ಒಪ್ಪೊತ್ತೂಟದ ಅಭ್ಯಾಸವಾದರೆ ಕಷ್ಟ! ಚಿತ್ರೋದ್ಯಮ ಅಂತನಿಸಿಕೊಳ್ಳುವುದಕ್ಕೆ ವರ್ಷಕ್ಕೆ 15 ಒಳ್ಳೆಯ ಚಿತ್ರಗಳು ಬೇಕೇ ಬೇಕು: ರಕ್ಷಿತ್‍ ಶೆಟ್ಟಿ
ಕನ್ನಡ ಸುದ್ದಿ  /  ಮನರಂಜನೆ  /  ಒಪ್ಪೊತ್ತೂಟದ ಅಭ್ಯಾಸವಾದರೆ ಕಷ್ಟ! ಚಿತ್ರೋದ್ಯಮ ಅಂತನಿಸಿಕೊಳ್ಳುವುದಕ್ಕೆ ವರ್ಷಕ್ಕೆ 15 ಒಳ್ಳೆಯ ಚಿತ್ರಗಳು ಬೇಕೇ ಬೇಕು: ರಕ್ಷಿತ್‍ ಶೆಟ್ಟಿ

ಒಪ್ಪೊತ್ತೂಟದ ಅಭ್ಯಾಸವಾದರೆ ಕಷ್ಟ! ಚಿತ್ರೋದ್ಯಮ ಅಂತನಿಸಿಕೊಳ್ಳುವುದಕ್ಕೆ ವರ್ಷಕ್ಕೆ 15 ಒಳ್ಳೆಯ ಚಿತ್ರಗಳು ಬೇಕೇ ಬೇಕು: ರಕ್ಷಿತ್‍ ಶೆಟ್ಟಿ

Rakshit Shetty Upcoming Movies: ನಟ ನಿರ್ದೇಶಕ ರಕ್ಷಿತ್‌ ಶೆಟ್ಟಿ ಕನ್ನಡ ಚಿತ್ರೋದ್ಯಮ ಮತ್ತು ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಈ ನಡುವೆ ರಿಚರ್ಡ್‌ ಆಂಟನಿ, ಮಿಡ್‌ವೇ ಟು ಮೋಕ್ಷ, ಮತ್ತು ಪುಣ್ಯಕೋಟಿ ಸಿನಿಮಾಗಳ ಬಗ್ಗೆಯೂ ಟೊರೆಂಟೋದಲ್ಲಿ ಕನ್ನಡ ಸಂಘ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.

ಕನ್ನಡ ಚಿತ್ರೋದ್ಯಮ ಮತ್ತು ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಮಾತನಾಡಿದ್ದಾರೆ ರಕ್ಷಿತ್‌ ಶೆಟ್ಟಿ
ಕನ್ನಡ ಚಿತ್ರೋದ್ಯಮ ಮತ್ತು ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಮಾತನಾಡಿದ್ದಾರೆ ರಕ್ಷಿತ್‌ ಶೆಟ್ಟಿ

Raskshit Shetty: ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಸದ್ಯ ಏನು ಮಾಡುತ್ತಿದ್ದಾರೆ? ಅವರ ಮುಂದಿನ ಸಿನಿಮಾ ರಿಚರ್ಡ್‌ ಆಂಟನಿ 2 ವರ್ಷಗಳ ಹಿಂದೆ ಘೋಷಣೆ ಆಗಿದ್ದೇ ಬಂತೇ ವಿನಃ ಇನ್ನೂ ಆ ಸಿನಿಮಾ ಶುರುವಾಗಿಲ್ಲ. ಹೀಗೆ ಬಗೆ ಬಗೆ ಪ್ರಶ್ನೆಗಳು ಸೋಷಿಯಲ್‌ ಮೀಡಿಯಾದ ಮುನ್ನೆಲೆಗೆ ಬಂದಿವೆ. ಹೀಗಿರುವಾಗಲೇ ಕೆನಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಿಷಬ್‌, ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಸ್ಥಿತಿಗತಿ ಜತೆಗೆ, ಕನ್ನಡ ಚಿತ್ರೋದ್ಯಮದ ಬಗ್ಗೆಯೂ ಮಾತನಾಡಿದ್ದಾರೆ. ಒಂದು ಉದ್ಯಮ ಎಂದು ಗುರುತಿಸಿಕೊಳ್ಳುವುದಕ್ಕೆ, ವರ್ಷಕ್ಕೆ 15 ಒಳ್ಳೆಯ ಚಿತ್ರಗಳು ಬೇಕೇ ಬೇಕು, ಒಂದೆರಡು ಚಿತ್ರಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದಿದ್ದಾರೆ ನಟ- ನಿರ್ದೇಶಕ ರಕ್ಷಿತ್‍ ಶೆಟ್ಟಿ.

ರಕ್ಷಿತ್‌ ಶೆಟ್ಟಿ ಗುರಿ ಏನು?

ಕೆನಡಾದ ಟೊರೊಂಟೋ ಕನ್ನಡ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಭಾಗವಹಿಸಿ ಮಾತನಾಡಿದ ಅವರು, ‘ಪರಂವಾ ಸ್ಟುಡಿಯೋಸ್‍ ಬ್ಯಾನರ್ ಅಡಿ ಪ್ರತಿ ವರ್ಷ 10-12 ಸಿನಿಮಾಗಳನ್ನು ನಿರ್ಮಿಸುವುದು ನಮ್ಮ ಗುರಿ. ಒಂದು ಉದ್ಯಮ ಅಂತ ನಾವು ಯಾವಾಗ ಹೇಳಿಕೊಳ್ಳಬಹುದು ಎಂದರೆ, ವರ್ಷಕ್ಕೆ ಕಡಿಮೆ ಎಂದರೂ 15 ಸಿನಿಮಾಗಳು ಯಶಸ್ವಿಯಾಗಬೇಕು. ವರ್ಷಕ್ಕೆ ಎರಡು ಸಿನಿಮಾ ಹಿಟ್‍ ಆದರೆ, ಅದು ಉದ್ಯಮ ಅಂತನಿಸಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ನಾವು ಬಹಳ ಹಿಂದುಳಿದಿದ್ದೇವೆ. ವರ್ಷಕ್ಕೆ ಒಂದೋ ಎರಡೋ ಸಿನಿಮಾಗಳು ಯಶಸ್ವಿಯಾದರೆ, ಮಧ್ಯದಲ್ಲಿ ಒಂದು ಒಳ್ಳೆಯ ಸಿನಿಮಾ ಬಂದರೆ ಅದು ಕಾಣದಿರಬಹುದು. ಜನರಿಗೆ ಒಪ್ಪೊತ್ತೂಟ ಅಭ್ಯಾಸವಾಗಿಬಿಟ್ಟರೆ, ದಿನಕ್ಕೊಂದು ಹೊತ್ತು ಊಟ ನಿರೀಕ್ಷೆ ಮಾಡುತ್ತಾರೆ. ಹೇಗಿದ್ದರೂ ರಾತ್ರಿ ಊಟ ಮಾಡುವುದು ತಾನೆ ಎಂದು ರಾತ್ರಿ ಊಟಕ್ಕೆ ಮಾತ್ರ ಕಾಯುತ್ತಾರೆ’ ಎಂದು ಹೇಳಿದ್ದಾರೆ.

ವರ್ಷಕ್ಕೆ 12 ಸಿನಿಮಾಗಳು ಬೇಕು

ಈ ಕುರಿತು ಮಾತು ಮುಂದುವರೆಸಿದ ರಕ್ಷಿತ್, ‘ಯಾವತ್ತೋ ರಿಷಬ್‌ ಶೆಟ್ಟಿ ಸಿನಿಮಾ ಮಾಡುತ್ತಾರೆ, ಯಶ್‍, ರಕ್ಷಿತ್‍ ಶೆಟ್ಟಿ ಸಿನಿಮಾ ಮಾಡುತ್ತಾರೆ, ಆ ಚಿತ್ರಗಳನ್ನು ಮಾತ್ರ ನಾವು ನೋಡುತ್ತೇವೆ ಅನ್ನೋದು, ಆ ಚಿತ್ರಗಳಿಗಾಗಿ ಮಾತ್ರ ಕಾಯುವುದು ಸರಿಯಲ್ಲ. ಹೊಸಬರ ಸಿನಿಮಾ ಕಾಣಿಸದಿದ್ದರೆ, ಒಳ್ಳೆಯ ಸಿನಿಮಾ ಹಾಳಾಗಿ ಬಿಡುತ್ತವೆ. ಹಾಗಾಗಿ, ತಿಂಗಳಿಗೆ ಒಂದು ಒಳ್ಳೆಯ ಸಿನಿಮಾ ಮಿನಿಮಮ್‍ ಬರಲೇ ಬೇಕು. ಆಗ ಪ್ರೇಕ್ಷಕರಿಗೆ ಒಂದು ಹಸಿವಿರುತ್ತದೆ. ಈ ತಿಂಗಳು ಈ ಸಿನಿಮಾ ನೋಡಿದೆ, ಮುಂದಿನ ತಿಂಗಳೂ ಸಿನಿಮಾ ನೋಡುವುದಕ್ಕೆ ಬಜೆಟ್‍ ಇಡಬೇಕು ಎಂದನಿಸಬೇಕು. ಏಕೆಂದರೆ, ಬೆಂಗಳೂರಿನಲ್ಲಿ ಸಿನಿಮಾ ನೋಡುವವರೆಲ್ಲಾಆ ಬಜೆಟ್‍ ಇಟ್ಟುಕೊಂಡೇ ಸಿನಿಮಾ ನೋಡುತ್ತಾರೆ. ತಿಂಗಳಿಗೆ ಎರಡು ಸಾವಿರ ರೂಗಳನ್ನು ಎತ್ತಿಡುತ್ತೇವೆ ಎಂದು ಯೋಚಿಸಿ, ಅದರಲ್ಲೇ ಸಿನಿಮಾ ನೋಡುವವರು. ಹಾಗಾಗಿ, ನಿರಂತರವಾಗಿ ಸಿನಿಮಾ ಸಪ್ಲೈ ಆಗುತ್ತಿರಬೇಕು. ಹಾಗಾಗಿ, 10-12 ಒಳ್ಳೆಯ ಚಿತ್ರಗಳಾದರೂ ವರ್ಷಕ್ಕೆ ಬರಬೇಕು’ ಎಂದಿದ್ದಾರೆ.

ರಕ್ಷಿತ್‌ ಶೆಟ್ಟಿ ಮುಂದಿನ ಸಿನಿಮಾಗಳು

ಇನ್ನು, ಸುದೀಪ್‍ ಅಭಿನಯದಲ್ಲಿ ‘ಥಗ್ಸ್ ಆಫ್‍ ಮಾಲ್ಗುಡಿ’ ಚಿತ್ರ ನಿರ್ದೇಶಿಸುವ ಆಸೆ ಇದೆ ಎಂದು ರಕ್ಷಿತ್ ಶೆಟ್ಟಿ ಕೆಲವು ವರ್ಷಗಳ ಹಿಂದೆಯೇ ಹೇಳಿದ್ದರು. ಆ ಚಿತ್ರ ಏನಾಯ್ತು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ‘ನನ್ನ ಮುಂದಿನ ಆರು ಸಿನಿಮಾಗಳ ಪಟ್ಟಿಯಲ್ಲಿ, ‘ಥಗ್ಸ್ ಆಫ್‍ ಮಾಲ್ಗುಡಿ’ ಯಾವತ್ತೂ ಇರುತ್ತದೆ. ಆದರೆ, ಯಾವಾಗ ಕೂಡಿಬರುತ್ತದೆ ಎಂದು ನನಗೆ ಇನ್ನೂ ಗೊತ್ತಿಲ್ಲ. ನನ್ನ ಮುಂದಿನ ಮೂರು ಚಿತ್ರಗಳು ‘ರಿಚರ್ಡ್ ಆಂಟನಿ’, ‘ಪುಣ್ಯಕೋಟಿ’ ಮತ್ತು ‘ಮಿಡ್‌ ವೇ ಟು ಮೋಕ್ಷ’ ಚಿತ್ರಗಳಾಗಿರುತ್ತವೆ. ಈ ಚಿತ್ರಗಳನ್ನು ನಾನು ಮೊದಲು ಮುಗಿಸಬೇಕು. ‘ರಿಚರ್ಡ್ ಆಂಟನಿ’ ಶುರುವಾದರೆ, ಒಂದರ ಹಿಂದೊಂದು ಚಿತ್ರಗಳನ್ನು ಸತತವಾಗಿ ಮಾಡುತ್ತೇನೆ ಎಂಬ ನಂಬಿಕೆ ಇದೆ. ಆರು ಸಿನಿಮಗಳಲ್ಲಿ ‘ಥಗ್ಸ್ ಆಫ್‍ ಮಾಲ್ಗುಡಿ’ ಖಂಡಿತಾ ಇದೆ. ಆದರೆ, ಯಾವಾಗ ಶುರುವಾಗುತ್ತದೆ ಎಂಬುದು ಈಗಲೇ ಗೊತ್ತಿಲ್ಲ’ ಎಂದು ಹೇಳಿದ್ದಾರೆ.‌

ವರದಿ: ಚೇತನ್‌ ನಾಡಿಗೇರ್

Whats_app_banner