Rachita Ram: ಕಷ್ಟ ಅಂತ ಬಂದ್ರೆ ಯಾರ ಜತೆಗೂ ಹೋಗುವವಳಲ್ಲ, ದೇವಸ್ಥಾನದಲ್ಲಿ ಪ್ರಸಾದ ತಿಂದು ಬದುಕ್ತಿನಿ- ರಚಿತಾ ರಾಮ್
Rachita Ram: ರಚಿತಾ ರಾಮ್ ತಾವು ಹಿಂದೆ ಪಡೆಯುತ್ತಿದ್ದ ಸಂಭಾವನೆ ಹಾಗೂ ಈಗ ಪಡೆಯುತ್ತಿರುವ ಸಂಭಾವನೆಯ ಬಗ್ಗೆ ಮಾತಾಡುತ್ತಾ. ಒಂದು ದಿನ ಕಷ್ಟ ಅಂತ ಬಂದ್ರೆ ದೇವಸ್ಥಾನದ ಪ್ರಸಾದ ಬೇಕಾದ್ರೂ ತಿಂದು ಬದುಕುವೆ, ಯಾರ ಜತೆಗೂ ಹೋಗಿ ಇರೋದಿಲ್ಲ ಎಂದಿದ್ದಾರೆ.
ಕನ್ನಡದ ಸ್ಟಾರ್ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಸಿನಿಮಾ ‘ಸಂಜು ವೆಡ್ಸ್ ಗೀತಾ 2’ ಜನವರಿ 10ರಂದು ಬಿಡುಗಡೆಯಾಗಲಿದೆ. ಸಿನಿಮಾ ಪ್ರಚಾರ ಕೂಡ ಜೋರಾಗಿ ನಡೆದಿದೆ. ರಚಿತಾ ರಾಮ್ ಅಯೋಗ್ಯ 2 ಸಿನಿಮಾದ ಕುರಿತು ಹಾಗು ಸಂಭಾವನೆ ವಿಚಾರವಾಗಿ ಮಾತನಾಡಿದ್ದಾರೆ. ಆ ಸಂದರ್ಭದಲ್ಲಿ ರಚಿತಾ ರಾಮ್ ಬದುಕು ಹೇಗಿದೆ? ಎಷ್ಟು ಸಂಭಾವನೆ ಪಡೆಯುತ್ತಾರೆ? ರಚಿತಾ ರಾಮ್‌ಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ? ಎಂಬೆಲ್ಲ ಪ್ರಶ್ನೆಗೆ ಉತ್ತರಿಸಿದ್ದಾರೆ. ಅವರು ಸೀರಿಯಲ್ ಮಾಡುತ್ತಿರುವಾಗಿನಿಂದ ಇಲ್ಲಿಯವರೆಗೆ ಏನೆಲ್ಲ ಕಷ್ಟಪಟ್ಟಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಕಷ್ಟ ಬಂದರೆ ನಾನು ದೇವಸ್ಥಾನದ ಪ್ರಸಾದವನ್ನು ಬೇಕಾದರೂ ತಿಂದು ಬದುಕುತ್ತೇನೆ ಸ್ಪಾನ್ಸರ್ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಸೀರಿಯಲ್ ಮಾಡುವಾಗ ದಿನಕ್ಕೆ 750 ರೂ ಸಂಭಾವನೆ ಇತ್ತು
'ಅಯೋಗ್ಯ 2' ಸಿನಿಮಾಗಾಗಿ 1 ಕೋಟಿ ಸಂಭಾವನೆ ಪಡೆದ ಕುರಿತು ರಚಿತಾ ರಾಮ್‌ರಲ್ಲಿ ಟಿವಿ 9 ಸಂದರ್ಶನದಲ್ಲಿ ಪ್ರಶ್ನಿಸಲಾಗಿದೆ. ಸ್ಟಾರ್ ನಟಿಯರಲ್ಲಿ ನೀವೇ ಹೆಚ್ಚು ಸಂಭಾವನೆ ಪಡೆದ ನಟಿ ಎಂದು ಸಂದರ್ಶಕರು ಹೇಳಿದಾಗ ರಚಿತಾ ರಾಮ್ ತಾನು ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡಿದ್ದಾರೆ.
“ನಾನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ದೇವರು ಕೈ ತುಂಬಾ ಕೆಲಸ ಕೊಟ್ಟಿದ್ದಾನೆ. ಅಷ್ಟು ಸಾಕು ನನಗೆ, ಅದಕ್ಕಿಂತ ಅತಿಯಾಗಿ ಇನ್ನೇನೋ ಬೇಕು ಎಂದು ಕೇಳುವುದು ಅತಿಯಾಸೆ ಆಗುತ್ತದೆ, ನಾನು ಧಾರಾವಾಹಿ ಮಾಡುವ ಕಾಲಕ್ಕೆ ದಿನಕ್ಕೆ 750 ರೂಪಾಯಿ ಸಂಭಾವನೆ ಪಡೆದಿದ್ದೆ. ಅದು ಈಗ 12 ವರ್ಷಗಳ ಹಿಂದಿನ ಮಾತು” ಎಂದಿದ್ದಾರೆ.
ಇದನ್ನೂ ಓದಿ: Yash Birthday: ರಾಕಿಂಗ್ ಸ್ಟಾರ್‌ಗೆ 39ರ ಸಂಭ್ರಮ; ಬರ್ತಡೇ ಪ್ರಯುಕ್ತ ಫ್ಯಾನ್ಸ್‌ಗೆ ಯಶ್ ಕಡೆಯಿಂದ ಟಾಕ್ಸಿಕ್ ಟಾನಿಕ್!
ಈಗ ಯಾರೂ ಉಚಿತವಾಗಿ ಕೆಲಸ ಮಾಡೋದಿಲ್ಲ. ಎಲ್ಲರೂ ಅವರವರ ಕೆಲಸಕ್ಕೆ ತಕ್ಕ ಸಂಭಾವನೆ ಪಡೆದೇ ಪಡೆಯುತ್ತಾರೆ. ಅದೇ ರೀತಿ ನಾನೂ ಸಹ ನನ್ನ ಪಾತ್ರ ಏನಿದೆ. ನಿರ್ದೇಶಕರು ಏನು ಹೇಳುತ್ತಾರೆ ಎನ್ನುವುದಕ್ಕೆ ನ್ಯಾಯ ಒದಗಿಸುತ್ತೇನೆ ಅದಕ್ಕೆ ತಕ್ಕ ಹಣವನ್ನೂ ಪಡೆಯುತ್ತೇನೆ ಎಂದು ಉತ್ತರಿಸಿದ್ದಾರೆ. ಇದುವರೆಗೆ ನಾನು ಯಾರಲ್ಲಿಯೂ ಹೋಗಿ ನನ್ನ ಬಗ್ಗೆ ಧನಾತ್ಮಕವಾಗಿ ಮಾತನಾಡಿ ಅಥವಾ ನನ್ನ ಬಗ್ಗೆ ಏನಾದ್ರೂ ನಕಾಕಾತ್ಮಕ ಸುದ್ದಿ ಮಾಡಬೇಡಿ ಎಂದು ಯಾವ ಮಾಧ್ಯಮಕ್ಕೂ ತಿಳಿಸಿಲ್ಲ ಎಂದು ಅವರು ಹೇಳಿದ್ದಾರೆ.
ಕೆಲಸಕ್ಕೆ ತಕ್ಕ ಸಂಭಾವನೆ ಪಡೆಯುತ್ತೇನೆ
“ನಾನು ಏನು ಅನ್ನೋದು ಎಲ್ಲರಿಗೂ ಗೊತ್ತು. ನಾನು ಇದುವರೆಗೆ ನನ್ನ ಕೆಲಸಕ್ಕೆ ತಕ್ಕ ಸಂಭಾವನೆ ಪಡೆದಿದ್ದೇನೆ. ಅದನ್ನು ಬಿಟ್ಟು ಯಾರ ಸಹಾಯವನ್ನೂ ಪಡೆದಿಲ್ಲ. ಹಾಗೆಲ್ಲ ಸ್ಪಾನ್ಸರ್ ಪಡೆಯುವುದಿದ್ದರೆ ನಾನು ಇಲ್ಲಿ ಇರ್ತಾನೇ ಇರಲಿಲ್ಲ. ಒಂದೆರಡು ಸಿನಿಮಾ ಮಾಡ್ತಿದ್ದೆ. ಅದಾದ ನಂತರ ಹಣ ಸಿಕ್ಕಿದೆ ಎಂದು ವಿದೇಶಕ್ಕೆ ಹೋಗಿ ಅಥವಾ ಇನ್ನೆಲ್ಲಾದ್ರೂ ಹೋಗಿ ಆರಾಮ ಜೀವನ ಮಾಡ್ತಾ ಇದ್ದೆ. ಕಷ್ಟಪಟ್ಟು ಮತ್ತೆ ಮತ್ತೆ ಕೆಲಸ ಮಾಡ್ತಾನೇ ಇರಲಿಲ್ಲ” ಎಂದು ಹೇಳಿದ್ದಾರೆ.
“ಆದ್ರೆ ನಾನು ಯಾರಿಂದಲೂ ಹಣ ಪಡೆದಿಲ್ಲ. ಒಂದು ದಿನ ನಾನು ಮನೆ ಮಠ ಕಳೆದುಕೊಳ್ಳುವ ಪರಿಸ್ಥಿತಿ ಏನಾದರೂ ಬಂದ್ರೆ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡು ಬದುಕುವೆ. ಅಥವಾ ದೇವಸ್ಥಾನದಲ್ಲಿ ಸಿಗೋ ಪ್ರಸಾದ ತಿಂದು ಬದುಕ್ತೀನಿ ಇನ್ನೊಬ್ಬರ ಜೊತೆ ಹೋಗಿ ನಾನು ಇರೋದಿಲ್ಲ” ಎಂದಿದ್ದಾರೆ. ರಚಿತಾ ರಾಮ್ ಬಗ್ಗೆ ಅನುಮಾನಿಸಿ ಮಾತನಾಡುವವರಿಗೆ ಸರಿಯಾಗಿ ಉತ್ತರಿಸಿದ್ದಾರೆ.