Sarigama Viji: ಚಾಮರಾಜಪೇಟೆ ಚಿತಾಗಾರದಲ್ಲಿ ನೆರವೇರಿತು ಸರಿಗಮ ವಿಜಿ ಅಂತ್ಯಸಂಸ್ಕಾರ
Sarigama Viji: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಅಂತ್ಯಸಂಸ್ಕಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನೆರವೇರಿತು.

ಸರಿಗಮ ವಿಜಿ ಎಂದೇ ಹೆಸರಾಗಿದ್ದ ಕನ್ನಡದ ಹಿರಿಯ ನಟ ಆರ್. ವಿಜಯ್ ಕುಮಾರ್. ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಕಲಾವಿದ. ಅಷ್ಟೇ ಅಲ್ಲ 80ಕ್ಕೂ ಹೆಚ್ಚು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದವರು. ಜನವರಿ 15ರಂದು ಅವರು ಉಸಿರಾಟದ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ಚಾಮರಾಜ ಪೇಟೆಯ ಟಿ ಆರ್ ಮಿಲ್ ಬಳಿ ಬರುವ ಚೀತಾಗಾರದಲ್ಲಿ ಜನವರಿ 16ರಂದು ಅವರ ಅಂತ್ಯಕ್ರಿಯೆ ನೆರವೇರಿದೆ.
ಚಾಮರಾಜ ಪೇಟೆ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿದೆ. ಅಂತ್ಯ ಸಂಸ್ಕಾರದ ವೇಳೆ ಸಿನಿ ರಂಗದ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಕುಟುಂಬಸ್ಥರಿಗೆ ಸಮಾಧಾನ ಹೇಳಿದ್ದಾರೆ. ಸರಿಗಮ ವಿಜಿ ಹಿರಿಯ ಪುತ್ರ ರೋಹಿತ್ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ.
ಚಾಮರಾಜಪೇಟೆಯ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ
ಬೆಳಗ್ಗೆ 8.30 ಬಳಿಕ ಅವರ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ತೆಗೆದುಕೊಂಡು ಹೋಗಲಾಗಿತ್ತು, ಅಲ್ಲಿ ಸಾಕಷ್ಟು ಜನರಿಗೆ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದರು. 11.30ರ ನಂತರ ಚಾಮರಾಜಪೇಟೆಯ ರುಧ್ರಭೂಮಿಗೆ ಕೊಂಡೊಯ್ಯಲಾಗಿದ್ದು, ಬಲಿಜ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗಿದೆ.
ಸರಿಗಮ ವಿಜಿ ಎಂದು ಕರೆಯಲು ಕಾರಣವೇನು?
ವಿಜಯ್ ಕುಮಾರ್ ಹೇಗೆ ಸರಿಗಮ ವಿಜಿಯಾದರು ಎಂಬ ಕುತೂಹಲವೂ ಎಲ್ಲರಿಗಿದೆ. ಇದಕ್ಕೆ ಕಾರಣ ಏನೆಂಬುದನ್ನು ನಾವಿಲ್ಲಿ ನೀಡಿದ್ದೇವೆ. ವಿಜಯ್ ‘ಸಂಸಾರದಲ್ಲಿ ಸರಿಗಮ’ ಎಂಬ ನಾಟಕವನ್ನು ನಿರ್ದೇಶಿಸಿದ್ದರು. ಈ ನಾಟಕ 1000ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿತ್ತು. ಆ ಕಾರಣದಿಂದ ಅವರನ್ನು ಸರಿಗಮ ವಿಜಿ ಎಂದು ಕರೆಯಲಾಯಿತು. ಸಂಸಾರದಲ್ಲಿ ಸರಿಗಮ, ಅವರು ನಿರ್ದೇಶಿಸಿದ ಮತ್ತು ನಟಿಸಿದ ರಂಗಭೂಮಿ ನಾಟಕ.
ಬೆಂಗಳೂರು, ಹೈದರಾಬಾದ್, ಚೆನ್ನೈ, ದೆಹಲಿ ಮತ್ತು ಮುಂಬೈ. ಅವರ ನಾಟಕ ತಂಡ ಯಶಸ್ವಿ ಪ್ರದರ್ಶನ ನೀಡಿ ಮನೆ ಮಾತಾಗಿತ್ತು. ಈ ನಾಟಕ 1390 ಕ್ಕೂ ಹೆಚ್ಚು ಬಾರಿ ಪ್ರದರ್ಶನಗೊಂಡಿದೆ ಎಂಬ ಮಾಹಿತಿ ಇದೆ. ಮೊದಲ ಬಾರಿ ಇವರು ನಟನಾಗಿ ಕಾಣಿಸಿಕೊಂಡಿದ್ದು ‘ಬೆಳುವಲದ ಮಡಿಲಲ್ಲಿ’ ಎಂಬ ಸಿನಿಮಾದಲ್ಲಿ 1975ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ನಂತರ ಸಾಕಷ್ಟು ಅವಕಾಶಗಳನ್ನು ಬಳಸಿಕೊಂಡು 2018 ರ ಹೊತ್ತಿಗೆ ಅವರು ಕನ್ನಡದಲ್ಲಿ ಸುಮಾರು 269 ಚಿತ್ರಗಳಲ್ಲಿ ಅಭಿನಯಿಸಿದ್ದರು. 80 ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸಮಾಡಿದ್ದರು.
ಕಿರುತೆರೆಯಲ್ಲೂ ನಟಿಸಿದ್ದ ವಿಜಿ
ಜೀ ಕನ್ನಡದಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ ರಿಯಾಲಿಟಿ ಶೋದಲ್ಲಿ ಇವರು ನಿರ್ಣಾಯಕರಾಗಿದ್ದರು. ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು. ಖಳನಾಯಕನಾಗಿ, ಹಾಸ್ಯ ನಟನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಇವರು ಅಭಿನಯಿಸಿದ್ದರು. ಸಾಕಷ್ಟು ಜನರಿಗೆ ಇವರು ತಮ್ಮ ವಿಶಿಷ್ಟ ಅಭಿನಯದ ಮೂಲಕವೇ ಚಿರ ಪರಿಚಿತರು.
