ನಟ ಸೈಫ್ ಅಲಿ ಖಾನ್ಗೆ ಚಾಕು ಇರಿತ ಪ್ರಕರಣ; ಶಂಕಿತ ಆರೋಪಿ ಫೋಟೋ, CCTV ದೃಶ್ಯಾವಳಿ ವೈರಲ್
ಬಾಲಿವುಡ್ ನಟ ಸೈಫ್ ಅಲಿ ಖಾನ್ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಆರೋಪಿಯ ಫೋಟೋ, ಸಿಸಿಟಿವಿ ದೃಶ್ಯಾವಳಿ ಬಹಿರಂಗಗೊಂಡಿದೆ.

ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ (Saif Ali Khan) ಅವರ ಮನೆಗೆ ನುಗ್ಗಿ 6 ಬಾರಿ ಇರಿದು, ನಟನ ಕೈ-ಕುತ್ತಿಗೆ ಮತ್ತು ಬೆನ್ನುಮೂಳೆಗೆ ಗಾಯಗೊಳಿಸಿದ ಶಂಕಿತ ಆರೋಪಿ ಮೊದಲ ಫೋಟೋ ಮತ್ತು ಸಿಸಿಟಿವಿ ದೃಶ್ಯಾವಳಿ ಬಹಿರಂಗವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಗುರುವಾರ (ಜನವರಿ 16) ಬೆಳಗಿನ ಜಾವ 2.33ಕ್ಕೆ ಸೈಫ್ ಅವರ ಅಪಾರ್ಟ್ಮೆಂಟ್ನ ಮೆಟ್ಟಿಲುಗಳಲ್ಲಿ ಇಳಿದು ಹೋಗುತ್ತಿರುವ ಶಂಕಿತ ಆರೋಪಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮುಂಬೈ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಶಂಕಿತ ಆರೋಪಿ ಫೋಟೋ ಮತ್ತು ಸಿಸಿಟಿವಿ ದೃಶ್ಯಾವಳಿಯನ್ನು ಮುಂಬೈ ಪೊಲೀಸರೇ ಬಹಿರಂಗಪಡಿಸಿದ್ದಾರೆ. ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿರುವ ಶಂಕಿತ ಆರೋಪಿ ಬೆನ್ನಿಗೆ ಬ್ಯಾಗ್ ಒಂದನ್ನು ಹಾಕಿದ್ದಾರೆ. ಭುಜದ ಮೇಲೆ ಕಿತ್ತಳೆ ಬಣ್ಣದ ಸ್ಕಾರ್ಫ್ ಧರಿಸಿದ್ದಾನೆ. ಶಂಕಿತ ವ್ಯಕ್ತಿಯು ಮೆಟ್ಟಿಲುಗಳ ಕೆಳಗೆ ನಡೆದುಕೊಂಡು ಹೋಗುತ್ತಿರುವಾಗ ಕ್ಯಾಮೆರಾ ನೋಡಿದ್ದನ್ನು ವಿಡಿಯೋದಲ್ಲಿ ಕಾಣಬಹುದು.
ಸೈಫ್ ಅಲಿ ಖಾನ್ ಮತ್ತು ಪತ್ನಿ ಕರೀನಾ ಕಪೂರ್ ಖಾನ್ ಮತ್ತು ಅವರ ಮಕ್ಕಳು ಬಾಂದ್ರಾ ಪಶ್ಚಿಮದಲ್ಲಿರುವ 12 ಅಂತಸ್ತಿನ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾರೆ. ಸೈಫ್ ಮಾತ್ರವಲ್ಲ, ಬಾಲಿವುಡ್ನ ಅನೇಕ ನಟರು ಇದೇ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದಾರೆ. ಅಪಾರ್ಟ್ಮೆಂಟ್ಗೆ ಭಾರೀ ಭದ್ರತೆ ಇದ್ದರೂ ಅಪಾರ್ಟ್ಮೆಂಟ್ನ ಪಕ್ಕದ ಕಾಂಪೌಂಡ್ ಮೂಲಕ ಒಳ ಪ್ರವೇಶಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಸೈಫ್ ಮನೆಗೆ ಹೋಗಲು ಫೈಯರ್ ಎಸ್ಕೇಪ್ ಮೆಟ್ಟಿಲುಗಳನ್ನು ಬಳಿಸಿದ್ದಾನೆ ಎಂದು ಹೇಳಲಾಗುತ್ತಿದೆ.
1 ಕೋಟಿಗೆ ಬೇಡಿಕೆ ಇಟ್ಟಿದ್ದನಂತೆ ದುಷ್ಕರ್ಮಿ
ನಟನ ಮನೆಯಲ್ಲಿ ಅಡುಗೆ ಮಾಡುವವರಲ್ಲಿ ಒಬ್ಬರಾದ ಎಲಿಯಾಮಾ ಫಿಲಿಪ್ಸ್ ಅಲಿಯಾಸ್ ಲಿಮಾ, ದುಷ್ಕರ್ಮಿಯನ್ನು ಮೊದಲು ನೋಡಿದ್ದರಂತೆ. ದುಷ್ಕರ್ಮಿ ನೋಡಿದ ಕೂಡಲೇ ಭಯದಲ್ಲಿ ಆಕೆ ಜೋರಾಗಿ ಕಿರುಚಿದರಂತೆ. ಇದರಿಂದ ಎಚ್ಚರಗೊಂಡ ಸೈಫ್ ಅಲಿ ಖಾನ್, ಹಂತಕನನ್ನು ಒಳ ನುಗ್ಗದಂತೆ ತಡೆಯಲು ಹೋರಾಡಿದ್ದಾರೆ. ಆದರೆ 6 ಬಾರಿ ಇರಿದ ಹಂತಕ, ಎಡಗೈ ಮತ್ತು ಕುತ್ತಿಗೆಗೆ ಗಾಯಗೊಳಿಸಿದ್ದಾನೆ. ಅಲ್ಲದೆ, ನಟನ ಬೆನ್ನುಮೂಳೆಯಲ್ಲಿ ಚಾಕು ಮುರಿದುಕೊಂಡಿತ್ತು ಎನ್ನಲಾಗಿದೆ. ಒಳನುಗ್ಗಲು ಪ್ರಯತ್ನಿಸಿದಾಗ ಏನು ಬೇಕು ಎಂದು ಕೇಳಲಾಗಿದೆಯಂತೆ. ಆಗ 1 ಕೋಟಿ ರೂ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ದಾಳಿಯಲ್ಲಿ ಇಬ್ಬರು ಮನೆ ಸಹಾಯಕರು ಸಹ ಗಾಯಗೊಂಡಿದ್ದಾರೆ.
ಚಿಕಿತ್ಸೆ ನೀಡಿದ ಬಳಿಕ ವೈದ್ಯರು ಹೇಳಿದ್ದೇನು?
ಸೈಫ್ ಅಲಿ ಖಾನ್ ಅವರನ್ನು ಅವರ ಮಗ ಇಬ್ರಾಹಿಂ ಅವರು ಲೀಲಾವತಿ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯ ವೈದ್ಯರು ಮಾತನಾಡಿ, ಸ್ಥಿರವಾಗಿದ್ದಾರೆ, ಅಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ‘ಅಪರಿಚಿತ ವ್ಯಕ್ತಿಯಿಂದ ಹಲ್ಲೆಗೆ ಒಳಗಾಗಿ ಸೈಫ್ ಅಲಿ ಖಾನ್ ಅವರನ್ನು ಬೆಳಗಿನ ಜಾವ ಆಸ್ಪತ್ರೆಗೆ ದಾಖಲಿಸಲಾಯಿತು. ಇರಿದಿದ್ದ ಚಾಕು ಬೆನ್ನು ಮೂಳೆಯಲ್ಲಿ ಮುರಿದಿತ್ತು. ಚಾಕುವನ್ನು ತೆಗೆದು ಹಾಕಲು ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಕುತ್ತಿಗೆ ಸೇರಿ ಉಳಿದ ಗಾಯಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ’ ಎಂದು ಲೀಲಾವತಿ ಆಸ್ಪತ್ರೆಯ ನಿತಿನ್ ಡಾಂಗೆ ತಿಳಿಸಿದ್ದಾರೆ. ‘ಸೈಫ್ ಅಲಿ ಖಾನ್ ಅವರು ಈಗ ಸಂಪೂರ್ಣವಾಗಿ ಸ್ಥಿರವಾಗಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನವಾಬ ಸೈಫ್ ಅಲಿ ಖಾನ್ ಸಂಪತ್ತು ಎಷ್ಟಿರಬಹುದು
