ಸಿದ್ಲಿಂಗು 2 ಚಿತ್ರದ ‘ಚುರುಮುರಿ’ ಹಾಡು ಬಿಡುಗಡೆ ಮಾಡಿ, ಸೋದರಳಿಯ ಯೋಗಿಗೆ ಶುಭ ಹಾರೈಸಿದ ದುನಿಯಾ ವಿಜಯ್‌
ಕನ್ನಡ ಸುದ್ದಿ  /  ಮನರಂಜನೆ  /  ಸಿದ್ಲಿಂಗು 2 ಚಿತ್ರದ ‘ಚುರುಮುರಿ’ ಹಾಡು ಬಿಡುಗಡೆ ಮಾಡಿ, ಸೋದರಳಿಯ ಯೋಗಿಗೆ ಶುಭ ಹಾರೈಸಿದ ದುನಿಯಾ ವಿಜಯ್‌

ಸಿದ್ಲಿಂಗು 2 ಚಿತ್ರದ ‘ಚುರುಮುರಿ’ ಹಾಡು ಬಿಡುಗಡೆ ಮಾಡಿ, ಸೋದರಳಿಯ ಯೋಗಿಗೆ ಶುಭ ಹಾರೈಸಿದ ದುನಿಯಾ ವಿಜಯ್‌

ಚಂದನವನದ ನಟ ಯೋಗಿ ಮತ್ತು ನಟಿ ಸೋನು ಗೌಡ ನಟನೆಯ ಸಿದ್ಲಿಂಗು 2 ಚಿತ್ರದ ಹಾಡೊಂದನ್ನು ದುನಿಯಾ ವಿಜಯ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಸಿದ್ಲಿಂಗು 2 ಚಿತ್ರದ ಹಾಡು ಬಿಡುಗಡೆ ಮಾಡಿದ ದುನಿಯಾ ವಿಜಯ್
ಸಿದ್ಲಿಂಗು 2 ಚಿತ್ರದ ಹಾಡು ಬಿಡುಗಡೆ ಮಾಡಿದ ದುನಿಯಾ ವಿಜಯ್

‌Sidlingu 2: ನಟ ಯೋಗಿ ಅಭಿನಯದ ಮತ್ತು ವಿಜಯಪ್ರಸಾದ್‍ ನಿರ್ದೇಶನದ ಬಹುನಿರೀಕ್ಷಿತ ‘ಸಿದ್ಲಿಂಗು 2’ ಚಿತ್ರ ಇನ್ನೇನು ಫೆಬ್ರವರಿ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಹಿಂದಿನ ಸಿದ್ಲಿಂಗು ಸಿನಿಮಾದ ಯಶಸ್ಸಿನ ಬಳಿಕ ಇದೀಗ ಅದೇ ಚಿತ್ರದ ಮುಂದುವರಿದ ಭಾಗವಾಗಿ ಸಿದ್ಲಿಂಗು 2 ಬರುತ್ತಿದೆ. ಇದೇ ಚಿತ್ರದ ಪ್ರೀ- ರಿಲೀಸ್‍ ಇವೆಂಟ್‍ ಭಾನುವಾರ ನಡೆದಿದೆ. ಈ ಕಾರ್ಯಕ್ರಮಕ್ಕೆ ಯೋಗಿ ಅವರ ಮಾವ, ‘ದುನಿಯಾ’ ವಿಜಯ್‍ ಆಗಮಿಸಿ ‘ಚುರುಮುರಿ’ ಎಂಬ ಹಾಡು ಬಿಡುಗಡೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಕುಮಾರ್, ‘ನಾನು ಹೀರೋ ಆಗುವ ಮುನ್ನ ವಿಜಯಪ್ರಸಾದ್‍ ತಮ್ಮ ಧಾರಾವಾಹಿಗಳಲ್ಲಿ ಸಣ್ಣ ಪಾತ್ರಗಳನ್ನು ಕೊಟ್ಟು ಬೆಳೆಸಿದರು. ಅವರೊಬ್ಬ ವಿದ್ಯಾವಂತ ನಿರ್ದೇಶಕ. ಇಡೀ ಕರ್ನಾಟಕದ ಮನೆಮನೆಯವರನ್ನು ‘ಸಿಲ್ಲಿ ಲಲ್ಲಿ’ ನೋಡುವಂತೆ ಮಾಡಿದರು. ಈಗ ಇಡೀ ಕುಟುಂಬ ನೋಡುವಂತಹ ಸಿನಿಮಾ ಮಾಡಿದ್ದಾರೆ. ಹೊಡಿ- ಬಡಿ ಸಿನಿಮಾಗಳ ಮಧ್ಯೆ ಒಳ್ಳೆಯ ಸಿನಿಮಾ ಬರುತ್ತಿದೆ ಎಂಬುದರ ಸೂಚನೆ ಇಲ್ಲಿದೆ. ಯೋಗಿಗೆ ಸಿನಿಮಾ ಮಾಡಿದ್ದಕ್ಕೆ ಧನ್ಯವಾದಗಳು. ಇದು ಇನ್ನೂ ಸಹ ಮುಂದುವರೆಯಲಿ. ಇನ್ನೊಂದು ಒಳ್ಳೆಯ ಕಥೆಯ ಮೂಲಕ ‘ಸಿದ್ಲಿಂಗು 3’ ಮಾಡಲಿ ಎಂಬುದು ನನ್ನಾಸೆ’ ಎಂದರು.

ನಾನು ಯೋಗಿಯ ದೊಡ್ಡ ಅಭಿಮಾನಿ ಎಂದ ವಿಜಯ್‍ ಕುಮಾರ್, ‘ಯಾವುದೇ ಪಾತ್ರವಿದ್ದರೂ ನಾನು ಮಾಡಬಲ್ಲೆ ಎಂದು ಧೈರ್ಯವಾಗಿ ನಿಲ್ಲುತ್ತಾನೆ. ಅವನ ಸಾಮರ್ಥ್ಯ ಬೇರೆ ಇದೆ. ಅವನಿಗೆ ಒಳ್ಳೆಯ ಕಥೆಗಳು ಸಿಕ್ಕಿ ಅವನು ಇನ್ನೂ ಅದ್ಭುತ ನಟನಾಗಿ ಹೊರಹೊಮ್ಮಬೇಕು ಎಂಬುದು ನನ್ನಾಸೆ. ಅದಕ್ಕೆ ಇನ್ನೂ ಸಮಯ ಬರಬೇಕೇನೋ? ಬರದಿದ್ದರೆ ನಾನು ಅವನ ಜೊತೆಗೆ ನಿಲ್ಲುತ್ತೇನೆ. ಯಾವತ್ತೂ ಅವನ ಕೈಬಿಡುವುದಿಲ್ಲ. ಅವನನ್ನು ನಿಲ್ಲಿಸುತ್ತೇನೆ. ನನ್ನ ಕೈಗೆ ಸಿಕ್ಕರೆ ಬೇರೆಯದನ್ನೇ ಮಾಡುತ್ತೇನೆ. ಬೇರೆ ಏನನ್ನೋ ತೋರಿಸುವುದಕ್ಕೆ ಆಸೆ. ಈ ಚಿತ್ರದಲ್ಲಿ ಒಂದು ಒಳ್ಳೆಯ ವೈಬ್‍ ಇದೆ. ಒಳ್ಳೆಯ ಕಲಾವಿದರು ಮತ್ತು ತಂತ್ರಜ್ಞರು ಈ ತಂಡದಲ್ಲಿದ್ದಾರೆ’ ಎಂದರು ದುನಿಯಾ ವಿಜಯ್.

‘ಸಿದ್ಲಿಂಗು ಚಿತ್ರವನ್ನು ನೋಡಿ ಎಲ್ಲರೂ ಇಷ್ಟಪಟ್ಟಿದ್ದರು. ಭಾಗ ಎರಡು ಸಹ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗೆ ಮತ್ತು ಚಿತ್ರತಂಡಕ್ಕಿದೆ. ಆಗ ‘ಸಿದ್ಲಿಂಗು’, ಕನ್ನಡ ಚಿತ್ರರಂಗಕ್ಕೆ ಬೇರೆ ತರಹದ ಸಿನಿಮಾ ಆಯ್ತು. ಇದು ಅದರ ಮುಂದುವರೆದ ಭಾಗ. ವಿಜಯಪ್ರಸಾದ್‍ ಜೊತೆಗೆ ಕೆಲಸ ಮಾಡುವುದು ಖುಷಿಯ ವಿಷಯ. ಪ್ರತಿಯೊಬ್ಬರಿಂದ ಒಳ್ಳೆಯ ಕೆಲಸ ತೆಗೆಸುತ್ತಾರೆ" ಎಂದರು ನಟ ಯೋಗಿ.

ಮಾವನ ಬಗ್ಗೆ ಅಳಿಯನ ಮಾತು

ಮುಂದುವರಿದು ಮಾತನಾಡಿದ ಯೋಗಿ, "ಇವತ್ತು ಟ್ರೇಲರ್ ಬಿಡುಗಡೆ ಮಾಡುವುದಕ್ಕೆ ನಮ್ಮ ಮಾವ ಬಂದಿದ್ದಾರೆ. ನಾನು ಚಿಕ್ಕ ವಯಸ್ಸಲ್ಲಿ ವಿಜಯ್‍ ಅವರನ್ನು ಮಾವ ಅಂತ ಕರೆದರೆ, ಹೊಡೆದು ಕುಮಾರ ಅಂತ ಕರೆಯೋ ಎನ್ನುತ್ತಿದ್ದರು. ಇವತ್ತು ಮೊದಲ ಬಾರಿಗೆ ವೇದಿಕೆಯೊಂದರ ಮೇಲೆ ನಿಂತು ಮಾವ ಎಂದು ಕರೆಯುತ್ತಿದ್ದೇನೆ. ಇನ್ನು ಮುಂದೆ ಎಲ್ಲೇ ಸಿಕ್ಕರೂ ಮಾವ ಎಂದು ಕರೆಯುತ್ತೇನೆ. ನಮ್ಮ ಚಿತ್ರತಂಡದವರೆಲ್ಲಾ ಅವರನ್ನು ಕರೆಸಿ ಪ್ರೀ-ರಿಲೀಸ್‍ ಇವೆಂಟ್‍ ಮಾಡಬೇಕು ಎಂದು ಹೇಳುತ್ತಿದ್ದರು. ಅವರೂ ಒಪ್ಪಿ ಇವತ್ತು ಬಂದು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅವರಿಗೆ ಧನ್ಯವಾದಗಳು’ ಎಂದರು.

ಸಿದ್ಲಿಂಗು ಸಮಾಜಕ್ಕೆ ಸತ್ಪುರುಷ ಅಲ್ಲ ದೇಶಕ್ಕೆ ಸತ್ಪ್ರಜೆ ಎಂದ ನಿರ್ದೇಶಕ ವಿಜಯಪ್ರಸಾದ್‍, ‘ಕಾಯಕ ಎಂದರೆ ಅವನನ್ನು ನೆನಪು ಮಾಡಿಕೊಳ್ಳಬೇಕು, ಆದರ್ಶ ಎಂದರೆ ಮರೆತುಬಿಡಿಬೇಕು. ಅಂಥದ್ದೊಂದು ಜೀವಂತ ಪಾತ್ರ ಈ ಚಿತ್ರದಲ್ಲಿ ಮಾಡಿದ್ದಾರೆ’ ಎಂದರು.

ಈ ಸಂದರ್ಭದಲ್ಲಿ ಯೋಗಿ ತಂದೆ ಮತ್ತು ನಿರ್ಮಾಪಕ ಟಿ.ಪಿ. ಸಿದ್ಧರಾಜು, ನಾಯಕಿ ಸೋನು ಗೌಡ, ನಟ- ನಿರ್ದೇಶಕ ಬಿ. ಸುರೇಶ, ಮಂಜುನಾಥ್ ಹೆಗಡೆ, ಸೀತಾ ಕೋಟೆ, ಸಂಗೀತ ನಿರ್ದೇಶಕ ಅನೂಪ್‍ ಸೀಳಿನ್‍, ಗೀತರಚನೆಕಾರ ಅರಸು ಅಂತಾರೆ, ಆ್ಯಂಥೋನಿ ಕಮಲ್ ಸೇರಿದಂತೆ ಚಿತ್ರತಂಡದ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದರು. ವಿಜಯ್‍ ಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಫೆಬ್ರವರಿ 14ರಂದು ಚಿತ್ರ ಬಿಡುಗಡೆ

‘ಸಿದ್ಲಿಂಗು 2’ ಚಿತ್ರವನ್ನು ಶ್ರೀಹರಿ ಮತ್ತು ರಾಜು ಶೇರಿಗಾರ್ ನಿರ್ಮಿಸಿದ್ದು, ಯೋಗಿ, ಸೋನು ಗೌಡ, ಸುಮನ್‍ ರಂಗನಾಥ್‍, ಸೀತಾ ಕೋಟೆ, ಮಹಾಂತೇಶ್‍, ಆ್ಯಂಟೋನಿ ಕಮಲ್‍, ಮಂಜುನಾಥ ಹೆಗಡೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಪ್ರಸನ್ನ ಗುರ್ಲಕೆರೆ ಛಾಯಾಗ್ರಹಣ, ಅನೂಪ್‍ ಸೀಳಿನ್‍ ಸಂಗೀತ ಮತ್ತು ಅಕ್ಷಯ್ ಪಿ. ರಾವ್‍ ಅವರ ಸಂಕಲನವಿದೆ. ಫೆಬ್ರವರಿ 14ರಂದು ಈ ಚಿತ್ರ ಬಿಡುಗಡೆಯಾಗುತ್ತಿದೆ.

Whats_app_banner