ಆರು ವರ್ಷಗಳ ನಂತರ ದಿನಕರ್ ತೂಗುದೀಪ ನಿರ್ದೇಶನದ ಚಿತ್ರ ತೆರೆಗೆ; ಜನವರಿ 24ರಂದು ‘ರಾಯಲ್’ ಬಿಡುಗಡೆ
Dinakar Thoogudeepa Movie: ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಸಿನಿಮಾ 2025ರ ಜನವರಿ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ದಿನಕರ್ ನಿರ್ದೇಶನದಲ್ಲಿ ಮತ್ತು ವಿರಾಟ್ ಅಭಿನಯದಲ್ಲಿ ಜಯಣ್ಣ, ‘ರಾಯಲ್’ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಸಂಜನಾ ಆನಂದ್ ನಾಯಕಿ. (ವರದಿ: ಚೇತನ್ ನಾಡಿಗೇರ್)
ಬೆಂಗಳೂರು: ದರ್ಶನ್ ಸಹೋದರ ದಿನಕರ್ ಕಳೆದ 18 ವರ್ಷಗಳಿಂದ ಚಿತ್ರ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಇಷ್ಟು ವರ್ಷಗಳಲ್ಲಿ ಬಿಡುಗಡೆಯಾಗಿರುವ ಅವರ ಚಿತ್ರಗಳು ಕೇವಲ ನಾಲ್ಕು. ಈಗ ಐದನೇ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಆರು ವರ್ಷಗಳ ನಂತರ ದಿನಕರ್ ನಿರ್ದೇಶನದ ಚಿತ್ರವೊಂದು ಬಿಡುಗಡೆಯಾಗುತ್ತಿರುವುದು ವಿಶೇಷ.
2018ರಲ್ಲಿ ದಿನಕರ್ ತೂಗುದೀಪ ನಿರ್ದೇಶನದ ‘ಲೈಫ್ ಜೊತೆಗೆ ಒಂದ್ ಸೆಲ್ಫಿ’ ಚಿತ್ರ ಬಿಡುಗಡೆಯಾಗಿತ್ತು. ಪ್ರಜ್ವಲ್ ದೇವರಾಜ್, ಹರಿಪ್ರಿಯಾ, ಪ್ರೇಮ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು. ಇದೀಗ ಆರು ವರ್ಷಗಳ ನಂತರ ದಿನಕರ್, ‘ರಾಯಲ್’ ಎಂಬ ಚಿತ್ರವನ್ನು ನಿರ್ದೇಶಿಸಿದ್ದು, ಆ ಚಿತ್ರವು 2025ರ ಜನವರಿ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಇದಕ್ಕೂ ಮೊದಲು ದಿನಕರ್, ಪುನೀತ್ ರಾಜಕುಮಾರ್ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದೇಶಿಸಬೇಕಿತ್ತು. ಈ ಚಿತ್ರದ ಘೋಷಣೆ ಸಹ ಆಗಿತ್ತು. ಜಯಣ್ಣ ಫಿಲಂಸ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸಬೇಕಿತ್ತು. ಆದರೆ, ಅಷ್ಟರಲ್ಲಿ ಪುನೀತ್ ರಾಜ್‌ಕುಮಾರ್ ನಿಧನರಾದ್ದರಿಂದ, ಚಿತ್ರ ರದ್ದಾಯಿತು. ಈ ಮಧ್ಯೆ, ಜಯಣ್ಣ ಫಿಲಂಸ್ ಬಳಿ ನಟ ವಿರಾಟ್ ಹಾಗೂ ದಿನಕರ್ ತೂಗುದೀಪ ಇಬ್ಬರ ಕಾಲ್‍ಶೀಟ್ ಇತ್ತು. ಹಾಗಾಗಿ, ದಿನಕರ್ ನಿರ್ದೇಶನದಲ್ಲಿ ಮತ್ತು ವಿರಾಟ್ ಅಭಿನಯದಲ್ಲಿ ಜಯಣ್ಣ, ‘ರಾಯಲ್’ ಚಿತ್ರವನ್ನು ನಿರ್ಮಿಸಿದ್ದಾರೆ.
ಮೂಲಗಳ ಪ್ರಕಾರ, ನಿರ್ಮಾಪಕ ಜಯಣ್ಣ, ವಿರಾಟ್ ಜೊತೆಗೆ ಮೂರು ಚಿತ್ರಗಳ ಒಪ್ಪಂದ ಮಾಡಿಕೊಂಡಿದ್ದಾರಂತೆ. ಆ ಪೈಕಿ ಮೊದಲ ಚಿತ್ರವಾಗಿ ‘ರಾಯಲ್’ ತೆರೆಗೆ ಬರುತ್ತಿದೆ. ಈ ಚಿತ್ರದ ಬಿಡುಗಡೆಯ ನಂತರ ಇನ್ನೆರಡು ಚಿತ್ರಗಳು ತಯಾರಾಗುತ್ತವಂತೆ.
ಇನ್ನು, ‘ರಾಯಲ್’ ಚಿತ್ರದ ಕುರಿತು ಚಿತ್ರತಂಡ ಯಾವೊಂದು ವಿಷಯವನ್ನೂ ಇದುವರೆಗೂ ಬಿಟ್ಟುಕೊಟ್ಟಿಲ್ಲ. ಕಥೆ ಏನು? ನಾಯಕನ ಪಾತ್ರವೇನು? ಮುಂತಾದ ವಿಷಯಗಳ ಬಗ್ಗೆ ಚಿತ್ರತಂಡ ಎಲ್ಲೂ ಮಾತನಾಡಿಲ್ಲ. ಚಿತ್ರದ ಒಂದೆರಡು ಹಾಡುಗಳು ಬಿಡುಗಡೆಯಾಗಿರುವುದು ಬಿಟ್ಟರೆ, ಚಿತ್ರತಂಡ ಇನ್ನೂ ಪೂರ್ಣಪ್ರಮಾಣದಲ್ಲಿ ಪ್ರಚಾರ ಶುರು ಮಾಡಿಲ್ಲ.
‘ರಾಯಲ್’ ಚಿತ್ರದಲ್ಲಿ ವಿರಾಟ್ ಜೊತೆಗೆ ಸಂಜನಾ ಆನಂದ್, ರಘು ಮುಖರ್ಜಿ, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಮತ್ತು ಸಂಕೇತ್ ಅವರ ಛಾಯಾಗ್ರಹಣವಿದೆ.
ವರದಿ: ಚೇತನ್ ನಾಡಿಗೇರ್