Yuva Rajkumar: ಅದು ಸೈಲೆಂಟ್, ಇದು ವೈಲೆಂಟ್; ಎಕ್ಕ ಚಿತ್ರದಲ್ಲಿ ದೊಡ್ಮನೆ ಕುಡಿ ಯುವ ರಾಜಕುಮಾರ್ ರಕ್ತಪಾತ
Yuva Rajkumar: ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ನಟನೆಯ ಎರಡನೇ ಸಿನಿಮಾದ ಮುಹೂರ್ತ ನೆರವೇರಿದೆ. ರೋಹಿತ್ ಪದಕಿ ನಿರ್ದೇಶನದ ಚಿತ್ರಕ್ಕೆ ಎಕ್ಕ ಎಂಬ ಶೀರ್ಷಿಕೆ ಇಟ್ಟಿರುವುದು ಈ ಹಿಂದೆಯೇ ಬಹಿರಂಗವಾಗಿದೆ. ಈಗ ಈ ಸಿನಿಮಾದ ಬಗ್ಗೆಯೇ ಇಡೀ ತಂಡ ಬಂದಷ್ಟು ಮಾಹಿತಿ ಹಂಚಿಕೊಂಡಿದೆ.
Yuva Rajkumar Ekka Launch: ಯುವ ರಾಜಕುಮಾರ್ ಅಭಿನಯದ ಎರಡನೇ ಚಿತ್ರ ‘ಎಕ್ಕ’ ಚಿತ್ರಕ್ಕೆ ಇಂದು (ನ. 28) ಬೆಳಗ್ಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದ್ದು, ಮುಹೂರ್ತದ ದಿನವೇ ಚಿತ್ರದ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಿದೆ. ‘ಎಕ್ಕ’ ಚಿತ್ರವು 2025ರ ಜೂನ್ 06ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಇದೊಂದು ಪಕ್ಕಾ ಮಾಸ್ ಚಿತ್ರ ಎನ್ನುವ ಯುವ ರಾಜಕುಮಾರ್, ‘ಇದೊಂದು ಮಾಸ್ ಚಿತ್ರ. ಸಾಕಷ್ಟು ಭಾವನೆಗಳಿವೆ. ಪರಿಸ್ಥಿತಿ ಒಬ್ಬ ಮನುಷ್ಯನನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ. ಮೊದಲ ಬಾರಿಗೆ ತುಂಬಾ ಮಾಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಮೊದಲ ಚಿತ್ರಕ್ಕೂ, ಈ ಚಿತ್ರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅದು ಸೈಲೈಂಟ್, ಇದು ವೈಲೆಂಟ್. ಪಾತ್ರಕ್ಕೆ ಒಂದಿಷ್ಟು ತಯಾರಿಯ ಅವಶ್ಯಕತೆ ಇದೆ. ರಿಹರ್ಸಲ್‍ಗಳು ಪ್ರಾರಂಭವಾಗಿವೆ’ ಎಂದರು.
ಎಕ್ಕ ರಾಜ ರಾಣಿ ಟೈಟಲ್ ಎಕ್ಕ ಆಯ್ತು
ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿರುವ ರೋಹಿತ್ ಪದಕಿ ಮಾತನಾಡಿ, ‘ಈಗಾಗಲೇ ಹಾಡುಗಳು ರೆಡಿಯಾಗಿದೆ. ಚಿತ್ರೀಕರಣಕ್ಕೆ ಎಲ್ಲಾ ತಯಾರಿಗಳಾಗಿವೆ. ಈ ಹಿಂದೆ ಜಾಕಿ ಚಿತ್ರಕ್ಕೆ ‘ಎಕ್ಕ’ ಎಂಬ ವರ್ಕಿಂಗ್ ಟೈಟಲ್ ಇತ್ತು. ನಮ್ಮ ಕಥೆಗೆ ಅದು ಪೂರಕವಾಗಿರುವುದರಿಂದ, ಅದನ್ನೇ ಇಟ್ಟಿದ್ದೇವೆ. ಮೊದಲು ‘ಎಕ್ಕ ರಾಜ ರಾಣಿ’ ಎಂಬ ಟೈಟಲ್ ಇಡುವ ಯೋಚನೆಯೂ ಇತ್ತು. ಕೊನೆಗೆ ‘ಎಕ್ಕ’ ಫೈನಲ್ ಆಯಿತು ಎನ್ನುತ್ತಾರೆ.
ರಕ್ತದ ಜತೆ ಎಕ್ಕ ಸಿನಿಮಾ ಕನೆಕ್ಟ್
ನಾಯಕ ರಕ್ತಮಯವಾಗಿರುವುದರಿಂದ, ಇದು ಸಹ ‘ಓಂ’ ಮತ್ತು ‘ವಂಶಿ’ ತರಹದ ಚಿತ್ರ ಅಂತಂದುಕೊಳ್ಳಬಹುದಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಇಲ್ಲಿ ನಾಯಕ ಮಚ್ಚು ಹಿಡಿದಿಲ್ಲ. ಮಟನ್ ನೇತು ಹಾಕುವ ರಾಡ್ ಹಿಡಿದಿದ್ದಾನೆ. ಈ ಚಿತ್ರವನ್ನು ಓಂ ಅಥವಾ ವಂಶಿಗೆ ರಿಲೇಟ್ ಮಾಡುವುದು ಬೇಡ. ಈ ಚಿತ್ರದಲ್ಲಿ ಮಾಸ್ ಅಂಶಗಳ ಜೊತೆಗೆ ಗಟ್ಟಿ ಕಥೆ ಸಹ ಇದೆ. ಇದೊಂದು ರಾ ಚಿತ್ರ. ಅದರ ಜೊತೆಗೆ ಸಾಕಷ್ಟು ಭಾವನೆಗಳಿವೆ. ಚಿತ್ರದ ಮೂಲಕ ಮನುಷ್ಯನ ತಳಮಳವಳನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ‘ರತ್ನನ್ ಪ್ರಪಂಚ’ ಚಿತ್ರದಲ್ಲೂ ತಳಮಳವಿತ್ತು. ಆದರೆ, ಅದರಲ್ಲಿ ರಕ್ತ ಇರಲಿಲ್ಲ. ಇದರಲ್ಲಿ ರಕ್ತ ಇದೆ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ವಿಷಯ ಈ ಚಿತ್ರದಲ್ಲಿದೆ’ ಎಂದರು.
ಚಿತ್ರವು ಅಭಿಮಾನಿಗಳಿಗೆ ಹೇಗೆ ಇಷ್ಟವಾಗಬಹುದು ಎಂಬ ವಿಷಯದ ಬಗ್ಗೆ ಮಾತನಾಡಿದ ರೋಹಿತ್ ಪದಕಿ, ‘ಅಭಿಮಾನಿಗಳಿಗಿಂತ ಮೊದಲ ನಮಗೆ ಇಷ್ಟ ಆಗಬೇಕು. ಮೊದಲು ನಮಗೆ ಇಷ್ಟವಾದರೆ, ಒಂದು ವಿಶ್ವಾಸ ಮೂಡಿದರೆ ಮುಂದುವರೆಯುತ್ತೇವೆ. ವಿಶ್ವಾಸ ಮೂಡಿದ್ದರಿಂದಲೇ ಇಷ್ಟು ದೂರ ಸಾಗಿಬಂದಿದ್ದೇವೆ. ಈ ಚಿತ್ರ ಬರೀ ಅಭಿಮಾನಿಗಳಿಗೆ ಸೀಮಿತವಾಗಬಾರದು. ಕನ್ನಡ ಪ್ರೇಕ್ಷಕರು ಬಂದು ನೋಡಬೇಕು’ ಎಂದರು.
ಇದು ಚಿತ್ರಮಂದಿರಗಳಿಗೆ ಮಾಡುತ್ತಿರುವ ಸಿನಿಮಾ
‘ಎಕ್ಕ’ ಚಿತ್ರವನ್ನು PRK ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್ ಮತ್ತು KRG ಸ್ಟುಡಿಯೋಸ್ ಅಡಿ ಅಶ್ವಿನಿ ಪುನೀತ್ ರಾಜಕುಮಾರ್, ಜಯಣ್ಣ, ಭೋಗೇಂದ್ರ, ಕಾರ್ತಿಕ್ ಗೌಡ ಮತ್ತು ಯೋಗಿ ಜೊತೆಯಾಗಿ ನಿರ್ಮಿಸುತ್ತಿರುವುದು ವಿಶೇಷ. ಚಿತ್ರದ ಕುರಿತು ಮಾತನಾಡುವ ಜಯಣ್ಣ, ಇದು ಚಿತ್ರಮಂದಿರಗಳಿಗೆ ಮಾಡುತ್ತಿರುವ ಸಿನಿಮಾ. ಹಾಗಂತ ಮಾರಲ್ಲ ಅಂತಲ್ಲ. ಚಾನಲ್ ಮತ್ತು ಒಟಿಟಿಯವರು ಬಂದು ಬಜೆಟ್ ಜಾಸ್ತಿ ಮಾಡಿಸಿ, ಇದೀಗ ಹಕ್ಕುಗಳನ್ನು ತಗೊಳ್ಳೋದು ಬಿಟ್ಟಿದ್ದಾರೆ. ಹಾಗಾಗಿ, ನಾವು ಚಿತ್ರಮಂದಿರಗಳನ್ನು ಮುಖ್ಯವಾಗಿಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇವೆ’ ಎಂದರು.
‘ಎಕ್ಕ’ ಚಿತ್ರದಲ್ಲಿ ಯುವ ರಾಜಕುಮಾರ್‌ಗೆ ನಾಯಕಿಯಾಗಿ ಸಂಪದ ಹುಲಿವಾನ ನಟಿಸುತ್ತಿದ್ದು, ಮಿಕ್ಕಂತೆ ಅತುಲ್ ಕುಲಕರ್ಣಿ, ಶ್ರುತಿ, ಡಾ. ಸೂರಿ, ಪೂರ್ಣಚಂದ್ರ ಮೈಸೂರು, ಪುನೀತ್ ರುದ್ರನಾಗ್ ಮುಂತಾದವರು ಇದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿದೆ.
ವರದಿ: ಚೇತನ್ ನಾಡಿಗೇರ್