ಚಿತ್ರಮಂದಿರಕ್ಕೆ ಬರಲು ರೆಡಿಯಾಯ್ತು ದಿನಕರ್ ತೂಗುದೀಪ ನಿರ್ದೇಶನದ ಸಿನಿಮಾ; ಜನವರಿಯಲ್ಲಿ ‘ರಾಯಲ್’ ವಿರಾಟರೂಪ
ದಿನಕರ್ ತೂಗುದೀಪ ನಿರ್ದೇಶನದಲ್ಲಿ ಮೂಡಿಬಂದಿರುವ ರಾಯಲ್ ಸಿನಿಮಾ ಈಗಾಗಲೇ ಹಾಡುಗಳ ಮೂಲಕ ಮೋಡಿ ಮಾಡುತ್ತಿದೆ. ಇದೀಗ ಇದೇ ಸಿನಿಮಾ ಚಿತ್ರಮಂದಿರಗಳಿಗೆ ಬರಲು ಅಣಿಯಾಗಿದೆ. ವಿರಾಟ್- ಸಂಜನಾ ನಟನೆಯ ಈ ಸಿನಿಮಾ ಜನವರಿಯಲ್ಲಿ ಬಿಡುಗಡೆ ಆಗಲಿದೆ.
Royal Movie: ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿ ಜಯಣ್ಣ ಮತ್ತು ಭೋಗೇಂದ್ರ ಜೊತೆಯಾಗಿ ನಿರ್ಮಿಸಿರುವ, ದಿನಕರ್ ತೂಗುದೀಪ ನಿರ್ದೇಶನದಲ್ಲಿ ವಿರಾಟ್ ಅಭಿನಯಿಸಿರುವ ‘ರಾಯಲ್’ ಚಿತ್ರವು ಜನವರಿ 24ರಂದು ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಇದಕ್ಕೂ ಮೊದಲು ಚಿತ್ರದ ಮೂರು ಹಾಡುಗಳು ಬಿಡುಗಡೆಯಾಗಿದ್ದು, ಸದ್ಯದಲ್ಲೇ ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ. ಅದಕ್ಕೂ ಮೊದಲು ಚಿತ್ರತಂಡದವರು ಮೊದಲ ಪತ್ರಿಕಾಗೋಷ್ಠಿ ಮಾಡಿ, ಚಿತ್ರದ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ರಾಯಲ್ ಚಿತ್ರದ ಬಗ್ಗೆ ದಿನಕರ್ ಹೇಳುವುದೇನು?
‘ರಾಯಲ್’ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ದಿನಕರ್ ತೂಗುದೀಪ, ‘ಚಿತ್ರದ ಹಾಡುಗಳು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿವೆ. ಚಿತ್ರ ಚೆನ್ನಾಗಿ ಮೂಡಿಬರುವುದಕ್ಕೆ ಕಾರಣ ಕಥೆಗಾರ ರಘು ನಿಡುವಳ್ಳಿ. ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ. ತಂತ್ರಜ್ಞರ ಸಹಕಾರದಿಂದ ಬಹಳ ಚೆನ್ನಾಗಿ ಮೂಡಿಬಂದಿದೆ. ನಿರ್ಮಾಪಕರು ನಾನು ಕೇಳಿದ್ದೆಲ್ಲವನ್ನೂ ಕೊಟ್ಟಿದ್ದಾರೆ. ಈ ಚಿತ್ರದಿಂದ ದುಡ್ಡು ಮಾಡಬೇಕು ಎನ್ನುವುದಕ್ಕಿಂತ, ಚಿತ್ರರಂಗಕ್ಕೊಬ್ಬ ಒಳ್ಳೆಯ ಹೀರೋ ಕೊಡಬೇಕು ಎಂದು ಸಹಕಾರ ಕೊಟ್ಟರು. ವಿರಾಟ್ ಎರಡನೆಯ ಸಿನಿಮಾಗೆ ಇಷ್ಟೊಂದು ಖರ್ಚು ಮಾಡಬೇಕಿತ್ತಾ ಎಂದನಿಸಬಹುದು. ಆದರೆ, ವಿರಾಟ್‍ನನ್ನು ಕೊಡುಗೆಯಾಗಿ ಕೊಡಬೇಕು ಎಂಬ ಉದ್ದೇಶದಿಂದ ಚಿತ್ರ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಗೋವಾ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಜನವರಿ ಎರಡನೇ ವಾರದಲ್ಲಿ ಟ್ರೇಲರ್ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.
ಈ ಅವಕಾಶ ಸಿಕ್ಕಿದ್ದೇ ನನ್ನ ಪುಣ್ಯ
ಈ ಹಿಂದೆ ‘ಕಿಸ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಪರಿಚಿತರಾದ ವಿರಾಟ್, ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ‘ಈ ಚಿತ್ರ ಆಗುವುದಕ್ಕೆ ಪ್ರಮುಖ ಕಾರಣ ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ. ಅವರ ಬ್ಯಾನರ್‌ನಲ್ಲಿ ನನಗೆ ಇದು ಎರಡನೆಯ ಸಿನಿಮಾ. ದಿನಕರ್ ಅವರ ನಿರ್ದೇಶನದಲ್ಲಿ ಅಭಿನಯ ಮಾಡುವುದಕ್ಕೆ ನನಗೆ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಚಿತ್ರ ನಿಜಕ್ಕೂ ರಾಯಲ್ ಆಗಿ ಬಂದಿದೆ. ಚಿತ್ರದಲ್ಲಿ ಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದಾರೆ. ಚಿತ್ರದ ಮೂರು ಹಾಡುಗಳು ಯಶಸ್ವಿಯಾಗಿವೆ’ ಎಂದರು.
ಚಿತ್ರದ ನಾಯಕಿಯಾಗಿ ಅಭಿನಯಿಸಿರುವ ಸಂಜನಾ ಮಾತನಾಡಿ, ‘ಚಿತ್ರ ಚೆನ್ನಾಗಿ ಬಂದಿದೆ. ಹಾಡುಗಳು ಯಶಸ್ವಿಯಾಗಿವೆ. ದಿನಕರ್ ಅವರ ಚಿತ್ರಗಳನ್ನು ಎಲ್ಲರೂ ನೋಡಿದ್ದಾರೆ. ಇಷ್ಟಪಟ್ಟಿದ್ದಾರೆ. ಅವರ ಚಿತ್ರಜೀವನದಲ್ಲೇ ಇದು ವಿಭಿನ್ನವಾದ ಚಿತ್ರ. ಇನ್ನು, ಇದು ನನ್ನ ಅತ್ಯಂತ ವಿಶೇಷವಾದ ಚಿತ್ರ. ಬಹಳ ಚೆನ್ನಾಗಿ ಮೂಡಿಬಂದಿದೆ. ಚಿತ್ರದಲ್ಲಿ ಹಲವು ಸರ್ಪ್ರೈಸ್‌ಗಳಿವೆ. ಹೊಸ ವರ್ಷಕ್ಕೆ ಒಂದು ವಿಶೇಷ ಚಿತ್ರವಾಗಲಿದೆ’ ಎಂದರು.
ಪಾತ್ರವರ್ಗ, ತಾಂತ್ರಿಕ ಬಳಗ ಹೇಗಿದೆ?
‘ರಾಯಲ್’ ಚಿತ್ರದಲ್ಲಿ ವಿರಾಟ್ ಮತ್ತು ಸಂಜನಾ ಆನಂದ್ ಜೊತೆಗೆ ರಘು ಮುಖರ್ಜಿ, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ರವಿ ಭಟ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಸಂಕೇತ್ ಛಾಯಾಗ್ರಹಣ, ಚರಣ್ ರಾಜ್ ಸಂಗೀತ, ಕೆ.ಎಂ. ಪ್ರಕಾಶ್ ಸಂಕಲನ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ, ರವಿ ವರ್ಮ ಸಾಹಸ ನಿರ್ದೇಶನವಿದೆ. ಪ್ರೇಮ್ ಮತ್ತು ಜಯಂತ್ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope