ಯುದ್ಧಕಾಂಡ ಸಿನಿಮಾ ವಿಮರ್ಶೆ: ಮಹಿಳಾ ದೌರ್ಜನ್ಯದ ವಿರುದ್ಧ ಯುದ್ಧ ಸಾರಿದ ಅಜೇಯ್ ರಾವ್
ಯುದ್ಧಕಾಂಡ ಸಿನಿಮಾ ವಿಮರ್ಶೆ: ಕನ್ನಡದಲ್ಲಿ ಕೋರ್ಟ್ ರೂಂ ಡ್ರಾಮಾಗಳ ಸಂಖ್ಯೆ ಕಡಿಮೆಯೇ. ಇತ್ತೀಚೆಗೊಂದು ಅಂತಹ ಗಮನಸೆಳೆಯುವ ಚಿತ್ರಗಳು ಬಂದಿಲ್ಲ. ‘ಯುದ್ಧಕಾಂಡ’ ಚಿತ್ರದ ಮೂಲಕ ಆ ಕೊರಗನ್ನು ನೀಗಿಸುವುದರ ಜೊತೆಗೆ ಸಮಾಜಕ್ಕೆ ಒಂದು ಎಚ್ಚರಿಕೆಯ ಸಂದೇಶ ಮತ್ತು ಎಚ್ಚರಿಕೆ ಕೊಡುವ ಪ್ರಯತ್ನವನ್ನು ಯುದ್ಧಕಾಂಡ ಚಿತ್ರದಲ್ಲಿ ಮಾಡಲಾಗಿದೆ. (ವಿಮರ್ಶೆ: ಚೇತನ್ ನಾಡಿಗೇರ್)

ಯುದ್ಧಕಾಂಡ ಸಿನಿಮಾ ವಿಮರ್ಶೆ: ಕಮರ್ಷಿಯಲ್ ಹೀರೋಗಳು ತಮ್ಮ ಚೌಕಟ್ಟು ಬಿಟ್ಟು ಬೇರೆ ತರಹದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಆರೋಪ ಕನ್ನಡದ ಹಲವು ಹೀರೋಗಳ ಮೇಲೆ ಇದೆ. ಈ ಪೈಕಿ ಅಜೇಯ್ ರಾವ್ ಸಹ ಒಬ್ಬರು. ಇದಕ್ಕೂ ಮೊದಲು ಅಜೇಯ್ ಹೆಚ್ಚು ಪ್ರಯೋಗಗಳನ್ನೇನೂ ಮಾಡಿರಲಿಲ್ಲ. ಈಗ ‘ಯುದ್ಧಕಾಂಡ’ ಚಿತ್ರದ ಮೂಲಕ ಅಜೇಯ್ ತಮ್ಮ ಚೌಕಟ್ಟು ಬಿಟ್ಟು ಹೊಸ ಪ್ರಯೋಗ ಮತ್ತು ಪ್ರಯತ್ನವನ್ನು ಮಾಡಿದ್ದಾರೆ.
ಚಿತ್ರದ ಕಥೆ ಏನು?
ಕಾನೂನಿನಲ್ಲಿ ಪದವಿ ಪಡೆದು ಸಣ್ಣಪುಟ್ಟ ಕೇಸ್‍ಗಳನ್ನು ನೋಡಿಕೊಂಡಿರುವ ಭರತ್‍ಗೆ (ಅಜೇಯ್ ರಾವ್) ದೊಡ್ಡದೊಂದು ಕೇಸ್ ಗೆಲ್ಲಬೇಕು ಎಂದು ಆಸೆ ಪಡುತ್ತಿರುತ್ತಾನೆ. ಹೀಗಿರುವಾಗಲೇ, ಒಮ್ಮೆ ಕೋರ್ಟ್ ಆವರಣದಲ್ಲಿ ನಿವೇದಿತಾ (ಅರ್ಚನಾ ಜೋಯಿಸ್), ಶಾಸಕನೊಬ್ಬನ ತಮ್ಮನನ್ನು ಬಹಿರಂಗವಾಗಿ ಗುಂಡಿಟ್ಟು ಕೊಲ್ಲುತ್ತಾಳೆ. ಸಾರ್ವಜನಿಕವಾಗಿ ನಡೆದ ಹತ್ಯೆ ಸಾಕಷ್ಟು ಸುದ್ದಿಯಾಗುತ್ತದೆ. ಆಕೆಗೆ ಶಿಕ್ಷೆಯಾಗಬೇಕು ಎಂದು ಎಂ.ಎಲ್.ಎ ಕಡೆಯವರು ದೊಡ್ಡ ಪ್ರಯತ್ನ ನಡೆಸುತ್ತಾರೆ. ಅದಕ್ಕಾಗಿ ಮೂರು ಕೋಟಿ ರೂ. ಕೊಟ್ಟು ರಾಬರ್ಟ್ ಡಿ’ಸೋಜಾ (ಪ್ರಕಾಶ್ ಬೆಳವಾಡಿ) ಎಂಬ ಜನಪ್ರಿಯ ವಕೀಲರನ್ನು ನೇಮಿಸುತ್ತಾರೆ. ಸಾರ್ವಜನಿಕವಾಗಿ ಕೊಲೆ ಮಾಡಿರುವುದರಿಂದ ಮತ್ತು ಇದೊಂದು open and shut ಕೇಸ್ ಆಗಿರುವುದರಿಂದ, ನಿವೇದಿತಾ ಪರವಾಗಿ ಹೋರಾಡುವುದಕ್ಕೆ ಯಾರೂ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಆಕೆಯ ಕೇಸನ್ನು ಭರತ್ ತೆಗೆದುಕೊಳ್ಳತ್ತಾನೆ. ಈ ಕೊಲೆ ಕೇಸಿನಿಂದ ಆಕೆಯನ್ನು ಭರತ್ ಉಳಿಸುವುದಕ್ಕೆ ಸಾಧ್ಯವಾ? ಸಾಧ್ಯವಾದರೂ ಹೇಗೆ? ಎಂದು ನೋಡಬೇಕಿದ್ದರೆ ‘ಯುದ್ಧಕಾಂಡ’ ಚಿತ್ರವನ್ನು ನೋಡಬೇಕು.
ಹೇಗಿದೆ ಚಿತ್ರ?
ಕನ್ನಡದಲ್ಲಿ ಕೋರ್ಟ್ ರೂಂ ಡ್ರಾಮಾಗಳ ಸಂಖ್ಯೆ ಕಡಿಮೆಯೇ. ಇತ್ತೀಚೆಗೊಂದು ಅಂತಹ ಗಮನಸೆಳೆಯುವ ಚಿತ್ರಗಳು ಬಂದಿಲ್ಲ. ‘ಯುದ್ಧಕಾಂಡ’ ಚಿತ್ರದ ಮೂಲಕ ಆ ಕೊರಗನ್ನು ನೀಗಿಸುವುದರ ಜೊತೆಗೆ ಸಮಾಜಕ್ಕೆ ಒಂದು ಎಚ್ಚರಿಕೆಯ ಸಂದೇಶ ಮತ್ತು ಎಚ್ಚರಿಕೆ ಕೊಡುವ ಪ್ರಯತ್ನವನ್ನು ಯುದ್ಧಕಾಂಡ ಚಿತ್ರದಲ್ಲಿ ಮಾಡಲಾಗಿದೆ. ಪ್ರಮುಖವಾಗಿ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕ್ರಮ ತೆಗೆದುಕೊಳ್ಳಬೇಕು ಎನ್ನುವುದರ ಜೊತೆಗೆ, ದೌರ್ಜನ್ಯ ಆಗಲಿಕ್ಕೆ ಬಿಡಬಾರದು ಎಂಬ ಸಂದೇಶವನ್ನು ಈ ಚಿತ್ರದಲ್ಲಿ ನೀಡಲಾಗಿದೆ. ಚಿತ್ರದ ಅಂತ್ಯದಲ್ಲಿ ಖುದ್ದು ಅಜೇಯ್, ರಾಷ್ಟ್ರಪತಿಗಳಿಗೆ ಪತ್ರ ಬರೆಯುವುದನ್ನು ತೋರಿಸಲಾಗಿದೆ.
ಸಾಮಾನ್ಯವಾಗಿ ಒಬ್ಬ ಜನಪ್ರಿಯ ಹೀರೋ ನಟಿಸಿದ ಚಿತ್ರ ಎಂದರೆ, ಒಂದಿಷ್ಟು ಕಮರ್ಷಿಯಲ್ ಅಂಶಗಳು ಇರುತ್ತವೆ. ಇಲ್ಲಿ ಹಾಡು, ಫೈಟು, ಕಾಮಿಡಿ ಎಂದು ಯಾವುದನ್ನೂ ಅನಾವಶ್ಯಕವಾಗಿ ತೂರಿಸದೆ, ನೇರವಾಗಿ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಪವನ್ ಭಟ್. ಚಿತ್ರ ಅಲ್ಲಲ್ಲಿ ಸ್ವಲ್ಪ ನಿಧಾನವಾಗಿದೆ ಮತ್ತು ಅಂತ್ಯದಲ್ಲಿ ಡ್ರಾಮಾ ಜಾಸ್ತಿಯಾಗಿದೆ ಎನ್ನುವುದು ಬಿಟ್ಟರೆ, ಪ್ರಾಮಾಣಿಕವಾಗಿ ಕಥೆ ಹೇಳಿದ್ದಾರೆ ಪವನ್. ವಾದ-ಪ್ರತಿವಾದದ ದೃಶ್ಯಗಳಿಗೆ ಇನ್ನಷ್ಟು ಫೋರ್ಸ್ ಬೇಕಿತ್ತು. ಇದೆಲ್ಲವನ್ನು ಹೊರತುಪಡಿಸಿದರೆ, ಚಿತ್ರತಂಡದ ಕಾಳಜಿ ಇಷ್ಟವಾಗುತ್ತದೆ.
ಅಜೇಯ್ ಪಾಲಿಗೆ ವಿಭಿನ್ನ ಪ್ರಯತ್ನ
ಮೊದಲೇ ಹೇಳಿದಂತೆ ಅಜೇಯ್ ರಾವ್ ಪಾಲಿಗೆ ಇದೊಂದು ವಿಭಿನ್ನ ಪ್ರಯೋಗ. ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ ಅಜೇಯ್ ಗಮನಸೆಳೆಯುತ್ತಾರೆ. ಪ್ರಕಾಶ್ ಬೆಳವಾಡಿ ಅವರಿಗೆ ಇಂಥದ್ದೊಂದು ಪಾತ್ರ ಹಿಂದೆ ಯಾವ ಕನ್ನಡ ಚಿತ್ರದಲ್ಲೂ ಸಿಕ್ಕಿರಲಿಲ್ಲ. ಅವರು ತಮ್ಮ ತೂಕದ ಅಭಿನಯದಿಂದ ಇಷ್ಟವಾಗುತ್ತಾರೆ. ಅರ್ಚನಾ ಜೋಯಿಸ್ ನಟಿಸಿದ್ದಾರೆ ಎನ್ನುವುದಕ್ಕಿಂತ ಪಾತ್ರವನ್ನು ಜೀವಿಸಿದ್ದಾರೆ. ನಾಗಾಭರಣ, ನಾಗೇಂದ್ರ ಶಾ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾಯಕಿ ಸುಪ್ರೀತಾ ಸತ್ಯನಾರಾಯಣ್‍ಗೆ ಇಲ್ಲಿ ಹೆಚ್ಚು ಕೆಲಸವಿಲ್ಲ. ಒಂದು ಇಂಟೆನ್ಸ್ ಕಥೆಯಾದ್ದರಿಂದ ಇಲ್ಲಿ ತಾಂತ್ರಿಕ ವಿಷಯಗಳಿಗೆ ಹೆಚ್ಚು ಅವಕಾಶಗಳಿಲ್ಲ. ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.
ಸಿನಿಮಾ ಎಂದರೆ ಬರೀ ಮನರಂಜನೆಯಲ್ಲ, ಅದರಾಚೆಗೂ ಒಂದು ಜವಾಬ್ದಾರಿ ಮತ್ತು ಬದ್ಧತೆ ಇದೆ ಎನ್ನುವವರು ಈ ಚಿತ್ರವನ್ನು ನೋಡಲೇಬೇಕು.
ಸಿನಿಮಾ: ಯುದ್ಧಕಾಂಡ
ಜಾನರ್: ಕೋರ್ಟ್ ರೂಂ ಡ್ರಾಮಾ
ನಿರ್ದೇಶನ: ಪವನ್ ಭಟ್
ನಿರ್ಮಾಣ: ಅಜೇಯ್ ರಾವ್
ಸಂಗೀತ: ಹೇಮಂತ್ ಜೋಯಿಸ್ ಮತ್ತು ಕೆ.ಬಿ. ಪ್ರವೀಣ್
ಛಾಯಾಗ್ರಹಣ: ಕಾರ್ತಿಕ್ ಶರ್ಮ
ಎಚ್‍ಟಿ ಕನ್ನಡ ರೇಟಿಂಗ್: 3/5
ವಿಮರ್ಶೆ: ಚೇತನ್ ನಾಡಿಗೇರ್