ಸಲ್ಮಾನ್ ಖಾನ್ ಸಿನಿಮಾ ‘ಸಿಕಂದರ್’ ಟೀಸರ್ ರಿಲೀಸ್ ಡಿಸೆಂಬರ್ 28ಕ್ಕೆ ಮುಂದೂಡಿಕೆ; ಇಲ್ಲಿದೆ ಕಾರಣ
ಸಲ್ಮಾನ್ ಖಾನ್ ಅವರ ಜನ್ಮದಿನವಾದ ಇಂದು (ಡಿಸೆಂಬರ್ 27) ಅವರ ಹೊಸ ಸಿನಿಮಾ ‘ಸಿಕಂದರ್’ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಟೀಸರ್ ಬಿಡುಗಡೆಯನ್ನು ಡಿಸೆಂಬರ್ 28ಕ್ಕೆ ಮುಂದೂಡಲಾಗಿದೆ. ಇದಕ್ಕೆ ಕಾರಣ ಏನು ನೀವೇ ನೋಡಿ.
ಇಂದು (ಡಿಸೆಂಬರ್ 27) ಸಲ್ಮಾನ್ ಖಾನ್ ಅವರ 59 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಹೊಸ ಆಕ್ಷನ್ ಸಿನಿಮಾ ಸಿಕಂದರ್ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಈಗಾಗಲೇ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಕಪ್ಪು ಬಣ್ಣದ ಬಟ್ಟೆ ತೊಟ್ಟು ಅರ್ಧ ಮುಖ ತೋರುತ್ತಾ, ಕೈಯಲ್ಲಿ ಆಯುಧ ಹಿಡಿದುಕೊಂಡ ಫಸ್ಟ್ ಲುಕ್ ವೈರಲ್ ಆಗಿತ್ತು. ಸ್ವತಃ ಸಲ್ಮಾನ್ ಖಾನ್ ಟೀಸರ್ ರಿಲೀಸ್ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನೂ ಹಂಚಿಕೊಂಡಿದ್ದರು. ಆದರೆ, ಹೇಳಿದ ಸಮಯಕ್ಕೆ ಟೀಸರ್ ರಿಲೀಸ್ ಮಾಡಿಲ್ಲ, ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನಿಧನದಿಂದ ದೇಶವು ಶೋಕಾಚರಣೆಯಲ್ಲಿ ಇರುವುದರಿಂದ ಈ ಸಿನಿಮಾದ ಟೀಸರ್ ಬಿಡುಗಡೆ ಮುಂದೂಡಲಾಗಿದೆ.
“ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಟೀಸರ್ ಬಿಡುಗಡೆಯನ್ನು ಮುಂದೂಡಲಾಗಿದೆ” ಎಂದು ಚಿತ್ರತಂಡ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. Nadiadwala ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್, ಸಾಜಿದ್ ನಾಡಿಯಾಡ್‌ವಾಲಾ ಪ್ರೊಡಕ್ಷನ್ ಹೌಸ್ ಸಿಕಂದರ್ ಟೀಸರ್ ರಿಲೀಸ್ ಮುಂದೂಡಲಾಗಿದೆ ಎಂಬ ಮಾಹಿತಿಯನ್ನು ಅಧಿಕೃತವಾಗಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಶುಕ್ರವಾರ ಬೆಳಿಗ್ಗೆ 11:07 ಕ್ಕೆ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಆ ಸಮಯಕ್ಕಿಂತ ಎರಡು ಗಂಟೆ ಮುಂಚಿತವಾಗಿ ಟೀಸರ್ ಬಿಡುಗಡೆ ಮುಂದೂಡಲಾಗಿದೆ ಎಂಬ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಗೌರವಾನ್ವಿತ ಮಾಜಿ ಪ್ರಧಾನಿಯವರ ನಿಧನದ ಕಾರಣಕ್ಕಾಗಿ ಟೀಸರ್ ರಿಲೀಸ್ ಮುಂದೂಡಲಾಗಿದೆ ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ.
"ಶೋಕಾಚರಣೆಯ ಸಮಯದಲ್ಲಿ ರಾಷ್ಟ್ರದ ಜತೆಗೆ ನಮ್ಮ ಆಲೋಚನೆ, ಭಾವನೆ ಇದೆ. ಅರ್ಥಮಾಡಿಕೊಂಡಿದ್ದಕ್ಕಾಗಿ ಧನ್ಯವಾದಗಳು #ಟೀಮ್ ಸಿಕಂದರ್." ಎಂದು ಬರೆದುಕೊಂಡಿದ್ದಾರೆ. ಡಿಸೆಂಬರ್ 28ಕ್ಕೆ ಟೀಸರ್ ರಿಲೀಸ್ ಮಾಡಲಿರುವ ಸಂಗತಿಯನ್ನೂ ಹಂಚಿಕೊಂಡಿದ್ದಾರೆ.
ಡಿಸೆಂಬರ್ 26ಕ್ಕೆ ಫಸ್ಟ್ ಲುಕ್ ಬಿಡುಗಡೆ
ಪೋಸ್ಟರ್‌ನ ಫಸ್ಟ್ ಲುಕ್ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸಿನಿಮಾದ ಕಥನ ಹೇಗಿರಬಹುದು? ಏನಿರಬಹುದು ಎಂದು ಊಹಿಸಿಕೊಳ್ಳಲು ಆರಂಭಿಸಿದ್ದಾರೆ. "ಓ ಮೈ ಗಾಡ್... ಮೇರಿ ಜಾನ್ ಸಲ್ಮಾನ್ ಭಾಯ್.. ವಾಟ್ ಎ ಲುಕ್" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಕಾಯುವಿಕೆ ಅಂತ್ಯವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ನಾಳೆಗಾಗಿ ಕಾಯುತ್ತಿದ್ದೇನೆ ಎಂದವರೂ ಇದ್ದಾರೆ. ಹೀಗೆ ಸಾಕಷ್ಟು ಜನರು ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. “ಬಾಸ್ ಈಸ್ ಬ್ಯಾಕ್” ಎನ್ನುತ್ತಾ ಇಂದು ರಿಲೀಸ್ ಆಗಲಿರುವ ಟೀಸರ್ ಬಗ್ಗೆ ಕುತೂಹಲ ಹೊಂದಿರುವುದಾಗಿ ತಿಳಿಸಿದ್ದಾರೆ.
"ಶೇರ್ ಆನ್ ದಿ ವೇ," “ಪೋಸ್ಟರ್ ತುಂಬಾ ಚೆನ್ನಾಗಿದೆ”"ಭಾಯಿಜಾನ್ ಈಸ್ ಬ್ಯಾಕ್" ಹೀಗೆ ಸಾಕಷ್ಟು ಕಾಮೆಂಟ್ಸ್ ಬಂದಿದೆ. ದೊಡ್ಡ ವ್ಯಕ್ತಿತ್ವ ಮತ್ತು ಮರೆಯಲಾಗದ ಅಭಿನಯಕ್ಕಾಗಿ ಹೆಸರುವಾಸಿಯಾದ ಸಲ್ಮಾನ್ ಖಾನ್ ಈ ಬಾರಿ ಆಕ್ಷನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅವರನ್ನು ಸ್ಕ್ರೀನ್ ಮೇಲೆ ನೋಡುವುದೇ ಒಂದು ಖುಷಿ ಎಂದು ಇನ್ನೊಬ್ಬ ಬಳಕೆದಾದರು ಹೇಳಿದ್ದಾರೆ.