42ನೇ ವಯಸ್ಸಿನಲ್ಲಿ ನಾಲ್ಕು ಮಕ್ಕಳನ್ನು ಮಾಡಿಕೊಳ್ಳುವ ನಿರ್ಧಾರ! ನಿರ್ದೇಶಕಿ ರೂಪಾ ಅಯ್ಯರ್ ಬಿಚ್ಚುಮಾತು
Roopa Iyer: ಸ್ಯಾಂಡಲ್‌ವುಡ್ ನಟಿ ನಿರ್ದೇಶಕಿ ರೂಪಾ ಅಯ್ಯರ್ ಇದೀಗ ತಮ್ಮ 42ನೇ ವಯಸ್ಸಿನಲ್ಲಿ ಬಹುದೊಡ್ಡ ನಿರ್ಧಾರಕ್ಕೆ ಮುಂದಾಗಿದ್ದಾರೆ. ನಾಲ್ಕು ಮಕ್ಕಳನ್ನು ಪಡೆದುಕೊಳ್ಳುವ ಸಲುವಾಗಿ ಬಾಡಿಗೆ ತಾಯ್ತನದ ಮೊರೆ ಹೋಗುತ್ತಿದ್ದಾರೆ.
Roopa Iyer: ಸ್ಯಾಂಡಲ್‌ವುಡ್‌ನಲ್ಲಿ ನಟಿಯಾಗಿ ಗುರುತಿಸಿಕೊಂಡು, ಅದಾದ ಬಳಿಕ ಬರಹಗಾರರಾಗಿ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡವರು ರೂಪಾ ಅಯ್ಯರ್. ಬಣ್ಣದ ಲೋಕದ ನಂಟಿನ ಜತೆಗೆ ಓದು, ಅಧ್ಯಾತ್ಮ ರಾಜಕೀಯದಲ್ಲಿಯೂ ತೊಡಗಿಸಿಕೊಂಡಿರುವ ರೂಪಾ ಅಯ್ಯರ್, 1998ರಲ್ಲಿ ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ A ಸಿನಿಮಾದಲ್ಲಿ ನಟಿಸಿದ್ದರು. ಅದಾದ ಬಳಿಕ ಮ್ಯಾಜಿಕ್ ಅಜ್ಜಿ, ಧಾತು, ಮುಖಪುಟ ಸಿನಿಮಾದಲ್ಲಿಯೂ ನಟಿಸುವುದರ ಜತೆಗೆ ಆ ಚಿತ್ರದ ನಿರ್ದೇಶನವನ್ನೂ ಮಾಡಿದ್ದರು. ಈಗ ಇದೇ ರೂಪಾ ಅಯ್ಯರ್ ಸಾಂಸಾರಿಕ ಜೀವನದಲ್ಲಿ ದೊಡ್ಡ ನಿರ್ಧಾರದ ಬಾಗಿಲು ಬಡಿಯಲು ಮುಂದಡಿ ಇರಿಸಿದ್ದಾರೆ.
ರೂಪಾ ಅಯ್ಯರ್ ತುಂಬು ಕುಟುಂಬದಿಂದ ಬಂದ ಹೆಣ್ಣು ಮಗಳು. ಆಚಾರ ವಿಚಾರದ ಜತೆಗೆ ಹೆಚ್ಚು ಓದಿಕೊಂಡವರು. ವಾಸ್ತವವನ್ನು ಚೆನ್ನಾಗಿ ಅರಿತಿರುವವರು. ನಟನೆ ಜತೆಗೆ ರಾಜಕಾರಣದಲ್ಲಿಯೂ ಗುಡುತಿಸಿಕೊಂಡಿದ್ದಾರೆ. ಈಗ ಇದೇ ನಟಿ, ನಿರ್ದೇಶಕಿ ತಮ್ಮ 42ನೇ ವಯಸ್ಸಿನಲ್ಲಿ ಮಕ್ಕಳು ಮಾಡಿಕೊಳ್ಳಲು ಮುಂದಾಗಿದ್ದಾರೆ. ಅದೂ ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು! ಹೌದು, 2014ರಲ್ಲಿ ಸಂಬಂಧಿಕರ ಮನೆಯ ಹುಡುಗನಾಗಿದ್ದ ಗೌತಮ್ ಶ್ರೀನಿವಾಸ್ ಅವರನ್ನು ರೂಪಾ ಮನೆಯವರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಆರಂಭದಲ್ಲಿ ಮಕ್ಕಳನ್ನು ಮಾಡಿಕೊಳ್ಳುವ ನಿರ್ಧಾರವನ್ನು ಮುಂದೂಡಿದ್ದ ಈ ದಂಪತಿ, ಇದೀಗ ಹೊಸ ಪುಟ ತೆರೆಯುತ್ತಿದ್ದಾರೆ. ಅದೂ ಬಾಡಿಗೆ ತಾಯ್ತನದ ಮೂಲಕ.
ಬಾಲಿವುಡ್‌ನಲ್ಲಿ ಹತ್ತಾರೆ ಸೆಲೆಬ್ರಿಟಿಗಳು..
ಬಾಡಿಗೆ ತಾಯ್ತನ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅದರಲ್ಲೂ ಸೆಲೆಬ್ರಿಟಿ ವಲಯದಲ್ಲಿ ಈ ಸರೋಗಸಿ ವಿಚಾರ ಆಗಾಗ ಕೇಳಿಬರುವ ಸಂಗತಿಗಳಲ್ಲೊಂದು. ಬಾಲಿವುಡ್ ಸೇರಿ ಸೌತ್‌ನ ಹಲವು ಸೆಲೆಬ್ರಿಟಿಗಳು ಸರೋಗಸಿ ಮೂಲಕ ಮಕ್ಕಳನ್ನು ಮಾಡಿಕೊಂಡಿದ್ದಾರೆ. ಅವರ ಲಿಸ್ಟ್ ಸಹ ಅಷ್ಟೇ ದೊಡ್ಡದಿದೆ. ಪ್ರಿಯಾಂಕಾ ಚೋಪ್ರಾ, ಸನ್ನಿಲಿಯೋನ್, ಶಾರುಖ್ ಖಾನ್, ಆಮೀರ್ ಖಾನ್, ನಯನತಾರಾ, ಏಕ್ತಾ ಕಪೂರ್, ಕರಣ್ ಜೋಹಾರ್, ಶಿಲ್ಪಾ ಶೆಟ್ಟಿ, ಪ್ರೀತಿ ಜಿಂಟಾ, ಶ್ರೇಯಸ್ ತಲ್ಪಾಡೆ, ತುಷಾರ್ ಕಪೂರ್, ಸೋಹೆಲ್ ಖಾನ್.. ಹೀಗೆ ಇನ್ನೂ ಸಾಕಷ್ಟು ಬಾಲಿವುಡ್ ಸೆಲೆಬ್ರಿಟಿಗಳು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದುಕೊಂಡಿದ್ದಾರೆ.
ನಾಲ್ಕು ಮಕ್ಕಳಿಗಾಗಿ ರೂಪಾ ಅಯ್ಯರ್ ನಿರ್ಧಾರ
ಬೇರೆ ಬೇರೆ ಚಿತ್ರೋದ್ಯಮಕ್ಕೆ ಹೋಲಿಕೆ ಮಾಡಿದರೆ, ಸ್ಯಾಂಡಲ್‌ವುಡ್‌ನಲ್ಲಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದುಕೊಂಡ ಉದಾಹರಣೆಗಳಿಲ್ಲ. ಈಗ ನಟಿ, ನಿರ್ದೇಶಕಿ ರೂಪಾ ಅಯ್ಯರ್ ಬಾಡಿಗೆ ತಾಯ್ತನದ ಮೂಲಕ ನಾಲ್ಕು ಮಕ್ಕಳನ್ನು ಪಡೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿರುವ ಅವರು, "ನಾನೀಗ ಸರೋಗಸಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇನೆ. ನಮ್ಮ ಅಮ್ಮನೇ ಏನೂ ಇಲ್ಲದಿದ್ದಾಗ ಮೂರು ಮಕ್ಕಳನ್ನು ಬೆಳೆಸಿದ್ದಾರೆ. ನಾನೀಗ ನಾಲ್ಕು ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಪಡೆದುಕೊಳ್ಳಲು ಪ್ಲಾನ್ ನಡೆಯುತ್ತಿದೆ. ಈಗಾಗಲೇ ಡಾಕ್ಟರ್ ಜತೆಗೂ ಮಾತುಕತೆ ನಡೆದಿದೆ"
ಬಾಡಿಗೆ ತಾಯ್ತನದ ಬಗ್ಗೆ ವೈದ್ಯರ ಬಳಿ ಚರ್ಚೆ
"ಮದುವೆ ಆದ ಮೇಲೆ ಮಕ್ಕಳನ್ನು ಮಾಡಿಕೊಳ್ಳಬೇಕು ಅಂತ ಅಂದುಕೊಂಡ್ವಿ. ಅವರ ಮನೆಯಲ್ಲಿ ನಿಧಾನಕ್ಕೆ ಮಾಡಿಕೊಳ್ಳುವ ಬಗ್ಗೆ ಡಿಸಿಷನ್ ತೆಗೊಂಡಿದ್ರು. ಅದಾದ ಮೇಲೆ ಇದೀಗ ನಾವೆಲ್ಲ ಸೇರಿಕೊಂಡು, ನಮ್ಮ ಅತ್ತೆ ಮನೆಯಲ್ಲಿಯೂ ಈ ಬಗ್ಗೆ ಮಾತನಾಡಿಕೊಂಡು ಸರೋಗಸಿ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದೇವೆ. ನಮ್ಮ ಅಮ್ಮ ಏನೂ ಇಲ್ಲದೆ ನಾವು ಮೂರು ಮಕ್ಕಳನ್ನು ಸಾಕಿದ್ದಾರೆ. ಈಗ ನಮ್ಮ ಬಳಿ ಎಲ್ಲವೂ ಇದೆ, ಹಾಗಾಗಿ ನಾವು ನಾಲ್ಕು ಮಕ್ಕಳನ್ನು ಪಡೆಯುವ ನಿರ್ಧಾರ ಮಾಡಿದ್ದೇವೆ" ಎಂದಿದ್ದಾರೆ ರೂಪಾ ಅಯ್ಯರ್.