‘ನನ್ನ ಜೀವನದ ಅತ್ಯಮೂಲ್ಯವಾದ ಮುತ್ತು ಇದೀಗ ಕಳೆದು ಹೋಗಿದೆ’; ಅಮ್ಮನ ನೆನೆದು ಭಾವುಕ ಪತ್ರ ಬರೆದ ಸುದೀಪ್
Kichcha Sudeep Emotional Letter: ನಾನು ಇದೀಗ ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ. ಶೂನ್ಯವನ್ನು ಒಪ್ಪಿಕೊಳ್ಳಲು, ಏನಾಯಿತು ಎಂಬುದನ್ನು ಅರಿಯಲು ನನ್ನಿಂದ ಸಾಧ್ಯವಾಗಲಿಲ್ಲ. 24 ಗಂಟೆಗಳಲ್ಲಿ ಎಲ್ಲವೂ ಬದಲಾಯಿತು.- ಎಂದು ಅಮ್ಮನ ನೆನಪಿನಲ್ಲಿ ಕಿಚ್ಚ ಸುದೀಪ್ ಸುದೀರ್ಘ ಪತ್ರ ಬರೆದಿದ್ದಾರೆ.

Kichcha sudeep: ಕಿಚ್ಚ ಸುದೀಪ್ ನೋವಿನಲ್ಲಿದ್ದಾರೆ. ಪ್ರೀತಿಯ ಅಮ್ಮನನ್ನು ಕಳೆದುಕೊಂಡು ಒಂಟಿ ಭಾವ ಅವರನ್ನು ಆವರಿಸಿದೆ. ಈಗ ಅದೇ ಅಮ್ಮನಿಗೆ ಅಂತಿಮ ವಿದಾಯದ ಬಳಿಕ, ವಿಶೇಷ ಬರಹವೊಂದನ್ನು ಪೋಸ್ಟ್ ಮಾಡಿದ್ದಾರೆ. ಪ್ರೀತಿ ತುಂಬಿದ ಪದಗಳಿಂದ ಅಮ್ಮನ ಗುಣಗಾನ ಮಾಡಿದ್ದಾರೆ. ಅವಳೇ ನನ್ನ ಹಬ್ಬ, ಅವಳೇ ನನ್ನ ಗುರು, ಅವಳೇ ನನ್ನ ನಿಜವಾದ ಹಿತೈಷಿ, ನನ್ನ ಮೊದಲ ಅಭಿಮಾನಿಯೂ ಅವಳೇ, ನನ್ನ ಕೆಟ್ಟ ಕೆಲಸವನ್ನೂ ಇಷ್ಟಪಟ್ಟವಳು.. ಎಂದು ಅಮ್ಮನನ್ನು ಮತ್ತೆ ಮತ್ತೆ ನೆನಪಿಸಿಕೊಂಡಿದ್ದಾರೆ. ಇಲ್ಲಿದೆ ನೋಡಿ ಸುದೀಪ್ ಬರೆದ ಭಾವುಕ ಪತ್ರ.
ಅಮ್ಮನ ನೆನೆದ ದೀಪು ಭಾವುಕ ಪತ್ರ
ಅಮ್ಮ... ಪಕ್ಷಪಾತವಿಲ್ಲದ, ಎಲ್ಲರನ್ನೂ ಪ್ರೀತಿಯಿಂದ ನೋಡುವ, ಎಲ್ಲರನ್ನೂ ಕ್ಷಮಿಸುವ, ಎಲ್ಲರ ಬಗ್ಗೆಯೂ ಕಾಳಜಿವಹಿಸುವ, ಕೇಳಿದ್ದನ್ನು ಕೊಡುವವಳಾಗಿದ್ದಳು.. ಅದೆಲ್ಲವನ್ನೂ ಕಲಿಸ ಏಕೆಂದರೆ ಅವಳು ನನ್ನ ಪಕ್ಕದಲ್ಲಿಯೇ ನಿಂತಿದ್ದ ಮನುಷ್ಯ ರೂಪದ ದೇವರು. ಅವಳೇ ನನ್ನ ಹಬ್ಬ, ಅವಳೇ ನನ್ನ ಗುರು, ಅವಳೇ ನನ್ನ ನಿಜವಾದ ಹಿತೈಷಿ, ನನ್ನ ಮೊದಲ ಅಭಿಮಾನಿಯೂ ಅವಳೇ, ನನ್ನ ಕೆಟ್ಟ ಕೆಲಸವನ್ನೂ ಇಷ್ಟಪಟ್ಟವಳು ಅವಳೇ.. ಈಗ ಅವಳೊಂದು ಸುಂದರ ನೆನಪು..
ನಾನು ಇದೀಗ ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ. ಶೂನ್ಯವನ್ನು ಒಪ್ಪಿಕೊಳ್ಳಲು, ಏನಾಯಿತು ಎಂಬುದನ್ನು ಅರಿಯಲು ನನ್ನಿಂದ ಸಾಧ್ಯವಾಗಲಿಲ್ಲ. 24 ಗಂಟೆಗಳಲ್ಲಿ ಎಲ್ಲವೂ ಬದಲಾಯಿತು.
ಪ್ರತಿದಿನ ಬೆಳಗ್ಗೆ, ನನ್ನ ಫೋನ್‌ಗೆ "ಶುಭೋದಯ ಕಂದಾ" ಎಂಬ ಸಂದೇಶ ಬರುತ್ತಿತ್ತು. ಅಕ್ಟೋಬರ್ 18ರ ಶುಕ್ರವಾರ ಅಮ್ಮನ ಕೊನೆಯ ಸಂದೇಶ ಬಂದಿತ್ತು. ಆದರೆ ಆವತ್ತು ಬೆಳಗ್ಗೆ ನನಗೆ ಅಮ್ಮನ ಮೆಸೆಜ್ ನೋಡಲು ಆಗಲಿಲ್ಲ. ಬಹು ವರ್ಷಗಳ ಬಳಿಕ ನಾನು ಆವತ್ತು ಅಮ್ಮನಿಗೆ ಶುಭೋದಯ ಸಂದೇಶ ಕಳಿಸಲಿಲ್ಲ. ಅವರ ಆರೋಗ್ಯ ಹೇಗಿದೆ ಎಂದೂ ನಾನು ವಿಚಾರಿಸಿಕೊಳ್ಳಲಿಲ್ಲ. ಇಡೀ ದಿನ ಬಿಗ್‌ಬಾಸ್‌ನ ಏಪಿಸೋಡ್ ನಿರೂಪಣೆ ಕೆಲಸದಲ್ಲಿಯೇ ಬಿಜಿಯಾಗಿದ್ದೆ.
ಹೀಗಿರುವಾಗಲೇ ಅಮ್ಮ ಆಸ್ಪತ್ರೆ ಪಾಲಾಗಿದ್ದಾರೆ ಎಂಬ ಮಾಹಿತಿ ಬಂತು. ಆಸ್ಪತ್ರೆಯಲ್ಲಿದ್ದ ಅಕ್ಕನಿಗೆ ಫೋನ್ ಮಾಡಿದೆ. ಡಾಕ್ಟರ್ ಹತ್ತಿರವೂ ಮಾತನಾಡಿದೆ. ಅವರ ಜತೆ ಮಾತನಾಡಿ ಮತ್ತೆ ಬಿಗ್ ಬಾಸ್ ವೇದಿಕೆ ಮೇಲೆ ನಿಂತೆ. ಈ ರೀತಿಯ ಅಸಹಾಯಕತೆ ನಾನು ಮೊದಲ ಬಾರಿಗೆ ಅನುಭವಿಸಿದೆ. ಆ ಕ್ಷಣ ನಾನು ಶನಿವಾರದ ಸಂಚಿಕೆಯನ್ನು ನಿರೂಪಣೆ ಮಾಡುತ್ತಲೇ, ಸಮಸ್ಯೆಯ ಸುಳಿಗೆ ಸಿಲುಕಿದ್ದೆ. ಜತೆಗೆ ನನ್ನ ತಾಯಿಯ ಬಗ್ಗೆ ಮನಸ್ಸಿನಲ್ಲಿ ಭಯವೂ ಕಾಡುತ್ತಿತ್ತು.
ಒಪ್ಪಿಕೊಂಡ ಕೆಲಸವನ್ನು ಹೇಗೆ ನೀಟಾಗಿ ಮುಗಿಸಿಕೊಡಬೇಕು ಎಂಬುದನ್ನೂ ನನಗೆ ನನ್ನ ತಾಯಿ ಹೇಳಿಕೊಟ್ಟಿದ್ದಾಳೆ. ಅದಕ್ಕಾಗಿಯೇ ಅಷ್ಟೇ ಕಾಮ್ ಆಗಿ ನಾನು ಬಿಗ್ ಬಾಸ್ ಕಾರ್ಯಕ್ರಮ ಮುಗಿಸಿದೆ. ಕೆಲಸದ ಮೇಲಿನ ನಿಷ್ಠೆ ಕಲಿಸಿದ ನನ್ನ ತಾಯಿಗೆ ನಾನು ಋಣಿ. ಶನಿವಾರದ ಸಂಚಿಕೆಯ ಚಿತ್ರೀಕರಣದ ನಂತರ ನಾನು ಆಸ್ಪತ್ರೆಗೆ ಧಾವಿಸಿದೆ. ನಾನು ಆಗಮಿಸುವಷ್ಟೊತ್ತಿಗೆ ಅಮ್ಮ ವೆಂಟಿಲೇಟರ್‌ನಲ್ಲಿದ್ದರು. ನನ್ನ ತಾಯಿ ಪ್ರಜ್ಞೆಯಲ್ಲಿದ್ದಾಗ ಆಕೆಯನ್ನು ನನಗೆ ನೋಡಲಾಗಲಿಲ್ಲ. ಅವಳು ಭಾನುವಾರ ಮುಂಜಾನೆ ಇಲ್ಲವಾದಳು. ಕೆಲವೇ ಗಂಟೆಗಳಲ್ಲಿ ಎಲ್ಲವೂ ಬದಲಾಯಿತು.
ಆಗ ಈ ವಾಸ್ತವವನ್ನು ಹೇಗೆ ಒಪ್ಪಿಕೊಳ್ಳಬೇಕೆಂದು ನನಗೆ ತಿಳಿಯಲಿಲ್ಲ. ನಾನು ಶೂಟಿಂಗ್‌ಗೆ ಹೊರಡುವ ಮುನ್ನ ಬಿಗಿಯಾದ ಅಪ್ಪುಗೆ ನೀಡಿದ ನನ್ನ ತಾಯಿ, ಮುಂದಿನ ಕೆಲವೇ ಗಂಟೆಗಳಲ್ಲಿ ಇನ್ನಿಲ್ಲ. ಇದು ಕಠಿಣವಾದ ಸತ್ಯ. ಇದು ಬದಲಾಗಲು ನನಗೆ ಒಂದಷ್ಟು ಸಮಯ ಬೇಕು. ನಾನು ಅವಳನ್ನು ಕಳೆದುಕೊಂಡಿದ್ದೇನೆ. ಮಂಗಳಕರ ದಿನವು ಅವಳನ್ನು ಈ ಭೂಮಿಯಿಂದ ಕರೆದೊಯ್ದಿದೆ. ಅದು ಈ ಪ್ರಕೃತಿ ಮತ್ತು ದೇವರ ಆಯ್ಕೆ.
ಆಕೆಗೆ ಗೌರವ ಸಲ್ಲಿಸಲು ಆಗಮಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳುತ್ತೇನೆ. ಸಂದೇಶಗಳು ಮತ್ತು ಟ್ವೀಟ್‌ಗಳ ಮೂಲಕ ನನ್ನನ್ನು ತಲುಪಿದ ಎಲ್ಲರಿಗೂ ನನ್ನ ಧನ್ಯವಾದಗಳು. ನನ್ನ ತಾಯಿ, ನನ್ನ ಜೀವನದ ಅತ್ಯಮೂಲ್ಯವಾದ ಮುತ್ತು. ಈಗ ಆ ಮುತ್ತು ಕಳೆದು ಹೋಗಿದೆ. ಅವಳು ಶಾಂತಿಯಿಂದ ತುಂಬಿದ ಸ್ಥಳವನ್ನು ತಲುಪಿದ್ದಾಳೆ ಎಂದು ನನಗೆ ಖಾತ್ರಿಯಿದೆ. ಅಮ್ಮಾ, ಚೆನ್ನಾಗಿ ವಿಶ್ರಾಂತಿ ಪಡೆಯಿರಿ, ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನಿಮ್ಮನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ದೀಪು" ಎಂದು ಸುದೀಪ್ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
