ನಟನೆ ಜತೆಗೆ ಬರಹಗಾರ್ತಿಯೂ ಆದ ‘ಸಿಂಪಲ್‌’ ನಟಿ; ರೆಕ್ಕೆ ಇದ್ದರೆ ಸಾಕೆ ಪುಸ್ತಕ ಬರೆದ ಶ್ವೇತಾ ಶ್ರೀವಾಸ್ತವ್
ಕನ್ನಡ ಸುದ್ದಿ  /  ಮನರಂಜನೆ  /  ನಟನೆ ಜತೆಗೆ ಬರಹಗಾರ್ತಿಯೂ ಆದ ‘ಸಿಂಪಲ್‌’ ನಟಿ; ರೆಕ್ಕೆ ಇದ್ದರೆ ಸಾಕೆ ಪುಸ್ತಕ ಬರೆದ ಶ್ವೇತಾ ಶ್ರೀವಾಸ್ತವ್

ನಟನೆ ಜತೆಗೆ ಬರಹಗಾರ್ತಿಯೂ ಆದ ‘ಸಿಂಪಲ್‌’ ನಟಿ; ರೆಕ್ಕೆ ಇದ್ದರೆ ಸಾಕೆ ಪುಸ್ತಕ ಬರೆದ ಶ್ವೇತಾ ಶ್ರೀವಾಸ್ತವ್

Rekke Iddare Saake Book Release: ಸ್ಯಾಂಡಲ್‌ವುಡ್‌ ನಟಿ ಶ್ವೇತಾ ಶ್ರೀವಾತ್ಸವ್‌ ಇದೀಗ ಬರಹಗಾರ್ತಿಯಾಗಿದ್ದಾರೆ. ತಮ್ಮದೇ ಜೀವನದ ಕಥೆಯನ್ನು ಪುಸ್ತಕ ರೂಪದಲ್ಲಿ ಅಕ್ಷರಕ್ಕಿಳಿಸಿದ್ದಾರೆ. ಆ ಪುಸ್ತಕಕ್ಕೆ ರೆಕ್ಕೆ ಇದ್ದರೆ ಸಾಕೆ ಎಂಬ ಚೆಂದದ ಹೆಸರನ್ನೂ ಇಟ್ಟಿದ್ದಾರೆ.

ರೆಕ್ಕೆ ಇದ್ದರೆ ಸಾಕೆ ಪುಸ್ತಕ ಬರೆದ ನಟಿ ಶ್ವೇತಾ ಶ್ರೀವಾಸ್ತವ್
ರೆಕ್ಕೆ ಇದ್ದರೆ ಸಾಕೆ ಪುಸ್ತಕ ಬರೆದ ನಟಿ ಶ್ವೇತಾ ಶ್ರೀವಾಸ್ತವ್

Shwetha Srivatsav: ಸ್ಯಾಂಡಲ್‌ವುಡ್‌ನಲ್ಲಿ ನಟನೆ ಜತೆಗೆ ಬರವಣಿಗೆಯ ವಿಚಾರದಲ್ಲಿಯೂ ಒಂದಷ್ಟು ಕಲಾವಿದರು ಹೊಸ ಪ್ರಯತ್ನದತ್ತ ಹೊರಳುತ್ತಿದ್ದಾರೆ. ನಟಿ ರಂಜನಿ ರಾಘವನ್‌ ಈಗಾಗಲೇ ಕಥೆ ಡಬ್ಬಿ ಮತ್ತು ಸ್ವೈಪ್‌ ರೈಟ್‌ ಎಂಬ ಎರಡು ಪುಸ್ತಕ ಬರೆದಿದ್ದಾರೆ. ಇನ್ನೂ ಕೆಲವರು ಪುಸ್ತಕಗಳನ್ನು ಹೊರತಂದಿದ್ದಾರೆ. ಈಗ ಸ್ಯಾಂಡಲ್‌ವುಡ್‌ ನಟಿ ಶ್ವೇತಾ ಶ್ರೀವಾಸ್ತವ್ ನಟನೆಯ ಗ್ಯಾಪ್‌ನಲ್ಲಿಯೇ ಪುಸ್ತಕವೊಂದನ್ನು ಬರೆದಿದ್ದಾರೆ. ಅದಕ್ಕೆ ರೆಕ್ಕೆ ಇದ್ದರೆ ಸಾಕೆ ಎಂಬ ಹೆಸರನ್ನೂ ನೀಡಿದ್ದಾರೆ. ಕನ್ನಡದ ಜತೆಗೆ ಇಂಗ್ಲಿಷ್‌ನಲ್ಲಿ (against the grain) ಈ ಪುಸ್ತಕ ಲಭ್ಯವಿದೆ.

2006ರಲ್ಲಿ ಮುಖಾಮುಖಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಶ್ವೇತಾ ಶ್ರೀವಾಸ್ತವ್, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಕಿರೂಗೂರಿನ ಗಯ್ಯಾಳಿಗಳು, ರಾಘವೇಂದ್ರ ಸ್ಟೋರ್ಸ್, ಹೋಪ್ ಸೇರಿ ಮುಂತಾದ ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದರು. ನಟಿಯಾಗಿ ಪರಿಚಿತರಾಗಿರುವ ಶ್ವೇತಾ ಶ್ರೀವಾಸ್ತವ್ ಈಗ ಲೇಖಕಿಯಾಗಿದ್ದಾರೆ. ಎರಡು ದಶಕಗಳ ತಮ್ಮ ಸಿನಿಮಾ ಜರ್ನಿಯ ಅನುಭವಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಿದ್ದಾರೆ.

ಪುಸ್ತಕದ ಬಗ್ಗೆ ಶ್ವೇತಾ ಹೇಳಿದ್ದೇನು?

"ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ಸಮುದಾಯದ ಪ್ರಗತಿಯನ್ನು ಅಳೆಯಬೇಕು" ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಮಾತಿನ ಮೂಲಕ ತಮ್ಮ ಮಾತು ಪ್ರಾರಂಭಿಸಿದ ನಟಿ ಶ್ವೇತಾ ಶ್ರೀವಾಸ್ತವ್, ಅಂಬೇಡ್ಕರ್ ಅವರು ಹೇಳಿದ ಮಾತು ಎಲ್ಲಾ ರಂಗಕ್ಕೂ ಅನ್ವಯಿಸುತ್ತದೆ. ಇನ್ನು, ಹೆಣ್ಣುಮಕ್ಕಳು ಮದುವೆ ಆದ ನಂತರ ಚಿತ್ರದಲ್ಲಿ ನಾಯಕಿಯಾಗಿ ನಟಿಸಬಾರದು ಎಂಬುದು ಎರಡು ದಶಕಗಳ ಹಿಂದೆ ನಾನು ನಟಿಸಲು ಆರಂಭಿಸಿದಾಗಲೂ ಇತ್ತು. ಈಗಲೂ ಇದೆ. ಅದಕ್ಕೆ ಕಾರಣ ಏನು? ಹೆಣ್ಣು ಸ್ವಾವಲಂಬಿ ಅಲ್ಲವೇ? ಆಕೆ ಯಾವುದೇ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಎಂದರೆ, ಆಕೆ ಗಂಡ ಅಥವಾ ತಂದೆಯ ಹೆಸರಿನ ಜೊತೆಗೆ ಗುರುತಿಸಿಕೊಳ್ಳುತ್ತಾಳೆ. ಈ ಪರಿಸ್ಥಿತಿ ಎಲ್ಲಾ ಕಾಲದಲ್ಲೂ ಪ್ರಸ್ತುತ. ಹಾಗಂತ ನಮ್ಮ ಸಾಧನೆಗೆ ಮನೆಯವರ ಸಹಕಾರ ಬೇಡ ಅಂತ ನಾನು ಹೇಳುತ್ತಿಲ್ಲ. ವಾಸ್ತವದ ಬಗ್ಗೆ ಮಾತನಾಡುತ್ತೇನೆ ಅಷ್ಟೆ.

ಇದನ್ನ ನನ್ನ ಬಯೋಪಿಕ್‌ ಎಂದುಕೊಳ್ಳಬಹುದು...

ಸರಿಸುಮಾರು ಇಪ್ಪತ್ತು ವರ್ಷಗಳ ನನ್ನ ಸಿನಿಬದುಕನ್ನು ಸಾಧನೆ ಅಂತ ನಾನು ಕರೆದುಕೊಳ್ಳುತ್ತೇನೆ. ಈ ಸಮಯದಲ್ಲಿ ನಾನು ಎದುರಿಸಿದ ಸವಾಲುಗಳು, ಸನ್ನಿವೇಶಗಳು ಹಾಗೂ ಸಂತೋಷದ ವಿಚಾರಗಳು ಎಲ್ಲವನ್ನು ಈ ಪುಸ್ತಕದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಇದನ್ನು ಬಯೋಪಿಕ್‌‌ ಅಂತಲೂ ಕರೆಯಬಹುದು. ನಾನು‌ ಈ ಪುಸ್ತಕವನ್ನು ಮೊದಲು ಇಂಗ್ಲಿಷ್ ನಲ್ಲಿ ಬರೆದಿದ್ದೆ. ಆನಂತರ ತಾಯಿಭಾಷೆಯ ಬಗ್ಗೆ ನನಗೆ ಅಪಾರ ಪ್ರೀತಿ ಹಾಗೂ ಸೆಂಟಿಮೆಂಟ್. ಹೀಗಾಗಿ ಕನ್ನಡದಲ್ಲೂ ಬರೆಯೋಣ ಅನಿಸಿತು. ಪ್ರಕಾಶಕರ ಬಳಿ ಹೇಳಿದೆ ಅವರು ಒಪ್ಪಿಕೊಂಡರು. ಲೇಖಕಿಯಾಗಿ ಇದು ಮೊದಲ ಹೆಜ್ಜೆ" ಎಂದರು ಶ್ವೇತಾ.

15 ದೇಶಗಳಲ್ಲಿ ಪುಸ್ತಕ ಲಭ್ಯ

"ನನ್ನ ಮನೆಯವರು, ಸ್ನೇಹಿತರು, ನಿನ್ನ ಪುಸ್ತಕ‌ ನೀನೇ ಬಿಡುಗಡೆ ಮಾಡುತ್ತೀಯಾ? ಅತಿಥಿಗಳನ್ನು ಕರೆಯುವುದಿಲ್ಲವಾ ಎಂದರು. ಇಲ್ಲ, ಎಲ್ಲರೂ ಮಾಡುವ ರೀತಿ‌ ಮಾಡುವುದು ಬೇಡ ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ ಮುಂದೊಂದು ದಿನ ಅದ್ದೂರಿ ಸಮಾರಂಭವನ್ನು ಆಯೋಜಿಸುತ್ತೇನೆ. ಇಂದು ಭಾರತ ಸೇರಿದಂತೆ ಹದಿನೈದು ದೇಶಗಳಲ್ಲಿ ನನ್ನ ಪುಸ್ತಕ(ಆನ್ ಲೈನ್) ಬಿಡುಗಡೆಯಾಗಿದೆ. ಅಷ್ಟು ದೇಶಗಳಲ್ಲೂ ಪುಸ್ತಕ ದೊರೆಯಲಿದೆ. ಸಹಕಾರ ನೀಡಿದ ಪ್ರತಿಯೊಬ್ಬರಿಗೂ, ವಿಶೇಷವಾಗಿ ನನ್ನ ಪತಿ ಅಮಿತ್ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು.

Whats_app_banner