ರೇಣುಕಾಸ್ವಾಮಿ ಹತ್ಯೆ ಪ್ರಕರಣ, ದರ್ಶನ್ ನಡೆಗೆ ಕೋರ್ಟ್ ತರಾಟೆ; ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯಕ್ಕೆ ಹಾಜರಾಗದ ನಟ ದರ್ಶನ್ ನಡೆಗೆ ಬೆಂಗಳೂರು ಸಿಟಿ ಮತ್ತು ಸೆಷನ್ಸ್ ನ್ಯಾಯಾಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಮುಖ ಆರೋಪಿ ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳು ಕೋರ್ಟ್‌ಗೆ ಇಂದು ಹಾಜರಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯಕ್ಕೆ ಹಾಜರಾಗದ ನಟ ದರ್ಶನ್ ನಡೆಗೆ ಬೆಂಗಳೂರು ಸಿಟಿ ಮತ್ತು ಸೆಷನ್ಸ್ ನ್ಯಾಯಾಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಮುಖ ಆರೋಪಿ ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳು ಕೋರ್ಟ್‌ಗೆ ಇಂದು ಹಾಜರಾಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಬೆನ್ನು ನೋವಿನ ಕಾರಣದಿಂದ ನ್ಯಾಯಾಲಯಕ್ಕೆ ಆಗಮಿಸಿಲ್ಲ ಎಂದು ದರ್ಶನ್ ಪರ ವಕೀಲರು ತಿಳಿಸಿದಾಗ ನ್ಯಾಯಾಲಯವು ತೀವ್ರ ಅಸಮಾಧಾನಗೊಂಡಿದೆ.
"ಈ ಪ್ರಕರಣದಲ್ಲಿ ಎಲ್ಲರ ಹಾಜರಾಗುವುದು ಕಡ್ಡಾಯ. ಕೋರ್ಟ್‌ನಲ್ಲಿ ಕೇಸ್ ಇದ್ದಾಗ ತಪ್ಪದೇ ಹಾಜರಾಗಬೇಕು. ಗಣ್ಯ ವ್ಯಕ್ತಿಗಳು ಎನಿಸಿಕೊಂಡವರು ಸರಿಯಾದ ಕಾರಣವಿಲ್ದೆ ವಿನಾಯಿತಿ ಪಡೆಯಬಹುದು ಎಂದುಕೊಳ್ಳಬಾರದು. ಕೇಸ್ ಇದ್ದಾಗ ಆಗಮಿಸಲೇಬೇಕು" ಎಂದು ನ್ಯಾಯಾಧೀಶರು ಎಚ್ಚರಿಸಿದ್ದಾರೆ. "ನಟನಿಗೆ ತೀವ್ರ ಬೆನ್ನು ನೋವು ಇರುವ ಕಾರಣ ಬಂದಿಲ್ಲ" ಎಂದು ವಕೀಲರು ಹೇಳಿದಾಗ ಕೋರ್ಟ್ "ಕೇಸ್ ವಿಚಾರಣೆ ಇದ್ದಾಗ ಕಡ್ಡಾಯವಾಗಿ ಹಾಜರಾಗಬೇಕು" ಎಂದು ಎಚ್ಚರಿಸಿದೆ.
ದರ್ಶನ್ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ವಶಪಡಿಸಿಕೊಂಡ ಹಣವನ್ನು ಬಿಡುಗಡೆ ಮಾಡುವಂತೆಯೂ ಈ ಸಂದರ್ಭದಲ್ಲಿ ನ್ಯಾಯಾಲಯವನ್ನು ದರ್ಶನ್ ಪರ ವಕೀಲರು ವಿನಂತಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಬೆಳಕಿಗೆ ಬಂದ ಸಂದರ್ಭದಲ್ಲಿ ದರ್ಶನ್ ನಿವಾಸದ ಮೇಲೆ ದಾಳಿ ನಡೆಸ 75 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿತ್ತು. "ಈ ಹಣದ ವಿಷಯವನ್ನು ನಿರ್ಧರಿಸುವ ಮೊದಲು ಆದಾಯ ತೆರಿಗೆ ಇಲಾಖೆಯ ಪ್ರತಿಕ್ರಿಯೆ ಕೇಳಬೇಕಿದೆ" ಎಂದು ನ್ಯಾಯಾಲಯ ತಿಳಿಸಿದೆ.
ಆರೋಪಿಗಳು ಜಾಮೀನು ಪಡೆದಿದ್ದರೂ ಪ್ರತಿತಿಂಗಳು ನ್ಯಾಯಾಲಯಕ್ಕೆ ಹಾಜರಾಗಬೇಕು. ಇದೇ ಸಮಯದಲ್ಲಿ ತನಿಖೆಯ ಸಮಯದಲ್ಲಿ ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳನ್ನು ಹಿಂತುರುಗಿಸುವಂತೆ ವಿನಂತಿಸಲಾಗಿದೆ.
ಬೆನ್ನು ನೋವಿನ ಕಾರಣದಿಂದ ದರ್ಶನ್‌ಗೆ ಕೋರ್ಟ್‌ಗೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕೆಂದು ವಕೀಲರು ಕೇಳಿದ್ದರು. ಆದರೆ, ಯಾವ ಕಾರಣಕ್ಕೂ ಗಣ್ಯ ವ್ಯಕ್ತಿಯೆಂದು ವಿನಾಯಿತಿ ನೀಡುವುದಿಲ್ಲ ಎಂದು ಕೋರ್ಟ್ ತಿಳಿಸಿದೆ. ಮೇ 20ನೇ ತಾರೀಕಿಗೆ ಮುಂದಿನ ವಿಚಾರಣೆಯನ್ನು ಮುಂದೂಡಲಾಗಿದೆ.
ನಟ ದರ್ಶನ್ ಈಗ ಡೆವಿಲ್ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ. ರಾಜಸ್ಥಾನದಲ್ಲಿ ಇತ್ತೀಚೆಗೆ ಚಿತ್ರತಂಡ ಶೂಟಿಂಗ್ ಮುಗಿಸಿದೆ. ರಾಜಸ್ಥಾನಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಹೋಗಿದ್ದರು. ನಿರಂತರ ಶೂಟಿಂಗ್‌ನಿಂದ ದರ್ಶನ್ ಬೆನ್ನು ನೋವು ಹೆಚ್ಚಾಗಿದೆ ಎನ್ನಲಾಗಿದೆ. ಇನ್ನೊಂದೆಡೆ ದರ್ಶನ್ ಜಾಮೀನು ರದ್ದುಗೊಳಿಸಬೇಕೆಂದು ಬೆಂಗಳೂರಿನ ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಈ ಕುರಿತು ಸುಪ್ರೀಂಕೋರ್ಟ್ ಏಪ್ರಿಲ್ 2ರಂದು ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಲಾಗಿತ್ತು.