Dr Rajkumar: ಇದಪ್ಪ ಡಾ ರಾಜ್‌ಕುಮಾರ್‌ ಹವಾ ಅಂದ್ರೆ! ಚೀನಾ ಸೂಪರ್‌ ಮಾರ್ಕೆಟ್‌ನಲ್ಲಿ ಮೊಳಗಿದ ಅಣ್ಣಾವ್ರ ಗಂಧದ ಗುಡಿ ಚಿತ್ರದ ಹಾಡು VIDEO
ಕನ್ನಡ ಸುದ್ದಿ  /  ಮನರಂಜನೆ  /  Dr Rajkumar: ಇದಪ್ಪ ಡಾ ರಾಜ್‌ಕುಮಾರ್‌ ಹವಾ ಅಂದ್ರೆ! ಚೀನಾ ಸೂಪರ್‌ ಮಾರ್ಕೆಟ್‌ನಲ್ಲಿ ಮೊಳಗಿದ ಅಣ್ಣಾವ್ರ ಗಂಧದ ಗುಡಿ ಚಿತ್ರದ ಹಾಡು Video

Dr Rajkumar: ಇದಪ್ಪ ಡಾ ರಾಜ್‌ಕುಮಾರ್‌ ಹವಾ ಅಂದ್ರೆ! ಚೀನಾ ಸೂಪರ್‌ ಮಾರ್ಕೆಟ್‌ನಲ್ಲಿ ಮೊಳಗಿದ ಅಣ್ಣಾವ್ರ ಗಂಧದ ಗುಡಿ ಚಿತ್ರದ ಹಾಡು VIDEO

ಸ್ಯಾಂಡಲ್‌ವುಡ್‌ ಕಂಡ ಮೇರು ನಟ ಡಾ ರಾಜ್‌ಕುಮಾರ್‌ ಅವರನ್ನು ಇಡೀ ಕರುನಾಡು ಇಂದಿಗೂ ಪೂಜಿಸುತ್ತದೆ. ನಿತ್ಯ ಬೆಳಕಾದರೆ ಅವರ ಹಾಡು ಕಿವಿಗಪ್ಪಳಿಸುತ್ತವೆ, ಸಿನಿಮಾಗಳು ಕಣ್ಣಿಗೆ ಬೀಳುತ್ತವೆ. ಹೀಗಿರುವಾಗ ಇಂತಿಪ್ಪ ಅಣ್ಣಾವ್ರ ಸಿನಿಮಾ ಹಾಡುಗಳು ಚೀನಾದಲ್ಲಿ ಕೇಳಿಸಿದರೆ ಹೇಗಿರುತ್ತೆ. ಹೌದು, ಅಂಥ ವಿಡಿಯೋ ಇಲ್ಲಿದೆ ನೋಡಿ.

ಚೀನಾ ಸೂಪರ್‌ಮಾರುಕಟ್ಟೆಯಲ್ಲಿ ಮೊಳಗಿದ ಡಾ ರಾಜ್‌ಕುಮಾರ್‌ ಹಾಡು
ಚೀನಾ ಸೂಪರ್‌ಮಾರುಕಟ್ಟೆಯಲ್ಲಿ ಮೊಳಗಿದ ಡಾ ರಾಜ್‌ಕುಮಾರ್‌ ಹಾಡು

Dr Rajkumar: ಚಂದನವನ ಕಂಡ ಮೇರು ನಟ ಡಾ ರಾಜ್‌ಕುಮಾರ್‌ ಕಾಲವಾಗಿ 20 ವರ್ಷಗಳಾಗುತ್ತ ಬಂತು, ಇಂದಿಗೂ ಅವರ ಸಿನಿಮಾಗಳು, ಆ ಸಿನಿಮಾಗಳ ಹಾಡುಗಳು ಕರುನಾಡಿಗರಿಗೆ ಇಷ್ಟ. ಟಿವಿಗಳಲ್ಲಿಯೂ ಅವರ ಸಿನಿಮಾಗಳು ಪ್ರಸಾರ ಕಾಣುತ್ತಿದ್ದರೆ, ಅರೇ ಕ್ಷಣವಾದರೂ ಕಣ್ಣು ಅತ್ತ ಕಡೆ ವಾಲುತ್ತದೆ. ಇನ್ನು ಬೆಂಗಳೂರಿನಲ್ಲಿ ಗಲ್ಲಿಗೊಂದರಂತೆ ಅವರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ, ಪೂಜಿಸುತ್ತಿದ್ದಾರೆ ಅಭಿಮಾನಿಗಳು. ಪುಣ್ಯ ಸ್ಮರಣೆ, ಹುಟ್ಟು ಹಬ್ಬದ ದಿನಗಳಲ್ಲಂತೂ ಇಡೀ ಬೆಂಗಳೂರು ರಾಜ್‌ಕುಮಾರ್‌ ಮಯವಾಗಿರುತ್ತದೆ. ಆದರೆ ಇದೇ ಅಣ್ಣಾವ್ರ ಹಾಡು ಗಿಜಿಗುಡುವ ಚೀನಾದಲ್ಲಿ ಕೇಳಿಸಿದರೆ ಹೇಗಿರಬಹುದು!

ಹೌದು, ಡಾ. ರಾಜ್‌ಕುಮಾರ್‌ ಅವರ ಗಂಧದ ಗುಡಿ ಚಿತ್ರದ "ನಾವಾಡುವ ನುಡಿಯೇ ಕನ್ನಡ ನುಡಿ.. ಚಿನ್ನದ ನುಡಿ.. ಸಿರಿಗನ್ನಡ ನುಡಿ.. ನಾವಿರುವ ತಾಣವೇ ಗಂಧದ ಗುಡಿ.." ಹಾಡು ಇದೀಗ ದೂರದ ಚೀನಾದಲ್ಲಿ ಮೊಳಗಿದೆ. ಅಲ್ಲಿನ ಸೂಪರ್‌ ಮಾರ್ಕೆಟ್‌ವೊಂದರಲ್ಲಿ ಈ ಹಾಡು ಕೇಳಿದ್ದೇ ತಡ, ಅಲ್ಲಿನ ಕನ್ನಡಿಗರು ಸೂಪರ್‌ ಮಾರ್ಕೆಟ್‌ನ ವಿಡಿಯೋ ಮಾಡಿ, ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಹಿರಿ ಹಿರಿ ಹಿಗ್ಗಿದ್ದಾರೆ.

ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಕನ್ನಡಿಗರಿಂದ ಮಾತ್ರವಲ್ಲದೆ, ಪರಭಾಷಿಕರೂ ಭಾರತೀಯ ಭಾಷೆಯ ಹಾಡು ಚೀನಾದಲ್ಲಿ ಮೊಳಗಿದ್ದಕ್ಕೆ ಸಂಭ್ರಮಿಸುತ್ತುದ್ದಾರೆ. ಪ್ರವೀಣ್ ಆರ್ ಎಂಬುವವರು ತಮ್ಮ ಟ್ವಿಟ್ಟರ್‌ನಲ್ಲಿ ಹಾಡಿನ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. "ಅಣ್ಣಾವ್ರು.. ಕನ್ನಡ ನಾಡಿನ ದೊರೆ.. ಚೀನಾದಲ್ಲಿ ಕನ್ನಡ ಹಾಡು" ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಈ ವೀಡಿಯೊ 17,300ಕ್ಕೂ ಹೆಚ್ಚು ಸಲ ವೀಕ್ಷಣೆ ಕಂಡಿದೆ. 165ಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ರೀ ಪೋಸ್ಟ್‌ ಮಾಡಿದ್ದಾರೆ.

ವೀಡಿಯೊ ಇಲ್ಲಿದೆ ನೋಡಿ

ಟ್ವಿಟ್ಟರ್ ಬಳಕೆದಾರರು ಬಗೆಬಗೆ ಪ್ರತಿಕ್ರಿಯೆ

ಸೋಷಿಯಲ್ ಮೀಡಿಯಾ ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಟ್ವಿಟ್ಟರ್‌ ಬಳಕೆದಾರರು, ಕನ್ನಡದ ಮೇರುನಟನನ್ನು ಮತ್ತೆ ನೆನಪು ಮಾಡಿಕೊಂಡು, ಹೆಮ್ಮೆಯ ವಿಚಾರ ಎಂದು ಸಂಭ್ರಮಿಸುತ್ತಿದ್ದಾರೆ. "ವಾವ್, ಚೀನಾ ಯಾವಾಗಲೂ ನಮ್ಮ ಸರಳತೆಯನ್ನು ಇಷ್ಟಪಟ್ಟಿದೆ. ಇನ್ನಷ್ಟು ಅಣ್ಣಾವ್ರ ಹಾಡುಗಳು ಕೇಳುವಂತಾಗಲಿ" ಎಂದಿದ್ದಾರೆ. "ಈ ಒಂದು ಕಾರಣಕ್ಕಾಗಿ ಡಾ ರಾಜ್‌ಕುಮಾರ್‌ ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌ (GOAT). ಅಣ್ಣಾವ್ರ ಹಾಡುಗಳು ಪ್ರತಿಯೊಂದು ಸನ್ನಿವೇಶಕ್ಕೂ ಸರಿಹೊಂದುತ್ತವೆ" ಎಂದು ಖುಷಿ ಪಟ್ಟಿದ್ದಾರೆ.

ಕರ್ನಾಟಕದಲ್ಲಿ ಅಣ್ಣಾವ್ರು ಎಂದೇ ಮನೆ ಮಾತಾದ ಡಾ.ರಾಜ್ ಕುಮಾರ್, ನಟನಾಗಿ ಮಾತ್ರವಲ್ಲದೆ ಗಾಯಕರಾಗಿಯೂ ಮೆಚ್ಚುಗೆ ಪಡೆದವರು. ನಾಡಿನ ಸಾಂಸ್ಕೃತಿಕ ಲೋಕದ ಮೇರು ಪರ್ವತವಾಗಿಯೂ ಜೀವಿಸಿದವರು. 1929ರ ಏಪ್ರಿಲ್ 24ರಂದು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್ ಆಗಿ ಜನಿಸಿದ ರಾಜ್‌ಕುಮಾರ್‌, ಐದು ದಶಕಗಳ ವೃತ್ತಿಜೀವನದಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದ ಧ್ರುವತಾರೆಯಾದರು.

 

Whats_app_banner