ಈ ಒಂದೇ ಒಂದು ಕಾರಣಕ್ಕೆ ಮಂತ್ರ ಮಾಂಗಲ್ಯ, ವಚನ ಮಾಂಗಲ್ಯ ಮದುವೆಯ ಆಸೆಯನ್ನೇ ಕೈಬಿಟ್ಟ ಡಾಲಿ ಧನಂಜಯ್
ನಟ ಧನಂಜಯ್ ಮತ್ತು ಧನ್ಯತಾ ಜೋಡಿಯ ಮದುವೆ ಇದೇ ಫೆಬ್ರವರಿ 15 ಮತ್ತು 16ರಂದು ನೆರವೇರಲಿದೆ. ಮದುವೆಗೂ ಮುನ್ನ ಅರಮನೆ ನಗರಿಯಲ್ಲಿ ಮದುವೆ ಕುರಿತು ನಟ ಧನಂಜಯ್ ಒಂದಷ್ಟು ಮಾತುಗಳನ್ನಾಡಿದ್ದಾರೆ. ಮಂತ್ರ ಮಾಂಗಲ್ಯ, ವಚನ ಮಾಂಗಲ್ಯ ವಿವಾಹದ ಆಸೆಯನ್ನೂ ಹೇಳಿಕೊಂಡಿದ್ದಾರೆ.

Daali Dhananjaya Wedding: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮದುವೆಗೆ ಇನ್ನೇನು ದಿನಗಣನೆ ಶುರುವಾಗಿದೆ. ಫೆ. 16ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯಲಿರುವ ಈ ಕಲ್ಯಾಣ ಕಾರ್ಯಕ್ಕೆ, ಈಗಾಗಲೇ ದೊಡ್ಡ ಮಟ್ಟದ ಮಂಟಪ ನಿರ್ಮಾಣದ ಕಾರ್ಯ ನಡೆಯುತ್ತಿದೆ. ತಮ್ಮ ಮದುವೆಯ ವೇದಿಕೆ ನಿರ್ಮಾಣ ಕಾರ್ಯದ ಸ್ಥಳಕ್ಕೆ ಇಂದು (ಫೆ. 11) ಭೇಟಿ ನೀಡಿದ ಧನಂಜಯ್, ಮದುವೆಯಲ್ಲಿ ಏನೆಲ್ಲ ಇರಲಿದೆ, ಯಾರಿಗೆಲ್ಲ ಕರೆಯಲಾಗಿದೆ, ವಿಶೇಷತೆಗಳೇನು ಎಂಬುದನ್ನು ಹೇಳಿಕೊಂಡಿದ್ದಾರೆ.
ಫೆಬ್ರವರಿ 15 ಮತ್ತು 16ರಂದು ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ ನಟ ಡಾಲಿ ಧನಂಜಯ್ -ಧನ್ಯತಾ ಅವರ ಮದುವೆ ನಡೆಯಲಿದೆ. ಅರಮನೆ ನಗರಿ ಮೈಸೂರು ನಟ ಧನಂಜಯ್ ಅವರ ಇಷ್ಟದ ಊರು. ಓದಿದ್ದು, ಬೆಳೆದಿದ್ದು ಆ ನಗರದಲ್ಲಿಯೇ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಕರೆದಿದ್ದ ಧನಂಜಯ್, ಈ ಮೈಸೂರಿನ ನಂಟಿನ ಬಗ್ಗೆ ಮಾತನಾಡಿದ್ದಾರೆ. ಮೈಸೂರಿನಲ್ಲೇ ಮದುವೆ ಆಗಬೇಕು ಎನ್ನುವುದು ನಮ್ಮ ಕನಸು. ನನ್ನ ವಿದ್ಯಾಭ್ಯಾಸ, ಚಿತ್ರರಂಗಕ್ಕೆ ಕಾಲಿಟ್ಟಿದ್ದು ಎಲ್ಲವೂ ಮೈಸೂರಿನಿಂದಲೇ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸಿಗಲಿ. ಎಂದಿದ್ದಾರೆ ಧನಂಜಯ್.
ಮಂತ್ರಮಾಂಗಲ್ಯ ನನ್ನಿಷ್ಟದ ಮದುವೆ
ಅಭಿಮಾನಿಗಳಿಗೆ ಮುಕ್ತ ಅವಕಾಶ ನೀಡಿದ್ದೇವೆ. ಮದುವೆಗೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಎಲ್ಲರೂ ನೇರವಾಗಿ ಬಂದು ನನಗೆ ಆಶೀರ್ವಾದ ಮಾಡಿ ಹೋಗಬಹುದು. ಮದುವೆ ವಿಚಾರದ ಬಗ್ಗೆ ಹೇಳುವುದಾದರೆ, ನನಗೆ ಮಂತ್ರ ಮಾಂಗಲ್ಯ, ವಚನ ಮಾಂಗಲ್ಯ, ರಿಜಿಸ್ಟರ್ ಮದುವೆ ಆಗುವ ಆಸೆ ಇತ್ತು. ಆದರೆ ನಮ್ಮ ಕುಟುಂಬ ಸದಸ್ಯರು, ಚಿತ್ರರಂಗ, ಸ್ನೇಹಿತರು ಎಲ್ಲರಿಗೂ ಊಟ ಹಾಕಿಸಬೇಕು ಅನ್ನೋ ಕಾರಣಕ್ಕೆ ಒಂದೇ ವೇದಿಕೆಯಲ್ಲಿ ಎಲ್ಲರನ್ನು ಆಮಂತ್ರಿಸಿ, ಆಶೀರ್ವಾದ ಪಡೆಯೋಣ ಎಂಬ ಆಸೆಯಿಂದ ಇಲ್ಲಿ ಮದುವೆ ಆಗ್ತಿದ್ದೇವೆ ಎಂದರು.
ಚಾಮುಂಡಮ್ಮನ ದೇವಸ್ಥಾನ ಮಾದರಿಯಲ್ಲಿ ಮಂಟಪ
ವಿದ್ಯಾಪತಿ ದ್ವಾರದ ಮೂಲಕ ಅಭಿಮಾನಿಗಳಿಗೆ ಎಂಟ್ರಿ ಇರುತ್ತದೆ. ಚಿತ್ರರಂಗ, ರಾಜಕೀಯ ನಾಯಕರು ಎಲ್ಲರನ್ನೂ ಮದುವೆಗೆ ಕರೆದಿದ್ದೇನೆ. ಎಲ್ಲರೂ ಬಂದು ಆಶೀರ್ವಾದ ಮಾಡಬೇಕು ಎಂಬುದು ನಮ್ಮ ಬಯಕೆ. ಆಹ್ವಾನ ನೀಡಿರುವ ಎಲ್ಲರೂ ಬರ್ತಾರೆ ಎಂಬ ನಿರೀಕ್ಷೆ ಇದೆ. ವೇದಿಕೆ ವಿಚಾರಕ್ಕೆ ಬಂದರೆ, ಚಾಮುಂಡೇಶ್ವರಿ ದೇವಾಲಯದ ಮಾದರಿಯಲ್ಲಿ ವೇದಿಕೆ ನಿರ್ಮಾಣ ಆಗುತ್ತಿದೆ. ದಕ್ಷಿಣ ಭಾರತದ ಮಾದರಿಯ ಊಟದ ವ್ಯವಸ್ಥೆ ಇರಲಿದೆ. ಅಭಿಮಾನಿಗಳು, ವಿಐಪಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ. ಆದರೆ ಎಲ್ಲರಿಗೂ ಒಂದೇ ಮಾದರಿಯ ಊಟ ಇರುತ್ತದೆ. ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ ಅಷ್ಟೇ. ಎಲ್ಲರೂ ತಪ್ಪದೇ ಮದುವೆಗೆ ಬಂದು ನಮ್ಮನ್ನು ಹಾರೈಸಿ ಎಂದಿದ್ದಾರೆ.
ನಟ ದರ್ಶನ್ ಬಗ್ಗೆ ಧನಂಜಯ್ ಏನಂದ್ರು?
ನಟ ದರ್ಶನ್ ಅವರನ್ನು ವಿವಾಹಕ್ಕೆ ಆಹ್ವಾನಿಸುವ ಕುರಿತು ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮದುವೆಗೆ ದರ್ಶನ್ ಅವರು ಬಂದ್ರೇ ನನಗೆ ತುಂಬಾ ಸಂತೋಷ. ಈಗಿನ ಪರಿಸ್ಥಿಯಲ್ಲಿ ಅವರನ್ನು ಭೇಟಿ ಮಾಡಲು ಆಗುತ್ತಿಲ್ಲ. ಕನ್ನಡ ಚಿತ್ರರಂಗದ ಎಲ್ಲರನ್ನೂ ಕರೆದಿದ್ದೇನೆ. ದರ್ಶನ್ ಅವರನ್ನೂ ಕರೆಯಲು ಪ್ರಯತ್ನ ಮಾಡುತ್ತಿದ್ದೇನೆ. ಆದರೆ ದರ್ಶನ್ ಅವರು ಸಿಗುತ್ತಿಲ್ಲ. ಖಂಡಿತವಾಗಿ ದರ್ಶನ್ ಅವರನ್ನು ನನ್ನ ಮದುವೆಗೆ ಬಂದ್ರೆ ನನಗೆ ಸಂತೋಷ ಎಂದು ನಟ ಡಾಲಿ ಧನಂಜಯ್ ಹೇಳಿದ್ದಾರೆ.
