ಕನ್ನಡದಲ್ಲಿ ಸಿನಿಮಾ ಆಗ್ತಿದ್ಯಾ ಧರ್ಮಸ್ಥಳ ಸೌಜನ್ಯ ಪ್ರಕರಣ? ʻಚಿ ಸೌಜನ್ಯʼ ಚಿತ್ರ ಘೋಷಿಸಿದ ನಟಿ ಹರ್ಷಿಕಾ ಪೂಣಚ್ಚ
ರಾಜ್ಯದಲ್ಲಿ ಧರ್ಮಸ್ಥಳ ಸೌಜನ್ಯ ಕೇಸ್ ಕುರಿತ ಚರ್ಚೆ ಮುನ್ನೆಲೆಯಲ್ಲಿದೆ. ಹೀಗಿರುವಾಗಲೇ, ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಇದೀಗ ʻಚಿ; ಸೌಜನ್ಯʼ ಹೆಸರಿನ ಸಿನಿಮಾ ಘೋಷಣೆ ಮಾಡಿ, ಶೀರ್ಷಿಕೆ ಅನಾವರಣ ಮಾಡಿದ್ದಾರೆ.

Chi Sowjanya Movie: ಕರ್ನಾಟಕದಲ್ಲಿ ಅದರಲ್ಲೂ ದಕ್ಷಿಣ ಕರ್ನಾಟಕದ ಕರಾವಳಿ ಭಾಗದಲ್ಲಿ ಧರ್ಮಸ್ಥಳದ ಸೌಜನ್ಯ ಪ್ರಕರಣ ದೊಡ್ಡ ಮಟ್ಟದಲ್ಲಿ ಕಾವು ಪಡೆದುಕೊಂಡಿದೆ. ದಶಕದ ಹಿಂದಿನ ಘಟನೆ, ಇಂದಿಗೂ ಹಸಿಯಾಗಿದೆ. ಪ್ರತಿಭಟನೆಗಳು, ಅಭಿಯಾನಗಳ ಮೂಲಕ ಸರ್ಕಾರದ ಕಣ್ತೆರೆಸುವ ಪ್ರಯತ್ನಗಳು ನಡೆಯುತ್ತಿವೆಯಾದರೂ, ಯಾವುದೂ ಕೈಗೂಡುತ್ತಿಲ್ಲ. ಯೂಟ್ಯೂಬ್‌ನಲ್ಲಿ ಸರಣಿ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಈ ನಡುವೆ ಸ್ಯಾಂಡಲ್‌ವುಡ್‌ನಲ್ಲಿ ʻಚಿ ಸೌಜನ್ಯʼ ಹೆಸರಿನ ಸಿನಿಮಾವೊಂದು ಸದ್ದಿಲ್ಲದೆ ಸೆಟ್ಟೇರಿದೆ. ವಿಶೇಷ ಏನೆಂದರೆ ಈ ವರೆಗೂ ನಟಿಯಾಗಿ ಗುರುತಿಸಿಕೊಂಡಿದ್ದ ಹರ್ಷಿಕಾ ಪೂಣಚ್ಚ, ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.
ಹರ್ಷಿಕಾ ಪೂಣಚ್ಛ ನಿರ್ದೇಶಿಸಲಿರುವ ಚಿ. ಸೌಜನ್ಯ ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಈ ಸಿನಿಮಾವನ್ನು ಕಂಸಾಳೆ ಫಿಲಂಸ್ ಹಾಗೂ ಭುವನ್ ಎಂಟರ್ಟೈನ್ಮೆಂಟ್ ಬ್ಯಾನರ್‌ನಲ್ಲಿ ಮಧು ಮರಿಸ್ವಾಮಿ ಮತ್ತು ಭುವನ್ ಪೊನ್ನಣ್ಣ ನಿರ್ಮಿಸುತ್ತಿದ್ದಾರೆ. ಬಹುಭಾಷಾ ನಟ ಕಿಶೋರ್ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದ, ದೇಶದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಹೆಣ್ಣುಮಕ್ಕಳ ಶೋಷಣೆ ಕುರಿತು ಜಾಗೃತಿ ಮೂಡಿಸುವ ಕಥಾಹಂದರ ಹೊಂದಿರಲಿದೆ.
ನಿರ್ದೇಶಕಿಯಾಗಿ ಹರ್ಷಿಕಾ ಪೂಣಚ್ಚ
ಇಷ್ಟು ದಿನ ನಟಿಯಾಗಿ ಗುರುತಿಸಿಕೊಂಡಿದ್ದೆ. ಚಿತ್ರವನ್ನು ನಿರ್ಮಾಣ ಮಾಡಬೇಕು ಎಂಬ ಹಂಬಲವಿತ್ತು. ಆದರೆ ನಿರ್ದೇಶನ ಮಾಡುತ್ತೀನಿ ಅಂತ ಅಂದುಕೊಂಡಿರಲಿಲ್ಲ ಎಂದು ಮಾತನಾಡಿದ ಹರ್ಷಿಕಾ ಪೂಣಚ್ಛ, "ಹೆಣ್ಣುಮಕ್ಕಳ ಶೋಷಣೆಯ ಬಗ್ಗೆ ನಾನು ಹಾಗೂ ಭುವನ್ ಸಾಕಷ್ಟು ಹೋರಾಟ ಮಾಡಿದ್ದೇವೆ. ಇಂತಹ ಸಾಮಾಜಿಕ ಕಳಕಳಿಯುಳ್ಳ ಚಿತ್ರವನ್ನು ಮಾಡಬೇಕೆಂದು ಆಸೆಯಿತ್ತು. ಹೆಣ್ಣಿನ ನೋವು ಹೆಣ್ಣಿಗೆ ಜಾಸ್ತಿ ಗೊತ್ತಿರುತ್ತದೆ ಎಂಬ ಕಾರಣಕ್ಕೆ ನೀವೇ ಈ ಸಿನಿಮಾ ನಿರ್ದೇಶನ ಮಾಡಿ ಎಂದರು. ಇದು ಯಾವುದೇ ಒಂದು ಘಟನೆಯ ಕುರಿತಾದ ಚಿತ್ರವಲ್ಲ. ದೇಶದಲ್ಲಿ ನಡೆದಿರುವ ಇಂತಹ ಅಮಾನುಷ ಘಟನೆಗಳನ್ನಿಟ್ಟುಕೊಂಡು ಮಾಡುತ್ತಿರುವ ಚಿತ್ರ. ನಮ್ಮ ಚಿತ್ರದ ನಾಯಕಿ ಹೆಸರು ಸೌಜನ್ಯ ಅಷ್ಟೇ" ಎಂದರು.
ಮುಂದುವರಿದು ಮಾತನಾಡಿದ ಅವರು, "ಈ ಚಿತ್ರದ ಕಥೆ ಮಾಡಿಕೊಂಡ ತಕ್ಷಣ ಪ್ರಮುಖ ಪಾತ್ರಕ್ಕೆ ನಮಗೆ ತಕ್ಷಣ ಅನಿಸಿದ್ದು, ಕಿಶೋರ್ ಅವರು. ಕಥೆ ಕೇಳಿದ ತಕ್ಷಣ ನಟಿಸಲು ಕಿಶೋರ್ ಒಪ್ಪಿಕೊಂಡರು. ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು, ಕಾಕ್ರೋಜ್ ಸುಧೀ, ಯಶ್ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಂದು ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಮಾತ್ರ ಬಿಡುಗಡೆ ಮಾಡಿದ್ದೇವೆ. ಚಿತ್ರೀಕರಣ ಆರಂಭವಾಗಲು ಇನ್ನೆರಡು ತಿಂಗಳು ಬೇಕು. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ" ಎಂದರು ಹರ್ಷಿಕಾ.
ನಟ ಕಿಶೋರ್ ಹೇಳುವುದೇನು?
"ನಾವು ದೇಶದಲ್ಲಿ ಇಂತಹ ಎಷ್ಟೇ ಘಟನೆಗಳು ನಡೆದರೂ ನಮ್ಮ ಮನೆಯದಲ್ಲ ಎನ್ನುವ ರೀತಿಯಲ್ಲಿ ಇರುತ್ತೇವೆ. ಆದರೆ ಆಕೆ ಕೂಡ ಒಬ್ಬರ ಮಗಳು, ಒಬ್ಬರ ಸಹೋದರಿ ಆಗಿರುತ್ತಾರೆ. ಆ ನಿಟ್ಟಿನಲ್ಲಿ ನಾವು ಯೋಚಿಸಬೇಕು. ಇನ್ನೂ ಇಂತಹ ವಿಷಯಗಳನ್ನು ಸಿನಿಮಾ ಮೂಲಕ ಹೇಳಿದಾಗ ಅದು ಬೇಗ ಜನರಿಗೆ ತಲಪುತ್ತದೆ. ಇಂತಹ ವಿಷಯವನ್ನಿಟ್ಟುಕೊಂಡು ಚಿತ್ರ ನಿರ್ಮಾಣ ಮಾಡುತ್ತಿರುವ ನಿರ್ಮಾಪಕರಿಗೆ ಹಾಗೂ ಮೊದಲ ಬಾರಿಯ ನಿರ್ದೇಶನಕ್ಕೆ ಸಾಮಾಜಿಕ ಕಳಕಳಿಯುಳ್ಳ ಕಥಾವಸ್ತು ಆರಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ" ಎಂದು ನಟ ಕಿಶೋರ್ ತಿಳಿಸಿದರು.
"ಭಾರತದಲ್ಲಿ ಪ್ರತಿವರ್ಷ ಮೂವತ್ತಾರು ಸಾವಿರಕ್ಕೂ ಅಧಿಕ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಸರಾಸರಿ ದಿನಕ್ಕೆ ನೂರು ಮಹಿಳೆಯರಂತೆ. ಈ ಅತ್ಯಾಚಾರಗಳ ಬಗ್ಗೆ ಕೇಸ್ ದಾಖಲಾಗುತ್ತದೆ. ವಿಚಾರಣೆ ನಡೆಯುತ್ತದೆ. ಆದರೆ ಆ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಿರುವುದು ತೀರ ಕಡಿಮೆ. ನಾನು ಹಾಗೂ ಹರ್ಷಿಕಾ ಅವರು ಕೂಡ ಇಂತಹ ಘಟನೆ ಬಗ್ಗೆ ನಮಗೆ ತಿಳಿದಾಗ ಅ ಸ್ಥಳಕ್ಕೆ ಹೋಗಿ ಸಾವಿರಾರು ಜನರೊಂದಿಗೆ ಹೋರಾಟ ಮಾಡಿದ್ದೇವೆ. ಈ ವಿಷಯಗಳ ಕುರಿತು ಜನರಿಗೆ ಜಾಗೃತಿ ಮೂಡಿಸಲು ಸಿನಿಮಾ ಉತ್ತಮವಾದ ಮಾಧ್ಯಮ ಅನಿಸಿತು. ಹಾಗಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ" ಎಂದರು ಭುವನ್ ಪೊನ್ನಣ್ಣ.
ಪ್ಯಾನ್ ಇಂಡಿಯಾ ಸಿನಿಮಾ..
ಇದು ನಮ್ಮ ಸಂಸ್ಥೆಯ ನಿರ್ಮಾಣದ ಎರಡನೇ ಚಿತ್ರ. ಭುವನ್ ಎಂಟರ್ಟೈನ್ಮೆಂಟ್ ಸಹ ನಿರ್ಮಾಣಕ್ಕೆ ನಮ್ಮ ಸಂಸ್ಥೆಯ ಜೊತೆಯಾಗಿದೆ. ಹರ್ಷಿಕಾ ಪೂಣಚ್ಛ ಅವರು ನಿರ್ದೇಶಿಸುತ್ತಿರುವ ಈ ಚಿತ್ರ ಐದು ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಕಿಶೋರ್, ಉಗ್ರಂ ಮಂಜು, ಕಾಕ್ರೋಚ್ ಸುಧೀ , ಯಶ್ ಶೆಟ್ಟಿ ಮುಂತಾದವರು ನಟಿಸುತ್ತಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ ಎಂದರು ನಿರ್ಮಾಪಕ ಮಧು ಮರಿಸ್ವಾಮಿ.
