500 ಚಿತ್ರಗಳಲ್ಲಿ ನಟಿಸಿದರೂ ಆತ್ಮತೃಪ್ತಿ ಸಿಗಲೇ ಇಲ್ಲ, ಈಡೇರದ ಬ್ಯಾಂಕ್ ಜನಾರ್ದನ ಕೊನೇ ಆಸೆ! ಏನದು?
ಸ್ಯಾಂಡಲ್‌ವುಡ್ ಕಂಡ ಖ್ಯಾತ ಹಾಸ್ಯ ನಟ ಬ್ಯಾಂಕ್ ಜನಾರ್ದನ ಹೃದಯಾಘಾತದಿಂದ ಇಂದು (ಏಪ್ರಿಲ್ 14) ನಿಧನರಾಗಿದ್ದಾರೆ. 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದರೂ ಈ ದಿಗ್ಗಜ ನಟನಿಗೆ, ತಮ್ಮ ಕೊನೇ ಆಸೆಯನ್ನೂ ಈಡೇರಿಸಿಕೊಳ್ಳಲು ಆಗಲೇ ಇಲ್ಲ. ದಶಕಗಳ ಕಾಲ ಚಿತ್ರರಂಗದಲ್ಲಿದ್ದರೂ ಆತ್ಮತೃಪ್ತಿಯೂ ದಕ್ಕಲಿಲ್ಲ.

Actor Bank Janardhan Death: ಸ್ಯಾಂಡಲ್‌ವುಡ್ ಕಂಡ ಖ್ಯಾತ ಹಾಸ್ಯ ನಟ ಬ್ಯಾಂಕ್ ಜನಾರ್ದನ್ ತಮ್ಮ 79ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ವಯಸ್ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬ್ಯಾಂಕ್ ಜನಾರ್ದನ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ, ಇಂದು (ಏಪ್ರಿಲ್ 14) ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ. ಸಣ್ಣ ಸಣ್ಣ ಪಾತ್ರಗಳ ಮೂಲಕ ಬಣ್ಣದ ಲೋಕಕ್ಕೆ ಬಂದ ಈ ನಟ, ಕಾಮಿಡಿ ಮ್ಯಾನರಿಸಂನಿಂದಲೇ ಹೆಚ್ಚು ಮೆಚ್ಚುಗೆ ಗಿಟ್ಟಿಸಿಕೊಂಡರು. ಪೋಷಕ ಪಾತ್ರಗಳಿಗೂ ಜೀವ ತುಂಬಿದರು. ವಿಪರ್ಯಾಸ ಏನೆಂದರೆ, 500ಕ್ಕೂ ಹೆಚ್ಚು ಸಿನಿಮಾ ಮಾಡಿದರೂ ಅವರ ಆಸೆ ಮಾತ್ರ ಈಡೇರಲೇ ಇಲ್ಲ!
ಬ್ಯಾಂಕ್ ಜನಾರ್ದನ್ ಎಂದರೆ ಹಾಸ್ಯಕ್ಕಷ್ಟೇ ಸೀಮಿತ ಅನ್ನೋ ವಿಶೇಷಣದೊಂದಿಗೆ ಗುರುತಿಸಿಕೊಂಡರು. ಬೋಳು ತಲೆ, ಹೊಟ್ಟೆಯ ಮೂಲಕವೇ ಕಾಮಿಡಿಗೆ ಹೇಳಿ ಮಾಡಿಸಿದ ನಟ ಎಂದೂ ಕರೆಸಿಕೊಂಡರು. ಅದರಂತೆ ಸಾಲು ಸಾಲು ಕಾಮಿಡಿ ಸಿನಿಮಾಗಳಲ್ಲಿ ಹಾಸ್ಯ ನಟನಾಗಿಯೇ ಮಿಂಚಿದರು. ಸ್ಟಾರ್ ನಟರ ಸಿನಿಮಾಗಳಲ್ಲಿಯೂ ನಟಿಸಿದರು. ಇಷ್ಟೆಲ್ಲ ನೇಮು ಫೇಮು ಸಿಕ್ಕರೂ ಅವರಿಗೆ ಆತ್ಮತೃಪ್ತಿ ಮಾತ್ರ ಸಿಗಲಿಲ್ಲ. ಈ ವಿಚಾರದ ಬಗ್ಗೆ ಈ ಹಿಂದೆ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು ಜನಾರ್ದನ್.
ಕೊನೆಗೂ ಈಡೇರಲಿಲ್ಲ ಆ ಆಸೆ
“ನಾನು ದಶಕಗಳ ಕಾಲ ಚಿತ್ರರಂಗದಲ್ಲಿದ್ದೇನೆ. ಇಷ್ಟೆಲ್ಲ ಸಿನಿಮಾಗಳನ್ನು ಮಾಡಿದ್ದೇನೆ. ಆದರೂ ನನಗೆ ತೃಪ್ತಿ ಇಲ್ಲ. ಏಕೆಂದರೆ, ನಾನು ಹಿರಿಯ ನಟ ಬಾಲಕೃಷ್ಣ ಅವರ ಅಭಿಮಾನಿ. ಅವರ ನಟನೆಯನ್ನು ತುಂಬ ಇಷ್ಟಪಟ್ಟವನು. ಅನುಸರಿಸಿದವನು. ಅವರ ಥರದ ಪಾತ್ರವನ್ನು ಮಾಡುವ ಆಸೆ ನನ್ನದಾಗಿತ್ತು. ಸೆಂಟಿಮೆಂಟ್ ದೃಶ್ಯಗಳನ್ನು ಅವರು ತುಂಬ ಚೆನ್ನಾಗಿ ಮಾಡ್ತಾರೆ. ಎಷ್ಟು ಕಾಮಿಡಿ ಮಾಡ್ತಾರೋ, ಅಷ್ಟೇ ಭಾವನಾತ್ಮಕ ಸೀನ್ ಮಾಡ್ತಾರೆ. ನನ್ನ ಸಿನಿಮಾ ಕೆರಿಯರ್‌ನಲ್ಲೇ ನನಗೆ ಒಂದೇ ಒಂದು ಸೆಂಟಿಮೆಂಟ್ ಪಾತ್ರಗಳೇ ಸಿಗಲಿಲ್ಲ ಅನ್ನೋ ಕೊರಗಿದೆ. ಬರೀ ಇದೇ ಆಗೋಯ್ತು. ಬರೀ ಕಾಮಿಡಿಗೆ ಸೀಮಿತ ಮಾಡಿದ್ರು. ಈ ತಲೆ ಮತ್ತು ಹೊಟ್ಟೆ ಇದೆ ಅನ್ನೋ ಕಾರಣಕ್ಕೆ ನಿಮ್ಮನ್ನ ಕರೀತಿದಿವಿ ಸರ್ ಅಂತಿದ್ರು” ಎಂದು ನೆನಪಿಸಿಕೊಂಡಿದ್ದಾರೆ.
ʻಒಂದೇ ರೀತಿಯ ಪಾತ್ರಕ್ಕೆ ಸೀಮಿತ ಮಾಡಿಬಿಟ್ರುʼ
“ನಮ್ಮೊಳಗಿನ ಇನ್ನೊಂದು ನಟನೆಯನ್ನು ಯಾವ ನಿರ್ದೇಶಕರೂ ಹೊರ ತೆಗೆಸಲೇ ಇಲ್ಲ. ಬೇರೆ ಬೇರೆ ಇಂಡಸ್ಟ್ರಿಗಳಲ್ಲಿ ಅಲ್ಲಿನ ಕೆಲವರು ಎರಡೂ ಪಾತ್ರಗಳಿಗೂ ಸೈ. ನನಗೂ ಅಂತ ಆಸೆ ಇತ್ತು. ಆದರೆ, ಇಲ್ಲಿನವರೂ ಯಾರೂ ನಮ್ಮನ್ನು ಆ ರೀತಿ ನೋಡಲೇ ಇಲ್ಲ. ಒಂದೇ ರೀತಿಯ ಪಾತ್ರಕ್ಕೆ ಸೀಮಿತವಾಗಿಸಿದರು ಅನ್ನೋ ಕೊರಗಿದೆ. ಎಷ್ಟೋ ಸಲ ನನಗೂ ಸೆಂಟಿಮೆಂಟ್ ಪಾತ್ರಗಳನ್ನು ಕೊಡಿ ಎಂದು ನಿರ್ದೇಶಕರಿಗೆ ಕೇಳಿಕೊಳ್ಳುತ್ತಿದ್ದೆ. ಅಶ್ವತ್ಥಣ್ಣ, ಬಾಲಕೃಷ್ಣ ಅವರ ಥರದ ಪಾತ್ರ ಕೊಡಿ ಎನ್ನುತ್ತಿದ್ದೆ. ಯಾರೂ ಆ ರೀತಿ ನನ್ನನ್ನು ನೋಡಲೇ ಇಲ್ಲ. ಅಷ್ಟಕ್ಕೂ ಇಂಡಸ್ಟ್ರಿಗೆ ನಾನು ವಿಲನ್ ಆಗಬೇಕು ಅಂತ ಅನ್ಕೊಂಡು ಬಂದಿದ್ದು. ಆದರೆ ʻಅಜಗಜಾಂತರʼ ಸಿನಿಮಾ ಮೂಲಕ ಕಾಮಿಡಿಯನ್ ಆಗಿಯೇ ಮುಂದುಇವರಿಯುವಂತಾಯ್ತು” ಎಂದು ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್‌ಗೆ ನಾಲ್ಕು ವರ್ಷಗಳ ಹಿಂದೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಜನಾರ್ದನ್ ಬೈಗುಳಕ್ಕೆ ಅಣ್ಣಾವ್ರ ಕಡೆಯಿಂದ ಕಾಂಪ್ಲಿಮೆಂಟ್
ಉಪೇಂದ್ರ ನಿರ್ದೇಶನದ ʻಶ್!!ʼ ಸಿನಿಮಾ ಆಗ ಸೂಪರ್‌ಹಿಟ್ ಆಗಿತ್ತು. ಅದನ್ನು ಅಣ್ಣಾವ್ರು ಡಾ ರಾಜ್‌ಕುಮಾರ್ ಮೂರು ಸಲ ನೋಡಿದ್ರು. ಆ ಟೈಮ್‌ನಲ್ಲಿ ಅಣ್ಣಾವ್ರಿಗೆ ಎಲ್ಲಾದರೂ ನಾನು ಸಿಕ್ಕರೆ, "ಏನ್ರಿ ಜನಾರ್ದನ್ ಅವರೇ, ʻಶ್!!ʼ ಸಿನಿಮಾದಲ್ಲಿ ಅದೇನ್ ಬೈದಿದೀರಾ.. ಬೈದಿದೀರಾ.. ಅದೆಲ್ಲಿ ಕಲಿತ್ರಿ ನೀವು ಆ ಬೈಗುಳಾನ. ಎಲ್ಲರೂ ನನ್ನ ಅಭಿಮಾನಿ ಅಂತಾರೆ, ಆ ಪಿಚ್ಚರ್‌ನಲ್ಲಿನ ನಿಮ್ಮ ಪಾತ್ರಕ್ಕೆ ನಾನು ಅಭಿಮಾನಿ" ಅಂದ್ರು. ನಟನೆ ಬಿಟ್ಟು ಬೇರೆ ಏನ್ ಮಾಡ್ತಿದ್ದೀರಾ ಅಂತ ಕೇಳಿದ್ರು. ಬ್ಯಾಂಕ್‌ನಲ್ಲಿ ಅಂದೆ. ಯಾವುದೇ ಕಾರಣಕ್ಕೂ ಬ್ಯಾಂಕ್ ಬಿಡಬೇಡಿ. ನಟನೆ ಹೇಳಕ್ಕೆ ಆಗಲ್ಲ.. ಅದೂ ಇರಲಿ ಎಂದಿದ್ದರು.
