಲೇ, ಮಧ್ಯಪ್ರದೇಶದಲ್ಲಿ ರೈಲ್ವೆ ಪೊಲೀಸರು ಶಂಕಿತನೊಬ್ಬನನ್ನು ಬಂಧಿಸಿರುವ ಮಾಹಿತಿ ಬಹಿರಂಗವಾಗಿದೆ. ಶಂಕಿತ ವ್ಯಕ್ತಿಯೇ ಸೈಫ್ ಅಲಿ ಖಾನ್‌ಗೆ ಚೂರಿ ಇರಿದಾತ ಎಂಬುದನ್ನು ಬಾಂದ್ರಾ ಪೊಲೀಸರು ಖಚಿತಪಡಿಸಬೇಕಷ್ಟೆ.
ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಮಧ್ಯಪ್ರದೇಶದಲ್ಲಿ ಸೈಫ್ ಅಲಿ ಖಾನ್ ಇರಿತ ಪ್ರಕರಣದಲ್ಲಿ ಶಂಕಿತನನ್ನು ಬಂಧಿಸಿದೆ. ಸೈಫ್ ಅಲಿ ಖಾನ್ ಅವರ ಕಟ್ಟಡದ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾದ ಶಂಕಿತ ವ್ಯಕ್ತಿಯನ್ನು ಹೋಲುವ ವ್ಯಕ್ತಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ ಎಂದು ಮುಂಬೈ ಪೊಲೀಸರ ಅಪರಾಧ ವಿಭಾಗದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ, ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿ ಬಾಲಿವುಡ್ ನಟನಿಗೆ ಇರಿದ ಒಳನುಗ್ಗಿದ ವ್ಯಕ್ತಿಯೇ ಎಂಬುದು ಇನ್ನೂ ಖಚಿತವಾಗಿಲ್ಲ.
ಛತ್ತೀಸ್‌ಗಡದಲ್ಲಿ ಇನ್ನೊಬ್ಬ ಶಂಕಿತನ ಬಂಧನ
ಇನ್ನೊಂದೆಡೆ, ಛತ್ತೀಸ್‌ಗಡದಲ್ಲೂ ರೈಲ್ವೆ ಪೊಲೀಸರು ಒಬ್ಬ ಶಂಕಿತನನ್ನು ಬಂಧಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಶಂಕಿತನನ್ನು 31 ವರ್ಷದ ಆಕಾಶ್ ಕೈಲಾಶ್ ಕನ್ನೋಜಿಯಾ ಎಂದು ಗುರುತಿಸಲಾಗಿದ್ದು, ದುರ್ಗ್ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ. ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ಮೂಲಗಳು ಆರೋಪಿಯನ್ನು ಮುಂಬೈ-ಹೌರಾ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ನಿಂದ ಹಿಡಿಯಲಾಗಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ರೈಲು ದುರ್ಗ್ ತಲುಪಿದಾಗ ಶಂಕಿತ ಆರೋಪಿ - ಜನರಲ್ ಕಂಪಾರ್ಟ್‌ಮೆಂಟ್‌ನಿಂದ ಇಳಿದಾಗ, ಆತನನ್ನು ತಕ್ಷಣ ವಶಕ್ಕೆ ತೆಗೆದುಕೊಳ್ಳಲಾಗಿದೆ. ಮುಂಬೈ ಪೊಲೀಸರು ಶಂಕಿತನ ಫೋಟೋ, ರೈಲು ಸಂಖ್ಯೆ ಮತ್ತು ಸ್ಥಳವನ್ನು ಆರ್‌ಪಿಎಫ್‌ಗೆ ಕಳುಹಿಸಿದ್ದರು, ನಂತರ ಅವನನ್ನು ಹಿಡಿಯಲಾಯಿತು. ಪ್ರಸ್ತುತ ಅವನು ಆರ್‌ಪಿಎಫ್ ವಶದಲ್ಲಿದ್ದಾನೆ" ಎಂದು ವರದಿ ವಿವರಿಸಿದೆ.
ಸೈಫ್ ಅಲಿ ಖಾನ್‌ಗೆ ಚೂರಿ ಇರಿದ ಪ್ರಕರಣ; ಇದುವರೆಗೆ ಏನೇನಾಯಿತು
ಮುಂಬಯಿಯ ಬಾಂದ್ರಾದಲ್ಲಿರುವ ನಿವಾಸದಲ್ಲಿ ಜನವರಿ 16ರಂದು ನಸುಕಿನ ವೇಳೆ, ತನ್ನ ಕುಟುಂಬ ಮತ್ತು ಸಿಬ್ಬಂದಿಯನ್ನು ರಕ್ಷಿಸಲು ಅಪರಿಚಿತ ದುಷ್ಕರ್ಮಿಯನ್ನು ನಟ ಸೈಫ್ ಅಲಿ ಖಾನ್ ಅವರನ್ನು ಎದುರಿಸುದ್ದರು. ಆಗ ಆತ ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆಸಿದ್ದು, ಚೂರಿಯಿಂದ ಇರಿದಿದ್ದಾನೆ. ಇದರಿಂದಾಗಿ ಸೈಫ್ ಅಲಿ ಖಾನ್ ಶರೀರದಲ್ಲಿ ಆರು ಕಡೆಗಳಲ್ಲಿ ಗಾಯಗಳಾಗಿದ್ದವು. ಅವರ ಬೆನ್ನೆಲುಬಿನ ಬಳಿ ಗಂಭೀರ ಗಾಯವಾಗಿದ್ದು, ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸುದೀರ್ಘ ಶಸ್ತ್ರಚಿಕಿತ್ಸೆಯ ಬಳಿಕ, ಅವರ ಶರೀರದಲ್ಲಿದ್ದ 2.5 ಇಂಚಿನ ಉದ್ದದ ಚೂರಿ ತುಂಡನ್ನು ಹೊರತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರು ಶೀಘ್ರವೇ ಗುಣಮುಖರಾಗಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೃತ್ಯವೆಸಗಿದ ವ್ಯಕ್ತಿ 40 ವರ್ಷ ವಯಸ್ಸಿನ ಒಳಗಿನವನಿರಬಹುದು ಎಂದು ಅಂದಾಜಿಸಲಾಗಿದೆ. ಸೈಫ್ ಅಲಿ ಖಾನ್ ಅವರ ಅಪಾರ್ಟ್‌ಮೆಂಟ್ ಕಟ್ಟಡದ 12ನೇ ಮಹಡಿಯ ಮೆಟ್ಟಿಲುಗಳ ಮೇಲೆ ಆತನ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದರಲ್ಲಿ ಆತನ ಮುಖಚಹರೆ ಲಭಿಸಿದ್ದು, ಅದರ ಆಧಾರದ ಮೇಲೆ ಈಗ ಶೋಧ ನಡೆದಿದೆ. ಆತ ಇಯರ್‌ಫೋನ್ ಖರೀದಿಗೆ ಮೊಬೈಲ್ ಅಂಗಡಿಗೆ ಭೇಟಿ ಕೊಟ್ಟ ದೃಶ್ಯವೂ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಪೊಲೀಸರು ಶಂಕಿತನ ಚಲನವಲನಗಳ ಜಾಡು ಹಿಡಿದು ಆತನ ಪತ್ತೆಗೆ ಮುಂದಾಗಿದ್ದಾರೆ.
ಗುರುವಾರ (ಜನವರಿ 16) ನಸುಕಿನ ವೇಳೆ ಈ ಕೃತ್ಯ ನಡೆದಿದ್ದು, ಬಳಿಕ ಆ ಶಂಕಿತ ಆರೋಪಿ ಮುಂಬಯಿ ಬಾಂದ್ರಾ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ. ಅದಕ್ಕೆ ಸಂಬಂಧಿಸಿದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಅದಲ್ಲದೇ, ನಂತರ ಆತ ದಾದರ್‌ನಲ್ಲಿ ಕಾಣಿಸಿಕೊಂಡಿದ್ದ. ಈ ದೃಶ್ಯಗಳನ್ನು ನೋಡಿದ ಬಳಿಕ ಆತ ರೈಲು ಹಿಡಿದು ಮುಂಬಯಿ ಬಿಟ್ಟು ಹೊರಗೆ ಹೋಗಿರಬಹುದು ಎಂಬ ತೀರ್ಮಾನಕ್ಕೆ ಮುಂಬಯಿ ಪೊಲೀಸರು ಬಂದಿದ್ದರು.
