Sathish Ninasam: ಹೊಸ ವರ್ಷಕ್ಕೆ ಹೊಸ ಸುದ್ದಿ ಹಂಚಿಕೊಂಡ ಸತೀಶ್ ನಿನಾಸಂ; 'ಹೆಬ್ಬುಲಿ ಕಟ್' ಹೊಸ ಸಿನಿಮಾ ಘೋಷಣೆ
Sathish Ninasam: ನಟ ಸತೀಶ್ ನಿನಾಸಂ ಹೊಸ ವರ್ಷಕ್ಕೆ ತಮ್ಮ ಅಭಿಮಾನಿಗಳಿಗೆ ಹೊಸ ಸಿನಿಮಾ ಒಂದನ್ನು ನೀಡಲು ನಿರ್ಧರಿಸಿದ್ದಾರೆ. ಈ ಖುಷಿಯ ವಿಚಾರವನ್ನು ಅವರು ಇಂದು (ಡಿಸೆಂಬರ್ 30) ಹಂಚಿಕೊಂಡಿದ್ದಾರೆ. 'ಹೆಬ್ಬುಲಿ ಕಟ್' ಎಂಬ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.
ನಟ ಸತೀಶ್ ನಿನಾಸಂ 'ಹೆಬ್ಬುಲಿ ಕಟ್' ಎಂಬ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಹೊಸ ವರ್ಷ ಬರುತ್ತಿದ್ದಂತೆ ಅಭಿಮಾನಿಗಳಿಗೆ ಹೊಸ ಸುದ್ದಿ ನೀಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊಸ ಸಿನಿಮಾವನ್ನು ಬಿಡುಗಡೆ ಮಾಡುವ ಬಗ್ಗೆ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. 'ಹೆಬ್ಬುಲಿ ಕಟ್' ಪ್ರತಿಭಾನ್ವಿತ ತಾರಾಗಣ, ಸುಂದರ ಛಾಯಾಗ್ರಹಣ, ಮರೆಯಲಾಗದ ಸಂಗೀತದ ಸಮ್ಮಿಲನವಾಗಿ ಮೂಡಿಬರಲಿದೆ ಎಂದು ಹೇಳಿಕೊಂಡಿದ್ದಾರೆ. ಅವರು ಬರೆದ ಪತ್ರ ಹೀಗಿದೆ.
ಪ್ರೀತಿಯ ಕನ್ನಡಿಗ ಬಂಧುಗಳೇ
ಹೊಸ ವರ್ಷಕ್ಕೆ ಕಾಲಿಡುವ ಈ ಶುಭಗಳಿಗೆಯಲ್ಲಿ ಶುಭಸಮಾಚಾರವೊಂದನ್ನು ನಿಮಗೆಲ್ಲಾ ತಿಳಿಸುವ ಹರ್ಷ ನನಗೆ. ಅತ್ಯಂತ ಖುಷಿ ಮತ್ತು ಹೆಮ್ಮೆಯಿಂದ 'ಹೆಬ್ಬುಲಿ ಕಟ್' ಎಂಬ ಹೊಸ ಕನ್ನಡ ಚಿತ್ರವನ್ನು ನಾನು ನಿಮಗೆ ಅರ್ಪಿಸುತ್ತಿದ್ದೇನೆ. ಶುದ್ಧ ಹಾಸ್ಯ ಮತ್ತು ಪರಿಶುದ್ಧ ಪ್ರೀತಿಯ ಮಿಶ್ರಣವಾಗಿರುವ ಈ ಭಾವನಾತ್ಮಕ ಕಥೆ ನಿಮ್ಮ ತುಟಿಯಂಚಲ್ಲಿ ನಗು, ಕಣ್ಣಂಚಲ್ಲಿ ಒಂದು ಹನಿ ನೀರು ತರಿಸುತ್ತದೆ ಎಂಬ ಭರವಸೆ ನನಗಿದೆ.
ಸಾಮಾಜಿಕ ಅಸಮಾನತೆಯ ತಳಹದಿಯಲ್ಲಿ ಪ್ರೀತಿ, ದ್ವೇಷ ಮತ್ತು ಸಂಬಂಧಗಳನ್ನು ಅನ್ವೇಷಿಸುವ ಪ್ರಾಮಾಣಿಕ ಪ್ರಯತ್ನವೇ ಈ 'ಹೆಬ್ಬುಲಿ ಕಟ್' ಪ್ರತಿಭಾನ್ವಿತ ತಾರಾಗಣ, ಸುಂದರ ಛಾಯಾಗ್ರಹಣ, ಮರೆಯಲಾಗದ ಸಂಗೀತದ ಸಮ್ಮಿಲನವಾಗಿರುವ ಹೆಬ್ಬುಲಿ ಕಟ್ ನಿಮ್ಮನ್ನು ಭಾವನಾತ್ಮಕ ಪಯಣವೊಂದರಲ್ಲಿ ಭಾಗಿಯಾಗಿಸುತ್ತದೆ ಎಂದು ಖಚಿತವಾಗಿ ಹೇಳಬಲ್ಲೆ. ಒಬ್ಬ ಶಾಲಾ ಹುಡುಗನ ಮುಗ್ಧತೆ ನಿಮ್ಮಲ್ಲಿ ಮುಗುಳಗು ಹುಟ್ಟಿಸಿದರೆ ಅವನಿರುವ ಸಮಾಜದ ವರ್ತನೆ ನಿಮ್ಮ ಗಂಟಲು ಬಿಗಿಯಾಗಿಸುತ್ತದೆ. ಉತ್ತರ ಕರ್ನಾಟಕದ ಈ ಕಥೆ ಹುಟ್ಟಿಸುವ ಪ್ರಶ್ನೆಗಳು ನಮ್ಮೆಲ್ಲರನ್ನೂ ಆತ್ಮಾವಲೋಕನಕ್ಕೆ ಒಡ್ಡುತ್ತವೆ.
ನನ್ನ ಹೃದಯಕ್ಕೆ ಹತ್ತಿರವಾಗಿರುವ 'ಹೆಬ್ಬುಲಿ ಕಟ್' ಚಿತ್ರವನ್ನು ನಾಡಿನ ಜನತೆಗೆ ಅರ್ಪಿಸಲು ಅತ್ಯಂತ ಖುಷಿ ಮತ್ತು ಹೆಮ್ಮೆಯಿದೆ. ಭೀಮರಾವ್ ಪಿ ಅವರ ನಿರ್ದೇಶನ ಮತ್ತು ನಿರ್ಮಾಣದ ಈ ಚಿತ್ರ ನನ್ನ ಕಡೆಯಿಂದ ಕನ್ನಡಿಗರಿಗೆ ಹೊಸ ವರ್ಷದ ಕಾಣಿಕೆ ಮತ್ತು ಬದ್ಧತೆ. 2025 ರ ಮೊದಲ ದಿನದಂದೇ ಇದರ ಮೊದಲ ನೋಟವನ್ನು ನಿಮ್ಮೆದುರು ಇಡುತ್ತಿದ್ದೇವೆ.
ಬಿಡುಗಡೆ: 2025 ರ ಮಾರ್ಚ್ ನಲ್ಲಿ ಚಿತ್ರಮಂದಿರಗಳಲ್ಲಿ
'ಹೆಬ್ಬುಲಿ ಕಟ್' ಅನ್ನು ಸ್ವಾಗತಿಸಿ, ಪ್ರೀತಿಯಿಂದ ಅಪ್ಪಿಕೊಳ್ಳಿ!
ಶುಭ ಹಾರೈಕೆಗಳೊಂದಿಗೆ ಸತೀಶ್ ನೀನಾಸಂ (ನಟ)
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope