ನಾವ್ಯಾಕೋ ಈ ವಿಷಯದಲ್ಲಿ ವಸಿಷ್ಠ ಸಿಂಹ ಅವರ ಬೆಳವಣಿಗೆಯನ್ನು ಸರಿಯಾಗಿ ಗ್ರಹಿಸಲಿಲ್ಲ; ವೀರಕ ಪುತ್ರ ಶ್ರೀನಿವಾಸ್
Vasishta simha Birthday: ಪ್ರತಿ ಸೋಲಿನ ನಂತರವೂ ವಸಿಷ್ಠ ಸಿಂಹ ಮತ್ತಷ್ಟು ಗಟ್ಟಿಯಾಗಿ ಪುಟಿಯವ ಪ್ರಯತ್ನ ಮಾಡುವಾಗ ಖುಷಿಯಾಗುತ್ತದೆ. ಯಾವುದೇ ಗಾಡ್ ಫಾದರ್ ಗಳಿಲ್ಲದೆ ತನ್ನನ್ನು ತಾನೇ ವಿಸ್ತರಿಸಿಕೊಂಡು ಸಾಗುವಾಗ ಹೆಮ್ಮೆ ಎನಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಅವರ ವೈಯಕ್ತಿಕ ಬದುಕು ಮಾದರಿ ಎನಿಸುತ್ತದೆ ಎಂಬುದು ವೀರಕ ಪುತ್ರ ಶ್ರೀನಿವಾಸ್ ಅವರ ಮಾತು.

Vasishta simha Birthday: ಸ್ಯಾಂಡಲ್‌ವುಡ್ ಮಾತ್ರವಲ್ಲದೆ, ಸೌತ್‌ನ ತೆಲುಗು ಮತ್ತು ತಮಿಳಿನಲ್ಲಿಯೂ ಮೋಡಿ ಮಾಡುತ್ತಿದ್ದಾರೆ ಕಂಚಿನ ಕಂಠದ ನಟ ವಸಿಷ್ಟ ಸಿಂಹ. ಕನ್ನಡದಲ್ಲಿ ನಾಯಕನಾಗಿ ನಟಿಸುತ್ತಿದ್ದರೆ, ತೆಲುಗು, ತಮಿಳಿನಲ್ಲಿ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಇದೀಗ ಇದೇ ನಟ ಇಂದು (ಅಕ್ಟೋಬರ್ 20) ತಮ್ಮ 36ನೇ ವರ್ಷದ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೀರಕಪುತ್ರ ಶ್ರೀನಿವಾಸ್ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ನಟನ ಬಗ್ಗೆ ವಿಶೇಷ ಬರಹವೊಂದನ್ನು ಪ್ರಕಟಿಸಿದ್ದಾರೆ. ಇಲ್ಲಿದೆ…
ಹಿಂದೊಮ್ಮೆ ಒಬ್ಬ ಹಿರಿಯ ನಟರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ಒಂದು ಕಾಲಕ್ಕೆ ಅವರು ಯಶಸ್ವಿ ಹೀರೋ. ಕಾಲಚಕ್ರ ಉರುಳಿ ಅವರಾಗ ನಿರುದ್ಯೋಗಿ! ಭಾಷಣಕ್ಕೆ ನಿಂತ ಅವರಿಗೆ ತನ್ನ ಕಷ್ಟಗಳನ್ನು ಹೇಳಿಕೊಳ್ಳಲು ಅಂತಹ ಖುಷಿ ಇದ್ದಂತೇನೂ ಇರಲಿಲ್ಲ. ಬಹುಶಃ ಈಗಿನ ಹಾಗೆ ಯೂಟ್ಯೂಬ್ ಇದ್ದಿದ್ದರೆ ನೋವಿನ ಕಥೆಗಳನ್ನು ಹೇಳಿಕೊಳ್ಳುತ್ತಿದ್ದರೋ ಏನೋ? ಕನ್ನಡಿಗರು ನೀಡಿದ ಪ್ರೀತಿ, ಆಶೀರ್ವಾದದಿಂದ ನಾನೀಗ ತೆಲುಗು ಮತ್ತು ತಮಿಳಿಗೆ ಹೊರಟಿದ್ದೇನೆ. ದೊಡ್ಡ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ನನ್ನ ಜೀವನದ ಇಷ್ಟು ದೊಡ್ಡ ವಿಷಯವನ್ನು ನಿಮ್ಮ ಜೊತೆಯೇ ಮೊದಲು ಹಂಚಿಕೊಂಡಿದ್ದು ಅಂತ ಹೇಳಿ ಶಿಳ್ಳೆ, ಚಪ್ಪಾಳೆಗೆ ಪಾತ್ರರಾದರು. ಆದರೆ ಅವರು ಹೇಳಿದಂತೆ, ಇಷ್ಟು ವರ್ಷಗಳಲ್ಲಿ ಅವರನ್ನು ನಾನು ಯಾವ ಪರಭಾಷೆ ಚಿತ್ರದಲ್ಲೂ ನೋಡಲಿಲ್ಲವೆಂಬುದು ಒಂದು ಉದಾಹರಣೆ ಮಾತ್ರ.
ಕಳೆದ ಒಂದೆರಡು ದಶಕದಲ್ಲಿ ಇಂತಹ ನೂರೆಂಟು ಕಥೆಗಳನ್ನು ನಾವು ಕಂಡಿದ್ದೇವೆ. ಕನ್ನಡದ ನಟರು, ಪರಭಾಷೆಯ ಸ್ಟಾರ್ ನಟರ ಜೊತೆ ನಟಿಸಿದಾಗಲೆಲ್ಲಾ ನಾವು ಅದನ್ನು ಬ್ರೇಕಿಂಗ್ ನ್ಯೂಸ್ ಮಾಡಿದ್ದೇವೆ. ಹೆಮ್ಮೆ ಎಂಬಂತೆ ಮಾತನಾಡಿದ್ದೇವೆ. ಅದಕ್ಕೂ ಮೊದಲಿನ ದಶಕಗಳಲ್ಲಿ ಅನಿಲ್ ಕಪೂರ್, ರಜನಿಕಾಂತ್, ಚಿರಂಜೀವಿ ಅವರುಗಳು ಕನ್ನಡಕ್ಕೆ ಬಂದು ಹೋಗಿದ್ದರು ಎಂಬ ಘನತೆ ಕನ್ನಡ ಚಿತ್ರರಂಗದ್ದು ಎಂಬುದನ್ನು ಮರೆತು ಸಂಭ್ರಮಿಸಿದ್ದೇವೆ. ಈಗ ಕಾಲ ಬದಲಾಗಿ ನಾವು ಅವರುಗಳ ಭಾಷೆಗಳಿಗೇ ಹೋಗಿ ಬರುತ್ತಿದ್ದೇವೆ ಎಂಬ ದುಃಖ ಮರೆತೂ ಸಂಭ್ರಮಿಸಿದ್ದೇವೆ. ಇರಲಿ… ಅದರ ಸರಿ, ತಪ್ಪುಗಳ ಪೋಸ್ಟ್ ಮಾರ್ಟಂ ಮಾಡುವುದು ನನಗೆ ಮುಜುಗರ ಮತ್ತು ಬೇಸರದ ಸಂಗತಿಯಾದ್ದರಿಂದ ಅದನ್ನು ಅಲ್ಲಿಗೇ ಬಿಡುತ್ತೇನೆ. ವಲಸೆ ಹೋಗಿ ನಟಿಸಿ ಬರುವುದು ಒಂದು ಪ್ರಮುಖ ವಿದ್ಯಮಾನವಾದರೂ, ನಮ್ಮವರು ಮತ್ತೊಂದು ಚಿತ್ರರಂಗದ ಭಾಗವೇ ಆಗುವಂತೆ ಬೆಳೆದಿದ್ದು ಮತ್ತೊಂದು ಮಹತ್ವದ ವಿದ್ಯಮಾನ. ರಜನಿಕಾಂತ್, ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಪ್ರಕಾಶ್ ರೈ ತರಹದ ಇನ್ನೂ ಅನೇಕರನ್ನು ಈ ಮಾತಿಗೆ ಉದಾಹರಣೆಯಾಗಿ ಕೊಡಬಹುದು.
ಮನೋಜ್ಞ ಅಭಿನಯ, ಕಂಚಿನಕಂಠ ಮತ್ತು ಆಂಗ್ರಿ ಯಂಗ್ ಮ್ಯಾನ್ ಎಂದೇ ಖ್ಯಾತರಾಗಿರುವ ನಮ್ಮ ವಸಿಷ್ಠ ಸಿಂಹ ಅವರು ಇದೇ ಹಾದಿಯಲ್ಲಿದ್ದಾರಾ ಅಂತನ್ನಿಸಿ ಮೇಲಿನ ಮಾತುಗಳನ್ನು ಹೇಳಬೇಕಾಯಿತು. ಹೌದು… ವಸಿಷ್ಠ ಈ ಒಂದೆರಡು ವರ್ಷದಲ್ಲಿ ಅಂತಹದ್ದೊಂದು ಭರವಸೆಯನ್ನು ಮೂಡಿಸಿದ್ದಾರೆ. ಪ್ರಕಾಶ್ ರೈ ಅವರ ನಂತರ ತೆಲುಗು ಚಿತ್ರಸೀಮೆಯನ್ನು ಆವರಿಸಿಕೊಳ್ಳಬಲ್ಲ ನಟರಾಗಿ ಅವರು ಹೊರಹೊಮ್ಮುತ್ತಿರುವುದು ನಿಚ್ಚಳವಾಗಿ ಕಾಣುತ್ತಿದೆ. ವಿಕ್ಟರಿ ವೆಂಕಟೇಶ್ ಅವರ ಜೊತೆ ವಿಲನ್ ಆಗಿ ನಾರಯ್ಯ ಸಿನಿಮಾದಲ್ಲಿ ಅವರ ಅಭಿನಯ ತೆಲುಗಿನವರ ಅಪಾರ ಪ್ರಶಂಸೆಗೆ ಪಾತ್ರವಾಗಿತ್ತು. ಅಲ್ಲು ಅರ್ಜುನ್ ಅವರ ಆಹಾ ಎಂಬ ಓಟಿಟಿ ಇದೆ. ಅಲ್ಲಿ ಅತಿಹೆಚ್ಚು ವೀಕ್ಷಣೆಕಂಡ ಸಿನಿಮಾ ಓಡೆಲಾ ರೈಲ್ವೇ ಸ್ಟೇಶನ್. ಅದರ ಲೀಡ್ ರೋಲ್ ಸಹ ನಮ್ಮ ವಸಿಷ್ಠ ಸಿಂಹ ಅವರದ್ದೇ. ಅಪರೂಪದ ಕಥೆಗಳನ್ನು ಆಯ್ಕೆ ಮಾಡಿಕೊಂಡು ನಟಿಸುವ ನಟ ನಂದಮೂರಿ ಕಲ್ಯಾಣ್ ರಾಮ್ ಅವರ ಡೆವಿಲ್ ಸಿನಿಮಾದಲ್ಲಿ ನಮ್ಮ ವಸಿಷ್ಠ ಅವರೇ ಪ್ರಮುಖ ಆಕರ್ಷಣೆ. ಈಗ ಓಡೆಲಾ 2 ನಲ್ಲಿ ತಮನ್ನಾ ಅವರು ವಸಿಷ್ಠ ಅವರ ಜೊತೆ ನಟಿಸುತ್ತಿದ್ದಾರೆ.
ಇವು ಕೇವಲ ಕೆಲವು ಸಿನಿಮಾಗಳ ಮಾತಷ್ಟೇ. ಇದಕ್ಕೂ ಮೀರಿದ ಚಿತ್ರಗಳು ವಸಿಷ್ಠ ಅವರ ತೆಲುಗು ಖಾತೆಯಲ್ಲಿವೆ. ತೆಲುಗು ಸಿನಿಮಾರಂಗದ ನನ್ನ ಕೆಲವು ಪರಿಚಿತರು ಸಹ ವಸಿಷ್ಠ ಅವರ ಬಗ್ಗೆ ಮಾತನಾಡುವುದನ್ನು ಕೇಳಿದಾಗ ಹೆಮ್ಮೆ ಎನಿಸುತ್ತದೆ. ನಿಧಾನಕ್ಕೆ ಅವರು ತೆಲುಗಿನವರ ಮೆಚ್ಚಿನ ನಟರಾಗುತ್ತಿದ್ದಾರೆ. ಇತ್ತ ಕನ್ನಡದಲ್ಲಿ ಹೀರೋ ಪಾತ್ರಗಳಲ್ಲಿ ಅಭಿನಯಿಸುತ್ತಲೇ ಅತ್ತ ವಿಲನ್ ಪಾತ್ರಗಳಲ್ಲಿ ಮಿಂಚು ಹರಿಸುತ್ತಿರುವ ಅವರ ನಡೆ ಮೆಚ್ಚುವಂತಹುದ್ದೇ. ಆದರೆ ನಾವ್ಯಾಕೋ ಈ ವಿಷಯದಲ್ಲಿ ವಸಿಷ್ಠ ಅವರ ಬೆಳವಣಿಗೆಯನ್ನು ಸರಿಯಾಗಿ ಗ್ರಹಿಸಲಿಲ್ಲ ಅಂತಲೇ ನನಗನ್ನಿಸುತ್ತೆ.
ಕನ್ನಡದಲ್ಲಿ ಹೀರೋ ಪಾತ್ರಗಳಲ್ಲಿ ಅವರಿಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲವಾದರೂ ಪ್ರಯತ್ನವಂತೂ ದೊಡ್ಡಮಟ್ಟದಲ್ಲಿಯೇ ಇದೆ. ಕಳೆದ ಒಂದೆರಡು ತಿಂಗಳ ಹಿಂದೆ ಬಿಡುಗಡೆಗೊಂಡ ಅವರ ಲವ್ ಲೀ ಸಿನಿಮಾ ಒಂದೊಳ್ಳೆ ಪ್ರಯತ್ನ. ಕಥೆ, ಅಭಿನಯ, ಮೇಕಿಂಗ್, ತಾರಾಗಣ ಎಲ್ಲವೂ ಸೂಪರ್ ಆಗಿ, ಚಿತ್ರಕಥೆಯಲ್ಲಿ ಎಡವಿದ ಸಿನಿಮಾ ಅದು. ಆದರೂ ನೋಡಲಡ್ಡಿಯಿಲ್ಲ; ಅಮೇಜಾನ್ ಪ್ರೈಮ್ ನಲ್ಲಿ ಆ ಸಿನಿಮಾ ಇದೆ ಅಂದರೆ ಕೆಟ್ಟ ಸಿನಿಮಾವಂತೂ ಆಗಿರಲಾರದು ಅಲ್ಲವೇ. ಅವರ ಕೆಲವು ಸಿನಿಮಾಗಳು ನಿರಾಸೆ ಮಾಡಿದ್ದರೂ ವಸಿಷ್ಠ ಅವರು ನಿರಾಸೆ ಮಾಡಿಲ್ಲ.
ಪ್ರತಿ ಸೋಲಿನ ನಂತರವೂ ಅವರು ಮತ್ತಷ್ಟು ಗಟ್ಟಿಯಾಗಿ ಪುಟಿಯವ ಪ್ರಯತ್ನ ಮಾಡುವಾಗ ಖುಷಿಯಾಗುತ್ತದೆ. ಯಾವುದೇ ಗಾಡ್ ಫಾದರ್ ಗಳಿಲ್ಲದೆ ತನ್ನನ್ನು ತಾನೇ ವಿಸ್ತರಿಸಿಕೊಂಡು ಸಾಗುವಾಗ ಹೆಮ್ಮೆ ಎನಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಅವರ ವೈಯಕ್ತಿಕ ಬದುಕು ಮಾದರಿ ಎನಿಸುತ್ತದೆ. ಯಾವುದೇ ವಿವಾದವಿಲ್ಲದೆ, ವಿನಾಕಾರಣ ಸುದ್ದಿಯಾಗುವ ಹಪಾಹಪಿಯಿಲ್ಲದೆ, ತಾನಾಯಿತು ತನ್ನ ಪಾಡಾಯಿತು ಅಂತ ಚಿತ್ರಗಳಲ್ಲಿ ನಟಿಸುತ್ತಾ, ಸಿಂಹಿಣಿ ಜೊತೆ ಸಂಸಾರದ ತೇರನ್ನೆಳೆಯುವಾಗ ಇಂತಹವರ ಸಂಖ್ಯೆ ಹೆಚ್ಚಾಗಲಿ ಎಂದು ಮನಸು ಆಶಿಸುತ್ತದೆ. ಜನ್ಮದಿನದ ಶುಭಾಶಯಗಳು ಸರ್…" ಎಂದು ವೀರಕಪುತ್ರ ಶ್ರೀನಿವಾಸ್ ಪೋಸ್ಟ್ ಮಾಡಿದ್ದಾರೆ.
