ಸರಿಗಮಪ ಶೋನಲ್ಲಿ ಲಾಲಿ ಲಾಲಿ.. ಹಾಡುತ್ತಲೇ ಅಮ್ಮನ ತಬ್ಬಿ ಕಣ್ಣೀರಿಟ್ಟ ಕಿಚ್ಚ ಸುದೀಪ್‌ಗೆ ಸರಣಿ ಸರ್ಪ್ರೈಸ್‌ ನೀಡಿದ ಜೀ ಕನ್ನಡ
ಕನ್ನಡ ಸುದ್ದಿ  /  ಮನರಂಜನೆ  /  ಸರಿಗಮಪ ಶೋನಲ್ಲಿ ಲಾಲಿ ಲಾಲಿ.. ಹಾಡುತ್ತಲೇ ಅಮ್ಮನ ತಬ್ಬಿ ಕಣ್ಣೀರಿಟ್ಟ ಕಿಚ್ಚ ಸುದೀಪ್‌ಗೆ ಸರಣಿ ಸರ್ಪ್ರೈಸ್‌ ನೀಡಿದ ಜೀ ಕನ್ನಡ

ಸರಿಗಮಪ ಶೋನಲ್ಲಿ ಲಾಲಿ ಲಾಲಿ.. ಹಾಡುತ್ತಲೇ ಅಮ್ಮನ ತಬ್ಬಿ ಕಣ್ಣೀರಿಟ್ಟ ಕಿಚ್ಚ ಸುದೀಪ್‌ಗೆ ಸರಣಿ ಸರ್ಪ್ರೈಸ್‌ ನೀಡಿದ ಜೀ ಕನ್ನಡ

Saregamapa Show: ಬಿಗ್‌ ಬಾಸ್‌ ಶೋ ನಿರೂಪಣೆ ನಡುವೆಯೇ ಜೀ ಕನ್ನಡದ ಸರೆಗಮಪ ರಿಯಾಲಿಟಿ ಶೋಗೆ ವರ್ಷಾರಂಭದ ವಿಶೇಷ ಅತಿಥಿಯಾಗಿ ಕಿಚ್ಚ ಸುದೀಪ್‌ ಆಗಮಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುದೀಪ್‌, ಹಾಡಿದ್ದಾರೆ, ಕುಣಿದಿದ್ದಾರೆ, ಭಾವುಕರಾಗಿದ್ದಾರೆ. ಮ್ಯಾಕ್ಸ್‌ ಮ್ಯಾಕ್ಸಿಮಮ್‌ ಮನರಂಜನೆಯನ್ನೂ ನೀಡಿದ್ದಾರೆ.

ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋನಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡ ಕಿಚ್ಚ ಸುದೀಪ್‌
ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋನಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡ ಕಿಚ್ಚ ಸುದೀಪ್‌ (Zee Kannada)

Kichcha Sudeep at Saregamapa Show: ಕಿಚ್ಚ ಸುದೀಪ್‌ ಸದ್ಯ ಮ್ಯಾಕ್ಸ್‌ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಡಿಸೆಂಬರ್‌ 25ರಂದು ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಕನ್ನಡದಲ್ಲಿ ಸಿಕ್ಕಷ್ಟೇ ಮೆಚ್ಚುಗೆ, ಪರಭಾಷೆಗಳಿಂದಲೂ ಪಡೆದುಕೊಳ್ಳುತ್ತಿದೆ. ವಿದೇಶದಲ್ಲಿಯೂ ಮ್ಯಾಕ್ಸ್‌ ಸಿನಿಮಾ ನೋಡಿದವರು, ಕಿಚ್ಚನ ಆಕ್ಷನ್‌ಗೆ ಮರುಳಾಗಿದ್ದಾರೆ. ಇದೀಗ ಇದೇ ಸಿನಿಮಾದ ಪ್ರಮೋಷನ್‌ ನೆಪದಲ್ಲಿ ಜೀ ಕನ್ನಡದ ಸರಿಗಮಪ ಶೋನಲ್ಲಿಯೂ ಕಾಣಿಸಿಕೊಂಡಿದ್ದಾರೆ ಕಿಚ್ಚ ಸುದೀಪ್. ಅಭೂತಪೂರ್ವ ಸ್ವಾಗತವೂ ಅವರಿಗೆ ಸಿಕ್ಕಿದೆ.

ಸರಿಗಮಪ ಶೋನಲ್ಲಿ ಸುದೀಪ್

ಹೌದು, ಕಳೆದ ಹತ್ತಾರು ವಾರಗಳಿಂದ ಕಲರ್ಸ್‌ ಕನ್ನಡದಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಶೋ ನಡೆಸಿಕೊಡುತ್ತಿರುವ ಕಿಚ್ಚ ಸುದೀಪ್‌, ಇದೀಗ ಜೀ ಕನ್ನಡದಲ್ಲಿನ ಸರಿಗಮಪ ಸಿಂಗಿಂಗ್‌ ರಿಯಾಲಿಟಿ ಶೋಗೆ ಆಗಮಿಸಿದ್ದಾರೆ. ಕಿಚ್ಚನ ಆಗಮನ ಆಗ್ತಿದೆ ಅಂದರೆ, ವಾಹಿನಿಯಿಂದಲೂ ಅದೇ ಥರದ ಗ್ರ್ಯಾಂಡ್‌ ಸ್ವಾಗತ ಸಿಕ್ಕಿದೆ. ಜೀ ಕನ್ನಡ ವಾಹಿನಿಯಲ್ಲಿನ ಗಾಯಕರಿಂದ ಹಿಡಿದು, ತೀರ್ಪುಗಾರರು, ಜ್ಯೂರಿ ಮೆಂಬರ್ಸ್‌, ಇಡೀ ವಾಹಿನಿ ಮ್ಯಾಕ್ಸ್‌ ಸಿನಿಮಾವನ್ನು ಸೆಲೆಬ್ರೇಟ್‌ ಮಾಡುತ್ತಿದೆ. ಕಿಚ್ಚನ ಸಿನಿಮಾ ಹಾಡುಗಳ ಗಾನಸುಧೆಯೂ ಈ ಶೋನಲ್ಲಿ ಕಿವಿಗಿಂಪು ನೀಡಿದೆ.‌

ಹಾಡು, ಕುಣಿತದ ಜತೆಗೆ ಅಮ್ಮನ ನೆನಪು.

ಕಿಚ್ಚ ಸುದೀಪ್‌ ಇದ್ದಲ್ಲಿ ಮ್ಯಾಕ್ಸಿಮಮ್‌ ಮನರಂಜನೆ ಗ್ಯಾರಂಟಿ. ಅದರಂತೆ, ಸರಿಗಮಪ ಶೋನಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ ಸುದೀಪ್‌, ಮಕ್ಕಳ ಜತೆಗೆ ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಪತ್ನಿ ಸಲುವಾಗಿ ಹಾಡು ಹೇಳಿದ್ದಾರೆ. ಮಗಳ ಹಾಡನ್ನು ಕಣ್ತುಂಬಿಕೊಂಡು ಖುಷಿಪಟ್ಟಿದ್ದಾರೆ. ಕೊನೆಗೆ ಅಮ್ಮನನ್ನು ಕಂಡು ಬಾಚಿ ತಬ್ಬಿಕೊಂಡು ಭಾವುಕರಾಗಿದ್ದಾರೆ. ಇದಷ್ಟೇ ಅಲ್ಲದೇ ಇನ್ನೂ ಹತ್ತಾರೂ ವಿಶೇಷತೆಗಳು ಈ ಸಲದ ಸರಿಗಮಪ ಶೋನ ವಾರಾಂತ್ಯದ ಏಪಿಸೋಡ್‌ನಲ್ಲಿ ವೀಕ್ಷಕರಿಗೆ ಸಿಗಲಿದೆ.

ಪತ್ನಿಗಾಗಿ ಓ ಪ್ರಿಯಾ ಹಾಡು..

ನಾನು ಮೊದಲ ಸಲ ಮೇಕಪ್‌ ಹಾಕಿ, ಪದಾರ್ಪಣೆ ಮಾಡಿದ ಸ್ಟುಡಿಯೋ ಇದು ಎನ್ನುತ್ತಲೇ ಸರಿಗಮಪ ಶೋ ವೇದಿಕೆಗೆ ಬಂದ ಸುದೀಪ್‌, ಹಳೇ ದಿನಗಳಿಗೆ ಜಾರಿದ್ದಾರೆ. ಈ ಸೋನಾ.. ಹಾಡಿಗೆ ಓ ಪ್ರಿಯಾ ಐ ಲವ್‌ ಯೂ ಹಾಡನ್ನು ಹೇಳಿ, ಮತ್ತೆ ಪತ್ನಿ ಪ್ರಿಯಾಗೆ ಪ್ರಪೋಸ್‌ ಮಾಡಿದ್ದಾರೆ ಸುದೀಪ್.‌ ಮ್ಯಾಕ್ಸ್‌ ಜತೆ ಮಾತನಾಡುವಾಗ ಮಾಕ್ಸಿಮಮ್‌ ಸೈಲೆನ್ಸ್‌ ಇರಲಿ ಎನ್ನುತ್ತಲೇ ಪುಟಾಣಿಗಳಿಂದಲೂ ವಿಶೇಷ ಉಡುಗೊರೆ ಪಡೆದುಕೊಂಡಿದ್ದಾರೆ ಸುದೀಪ್.‌

ಇದೆಲ್ಲದಕ್ಕಿಂತ ಹೆಚ್ಚಾಗಿ, ಸುದೀಪ್‌ ಅವರ ಮಗಳು ಸಾನ್ವಿ ಸಹ ಸರಿಗಮಪ ವೇದಿಕೆ ಮೇಲೆ ಬಂದು, ಜಸ್ಟ್‌ ಮಾತ್‌ ಮಾತಲ್ಲಿ.. ಅನ್ನೋ ಹಾಡನ್ನು ಹೇಳಿ ಸುದೀಪ್‌ ಕಣ್ಣಲ್ಲಿ ನೀರು ತರಿಸಿದ್ದಾರೆ. ಮಗಳ ಹಾಡಿಗೆ ತಂದೆ ಸುದೀಪ್‌ ಫಿದಾ ಆಗಿದ್ದಾರೆ. ಅಪ್ಪ ಮಗಳ ಸಂಬಂಧ ನೋಡಿದ ಜಡ್ಜ್‌ ಅರ್ಜುನ್‌ ಜನ್ಯ, ಹುಲಿ ಹೊಟ್ಟೆಯಲ್ಲಿ ಹುಲಿನೇ ಹುಟ್ಟೋದು ಎಂದು ಕಾಂಪ್ಲಿಮೆಂಟ್‌ ನೀಡಿದ್ದಾರೆ.

ಕೊನೆಗೆ ಇತ್ತೀಚೆಗಷ್ಟೇ ಅಮ್ಮ ಸರೋಜಾ ಅವರನ್ನು ಕಳೆದುಕೊಂಡಿದ್ದ ಸುದೀಪ್‌ಗೆ ವಿಶೇಷ ಉಡುಗೊರೆಯನ್ನೇ ಜೀ ಕನ್ನಡ ನೀಡಿದೆ. ಥೇಟ್‌ ಅಮ್ಮನನ್ನೇ ಹೋಲುವ ಪ್ರತಿಮೆಯನ್ನು ಅವರಿಗೆ ನೀಡಿದೆ. ಅಮ್ಮನ ಪ್ರತಿಮೆಯನ್ನು ನೋಡುತ್ತಿದ್ದಂತೆ, ಕಿಚ್ಚ ಸುದೀಪ್‌ ಕಣ್ಣೀರಾಗಿದ್ದಾರೆ. ಅವರ ಜತೆಗೆ ಇಡೀ ಶೋನಲ್ಲಿ ಭಾಗವಹಿಸಿದ ಬಹುತೇಕರ ಕಣ್ಣಲ್ಲಿಯೂ ನೀರು ಜಿನುಗಿದೆ. ಉಸಿರಾದ ಹೆಣ್ಣಿಗೆ ಉಸಿರಿಂದ ಲಾಲಿ.. ಕಣ್ಣೀರ ಲಾಲಿ.. ಎಂದು ಅಮ್ಮನಿಗಾಗಿ ಸ್ವಾತಿ ಮುತ್ತು ಚಿತ್ರದ ಹಾಡನ್ನು ಹಾಡಿ, ಅವರ ಪ್ರತಿಮೆಯನ್ನು ಬಾಚಿ ತಬ್ಬಿಕೊಂಡಿದ್ದಾರೆ.

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner