ನಟಿ ರಾಗಿಣಿ ದ್ವಿವೇದಿ ಹೊಸ ಚಿತ್ರಕ್ಕೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಶೀರ್ಷಿಕೆ; ಗ್ರಾಮೀಣ ಮಹಿಳೆಯ ಗೆಟಪ್‌ನಲ್ಲಿ ತುಪ್ಪದ ಹುಡುಗಿ
ಸರ್ಕಾರಿ ನ್ಯಾಯಬೆಲೆ ಅಂಗಡಿ ಎಂಬ ಶೀರ್ಷಿಕೆಯ ಹೊಸ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ ನಟಿ ರಾಗಿಣಿ ದ್ವಿವೇದಿ.

Actress Ragini Dwivedi: ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಇತ್ತೀಚಿನ ದಿನಗಳಲ್ಲಿ ಸಿನಿಮಾ ಆಯ್ಕೆ ವಿಚಾರದಲ್ಲಿ ತುಂಬ ವಿಭಿನ್ನವಾಗಿ ಯೋಚಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಒಂದಷ್ಟು ಪ್ರಯೋಗಗಳಿಗೂ ಅವರನ್ನು ಒಡ್ಡಿಕೊಳ್ಳುತ್ತಿದ್ದಾರೆ. ಈಗ ಆ ಸಾಲಿಗೆ ಹೊಸ ಸಿನಿಮಾ ಸೇರ್ಪಡೆಯಾಗುತ್ತಿದೆ. ಅದುವೇ "ಸರ್ಕಾರಿ ನ್ಯಾಯಬೆಲೆ ಅಂಗಡಿ" ಸಿನಿಮಾ.
ಸರ್ಕಾರಿ ನ್ಯಾಯಬೆಲೆ ಅಂಗಡಿ" ಹೀಗೊಂದು ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಹೆಚ್ಚಾಗಿ ಗ್ಲಾಮರಸ್ ಪಾತ್ರಗಳಲ್ಲಿ ಮಿಂಚಿದ್ದ ನಟಿ ರಾಗಿಣಿ ದ್ವಿವೇದಿ, ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಈಗಾಗಲೇ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಬಹುತೇಕ ಸ್ಕ್ರಿಪ್ಟ್ ಕಾರ್ಯಗಳು ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ಸಿನಿಮಾದ ಟೈಟಲ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಚಿತ್ರತಂಡ, ಹಾಡುಗಳ ರೆಕಾರ್ಡಿಂಗ್ ಆರಂಭಿಸಿದೆ.
ಕೆರಿಯರ್‌ಗೆ ಹೊಸ ಮೈಲಿಗಲ್ಲು
ಇದೇ ವೇಳೆ ಮಾತನಾಡಿದ ನಟಿ ರಾಗಿಣಿ ದ್ವಿವೇದಿ, “ಇಲ್ಲಿಯವರೆಗೆ ನಾನು ಮಾಡಿರುವ ಪಾತ್ರಗಳಿಗಿಂತ ಸಂಪೂರ್ಣ ವಿಭಿನ್ನವಾದ ಕಥೆ ಮತ್ತು ಪಾತ್ರ ಈ ಸಿನಿಮಾದಲ್ಲಿದೆ. ಇಡೀ ಚಿತ್ರದ ಕಥೆ ನನ್ನ ಪಾತ್ರದ ಸುತ್ತ ನಡೆಯುತ್ತದೆ. ಇಂದಿನ ಸಮಾಜದಲ್ಲಿ ಆಹಾರ ವಿತರಣೆಯಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ನಮಗೆ ಗೊತ್ತಿಲ್ಲದ ಶಾಕಿಂಗ್ ಎನಿಸುವಂಥ ಅನೇಕ ವಿಷಯಗಳು ಈ ಸಿನಿಮಾದಲ್ಲಿದೆ. ನನಗೂ ಕೂಡ ಈ ಸಿನಿಮಾದ ಕಥೆ ಮತ್ತು ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ನನ್ನ ಸಿನಿಮಾ ಕೆರಿಯರ್‌ನಲ್ಲಿ ಇದೊಂದು ವಿಭಿನ್ನ ಸಿನಿಮಾವಾಗಲಿದೆ” ಎಂದರು.
ನಿರ್ದೇಶಕರು ಹೇಳುವುದೇನು?
ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸಾತ್ವಿಕ್ ಪವನ ಕುಮಾರ್, ʼಇದೊಂದು ನೈಜ ವಿಷಯವನ್ನು ಆಧರಿಸಿದ ಚಿತ್ರ. ನಮ್ಮ ನಡುವೆಯಿರುವ ʼಸರ್ಕಾರಿ ನ್ಯಾಯಬೆಲೆ ಅಂಗಡಿʼಗಳಲ್ಲಿ ನಡೆಯುವ ನೈಜ ವಿಷಯಗಳೇ ಈ ಚಿತ್ರದ ಕಥಾಹಂದರ. ಇದನ್ನು ಒಂದಷ್ಟು ಕುತೂಹಲಭರಿತವಾಗಿ ಈ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ. ರಾಗಿಣಿ ದ್ವಿವೇದಿ ಅವರಿಗೆ ಇಲ್ಲೊಂದು ಹೊಸಥರದ ಪಾತ್ರವಿದೆ. ಸರ್ಕಾರಿ ನ್ಯಾಯಬೆಲೆ ಅಂಗಡಿಯನ್ನು ನಡೆಸುವ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ಅವರಿಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆʼ ಎಂದು ಚಿತ್ರದ ಕಥೆ ಮತ್ತು ಪಾತ್ರದ ಬಗ್ಗೆ ಸಣ್ಣ ಎಳೆಯನ್ನು ಬಿಟ್ಟುಕೊಟ್ಟರು.
ಸಾತ್ವಿಕ್ ಪವನ್ ನಿರ್ದೇಶನ
ಜಯಶಂಕರ ಟಾಕೀಸ್ ಬ್ಯಾನರಿನಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರವನ್ನು ತೇಜು ಮೂರ್ತಿ ಮತ್ತು ಎಸ್. ಪದ್ಮಾವತಿ ಚಂದ್ರಶೇಖರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದಾರೆ. ಇತ್ತೀಚೆಗಷ್ಟೇ ʼತಾಯವ್ವʼ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಸಾತ್ವಿಕ್ ಪವನ ಕುಮಾರ್ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರಕ್ಕೆ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಅನಂತ್ ಆರ್ಯನ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಸದ್ಯ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದಲ್ಲಿ ನಟಿ ರಾಗಿಣಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು ಉಳಿದಂತೆ ಅನೇಕ ಹಿರಿಯ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಮಾರ್ಚ್ ತಿಂಗಳಿನಲ್ಲಿ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಬಹುತೇಕ ಚಿತ್ರೀಕರಣ ನಡೆಯಲಿದೆ.
