ಕನ್ನಡ ಸುದ್ದಿ  /  Entertainment  /  Sanalwood News The Audience's Time Should Be Respected Says Actor Director Ramesh Aravind Mnk

Ramesh Aravind: ಒಟಿಟಿ ಎಲ್ಲರ ಕೈಗೆಟುಕುತ್ತಿದೆ, ಪ್ರೇಕ್ಷಕನ ಸಮಯಕ್ಕೆ ಗೌರವ ಕೊಡುವ ಕೆಲಸ ನಮ್ಮಿಂದಾಗಬೇಕಿದೆ; ರಮೇಶ್‌ ಅರವಿಂದ್‌

ಬದಲಾವಣೆಯ ಗಾಳಿ ಚಿತ್ರರಂಗದಲ್ಲೂ ಹಬ್ಬಿದೆ. ಒಟಿಟಿ ಎಂಬುದು ಎಲ್ಲರ ಕೈಗೆ ಸಿಗುತ್ತಿದೆ. ನೋಡುಗನ ಸಮಯವನ್ನು ಗೌರವಿಸಿ, ಅದಕ್ಕೆ ತಕ್ಕದಾದ ಕಂಟೆಂಟ್‌ ನೀಡುವ ಅನಿವಾರ್ಯತೆಯಲ್ಲಿ ಚಿತ್ರರಂಗವಿದೆ ಎಂದು ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಆಯೋಜಿಸಿದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ ನಟ, ನಿರೂಪಕ ರಮೇಶ್‌ ಅರವಿಂದ್.‌

ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಆಯೋಜಿಸಿದ್ದ ಸಿನಿಮಾ ಮಾಧ್ಯಮ ಸ್ಥಿತಿಗತಿ ವಿಚಾರ ಸಂಕಿರಣ ಮತ್ತು ಸಂಘದ ಸದಸ್ಯರಿಗೆ ಗುರುತಿನ ಚೀಟಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್‌ ಅರವಿಂದ್.‌ ಹಿರಿಯ ಪತ್ರಕರ್ತ ಜೋಗಿ ಮತ್ತು ಹಿರಿಯ ನಿರ್ದೇಶಕ ಪಿ ಶೇಷಾದ್ರಿ ವೇದಿಕೆ ಮೇಲಿದ್ದರು.
ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಆಯೋಜಿಸಿದ್ದ ಸಿನಿಮಾ ಮಾಧ್ಯಮ ಸ್ಥಿತಿಗತಿ ವಿಚಾರ ಸಂಕಿರಣ ಮತ್ತು ಸಂಘದ ಸದಸ್ಯರಿಗೆ ಗುರುತಿನ ಚೀಟಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್‌ ಅರವಿಂದ್.‌ ಹಿರಿಯ ಪತ್ರಕರ್ತ ಜೋಗಿ ಮತ್ತು ಹಿರಿಯ ನಿರ್ದೇಶಕ ಪಿ ಶೇಷಾದ್ರಿ ವೇದಿಕೆ ಮೇಲಿದ್ದರು.

ಬೆಂಗಳೂರು: ಯಾವಾಗ ನೋಡುಗನ ಸಮಯಕ್ಕೆ ಸಿನಿಮಾದವರು ಗೌರವ ಕೊಡುವ ಕೆಲಸ ಶುರುವಾಗುತ್ತದೋ ಆಗ ಮಾತ್ರ ಜನರನ್ನ ಚಿತ್ರಮಂದಿರದ ಕಡೆ ಕರೆತರಲು ಸಾಧ್ಯ ಎಂದು ಹಿರಿಯ ನಟ, ನಿರೂಪಕ, ನಿರ್ದೇಶಕ ರಮೇಶ್‌ ಅರವಿಂದ್‌ ಹೇಳಿದರು. ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಆಯೋಜಿಸಿದ್ದ ಸಿನಿಮಾ ಮಾಧ್ಯಮ ಸ್ಥಿತಿಗತಿ ವಿಚಾರ ಸಂಕಿರಣ ಮತ್ತು ಸಂಘದ ಸದಸ್ಯರಿಗೆ ಗುರುತಿನ ಚೀಟಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದಲಾವಣೆ ಬಯಸಿದರೆ, ನಾವೂ ನಮ್ಮ ಜೀವನದಲ್ಲಿ ಒಂದಷ್ಟು ಬದಲಾವಣೆಗಳಿಗೆ ಒಗ್ಗಿಕೊಳ್ಳಬೇಕು ಎಂದು ಅವರು ಹೇಳಿದರು.

ಅದೇ ರೀತಿ ಪ್ರತಿಯೊಬ್ಬ ನಟನಲ್ಲಿ, ಮಾಧ್ಯಮದವರಲ್ಲಿ ಒಂದೊಂದು ವಿಶೇಷತೆಗಳಿವೆ ನಮ್ಮ ಸಾಮರ್ಥ್ಯವನ್ನ ಅರಿತು ವಿಭಿನ್ನ ಮತ್ತು ವಿಶೇಷವಾಗಿ ಕಾಣಿಸಬೇಕು. ಏನೇ ಬದಲಾವಣೆಗೆ ನಾವು ಒಗ್ಗಿಕೊಂಡರೂ, ಆತ್ಮವನ್ನು ಮಾತ್ರ ಮಾರಾಟ ಮಾಡಿಕೊಳ್ಳಬಾರದು. ಅದೊಂದನ್ನು ಜೋಪಾನವಾಗಿ ಇಟ್ಟುಕೊಂಡರೆ ಅಲ್ಲಿ ನಮ್ಮ ಉಳಿಗಾಲ ಇದೆ’ ಎಂದು ಕಿವಿಮಾತು ಹೇಳಿದರು.

ನಮ್ಮ ಚಿತ್ರರಂಗ ಚೆನ್ನಾಗಿಯೇ ಇದೆ..

ಹಿರಿಯ ನಿರ್ದೇಶಕ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಪಿ. ಶೇಷಾದ್ರಿ ಮಾತನಾಡಿ, ‘ಚಿತ್ರರಂಗ ಇಂದು ಉದ್ಯಮವಾಗಿ ಮಾರ್ಪಟ್ಟಿದೆ .ಇದೇ ವಿಷಯಕ್ಕಾಗಿ ಹಿರಿಯ ನಿರ್ದೇಶಕ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಚಿತ್ರರಂಗವನ್ನು ಕಲೋದ್ಯಮ ಎಂದು ಕರೆದಿದ್ದಾರೆ ಅದು ಪ್ರಸ್ತುತವೂ ಕೂಡ. ಕನ್ನಡ ಚಿತ್ರರಂಗಕ್ಕೆ 90 ವರ್ಷಗಳಾಗಿವೆ. ಈ ಒಂಬತ್ತು ದಶಕಗಳ ಅವಧಿಯಲ್ಲಿ ಬರೋಬ್ಬರಿ ಐದೂವರೆ ಸಾವಿರ ಚಿತ್ರಗಳು ತೆರೆಗೆ ಬಂದಿವೆ. ಚಿತ್ರರಂಗ ಸರಿ ಇಲ್ಲ, ನಷ್ಟ ಹೆಚ್ಚು ಎಂದಿದ್ದರೆ ಪ್ರತಿವರ್ಷವೂ ಸುಮಾರು 250ಕ್ಕೂ ಅಧಿಕ ಚಿತ್ರಗಳು ನಿರ್ಮಾಣವಾಗುತ್ತಿರಲಿಲ್ಲ. ಚಿತ್ರರಂಗದ ಸ್ಥಿತಿ ಚೆನ್ನಾಗಿಯೇ ಇದೆ. ಇದಕ್ಕೆ ಪೂರಕವಾಗಿ ಇದುವರೆಗೂ ನಾನು ನಿರ್ದೇಶಿಸಿದ ಚಿತ್ರಗಳ ಪೈಕಿ ಒಂದನ್ನು ಹೊರತುಪಡಿಸಿದರೆ, ಮಿಕ್ಕಂತೆ ಎಲ್ಲಾ ಚಿತ್ರಗಳು ನಿರ್ಮಾಪಕರಿಗೆ ಹಾಕಿದ ಬಂಡವಾಳವನ್ನು ತಂದುಕೊಟ್ಟಿದೆ’ ಎಂದು ಅವರು ಹೇಳಿದರು

ಹೊರಗಿನವರಿಗೆ ನಮ್ಮ ಚಿತ್ರರಂಗ ಚಂದ

‘ಸಾಮಾನ್ಯವಾಗಿ ನಾವು ಪರಭಾಷೆಯ ಚಿತ್ರಗಳು ಚೆನ್ನಾಗಿವೆ, ಅವರಂತೆ ನಾವು ಚಿತ್ರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮಾತಾಡುವುದನ್ನು ಕೇಳುತ್ತಿರುತ್ತೇವೆ. ಕೆಲ ದಿನಗಳ ಹಿಂದಷ್ಟೇ ನನಗೆ ಕೇರಳದ ಮಲಯಾಳಂ ಮತ್ತು ಮಹಾರಾಷ್ಟ್ರದ ಅಲ್ಲಿನ ಭಾಷೆ ಮರಾಠಿಯ ಚಿತ್ರಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತ್ತು. ಆಗ ಅಲ್ಲಿನವರು ಇಲ್ಲಿನ ನಮ್ಮ ಭಾಷೆಯ ಸಿನಿಮಾಗಳಿಂತ ಕನ್ನಡದ ಸಿನಿಮಾಗಳು ಚೆಂದ ಎಂದು ಬಣ್ಣಿಸುತ್ತಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪ್ರತಿಯೊಂದು ಚಿತ್ರರಂಗಗಳಲ್ಲಿ ಅದರದೇ ಆದ ಒಂದಷ್ಟು ಸಮಸ್ಯೆಗಳಿವೆ. ಆ ಸಮಸ್ಯೆಯ ಜತೆಗೇ ಸಿನಿಮಾಗಳು ತಯಾರಾಗುತ್ತಿವೆ ಎಂದು ಅವರು ತಿಳಿಸಿದರು.

ಹಿರಿಯ ಪತ್ರಕರ್ತ ಮತ್ತು ಸಾಹಿತಿ ಜೋಗಿ ಮಾತನಾಡಿ, ‘ಡಿಜಿಟಲ್ ಯುಗದಲ್ಲಿ ಪತ್ರಿಕೆಗಳನ್ನು ನೋಡುವ ರೀತಿಯೇ ಬೇರೆಯಾಗಿದೆ. ಚಿತ್ರವೊಂದರ ಟೀಸರ್ ಬಿಡುಗಡೆಯಾದರೆ ಆ ಕ್ಷಣವೇ ಅದರ ಸುದ್ದಿ ಬರಬೇಕು. ಪತ್ರಿಕೆಯಲ್ಲಿ ಮರುದಿನ ಆ ಸುದ್ದಿ ಪ್ರಕಟವಾಗುವಷ್ಟರಲ್ಲಿ ಟೀಸರ್ ಲಕ್ಷ ಲಕ್ಷ ವೀಕ್ಷಣೆ ಕಂಡಿರುತ್ತದೆ. ಆ ಟೀಸರ್ ಹೇಗಿದೆ ಎನ್ನುವುದಕ್ಕಿಂತ, ಟೀಸರ್ ಎಷ್ಟು ವೀಕ್ಷಣೆ ಕಂಡಿದೆ ಎಂದು ಬರೆಯುವ ಒತ್ತಡವು ನಮ್ಮ ಮೇಲೆ ಇರುತ್ತದೆ .ಇತ್ತೀಚಿನ ದಿನಗಳಲ್ಲಿ ಕನ್ನಡ ಪತ್ರಕರ್ತರನ್ನು ನೋಡುವ ಸ್ಥಿತಿಯೇ ಬೇರೆಯಾಗಿದೆ’ ಎಂದು ಅವರು ಹೇಳಿದರು.

‘ಸಿನಿಮಾ ನೋಡಿ ಹೊರ ಬಂದಾಗ ಕಥೆ ಹೇಗಿದೆ, ಚಿತ್ರ ಹೇಗಿದೆ ಎನ್ನುವುದನ್ನು ಕೇಳುವ ಬದಲು ಚಿತ್ರಕ್ಕೆ ಎಷ್ಟು ಸ್ಟಾರ್ ಕೊಡುತ್ತೀರಿ ಎಂದು ಕೇಳುವ ಪರಿಪಾಠ ಹೆಚ್ಚಾಗಿದೆ. ಕನಿಷ್ಠ ಮೂರು ಸ್ಟಾರ್ ಕೊಡಲೇಬೇಕು. ವಿಮರ್ಶೆ ಮಾಡುವುದನ್ನು ಅರಗಿಸಿಕೊಳ್ಳುವ ಮನಸ್ಥಿತಿಯೇ ಇಲ್ಲ. ಎಲ್ಲವೂ ಪರವಾಗಿಯೇ ಬರಬೇಕು ಎನ್ನುವ ಉದ್ದೇಶ ಚಿತ್ರ ತಂಡದ್ದು’ ಎಂದು ತಿಳಿಸಿದರು. ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷ ಬಾ.ನಾ ಸುಬ್ರಹ್ಮಣ್ಯ ಸೇರಿದಂತೆ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.

IPL_Entry_Point