ಒಂದು ಸಾವು ಮತ್ತು ಪತ್ರಕರ್ತನ ಸುತ್ತ ಗಿರಕಿ ಹೊಡೆಯಲಿದೆ ‘ಅನಾಮಧೇಯ ಅಶೋಕ್ ಕುಮಾರ್’ ಸಿನಿಮಾ; ಫೆಬ್ರವರಿಯಲ್ಲಿ ತೆರೆಗೆ
ಅನಾಮಧೇಯ ಅಶೋಕ್ ಕುಮಾರ್ ಸಿನಿಮಾ ಫೆಬ್ರವರಿ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಈ ಸಿನಿಮಾದ ಟ್ರೇಲರ್ ಈಗ ರಿಲೀಸ್ ಆಗಿದ್ದು, ಸಾಗರ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ನಟ ಕಿಶೋರ್ ಕುಮಾರ್ ಹಾಗೂ ಹರ್ಷಿಲ್ ಕೌಶಿಕ್ ಪ್ರಮುಖ ಪಾತ್ರದಲ್ಲಿದ್ದಾರೆ.

Anamadheya Ashok Kumar Trailer: ಕನ್ನಡ ಮೂಲಕ ನಟ ಕಿಶೋರ್, ಸ್ಯಾಂಡಲ್‌ವುಡ್ ಮಾತ್ರವಲ್ಲದೆ, ಪರಭಾಷೆ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪಕ್ಕದ ತಮಿಳು, ತೆಲುಗು ಜತೆಗೆ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಇದೇ ನಟನ ಹೊಸ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಆ ಚಿತ್ರದ ಹೆಸರು ಅನಾಮಧೇಯ ಅಶೋಕ್ ಕುಮಾರ್. ಟ್ರೇಲರ್ ಜತೆಗೆ ಇದೇ ಫೆಬ್ರವರಿ 7ರಂದು ಚಿತ್ರಮಂದಿರಗಳಿಗೂ ಆಗಮಿಸಲಿದೆ ಈ ಸಿನಿಮಾ. ಇದೇ ಸಿನಿಮಾ ಬಗ್ಗೆ ಮಾಹಿತಿ ನೀಡಲು ಇಡೀ ತಂಡ, ಒಂದೆಡೆ ಸೇರಿತ್ತು.
ಎಸ್ ಕೆ ಎನ್ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಲಾ ಕುಮಾರ್ ಹಾಗೂ ರಮ್ಯ ಸಾಗರ್ ಕುಮಾರ್ ನಿರ್ಮಿಸಿರುವ, ಕಿಶೋರ್ ಕುಮಾರ್ ಸಹ ನಿರ್ಮಾಣವಿರುವ ಸಿನಿಮಾ "ಅನಾಮಧೇಯ ಅಶೋಕ್ ಕುಮಾರ್". ಈ ಸಿನಿಮಾ ಫೆಬ್ರವರಿ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಾಗರ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ನಟ ಕಿಶೋರ್ ಕುಮಾರ್ ಹಾಗೂ "ಆಚಾರ್ & ಕೋ" ಚಿತ್ರದ ಹರ್ಷಿಲ್ ಕೌಶಿಕ್ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ.
24 ಗಂಟೆಯಲ್ಲಿ ನಡೆಯುವ ಕಥೆ?
ಮೂಲತಃ ಐಟಿ ಉದ್ಯೋಗಿಯಾಗಿರುವ ನಾನು, ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ದೇಶದಲ್ಲಿ ನಡೆದ ಕೆಲವು ಕ್ರೈಮ್ ಫಟನೆಗಳು ಹಾಗೂ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಬರೆದ ಪುಸ್ತಕ ಈ ಚಿತ್ರದ ಕಥೆಗೆ ಸ್ಪೂರ್ತಿ. ಇದು ಸಂಜೆ ಆರರಿಂದ ಬೆಳಗ್ಗೆ ಆರರವರೆಗೂ ನಡೆಯುವ ಕಥೆ. ಪ್ರಸಿದ್ದ ವಕೀಲರೊಬ್ಬರ ಕೊಲೆಯ ಸುತ್ತ ನಡೆಯುವ ಕಥೆಯೂ ಹೌದು. ಚಿತ್ರಕ್ಕೆ ನಾನೇ ಕಥೆ ಬರದಿದ್ದೇನೆ. ಚಿತ್ರಕಥೆಯನ್ನು ನಾನು ಹಾಗೂ ಬೆನ್ನಿ ಥಾಮಸ್ ಇಬ್ಬರೂ ಬರೆದಿದ್ದೇವೆ. ಕಿಶೋರ್ ಕುಮಾರ್ ಪತ್ರಕರ್ತನ ಪಾತ್ರದಲ್ಲಿ ಹಾಗೂ ಹರ್ಷಿಲ್ ಕೌಶಿಕ್ ಸರ್ಕಲ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಧೀಂದ್ರ ನಾಯರ್, ಕಾಂತರಾಜ್ ಕಡ್ಡಿಪುಡಿ, ವೀರೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ ಎಂದರು ನಿರ್ದೇಶಕ ಸಾಗರ್ ಕುಮಾರ್.
ಕಿಶೋರ್ ಹೇಳುವುದೇನು?
ಸಾಗರ್ ಕುಮಾರ್ ಹೇಳಿದ ಕಥೆ ಇಷ್ಟವಾಯಿತು ಎಂದ ನಟ ಕಿಶೋರ್ ಕುಮಾರ್, ನಾನು ಈ ಚಿತ್ರದಲ್ಲಿ ಪತ್ರಕರ್ತನಾಗಿ ಅಭಿನಯಿಸಿದ್ದೇನೆ. ಅನಾಮಧೇಯ ಎಂದರೆ ಹೆಸರಿಲ್ಲದವನು ಎಂದು. ನಮ್ಮ ಚಿತ್ರದಲ್ಲಿ ಅನಾಮಧೇಯ ಅಶೋಕ್ ಕುಮಾರ್ ಯಾರು? ಎಂಬ ಗುಟ್ಟನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಅದು ಯಾರು ಎಂಬುದನ್ನು ಚಿತ್ರ ನೋಡಿ ತಿಳಿದುಕೊಳ್ಳಬೇಕು. ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿ ತಮಗೆಲ್ಲಾ ಗೊತ್ತಿದೆ. ಆದರೂ ಚಿತ್ರಗಳ ನಿರ್ಮಾಣ ಹಾಗೂ ಬಿಡುಗಡೆ ಕಡಿಮೆ ಆಗಿಲ್ಲ. ಉತ್ತಮ ಕಂಟೆಂಟ್‌ವುಳ್ಳ ಚಿತ್ರವನ್ನು ಪ್ರೇಕ್ಷಕ ಮೆಚ್ಚಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೊಸತಂಡದ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.
ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡ ನಟ ಹರ್ಷಿಲ್ ಕೌಶಿಕ್, ಕಿಶೋರ್ ಅವರ ಜೊತೆಗೆ ನಟಿಸಿದ್ದು ಖುಷಿಯಾಗಿದೆ ಎಂದರು. ಚಿತ್ರದಲ್ಲಿ ನಟಿಸಿರುವ ವೀರೇಶ್, ಸುಷ್ಮ, ಗಗನ, ದೀಪಕ್ ಸಂಗೀತ ನಿರ್ದೇಶಕ ಆಜಾದ್, ಛಾಯಾಗ್ರಾಹಕ ಸುನೀಲ್ ಹೊನಳ್ಳಿ, ಸಂಕಲನಕಾರ ಯೇಸು ಹಾಗೂ ವಿತರಕರಾದ ಕುನಾಲ್ ಹಾಗೂ ರವಿಚಂದ್ರನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
