ಕೃಷ್ಣಂ ಪ್ರಣಯ ಸಖಿ ಬಳಿಕ ಪಿನಾಕ ಹಿಡಿದು ಹೊಸ ಅವತಾರದಲ್ಲಿ ಕಾಣಿಸಿದ ಗಣೇಶ್; ಗೋಲ್ಡನ್‌ ಸ್ಟಾರ್‌ ಹೊಸ ಸಿನಿಮಾದ ಟೀಸರ್‌ ರಿಲೀಸ್‌
ಕನ್ನಡ ಸುದ್ದಿ  /  ಮನರಂಜನೆ  /  ಕೃಷ್ಣಂ ಪ್ರಣಯ ಸಖಿ ಬಳಿಕ ಪಿನಾಕ ಹಿಡಿದು ಹೊಸ ಅವತಾರದಲ್ಲಿ ಕಾಣಿಸಿದ ಗಣೇಶ್; ಗೋಲ್ಡನ್‌ ಸ್ಟಾರ್‌ ಹೊಸ ಸಿನಿಮಾದ ಟೀಸರ್‌ ರಿಲೀಸ್‌

ಕೃಷ್ಣಂ ಪ್ರಣಯ ಸಖಿ ಬಳಿಕ ಪಿನಾಕ ಹಿಡಿದು ಹೊಸ ಅವತಾರದಲ್ಲಿ ಕಾಣಿಸಿದ ಗಣೇಶ್; ಗೋಲ್ಡನ್‌ ಸ್ಟಾರ್‌ ಹೊಸ ಸಿನಿಮಾದ ಟೀಸರ್‌ ರಿಲೀಸ್‌

ಸ್ಯಾಂಡಲ್‌ವುಡ್ ನಟ ಗೋಲ್ಡನ್‌ ಸ್ಟಾರ್ ಗಣೇಶ್‌ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ನಂತರ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದೆಂದೂ ಕಂಡಿರದ ಅವತಾರದಲ್ಲಿ ಪ್ರೇಕ್ಷಕರೆದುರು ಬರಲು ‘ಪಿನಾಕ’ ಸಿನಿಮಾದ ಮೂಲಕ ರೆಡಿಯಾಗಿದ್ದಾರೆ.

ಗೋಲ್ಡನ್‌ಸ್ಟಾರ್‌ ಗಣೇಶ್ ಅಭಿನಯದ ಹೊಸ ಸಿನಿಮಾ 'ಪಿನಾಕ'
ಗೋಲ್ಡನ್‌ಸ್ಟಾರ್‌ ಗಣೇಶ್ ಅಭಿನಯದ ಹೊಸ ಸಿನಿಮಾ 'ಪಿನಾಕ'

ಸ್ಯಾಂಡಲ್‌ವುಡ್ ನಟ ಗೋಲ್ಡನ್‌ ಸ್ಟಾರ್ ಗಣೇಶ್‌ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ನಂತರ ಈಗ ಮತ್ತೊಂದು ಹೊಸ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಹೊಸ ವರ್ಷಕ್ಕೆ ಅಭಿಮಾನಿಗಳೊಂದಿಗೆ ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಹಿಂದೆಂದೂ ಅಭಿನಯಿಸಿದರ ಹೊಸದೊಂದು ಅವತಾರದಲ್ಲಿ, ಈ ಬಾರಿ ಗೋಲ್ಡನ್‌ ಸ್ಟಾರ್ ಗಣೇಶ್‌ ಪ್ರೇಕ್ಷಕರೆದುರು ಕಾಣಿಸಿಕೊಳ್ಳಲಿದ್ದಾರೆ. ಇದು 'ಕ್ಷುದ್ರ ಶಕ್ತಿ' ಮತ್ತು ‘ರುದ್ರ ಶಕ್ತಿ' ನಡುವಿನ ಯುದ್ಧ ಎಂಬ ಟ್ಯಾಗ್ ಲೈನ್‌ ಮೂಲಕ ತಮ್ಮ ಹೊಸ ಸಿನಿಮಾ ‘ಪಿನಾಕ’ದ ಫಸ್ಟ್‌ ಲುಕ್ ಹಂಚಿಕೊಂಡಿದ್ದಾರೆ.

ಬಿ ಧನಂಜಯ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಕೈಯ್ಯಲ್ಲಿ ತ್ರಿಶೂಲ ಹಾಗೂ ಡಮರುಗ ಹಿಡಿದು ಅಸ್ತಿಗಳ ರಾಶಿ ಮೇಲೆ ಗಣೇಶ್‌ ಕೂತಿರುವ ಪೋಸ್ಟರ್ ರಿಲೀಸ್‌ ಆಗಿದ್ದು, ಟೀಸರ್ ಕೂಡ ತುಂಬಾ ಕುತೂಹಲ ಮೂಡಿಸಿದೆ. ಎಲ್ಲೆಲ್ಲೂ ಬೆಂಕಿ ಉಂಡೆಗಳು, ತಲೆ ಬುರುಡೆಗಳೇ ತುಂಬಿರುವ ಸ್ಮಶಾನದಂತಹ ಜಾಗದಲ್ಲಿ ಗಣೇಶ್‌ ಕಾಣಿಸಿಕೊಂಡಿದ್ದಾರೆ. ಟೀಸರ್‌ನ ಆರಂಭದಲ್ಲೇ ಇದು ಕಾಲ ಗರ್ಭದ ಕೂಗು ಎನ್ನುತ್ತಾ ಯಾವುದೋ ನಿಧಿ ಪೆಟ್ಟಿಗೆಯನ್ನು ಹುಡುಕುವ ದೃಶ್ಯ ಕಾಣಿಸುತ್ತದೆ.

ತೆಲುಗಿನ ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಸಿನಿಮಾ ನಿರ್ಮಾಣ ಮಾಡ್ತಿದೆ. ನೃತ್ಯ ನಿರ್ದೇಶಕ ಬಿ ಧನಂಜಯ ಅವರ‌ ಮೊದಲ ನಿರ್ದೇಶನದ ಸಿನಿಮಾ ಇದು. ಟೀಸರ್ ಗಮನಿಸಿದರೆ, ನಟ ಗಣೇಶ್ ವೃತ್ತಿ‌ಬದುಕಿಗೆ ಈ ಸಿನಿಮಾ ಹೊಸ‌ಮೈಲಿಗಲ್ಲಾಗುವ ಸುಳಿವು ಸಿಕ್ಕಿದೆ. ಸದ್ಯ ಶೀರ್ಷಿಕೆ ಟೀಸರ್ ಬಿಡುಗಡೆ ಆಗಿದೆ, ತಾಂತ್ರಿಕ ವರ್ಗ ಮತ್ತು ಪಾತ್ರಧಾರಿಗಳ ವಿವರ‌ ಮುಂದಿನ ದಿನಗಳಲ್ಲಿ ಅಪ್ಡೇಟ್ ‌ನೀಡಲಿದೆ ಸಿನಿಮಾ ತಂಡ.

ಹಣೆಗೆ ವಿಭೂತಿ, ಕೊರಳಿಗೆ, ಕೈಗೆ ರುದ್ರಾಕ್ಷಿ ಹಾಗೂ ಮೈತುಂಬಾ ಕಪ್ಪು ಬಟ್ಟೆಯನ್ನು ತೊಟ್ಟು ತಲೆ ಬುರುಡೆಗಳನ್ನೇ ಮೆಟ್ಟಿಲಾಗಿಸಿಕೊಂಡು ನಡೆದುಕೊಂಡು ಹೋಗುವ ದೃಶ್ಯವು ಟೀಸರ್‌ನಲ್ಲಿ ಕಾಣಿಸುತ್ತದೆ. ಕ್ಷುದ್ರ ಮತ್ತು ರುದ್ರ ಎರಡು ಶಕ್ತಿಗಳ ಬಗ್ಗೆ ಇಲ್ಲಿ ಪ್ರಸ್ತಾಪ ಮಾಡಿರುವುದರಿಂದ ಗೋಲ್ಡನ್ ಸ್ಟಾರ್ ಗಣೇಶ್‌ ದ್ವಿಪಾತ್ರದಲ್ಲಿ ಕಾಣಿಸಿಕೊಳ್ತಾ ಎಂಬ ಅನುಮಾನ ಕೂಡ ಮೂಡಿದೆ. ಟೀಸರ್‌ನಲ್ಲಿ ಕಥೆಯನ್ನು ಗಣೇಶ್‌ ಅವರ ಧ್ವನಿಯಲ್ಲೇ ನಿರೂಪಿಸಲಾಗಿದೆ.

ಇಲ್ಲಿದೆ ನೋಡಿ ಟೀಸರ್

Whats_app_banner