ಚಿತ್ರರಂಗದಲ್ಲಿ 29 ವರ್ಷ ಪೂರೈಸಿದ ಕಿಚ್ಚ;‌ ಸಾರ್ಥಕತೆಯ ಪತ್ರದ ಜತೆಗೆ ಧನ್ಯವಾದ ಅರ್ಪಿಸಿದ ಸುದೀಪ್
ಕನ್ನಡ ಸುದ್ದಿ  /  ಮನರಂಜನೆ  /  ಚಿತ್ರರಂಗದಲ್ಲಿ 29 ವರ್ಷ ಪೂರೈಸಿದ ಕಿಚ್ಚ;‌ ಸಾರ್ಥಕತೆಯ ಪತ್ರದ ಜತೆಗೆ ಧನ್ಯವಾದ ಅರ್ಪಿಸಿದ ಸುದೀಪ್

ಚಿತ್ರರಂಗದಲ್ಲಿ 29 ವರ್ಷ ಪೂರೈಸಿದ ಕಿಚ್ಚ;‌ ಸಾರ್ಥಕತೆಯ ಪತ್ರದ ಜತೆಗೆ ಧನ್ಯವಾದ ಅರ್ಪಿಸಿದ ಸುದೀಪ್

ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌, ಇಂದಿಗೆ (ಜ. 31) ಬಣ್ಣದ ಲೋಕಕ್ಕೆ ಕಾಲಿಟ್ಟು ಬರೋಬ್ಬರಿ 29 ವರ್ಷಗಳಾದವು. ಈ ಹಿನ್ನೆಲೆಯಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ವಿಶೇಷ ಪೋಸ್ಟ್‌ ಹಂಚಿಕೊಂಡು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಚಿತ್ರರಂಗದಲ್ಲಿ 29 ವರ್ಷ ಪೂರೈಸಿದ ಕಿಚ್ಚ
ಚಿತ್ರರಂಗದಲ್ಲಿ 29 ವರ್ಷ ಪೂರೈಸಿದ ಕಿಚ್ಚ

Kichcha Sudeep: ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ, ಬಹುಭಾಷೆಗಳಲ್ಲಿಯೂ ತಮ್ಮ ನಟನಾ ಪ್ರತಿಭೆಯಿಂದ ಗುರುತಿಸಿಕೊಂಡು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ ನಟ ಕಿಚ್ಚ ಸುದೀಪ್.‌ ಇದೀಗ ಇದೇ ಕಿಚ್ಚ, ಇಂದಿಗೆ (ಜ. 31) ಬಣ್ಣದ ಲೋಕಕ್ಕೆ ಕಾಲಿಟ್ಟು ಬರೋಬ್ಬರಿ 29 ವರ್ಷಗಳಾದವು. ಪ್ರತಿ ವರ್ಷ ಈ ದಿನವನ್ನೇ ಅಷ್ಟೇ ವಿಶೇಷವಾಗಿ ಬರಮಾಡಿಕೊಳ್ಳುವ  ಸುದೀಪ್‌, ಈ ಬಾರಿಯೂ ಸೋಷಿಯಲ್‌ ಮೀಡಿಯಾದಲ್ಲಿ ವಿಶೇಷ ಪೋಸ್ಟ್‌ ಹಂಚಿಕೊಂಡು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಏನಿದೆ ಪೋಸ್ಟ್‌ನಲ್ಲಿ?

ಈ ಪಯಣವನ್ನು ಮೆಲುಕು ಹಾಕಿದ ಸುದೀಪ್‌, "29 ವರ್ಷಗಳು.. ಈ ವರೆಗಿನ ನನ್ನ ಈ ಸುದೀರ್ಘ ಪ್ರಯಾಣಕ್ಕಾಗಿ ನನ್ನಲ್ಲಿ ಕೃತಜ್ಞತಾ ಭಾವವಿದೆ. ಪ್ರೇಕ್ಷಕರನ್ನು ರಂಜಿಸುವುದು ಮತ್ತು ಅನೇಕರೊಂದಿಗೆ ಪ್ರತಿಧ್ವನಿಸುವ ಕಥೆಗಳನ್ನು ಹಂಚಿಕೊಳ್ಳುವುದೂ ಒಂದು ಗೌರವ. ನಿಮ್ಮೆಲ್ಲರಿಂದ ನನಗೆ ದೊರೆತ ಪ್ರೀತಿ ಮತ್ತು ಬೆಂಬಲ ನನಗೆ ಸಿಕ್ಕ ನಿರಂತರ ಪ್ರೇರಣೆಯ ಮೂಲ. ಅಂಥ ಡೆಡಿಕೇಟೆಡ್‌ ಅಭಿಮಾನಿಗಳನ್ನು ಹೊಂದಿರುವುದು ನಿಜಕ್ಕೂ ನನ್ನ ಸೌಭಾಗ್ಯ" ಎಂದಿದ್ದಾರೆ.

ಮುಂದುವರಿದು, "ನಿಮ್ಮ ಪ್ರತಿ ಪ್ರೋತ್ಸಾಹವು ಎದುರಾದ ಸವಾಲನ್ನು ಸಾರ್ಥಕಗೊಳಿಸಿದೆ. ಅದ್ಯಾವ ಮಟ್ಟಿಗೆ ಅರ್ಥಪೂರ್ಣವಾಗಿದೆ ಎಂಬುದನ್ನು ವ್ಯಕ್ತಪಡಿಸಲು ನನ್ನಿಂದ ಸಾಧ್ಯವಿಲ್ಲ. ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದಷ್ಟೇ ನಾನು ಹೇಳಬಲ್ಲೆ" ಎಂದಿದ್ದಾರೆ ಸುದೀಪ್.‌

ಎಲ್ಲಿಂದ ಶುರುವಾಗಿತ್ತು ಕಿಚ್ಚನ ಸಿನಿ ಪಯಣ

1996ರ ಜನವರಿ 31ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಬ್ರಹ್ಮ ಸಿನಿಮಾ ಮೂಲಕ ಕಿಚ್ಚ ಸುದೀಪ್‌ ಅವರ ಸಿನಿಮಾ ಪಯಣ ಆರಂಭವಾಗಿತ್ತು. ಆದರೆ, ಆ ಸಿನಿಮಾ ಪೂರ್ಣಗೊಳ್ಳಲಿಲ್ಲ. ಅದಾದ ಮೇಲೆ ತಾಯವ್ವ ಅವರ ಮೊದಲ ಸಿನಿಮಾ ಆಗಿ ಬಿಡುಗಡೆ ಆಗಿತ್ತು. ಈಗ ಆ ಸುದೀರ್ಘ ಸಿನಿಪಯಣಕ್ಕೆ 29ರ ಹರೆಯ. ಇನ್ನೊಂದು ವರ್ಷ ಕಳೆದರೆ, ಚಿತ್ರರಂಗದಲ್ಲಿ ಭರ್ಜರಿ ಮೂರು ದಶಕಗಳನ್ನು ಕಳೆದಂತಾಗಲಿದೆ ಸುದೀಪ್.‌

ಶಿವಮೊಗ್ಗದ ಶ್ರೀಮಂತ ಕುಟುಂಬದ ಮಗನಾಗಿ ಹುಟ್ಟಿದ ಸುದೀಪ್‌ ಅವರಿಗೆ, ಚಿಕ್ಕಂದಿನಿಂದಲೇ ಬಣ್ಣದ ಲೋಕದ ಮೇಲೆ ಸೆಳೆತ. ಆರಡಿ ಎತ್ತರ, ಹಾಲಿನ ಬಣ್ಣ. ಕಂಚಿನ ಕಂಠ.. ಅದಕ್ಕೆ ತಕ್ಕಂತೆ ಮೊದಲಿಗೆ ಸಿಕ್ಕ ಅವಕಾಶವೇ ಬ್ರಹ್ಮ ಸಿನಿಮಾ. ಅದು ಸಾಕಾರಗೊಳಲಿಲ್ಲ. ಅದಾದ ಮೇಲೆ ತಾಯವ್ವದಲ್ಲಿ ನಟಿಸಿದರೂ, ಹೆಚ್ಚು ಜನಮನ್ನಣೆ ಸಿಗಲಿಲ್ಲ. ಪ್ರತ್ಯರ್ಥ ಬಳಿಕ ಸ್ಪರ್ಶ ಸಿನಿಮಾ ಕ್ಲಾಸಿಕ್‌ ಹಿಟ್‌ ಪಟ್ಟ ಪಡೆಯಿತು.

2001ರಲ್ಲಿನ ಹುಚ್ಚ ಸಿನಿಮಾ ಸುದೀಪ್‌ ಸಿನಿ ಕೆರಿಯರ್‌ಗೆ ಮೈಲಿಗಲ್ಲಾಯಿತು. ಅಂದಿನಿಂದ ಮತ್ಯಾವತ್ತೂ ಹಿಂದಿರುಗಿ ನೋಡದ ಕಿಚ್ಚ, ಸದ್ಯ ಕನ್ನಡದ ಬಹು ಬೇಡಿಕೆ ನಟರಲ್ಲೊಬ್ಬರು. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಗಾಯಕನಾಗಿ.. ಹೀಗೆ ಚಿತ್ರರಂಗದ ಹಲವು ಮಜಲುಗಳನ್ನು ತುಂಬ ಹತ್ತಿರಗಳಿಂದ ಕಂಡಿದ್ದಾರೆ. ಸದ್ಯ ನಟನ ಈ ಮೈಲಿಗಲ್ಲಿಗೆ ಅವರ ಅಭಿಮಾನಿಗಳು, ಆಪ್ತರು ಶುಭ ಕೋರುತ್ತಿದ್ದಾರೆ.

Whats_app_banner