ʻಯುದ್ಧಕಾಂಡʼ ಬಳಿಕ ‌ʻಸರಳ ಸುಬ್ಬರಾವ್ʼ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ ಸ್ಯಾಂಡಲ್‌ವುಡ್‌ ನಟ ಅಜೇಯ್‌ ರಾವ್‌
ಕನ್ನಡ ಸುದ್ದಿ  /  ಮನರಂಜನೆ  /  ʻಯುದ್ಧಕಾಂಡʼ ಬಳಿಕ ‌ʻಸರಳ ಸುಬ್ಬರಾವ್ʼ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ ಸ್ಯಾಂಡಲ್‌ವುಡ್‌ ನಟ ಅಜೇಯ್‌ ರಾವ್‌

ʻಯುದ್ಧಕಾಂಡʼ ಬಳಿಕ ‌ʻಸರಳ ಸುಬ್ಬರಾವ್ʼ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ ಸ್ಯಾಂಡಲ್‌ವುಡ್‌ ನಟ ಅಜೇಯ್‌ ರಾವ್‌

ಯುದ್ಧಕಾಂಡ ಸಿನಿಮಾ ಬಳಿಕ 70ರ ಕಾಲಘಟ್ಟದಲ್ಲಿ ನಡೆಯುವ ʻಸರಳ ಸುಬ್ಬರಾವ್‌ʼ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ ನಟ ಅಜೇಯ್‌ ರಾವ್‌. ಇತ್ತೀಷೆಗಷ್ಟೇ ಈ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದೆ. ಈ ಚಿತ್ರವನ್ನು ಮಂಜು ಸ್ವರಾಜ್‌ ನಿರ್ದೇಶನ ಮಾಡುತ್ತಿದ್ದಾರೆ.

ʻಯುದ್ಧಕಾಂಡʼ ಬಳಿಕ ‌ʻಸರಳ ಸುಬ್ಬರಾವ್ʼ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ ಸ್ಯಾಂಡಲ್‌ವುಡ್‌ ನಟ ಅಜೇಯ್‌ ರಾವ್‌
ʻಯುದ್ಧಕಾಂಡʼ ಬಳಿಕ ‌ʻಸರಳ ಸುಬ್ಬರಾವ್ʼ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ ಸ್ಯಾಂಡಲ್‌ವುಡ್‌ ನಟ ಅಜೇಯ್‌ ರಾವ್‌

ಯುದ್ಧಕಾಂಡ ಸಿನಿಮಾದ ಮೂಲಕ ನಿರ್ಮಾಪಕನಾಗಿ ಅದೃಷ್ಟಪರೀಕ್ಷೆಗಿಳಿದಿದ್ದ ನಟ ಅಜೇಯ್‌ ರಾವ್‌, ಇದೀಗ ಆ ಯುದ್ಧ ಗೆದ್ದ ಬಳಿಕ ಹೊಸ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಆ ಚಿತ್ರಕ್ಕೆ ʻಸರಳ ಸುಬ್ಬರಾವ್‌ʼ ಎಂಬ ಶೀರ್ಷಿಕೆ ಇಡಲಾಗಿದೆ. 1971ರ ಕಾಲಘಟ್ಟದ ಸುಂದರ ಕೌಟುಂಬಿಕ ಕಥಾಹಂದರ ಹೊಂದಿರುವ ʻಸರಳ ಸುಬ್ಬರಾವ್ʼ ಚಿತ್ರವನ್ನು ಮಂಜು ಸ್ವರಾಜ್‌ ನಿರ್ದೇಶನ ಮಾಡುತ್ತಿದ್ದಾರೆ. ರಿಯಾನ್ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಲೋಹಿತ್ ನಂಜುಂಡಯ್ಯ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಇದೇ ಚಿತ್ರದ ಹಾಡೊಂದು ಬಿಡುಗಡೆ ಆಗಿದೆ.

ಈ ಚಿತ್ರದಲ್ಲಿ ಅಜೇಯ್ ರಾವ್ ಹಾಗೂ ಮಿಶಾ ನಾರಂಗ್ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಇದೀಗ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡ ಇದೇ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿದೆ. ಆ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಸಂಜಿತ್ ಹೆಗ್ಡೆ ಹಾಡಿಗೆ ಧ್ವನಿಯಾಗಿದ್ದಾರೆ. ಸರಿಗಮ ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡು ಲಭ್ಯವಿದೆ‌. ಹಾಡು ಬಿಡುಗಡೆ ಬಳಿಕ ಮಾತನಾಡಿದ ಚಿತ್ರತಂಡ, ಒಂದಷ್ಟು ಮಾಹಿತಿ ಹಂಚಿಕೊಂಡಿತು.

ನಿರ್ದೇಶಕರ ಮಾತು

ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಮಂಜು ಸ್ವರಾಜ್‌, ʻಸರಳ ಸುಬ್ಬರಾವ್ʼ ನಮ್ಮ ಚಿತ್ರದ ನಾಯಕ, ನಾಯಕಿಯ ಹೆಸರು. ಇದು 1971ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ರೆಟ್ರೊ ಶೈಲಿಯ ಕಥೆ ಕೂಡ. ಈ ಕಥೆಯನ್ನು ನಿರ್ಮಾಪಕ ಲೋಹಿತ್ ಅವರ ಮುಂದೆ ಹೇಳಿದಾಗ, ಅವರು ಕೇಳಿ ತುಂಬ ಮೆಚ್ಚಿಕೊಂಡರು. ಜೊತೆಗೆ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡೋಣ ಎಂದರು. ಹೇಳಿದ ಹಾಗೆ ಚಿತ್ರವನ್ನು ಅದ್ದೂರಿಯಾಗಿ ಮಾಡಿ‌ ಮುಗಿಸಿದ್ದಾರೆ. ಈ ಕಥೆಗೆ ಅಜೇಯ್ ರಾವ್ ಅವರೇ ಸೂಕ್ತ ನಾಯಕ ಎನಿಸಿತು. ಇನ್ನೂ ನಮ್ಮ ಚಿತ್ರದ ನಾಯಕಿ ಪಂಜಾಬಿನ ಮಿಶಾ ನಾರಂಗ್. ನನ್ನ ಅಂದಾಜಿನ ಪ್ರಕಾರ ಕನ್ನಡದಲ್ಲಿ ತುಂಬಾ ವರ್ಷಗಳಿಂದ ಇಂತಹ ಕಥೆ ಬಂದಿಲ್ಲ. ಅಂತಹ ಅಪರೂಪದ ಕಥೆ ಇದು" ಎಂದರು ಮಂಜು ಸ್ವರಾಜ್.

ಮುಂದುವರಿದು ಮಾತನಾಡುವ ಅವರು, "ನಾಯಕ ಅಜೇಯ್ ರಾವ್ ಅವರ ಅಭಿನಯಕ್ಕೆ ಅವರೇ ಸಾಟಿ. ಪಂಜಾಬಿ ಹುಡುಗಿ ಮಿಶಾ ಕನ್ನಡ ಅರ್ಥ ಮಾಡಿಕೊಂಡು ಅಭಿನಯಿಸಿದ್ದು ನಿಜಕ್ಕೂ ಖುಷಿಯ ವಿಚಾರ. ಇನ್ನುಳಿದಂತೆ ರಂಗಾಯಣ ರಘು, ವೀಣಾ ಸುಂದರ್, ಶ್ರೀ, ರಘು ರಾಮನಕೊಪ್ಪ, ವಿಜಯ್ ಚಂಡೂರ್ ಹೀಗೆ ದೊಡ್ಡ ತಾರಾಬಳಗವೇ ನಮ್ಮ ಚಿತ್ರದಲ್ಲಿದೆ‌. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಪ್ರದೀಪ್ ಪದ್ಮಕುಮಾರ್ ಛಾಯಾಗ್ರಹಣ, ಬಸವರಾಜ್ ಅರಸ್ ಸಂಕಲನವಿರುವ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ" ಎಂದರು ಮಂಜು ಸ್ವರಾಜ್.

ನಾಯಕ ಅಜೇಯ್‌ ರಾವ್‌ ಹೇಳಿದ್ದೇನು?

"ಈ ಚಿತ್ರದಲ್ಲಿ ನಟಿಸಿರುವುದು ನನ್ನ ವೈಯ್ಯಕ್ತಿಕ ಹಾಗೂ ವೃತ್ತಿಜೀವನದ ಹೆಮ್ಮೆ. ಅಂತಹ ಒಂದು ಸುಂದರ ಸಾಂಸಾರಿಕ ಚಿತ್ರ ʻಸರಳ ಸುಬ್ಬರಾವ್ʼ. ಇನ್ನೂ ಈ ಚಿತ್ರ ಭಾರತೀಯ ಚಿತ್ರರಂಗದ ಸುವರ್ಣ ಯುಗಕ್ಕೆ ಟ್ರಿಬ್ಯುಟ್ ಎಂದರು ತಪ್ಪಾಗಲಾರದು. ನಾನು ಚಿಕ್ಕವಯಸ್ಸಿನಲ್ಲಿ ಸೂಪರ್ ಮ್ಯಾನ್ ಮುಂತಾದ ಚಿತ್ರಗಳನ್ನು ಹೆಚ್ಚು ನೋಡುತ್ತಿದ್ದೆ. ನಾನೇ ಸೂಪರ್ ಹೀರೋ ಅಂದುಕೊಳ್ಳುತ್ತಿದೆ. ಈ ಚಿತ್ರದಲ್ಲೂ ನಾನು ಸೂಪರ್ ಹೀರೊ. ಏಕೆಂದರೆ ಇದು 50 ವರ್ಷಗಳ ಹಿಂದೆ ನಡೆಯುವ ಕಥೆ. ಈ ಚಿತ್ರದಲ್ಲಿ ರೆಟ್ರೊ ಶೈಲಿಯ ಉಡುಗೆಗಳನ್ನು ಹಾಕಿದಾಗ ನಾನು ನನ್ನ ಪಾತ್ರದಲ್ಲಿ ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್ ಅವರನ್ನು ನೋಡಿದ್ದೇನೆ. ಎಷ್ಟು ಜನಕ್ಕೆ ಸಿಗುತ್ತದೆ ಇಂತಹ ಅವಕಾಶ" ಎಂದರು ಅಜೇಯ್‌ ರಾವ್.‌

"ಮಂಜು ಸ್ವರಾಜ್ ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ಅಜೇಯ್ ರಾವ್ ಅವರ ಸಹಕಾರ ಅಪಾರ. ಇಡೀ ಚಿತ್ರತಂಡ ನನಗೆ ಪ್ರೋತ್ಸಾಹ ನೀಡಿದ್ದಾರೆ. ಅದರಿಂದ ಒಂದೊಳ್ಳೆ ಕೌಟುಂಬಿಕ ಚಿತ್ರ ನಿಮ್ಮ ಮುಂದೆ ಬರುತ್ತಿದೆ ಎಂದು ನಿರ್ಮಾಪಕ ಲೋಹಿತ್ ನಂಜುಂಡಯ್ಯ ತಿಳಿಸಿದರು. ಚಿತ್ರದಲ್ಲಿ ಬಿಡುಗಡೆಯಾಗಿರುವ ಗೀತೆ ಸೇರಿದಂತೆ ಐದು ಹಾಡುಗಳಿವೆ‌. ಒಂದಕ್ಕಿಂತ ಒಂದು ಚೆನ್ನಾಗಿದೆ ಎಂದರು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್.

ಚಿತ್ರದಲ್ಲಿ ನಟಿಸಿರುವ ಹಿರಿಯ ನಟ ರಂಗಾಯಣ ರಘು, ನಟ ಶ್ರೀ, ಚಿತ್ಕಲಾ ಬಿರಾದಾರ್ ವಿಜಯ್ ಚಂಡೂರ್, ರಘು ರಾಮನಕೊಪ್ಪ, ಛಾಯಾಗ್ರಾಹಕ ಪ್ರದೀಪ್ ಪದ್ಮಕುಮಾರ್, ಸಂಕಲನಕಾರ ಬಸವರಾಜ ಅರಸ್, ಕಲಾ ನಿರ್ದೇಶಕ ಅಮರ್,‌ ನೃತ್ಯ ನಿರ್ದೇಶಕರಾದ ಮದನ್ ಹರಿಣಿ, ವಸ್ತ್ರವಿನ್ಯಾಸ ಮಾಡಿರುವ ರಂಜಿತ್ ಮುಂತಾದವರು "ಸರಳ ಸುಬ್ಬರಾವ್" ಚಿತ್ರದ ಕುರಿತು ಮಾತನಾಡಿದರು.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.