ʻದಿʼ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಎಂಟ್ರಿಕೊಟ್ಟ ಮಂಡ್ಯ ರಮೇಶ್ ಪುತ್ರಿ ದಿಶಾ; ಇದೇ ವಾರ ಚಿತ್ರ ತೆರೆಗೆ
ಹಾಸ್ಯ ನಟನಾಗಿ, ಪೋಷಕ ಕಲಾವಿದನಾಗಿ, ರಂಗಕರ್ಮಿಯಾಗಿ, ಕಿರುತೆರೆ ಹೀಗೆ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು ನಟ ಮಂಡ್ಯ ರಮೇಶ್. ಇದೀಗ ಇದೇ ಮಂಡ್ಯ ರಮೇಶ್ ಅವರ ಮಗಳು ದಿಶಾ ರಮೇಶ್ ಚಂದನವನಕ್ಕೆ ನಾಯಕಿಯಾಗಿ ಎಂಟ್ರಿಯಾಗುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಹಾಸ್ಯ ನಟನಾಗಿ, ಪೋಷಕ ಕಲಾವಿದನಾಗಿ, ರಂಗಕರ್ಮಿಯಾಗಿ, ಕಿರುತೆರೆ ಹೀಗೆ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು ನಟ ಮಂಡ್ಯ ರಮೇಶ್. ಇದೀಗ ಇದೇ ಮಂಡ್ಯ ರಮೇಶ್ ಅವರ ಮಗಳು ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ಅದೂ ನಾಯಕಿಯಾಗಿ. ʻದಿʼ ಹೆಸರಿನ ಸಿನಿಮಾದಲ್ಲಿ ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನೆರವೇರಿದೆ. ಸ್ವತಃ ಮಂಡ್ಯ ರಮೇಶ್ ಅವರೇ ಆಗಮಿಸಿ, ಮಗಳ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ.
ವಿ.ಡಿ.ಕೆ ಸಿನಿಮಾಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ, ವಿನಯ್ ವಾಸುದೇವ್ ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿರುವ ಚಿತ್ರವೇ ಈ ʻದಿʼ. ಟ್ರೇಲರ್‌ನಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರ ಮೇ 16ರಂದು ತೆರೆಗೆ ಬರಲಿದೆ. ಹಿರಿಯ ನಟ ಮಂಡ್ಯ ರಮೇಶ್ ʻದಿʼ ಚಿತ್ರದ ಟ್ರೇಲರ್ ಅನಾವರಣ ಮಾಡಿ, ಚಿತ್ರ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಹಾರೈಸಿದರು.
"ನಮ್ಮ ಚಿತ್ರಕ್ಕೆ ʻದಿʼ ಎಂದು ಹೆಸರಿಡಲು ಮೂರು ಜನ ಮುಖ್ಯ ಕಾರಣ. ಒಂದು ನಟ ಕಿಚ್ಚ ಸುದೀಪ್. ಇನ್ನಿಬ್ಬರು ನನ್ನ ಗುರುಗಳು. ನಾನು ಸುದೀಪ್ ಅವರ ಅಭಿಮಾನಿ ಹಾಗೂ ಇನ್ನಿಬ್ಬರು ನಮ್ಮ ಗುರುಗಳ ಹೆಸರಿನಲ್ಲೂ ʻದಿʼ ಅಕ್ಷರವಿದೆ ಮತ್ತು ಚಿತ್ರದಲ್ಲೂ ನಾಯಕನ ಹೆಸರು ದೀಪು. ನಮ್ಮ ʻದಿʼ ಚಿತ್ರದ ನಾಯಕಿ ಹೆಸರು ದಿಶಾ ರಮೇಶ್. ಈ ಎಲ್ಲಾ ಕಾರಣಗಳಿಂದ ನಮ್ಮ ಚಿತ್ರಕ್ಕೆ ʻದಿʼ ಎಂದು ಶೀರ್ಷಿಕೆ ಇಡಲಾಗಿದೆ. ಹಾಗಾಗಿ ಇದು ಇಂಗ್ಲೀಷ್ ʻದಿʼ ಅಲ್ಲ. ಕನ್ನಡದ ʻದಿʼ ಎಂದರು ನಿರ್ದೇಶಕ ಕಮ್ ನಾಯಕ ವಿನಯ್ ವಾಸುದೇವ್.
ಮುಂದುವರಿದು ಮಾತನಾಡಿದ ಅವರು, "ಈ ಚಿತ್ರದ ಶೇಕಡಾ 80% ಭಾಗದ ಚಿತ್ರೀಕರಣ ಕಾಡಿನಲ್ಲೇ ನಡೆಯುತ್ತದೆ. ದೇವರಾಯನದುರ್ಗ, ದೇವರಮನೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಚಿತ್ರೀಕರಣವಾದ ಸ್ಥಳಗಳ ಹೆಸರಿನಲ್ಲೂ ʻದʼ ಅಕ್ಷರವಿದೆ. ಹೀಗೆ ಹಲವು ವಿಶೇಷಗಳಿರುವ ಈ ಚಿತ್ರಕ್ಕೆ ನಾನೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದೇನೆ. ಜೊತೆಗೆ ನಾಯಕನಾಗೂ ನಟಿಸಿದ್ದೇನೆ. ಚಿತ್ರತಂಡದ ಎಲ್ಲರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಇದೇ ಮೇ 16 ರಂದು ತೆರೆ ಕಾಣಲಿದೆ. ಎಲ್ಲರೂ ನೋಡಿ, ಪ್ರೋತ್ಸಾಹ ನೀಡಿ ಎಂದರು ವಿನಯ್ ವಾಸುದೇವ್.
ದಿಶಾ ರಮೇಶ್ ಹೇಳಿದ್ದೇನು?
"ನನಗೆ ವಿನಯ್ ಅವರು ಕಥೆ ಹೇಳಿದಾಗ ಕಥೆ ಕೇಳಿ ಬಹಳ ಇಷ್ಟವಾಯಿತು. ನಂತರ ಟೀಸರ್ ನೋಡಿದ ಮೇಲಂತೂ ಅವರು ಹೇಳಿದಕ್ಕಿಂತ ಇನ್ನೂ ಚೆನ್ನಾಗಿ ಮೂಡಿ ಬಂದಿತ್ತು. ಒಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಯಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಾಯಕಿ ದಿಶಾ ರಮೇಶ್ ತಿಳಿಸಿದರು.
ನಟಿ ಹರಿಣಿ ಶ್ರೀಕಾಂತ್, ನಟರಾದ ನಾಗೇಂದ್ರ ಅರಸ್, ಡಾಲಾ ಶರಣ್, ಕಲಾರತಿ ಮಹಾದೇವ್, ಛಾಯಾಗ್ರಾಹಕ ಅಲೆನ್ ಭರತ್ , ಸಂಕಲನಕಾರ ಸಿದ್ದಾರ್ಥ್ ಆರ್ ನಾಯಕ್ ಮತ್ತು ಸಂಗೀತ ನಿರ್ದೇಶಕ ಯು.ಎಂ. ಸ್ಟೀವನ್ ಸತೀಶ್ ಮುಂತಾದವರು ʻ ದಿʼ ಚಿತ್ರದ ಕುರಿತು ಮಾತನಾಡಿದರು. ಮೇ 16ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು ವಿಶಾಲ ಕರ್ನಾಟಕಕ್ಕೆ ವಿಜಯ್ ಫಿಲಂಸ್ ಅವರು ಹಂಚಿಕೆ ಮಾಡಲಿದ್ದಾರೆ.