ಚಿತ್ರರಂಗ ಬಿಟ್ಟು ಟ್ಯಾಕ್ಸಿ ಡ್ರೈವರ್ ಕೆಲಸಕ್ಕೆ ಹೊರಟಿದ್ದ ವಿಷ್ಣುವರ್ಧನ್ ಬಾಳಿಗೆ ಬೆಳಕು ನೀಡಿದ ಸಿನಿಮಾ ಅದು
ಭಾರತಿ ಮದುವೆ ಆದ ನಂತರ ಚೆನ್ನೈನಲ್ಲಿ ಸೆಟಲ್ ಆಗಿದ್ದ ವಿಷ್ಣುವರ್ಧನ್ ಅವರಿಗೆ ಒಂದು ಸಮಯದಲ್ಲಿ ಅವಕಾಶಗಳು ಕಡಿಮೆ ಅದವು. ಆಗ ವಿಷ್ಣು, ಟ್ಯಾಕ್ಸಿ ಡ್ರೈವರ್ ಕೆಲಸ ಮಾಡಲು ಮುಂದಾಗಿದ್ದರು ಎಂದು ಅವರ ಅಳಿಯ ಅನಿರುದ್ಧ್, ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಚಿತ್ರರಂಗ ಅನ್ನೋದು ನೋಡುವವರ ಕಣ್ಣಿಗೆ ಹೂವಿನ ಹಾಸಿಗೆ ಎನಿಸಿದರೂ, ಅದು ಬಹಳಷ್ಟು ಕಲಾವಿದರಿಗೆ ಕಲ್ಲು, ಮುಳ್ಳಿನ ಹಾಸಿಗೆ ಆಗಿರುತ್ತದೆ. ನಟನೆಯಲ್ಲಿ ಸೈ ಎನಿಸಿಕೊಂಡರೂ ಬಹಳಷ್ಟು ಕಲಾವಿದರು ಅವಕಾಶಗಳೇ ಇಲ್ಲದೆ ಚಿತ್ರರಂಗ ಬಿಟ್ಟಿರುವ ಎಷ್ಟೋ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಅಭಿಮಾನಿಗಳಿಂದ ಸಾಹಸಸಿಂಹ, ಅಭಿನಯ ಭಾರ್ಗವ ಎಂದು ಕರೆಸಿಕೊಳ್ಳುತ್ತಿದ್ದ ಡಾ. ವಿಷ್ಣುವರ್ಧನ್ ಕೂಡಾ ಚಿತ್ರರಂಗ ಬಿಡಲು ನಿರ್ಧರಿಸಿದ್ದರಂತೆ, ಈ ವಿಚಾರ ಬಹಳಷ್ಟು ಜನರಿಗೆ ಗೊತ್ತಿಲ್ಲ.
1975ರಲ್ಲಿ ಭಾರತಿ ಕೈ ಹಿಡಿದ ವಿಷ್ಣುವರ್ಧನ್
ಡಾ. ವಿಷ್ಣುವರ್ಧನ್ ವಂಶವೃಕ್ಷ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರೂ ಅವರಿಗೆ ಹೆಸರು ತಂದುಕೊಟ್ಟದ್ದು, ನಾಯಕನಾಗಿ ನಟಿಸಿದ್ದ ನಾಗರಹಾವು ಸಿನಿಮಾ. ಈ ಸಿನಿಮಾ ನಂತರ ವಿಷ್ಣು ಬೂತಯ್ಯನ ಮಗ ಅಯ್ಯು, ದೇವರ ಗುಡಿ, ಕೂಡಿ ಬಾಳೋಣ, ಒಂದೇ ರೂಪ ಎರಡು ಗುಣ, ದೇವರು ಕೊಟ್ಟ ತಂಗಿ, ಸೊಸೆ ತಂದ ಸೌಭಾಗ್ಯ, ಸಹೋದರರ ಸವಾಲ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಾರೆ. 1975 ರಲ್ಲಿ ವಿಷ್ಣುವರ್ಧನ್, ಭಾರತಿ ಅವರನ್ನು ಮದುವೆ ಆಗುತ್ತಾರೆ. ಇದಾದ ನಂತರ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆಗುತ್ತದೆ. ಆ ಸಮಯದಲ್ಲಿ ಕನ್ನಡ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಚೆನ್ನೈನಲ್ಲಿ ನಡೆಯುತ್ತಿದ್ದರಿಂದ ಭಾರತಿ ಹಾಗೂ ವಿಷ್ಣುವರ್ಧನ್ ಕೂಡಾ ಚೆನ್ನೈಗೆ ಶಿಫ್ಟ್ ಆಗಿದ್ದರು.
ಅವಕಾಶ ಇಲ್ಲದೆ ಟ್ಯಾಕ್ಸಿ ಡ್ರೈವರ್ ಆಗಲು ಹೊರಟ ಅಭಿನಯ ಭಾರ್ಗವ
ಸಿನಿಮಾದಲ್ಲಿ ಹೆಚ್ಚು ಅವಕಾಶಗಳು ಇಲ್ಲದ ಕಾರಣ, ವಿಷ್ಣುವರ್ಧನ್ ಕುಟುಂಬಕ್ಕೆ ಹಣಕಾಸಿನ ಪರಿಸ್ಥಿತಿ ಎದುರಾಗುತ್ತದೆ. ಬಹಳ ಯೋಚಿಸಿ, ಭಾರತಿ ಅವರೊಂದಿಗೆ ಚರ್ಚಿಸಿ ವಿಷ್ಣು ಒಂದು ನಿರ್ಧಾರಕ್ಕೆ ಬರುತ್ತಾರೆ. ಇನ್ಮುಂದೆ ಸಿನಿಮಾ ಬೇಡ, ಅದರ ಬದಲಿಗೆ ಟ್ಯಾಕ್ಸಿ ಡ್ರೈವರ್ ಆಗಿ ಕೆಲ ಮಾಡಲು ಮುಂದಾಗುತ್ತಾರೆ. ಒಂದು ದಿನ ಚೆನ್ನೈನಲ್ಲಿ ಟ್ರಾವೆಲ್ ಏಜೆನ್ಸಿಯೊಂದಕ್ಕೆ ತೆರಳಿ ವಾಹನವನ್ನು ರಿಜಿಸ್ಟರ್ ಮಾಡಿ ಬರುತ್ತಾರೆ. ಮರುದಿನದಿಂದ ಟ್ಯಾಕ್ಸಿ ಡ್ರೈವರ್ ಆಗಿ ವಿಷ್ಣು ಕೆಲಸ ಆರಂಭಿಸಬೇಕಿರುತ್ತದೆ. ಆದರೆ ಅದೇ ಸಮಯಕ್ಕೆ ನಿರ್ಮಾಪಕರೊಬ್ಬರು ವಿಷ್ಣುವರ್ಧನ್ ಬಳಿ ಬಂದು ತಮ್ಮ ಚಿತ್ರದಲ್ಲಿ ನಟಿಸಲು ಮನವಿ ಮಾಡಿಕೊಳ್ಳುತ್ತಾರೆ. ಇದೊಂದು ಅವಕಾಶ ಪ್ರಯತ್ನಿಸೋಣ ಎಂದು ವಿಷ್ಣು ಆ ಚಿತ್ರದಲ್ಲಿ ನಟಿಸುತ್ತಾರೆ. ಮುಂದೆ ಅದೇ ಸಿನಿಮಾ ವಿಷ್ಣು ಪಾಲಿಗೆ ಹೊಂಬೆಳಕಾಗಿ ಬರುತ್ತದೆ. ಅದೇ ಹೊಂಬಿಸಿಲು ಚಿತ್ರ.
ವಿಷ್ಣು ಪಾಲಿಗೆ ಬೆಳಕು ತಂದ ಹೊಂಬಿಸಲು ಸಿನಿಮಾ
ಹೊಂಬಿಸಿಲು ಸಿನಿಮಾ ನಂತರ ವಿಷ್ಣುವರ್ಧನ್‌ಗೆ ಹೆಚ್ಚುಚ್ಚು ಅವಕಾಶಗಳು ಒಲಿದು ಬಂದವು. ಇನ್ನೆಂದೂ ಅವರಿಗೆ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಲು ಯೋಚನೆಯೇ ಬರಲಿಲ್ಲ. ಈ ವಿಚಾರವನ್ನು ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಹೊಂಬಿಸಲು ಸಿನಿಮಾ 1978ರಲ್ಲಿ ತೆರೆ ಕಂಡಿತ್ತು. ನಿರುಪಮಾ ಮೂವೀಸ್ ಬ್ಯಾನರ್ ಅಡಿ ತಯಾರಾದ ಸಿನಿಮಾವನ್ನು ಗೀತಪ್ರಿಯ ನಿರ್ದೇಶನ ಮಾಡಿದ್ದರು. ಚಿತ್ರದ ಹಾಡುಗಳಿಗೆ ರಾಜನ್ ನಾಗೇಂದ್ರ ಸಂಗೀತ ನೀಡಿದ್ದರು. ಚಿತ್ರದಲ್ಲಿ ವಿಷ್ಣು ಜೊತೆಗೆ ಆರತಿ, ವೈಶಾಲಿ ಕಾಸರವಳ್ಳಿ, ಲೀಲಾವತಿ, ಉಮಾ ಶಿವಕುಮಾರ್, ಶಿವರಾಂ , ಶಕ್ತಿಪ್ರಸಾದ್ ಹಾಗೂ ಇನ್ನಿತರರು ನಟಿಸಿದ್ದಾರೆ. ಹೊಂಬಿಸಿಲು ಚಿತ್ರದ ಜೀವ ವೀಣೆ..., ಹೂವಿಂದ ಹೂವಿಗೆ.., ಮಾಗಿಯ ಚಳಿಯಲಿ, ನೀರ ಬಿಟ್ಟು ನೆಲದ ಮೇಲೆ...ಹಾಡು ಇಂದಿಗೂ ಫೇಮಸ್.