Daali Dhananjaya: ರೈತ ಕಂಪನಿಗಳು ಬೆಳೆಯಬೇಕು ಎನ್ನುತ್ತಲೇ ಸಹಜ ಆರ್ಗಾನಿಕ್ಸ್‌ ಉತ್ಪನ್ನಗಳಿಗೆ ರಾಯಭಾರಿಯಾದ ಡಾಲಿ ಧನಂಜಯ್
ಕನ್ನಡ ಸುದ್ದಿ  /  ಮನರಂಜನೆ  /  Daali Dhananjaya: ರೈತ ಕಂಪನಿಗಳು ಬೆಳೆಯಬೇಕು ಎನ್ನುತ್ತಲೇ ಸಹಜ ಆರ್ಗಾನಿಕ್ಸ್‌ ಉತ್ಪನ್ನಗಳಿಗೆ ರಾಯಭಾರಿಯಾದ ಡಾಲಿ ಧನಂಜಯ್

Daali Dhananjaya: ರೈತ ಕಂಪನಿಗಳು ಬೆಳೆಯಬೇಕು ಎನ್ನುತ್ತಲೇ ಸಹಜ ಆರ್ಗಾನಿಕ್ಸ್‌ ಉತ್ಪನ್ನಗಳಿಗೆ ರಾಯಭಾರಿಯಾದ ಡಾಲಿ ಧನಂಜಯ್

Sahaja Organics Products: ನಟ, ನಿರ್ಮಾಪಕ ಡಾಲಿ ಧನಂಜಯ್‌ ಇದೀಗ ರೈತರ ಉತ್ಪನ್ನಗಳಿಗೆ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದಾರೆ. ರೈತ ಕಂಪನಿಗಳು ಬೆಳೆಯಬೇಕು ಎನ್ನುತ್ತಲೇ “ಸಹಜ ಆರ್ಗಾನಿಕ್ಸ್‌” ಅನ್ನೋ ಕಂಪನಿಗೆ ಡಾಲಿ ರಾಯಭಾರಿಯಾಗಿದ್ದಾರೆ.

ಸಹಜ ಆರ್ಗಾನಿಕ್ಸ್‌ ಉತ್ಪನ್ನಗಳಿಗೆ ರಾಯಭಾರಿಯಾದ ಡಾಲಿ ಧನಂಜಯ್
ಸಹಜ ಆರ್ಗಾನಿಕ್ಸ್‌ ಉತ್ಪನ್ನಗಳಿಗೆ ರಾಯಭಾರಿಯಾದ ಡಾಲಿ ಧನಂಜಯ್

Daali Dhananjaya: ನಟ ಡಾಲಿ ಧನಂಜಯ್‌ ಸಿನಿಮಾ ನಟನೆ, ನಿರ್ಮಾಣದ ಜತೆಗೆ ಅದರಾಚೆಗಿನ ಬದುಕಿನ ಬಗ್ಗೆಯೂ ವಿಶೇಷ ಒಲವು ಹೊಂದಿದ ಕನ್ನಡದ ಖ್ಯಾತ ನಟ. ಬಣ್ಣದ ಲೋಕದ ನಂಟಿನ ಜತೆಗೆ ಕೈಲಾದ ಮಟ್ಟಿಗೆ ಸಾಮಾಜಿಕ ಜವಾಬ್ದಾರಿಗಳಲ್ಲಿಯೂ ಅವರು ಭಾಗಿಯಾದ ಸಾಕಷ್ಟು ಉದಾಹರಣೆಗಳಿವೆ. ಕಳೆದ ವರ್ಷವಷ್ಟೇ ಸರ್ಕಾರದ ಚರ್ಮಕೈಗಾರಿಕಾ ಉತ್ಪನ್ನಗಳ (ಲಿಡ್ಕರ್‌) ರಾಯಭಾರಿಯಾಗಿ  ನೇಮಕಗೊಂಡಿದ್ದರು ಧನಂಜಯ್. ಈಗ ಇದೇ ನಟ, ರೈತರೇ ಉತ್ಪಾದನೆ ಮಾಡಿದ ಸಹಜ ಆರ್ಗಾನಿಕ್ಸ್‌ ಜತೆಯಾಗಿದ್ದಾರೆ. ಅಂದರೆ ಈ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದಾರೆ. ಈ ವಿಚಾರವನ್ನು ಕೃಷ್ಣ ಪ್ರಸಾದ್‌ ಗೋವಿಂದಯ್ಯ ತಮ್ಮ ಸೋಷಿಯಲ್‌ ಮೀಡಿಯಾ ಪುಟದಲ್ಲಿ ಶೇರ್‌ ಮಾಡಿ ಖುಷಿ ಹಂಚಿಕೊಂಡಿದ್ದಾರೆ.

ಸಹಜ ಆರ್ಗಾನಿಕ್ಸ್‌ ಜೊತೆ ಡಾಲಿ ಧನಂಜಯ!

ಸೊಪ್ಪಿನ ಕ್ಯಾಲೆಂಡರ್‌ 2025 ಸಿದ್ಧವಾಗುತ್ತಿದೆ.‌ ಅದರ ಮುಖಪುಟಕ್ಕೆ ಸೆಲೆಬ್ರಿಟಿ ಒಬ್ಬರು ಬೇಕಿತ್ತು. ನಮಗೋ ರಾಜಕಾರಣ ಮತ್ತು ಸಿನಿಮಾ ಎರಡೂ ದೂರ. ನಮ್ಮ ಮುಂಚಿನ ಕ್ಯಾಲೆಂಡರ್‌ಗಳ ರೂಪದರ್ಶಿಗಳಾಗಿದ್ದ ಕಿಶೋರ್, ಯಮುನಾ ಮೇಡಂ, ರಮೇಶ್ ಭಟ್ ಮತ್ತು ಅಕ್ಷತಾ ಪಾಂಡವಪುರ ಕೃಷಿಯ ಬಗ್ಗೆ ಆಸಕ್ತಿ ಇದ್ದವರು; ಖುಷಿಯಿಂದ ನಮ್ಮ ಮೇಳಗಳ ಭಾಗವಾದವರು. ಯಮುನಾ ಮೇಡಂ‌ ಅಂತೂ 'ಮೈಸೂರು ಬರ್ತಿದೀನಿ. ಪೋಟೋ ಶೂಟ್ ಇದ್ದರೆ ಮಾಡೋಣ' ಎಂದು ಹಣ್ಣು ಹಂಪಲು, ತೆನೆ ಹಿಡಿದು ಸಂಭ್ರಮಿಸುತ್ತಾರೆ.

ಈ ವರ್ಷದ ಸೊಪ್ಪಿನ ಕ್ಯಾಲೆಂಡರ್ ನ ಮುಖಪುಟಕ್ಕೆ ಡಾಲಿ ಧನಂಜಯ ಸೂಕ್ತ ಎಂದು ನಮ್ಮ ತಂಡ ಸೂಚಿಸಿತು. ಅವರು ಹೇಗೂ ಮೈಸೂರಿನ ಒಡನಾಟ ಉಳ್ಳವರು; ಹಳ್ಳಿಗಳ ಬಗ್ಗೆ ಪ್ರೀತಿ ಇಟ್ಟುಕೊಂಡವರು. ಹೊಸ ಸಿನಿಮಾ, ಪುಷ್ಟ 2 ರ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದ ಡಾಲಿ ನಮಗೆ ಸಿಗುವುದು ಸುಲಭದ ಮಾತಾಗಿರಲಿಲ್ಲ.ಕನ್ನಡ ಪ್ರಭದ ಗೆಳೆಯ ವಿನೋದ್ ನಾಯಕ್ ಸಮಯ ಹೊಂದಿಸಿ ಡಾಲಿ ಧನಂಜಯರ ಭೇಟಿ ಮಾಡಿಸಿದರು.

ಸೊಪ್ಪಿನ ಬುಟ್ಟಿ, ಸಹಜ ಆರ್ಗಾನಿಕ್ಸ್‌ನ ಉತ್ಪನ್ನಗಳ ಹಿಡಿದ ಡಾಲಿ ಖುಷಿಯಿಂದ ಪೋಸ್ ಕೊಟ್ಟರು. 'ತುಂಬಾ ಒಳ್ಳೆಯ ಪ್ರಯತ್ನ. ಬಿಡುವಾಗಿ ಒಮ್ಮೆ ಸಹಜ ಆರ್ಗಾನಿಕ್ಸ್‌ಗೆ ಬರುವೆ. ರೈತ ಕಂಪನಿಗಳು ಬೆಳೆಯಬೇಕು' ಎಂದು ಹಾರೈಸಿದರು. ಚಿತ್ರ ಜಗತ್ತಿನ ತಾರೆಯರು ರೈತ ಕಂಪನಿಗಳ ಜೊತೆ ನಿಲ್ಲಬೇಕಿದೆ. ನಂದಿನಿ ಬ್ರಾಂಡ್ ಗೆ ಇರುವಂತೆ, ಪ್ರತಿ ರೈತ ಉತ್ಪಾದಕರ ಕಂಪನಿಗೂ ರಾಯಭಾರಿಗಳು ಬೇಕು. ಅನ್ನದ ಋಣ ತೀರಿಸಲು ಇದು ಚಿತ್ರ ಜಗತ್ತು ನೀಡುವ ಕೊಡುಗೆ.

ಸೊಪ್ಪಿನ ಕ್ಯಾಲೆಂಡರ್ 2025 ಶೀಘ್ರದಲ್ಲೇ ಬರಲಿದೆ; ನಿರೀಕ್ಷಿಸಿ. ಕೆಂಗೇರಿ ಸಮೀಪದ Sahaja Organics ಹೋಗಿಬನ್ನಿ. ಮನೆಗಾಗುವಷ್ಟು ಹಣ್ಣು- ಹಂಪಲು, ಧಾನ್ಯ ಸಗಟು ದರದಲ್ಲಿ ಖರೀದಿಸಿ ತನ್ನಿ" ಎಂದು ಕೃಷ್ಣ ಪ್ರಸಾದ್‌ ಗೋವಿಂದಯ್ಯ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಚಿತ್ರಕಲಾವಿದ ಎಂಎಸ್ ಮೂರ್ತಿ ಏನಂದ್ರು?

ಕೃಷ್ಣ ಪ್ರಸಾದ್‌ ಗೋವಿಂದಯ್ಯ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗೆ ಖ್ಯಾತ ಚಿತ್ರಕಲಾವಿದ ಎಂಎಸ್‌ ಮೂರ್ತಿ ಸಹ ಪ್ರತ್ರಿಕ್ರಿಯೆ ನೀಡಿದ್ದಾರೆ. “ಸಹಜ ಕೃಷಿಗೆ ಇದುವರೆಗೂ ಬೆಳೆಸಿದವರು ಯಾರು..? ಸೊಪ್ಪು, ಸದೆ ತಿಂದವರು ಬಡವರೇ ಅಲ್ಲವೇ.. ಇಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಸ್ಪಂದಿಸಿರುವುದು ಸಹಜವಲ್ಲವೇ... ನಿಮಗೂ ಕೂಡ ಸಿನೇಮಾ ಸೆಲೆಬ್ರಿಟಿ ಅನಿವಾರ್ಯ ಅನಿಸಿತೆ... ಈ ಕಾಲಕ್ಕೆ ನಿಮ್ಮ ಈ ನಡೆಯೂ 'ಸಹಜ' ಎನ್ನುವಂತೆ ಆಗಿದೆ.. ಮೂರು ದಶಕದ ಹಿಂದೆ ಸಿನೆಮಾ ಮಂದಿ ಆಟೋದವರನ್ನು ಬಳಸಿ, ಬಿಸಾಡಿದ್ದಾರೆ. ಆಟೋದವರು ತಾವು ದಿನವಿಡೀ ದುಡಿದ ಬಿಡಿಗಾಸಿನಲ್ಲಿ ತಮ್ಮ ಮನೆಯ ಮಡದಿ ಮಕ್ಕಳಿಗೆ ಹೂ, ಹಣ್ಣು ತಂದುಕೊಡದೆ, ಬೀದಿ, ಬೀದಿಗಳಲ್ಲಿ ಸಿನಿಮಾದವರನ್ನು ಆರಾಧಿಸಿದರು, ಈಗ ಈ ತಲೆಮಾರಿನ ಅವರ ಸ್ಥಿತಿ ಗಮನಿಸಿದ್ದೀರಾ...?”

"ಮಾರಾಟ ಹೆಚ್ಚಾಗಿ ದಂಧೆಯಾದರೆ ಅದರ ಮೌಲ್ಯ ಕುಸಿಯುತ್ತದೆ.. ಇದೂ ಸೊಪ್ಪಿಗೂ, ಸಾವಯವ ಹಣ್ಣು, ತರಕಾರಿಗೂ ಅನ್ವಯಿಸುತ್ತದೆ.. ಸಾವಯವದ ಆಶಯ ಕೇವಲ ಮಾರುಕಟ್ಟೆ , ಹಣ, ಜನಪ್ರಿಯತೆ ಮತ್ತು ಘೋಷಣೆ ಅಲ್ಲ. ಇವೆಲ್ಲ ನಿಮಗೆ ತಿಳಿಯದ ಸತ್ಯವೇನಲ್ಲ. ಮೂವತ್ತು ವರ್ಷಗಳ ಹಿಂದೆ ತಳಿಯಲ್ಲಿ ನಿಮ್ಮ ಆಶಯಕ್ಕೆ ತಕ್ಕಂತೆ ಸಹಜ ಕೃಷಿ ಬೆಳೆಸಿ. ಇಲ್ಲವಾದಲ್ಲಿ ಅದು ಅಸಹಜವೇ 'ಸಹಜ' ಎನ್ನುವಂತೆ ಜನರನ್ನು ಮರಳು ಮಾಡಬಹುದು. ಕೇವಲ ಒಬ್ಬ 'ಸೊಪ್ಪು' ಕೊಳ್ಳುವ ಸಹಜ ಕೃಷಿಯ ಆದರ್ಶ ರೈತನ ಬಗ್ಗೆ ಅಭಿಮಾನವಿರುವ ಗ್ರಾಹಕನಾಗಿ ಇಷ್ಟು ಮಾತು. ನಿಮಗೆ ಶುಭವಾಗಲಿ" ಎಂದು ಪ್ರತಿಭಾವಂತ ಚಿತ್ರಕಲಾವಿದ ಎಂಎಸ್ ಮೂರ್ತಿ ಶುಭ ಹಾರೈಸಿದ್ದಾರೆ.

Whats_app_banner