Yash: ನನ್ನ ಮನಸ್ಸಿಗೆ ಮತ್ತೆ ನೋವು ಮಾಡಬೇಡಿ; ಫ್ಯಾನ್ಸ್ ಬಳಿ ಅಂಗಲಾಚಿದ ನಟ ಯಶ್, ಹೀಗಿದೆ ಕಾರಣ
Actor Yash: ಜನವರಿ 8ರಂದು ತಮ್ಮ ಹುಟ್ಟುಹಬ್ಬಕ್ಕೂ ಮುನ್ನವೇ ರಾಕಿಂಗ್ ಸ್ಟಾರ್ ಯಶ್ ಅವರು ಅಭಿಮಾನಿಗಳಿಗೆ ವಿಶೇಷ ಸಂದೇಶ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಈ ವರ್ಷವೂ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
Yash Birthday: ಹೊಸ ವರ್ಷಕ್ಕೂ ಮುನ್ನವೇ ತಮ್ಮ ಹುಟ್ಟುಹಬ್ಬದ (ಜನವರಿ 8) ಕುರಿತು ರಾಕಿಂಗ್ ಸ್ಟಾರ್ ಯಶ್, ಅಭಿಮಾನಿಗಳಿಗೆ ವಿಶೇಷ ಸಂದೇಶವೊಂದನ್ನು ರವಾನಿಸಿದ್ದಾರೆ. ಆದರೆ, ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ಈ ಸಂದೇಶ ನಿರಾಸೆ ತಂದಿದೆ. ಪ್ರಸ್ತುತ ಟಾಕ್ಸಿಕ್ ಸಿನಿಮಾ ಶೂಟಿಂಗ್‌ನಲ್ಲಿ ನಿರತರಾಗಿರುವ ಯಶ್, ತಮ್ಮ ಜನ್ಮದಿನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಪತ್ರವೊಂದನ್ನು ಹಂಚಿಕೊಳ್ಳುವ ಮೂಲಕ ಫ್ಯಾನ್ಸ್ಗೆ ಮನವಿ ಮಾಡಿಕೊಂಡಿದ್ದಾರೆ. ಈ ಬಾರಿಯೂ ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿರುವ ಯಶ್, ಸಿನಿಮಾ ಶೂಟಿಂಗ್ ಕಾರಣ ನಾನು ಊರಿನಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ನನ್ನ ಮನಸ್ಸಿಗೆ ಮತ್ತೆ ನೋವು ಮಾಡಬೇಡಿ ಎಂದು ಫ್ಯಾನ್ಸ್ ಬಳಿ ಅಂಗಲಾಚಿದ ನಟ, ಸುರಕ್ಷತೆಗೆ ಒತ್ತು ನೀಡುವಂತೆ ಕೋರಿದ್ದಾರೆ.
ಅವರು ಹಂಚಿಕೊಂಡಿರುವ ಪತ್ರದಲ್ಲಿ ಏನಿದೆ?
ಅವರು ಹಂಚಿಕೊಂಡ ಪತ್ರದಲ್ಲಿ, "ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಯೊಂದಿಗೆ ನಗು ನಗುತ್ತಾ ಬದುಕೋಣ ಬದುಕನ್ನು ಮೆರಗು ಗೊಳಿಸುವಂತ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಸಿನಿಮಾ ಕೆಲಸದ ನಿಮಿತ್ತ ನಾನು ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟು ಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ಧಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಫ್ಲೆಕ್ಸ್, ಬ್ಯಾನರ್‌ಗಳ ಯಾವುದೇ ಆಡಂಬರ ಮಾಡದೇ ನನ್ನ ಮನಸಿಗೆ ನೋವಾಗುವ ನಡವಳಿಕೆ ತೋರದೆ ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದಾದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ಇನ್ನೊಂದಿಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲ ಭೇಟಿಯಾಗುತ್ತೇನೆ" ಎಂದು ತಿಳಿಸಿದ್ದಾರೆ.
ಹಿಂದಿನ ವರ್ಷದ ಕಹಿ ನೆನಪು
ಕಳೆದ ವರ್ಷ ಜನವರಿ 8ರಂದು ಯಶ್ ಅವರ ಹುಟ್ಟುಹಬ್ಬಕ್ಕೆ ಬ್ಯಾನರ್ ಅಳವಡಿಸುವ ವೇಳೆ ಮೂವರು ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ಘಟನೆಯಿಂದ ಯಶ್ ಅವರಿಗೆ ತೀವ್ರ ನೋವಾಗಿತ್ತು. ಆ ಕಹಿ ಘಟನೆ ನಡೆದು ಒಂದು ವರ್ಷವಾದರೂ ಮರೆಯದ ಯಶ್, ಮತ್ತೆ ಅಂತಹ ಘಟನೆಗಳು ಸಂಭವಿಸದಿರಲಿ ಎಂಬುದು ಕಾಳಜಿ ತೋರಿದ್ದಾರೆ. “ದಯವಿಟ್ಟು ನಿಮ್ಮ ಪ್ರೀತಿಯನ್ನು ಹೀಗೆ ತೋರಿಸಬೇಡಿ. ನಾನು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ. ಬ್ಯಾನರ್ ಹಾಕಬೇಡಿ, ಬೈಕ್ ಚೇಸ್ ಮಾಡಬೇಡಿ ಮತ್ತು ಅಪಾಯಕಾರಿ ಸೆಲ್ಫಿ ತೆಗೆದುಕೊಳ್ಳಬೇಡಿ" ಎಂದು ಈ ಹಿಂದೆ ಕೂಡ ಹೇಳಿದ್ದರು. ಮಾಧ್ಯಮವೊಂದರ ಸಂದರ್ಶನದಲ್ಲಿ ಯಶ್, ‘ನೀವು ನನ್ನ ನಿಜವಾದ ಅಭಿಮಾನಿಯಾಗಿದ್ದರೆ, ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ, ನಿಮ್ಮ ಜೀವನವನ್ನು ನಿಮಗಾಗಿ ಅರ್ಪಿಸಿಕೊಂಡು ಸಂತೋಷವಾಗಿರಿ’ ಎಂದು ಈ ಹಿಂದೆ ಹೇಳಿದ್ದರು. ಅದೇ ರೀತಿ ಅವರು ಈಗಲೂ ಅಭಿಮಾನಿಗಳು ಜವಾಬ್ಧಾರಿಯುತವಾಗಿ ನಡೆದುಕೊಳ್ಳಲಿ ಎಂದೇ ಬಯಸುತ್ತಿದ್ದಾರೆ.
ಟಾಕ್ಸಿಕ್ ಸಿನಿಮಾ ಶೂಟಿಂಗ್
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಟಾಕ್ಸಿಕ್ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೀರ್ಷಿಕೆ ಟೀಸರ್ ಮೂಲಕ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಈ ಸಿನಿಮಾದಲ್ಲಿ ಬಾಲಿವುಡ್ ಮತ್ತು ಸೌತ್‌ನ ಸಾಕಷ್ಟು ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಯಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.