ಶಿವ ರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿಯ ‘45’ ಚಿತ್ರಕ್ಕೆ ಇನ್ನೆಷ್ಟು ತಿಂಗಳು ಕಾಯಬೇಕು? ಇಲ್ಲಿದೆ ನೋಡಿ ಉತ್ತರ
45 Movie Release date: ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ 45 ಚಿತ್ರದಿಂದ ದೊಡ್ಡ ಅಪ್ಡೇಟ್ ಸಿಕ್ಕಿದೆ. ಚಿತ್ರದ ಅನಿಮೇಟೆಡ್ ಹಾಡಿನ ಝಲಕ್ ಮೂಲಕ ಬಿಡುಗಡೆ ದಿನಾಂಕವನ್ನು ನಿರ್ದೇಶಕ ಅರ್ಜುನ್ ಜನ್ಯ ಬಹಿರಂಗಪಡಿಸಿದ್ದಾರೆ.

45 Movie Release Date: ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ 45 ಸಿನಿಮಾ ಸಹ ಒಂದು. ನವೆಂಬರ್‌ನಲ್ಲಿ ಶೂಟಿಂಗ್ ಮುಗಿಸಿಕೊಂಡಿರುವ ಈ ಸಿನಿಮಾ, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳತ್ತ ಮುಖಮಾಡಿದೆ. ಈ ನಡುವೆ, ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರದ ಹಾಡಿನ ಜತೆಗೆ ಬಿಡುಗಡೆ ದಿನಾಂಕವೂ ಘೋಷಣೆ ಆಗಿದೆ. ಅನಿಮೇಟೆಡ್ ಸಾಂಗ್ ಟೀಸರ್ ಮೂಲಕವೇ 45 ಸಿನಿಮಾ ಗಮನ ಸೆಳೆಯುತ್ತಿದೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಸಲ 45 ಸಿನಿಮಾ ಮೂಲಕ ಮೊದಲ ಸಲ ನಿರ್ದೇಶಕನ ಕ್ಯಾಪ್ ಹಾಕಿದ್ದಾರೆ. ಈ ಕಾರಣಕ್ಕೂ ಈ ಸಿನಿಮಾ ಒಂದಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಉಮಾ ರಮೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ.
ಟೀಸರ್‌ನಲ್ಲಿ ಏನಿದೆ
ಕಥೆ, ಸಂಗೀತ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಅರ್ಜುನ್ ಜನ್ಯ, 45 ಸಿನಿಮಾ ಮೂಲಕ ಬೇರೆಯದೇ ಕಥೆ ಹೇಳಲು ಹೊರಟಂತಿದೆ. ಅವರ ಕಲ್ಪನೆಗೆ ತಕ್ಕಂತೆಯೇ ಅರೈವಲ್ ಸಾಂಗ್ ಟೀಸರ್ ಬಿಡುಗಡೆ ಆಗಿದೆ. ವಿಶೇಷ ಸ್ಕೂಟರ್ ಏರಿ ಬರುವ ಶಿವರಾಜ್‌ಕುಮಾರ್, ಅದೇ ಸ್ಕೂಟರ್‌ನಲ್ಲಿನ ಗನ್‌ನಿಂದಲೇ ಎದುರಾಳಿಗಳನ್ನು ಸೆದೆಬಡಿಯುತ್ತಾರೆ. ಕೊನೆಯಲ್ಲಿ ಬೃಹತ್ ಬೆಟ್ಟವೊಂದು ಸಿಡಿಯುತ್ತದೆ. ರಾಜ್ ಬಿ ಶೆಟ್ಟಿ, ಉಪೇಂದ್ರ, ಶಿವಣ್ಣನ ಮುಖ ಅಲ್ಲಿ ಅನಾವರಣವಾಗುತ್ತದೆ. ಕನ್ನಡ ಮಿಶ್ರಿತ ಇಂಗ್ಲಿಷ್ ಹಾಡು ಮತ್ತದರ ಹಿನ್ನೆಲೆ ಸಂಗೀತ ಅಷ್ಟೇ ಹೊಸತಾಗಿದೆ.
ಯಾವಾಗ ಬಿಡುಗಡೆ?
ಶೂಟಿಂಗ್ ಮುಗಿಸಿಕೊಂಡು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳತ್ತ ಬಿಜಿಯಾಗಿರುವ ಈ ಸಿನಿಮಾ ಇನ್ನೇನು ಶೀಘ್ರದಲ್ಲಿ ತೆರೆಗೆ ಬರಲಿದೆ ಎಂದು ಹೇಳುವಂತಿಲ್ಲ. ಏಕೆಂದರೆ 45 ಸಿನಿಮಾ ತೆರೆಗೆ ಬರಲು ಬರೋಬ್ಬರಿ 8 ತಿಂಗಳು ಕಾಯಲೇಬೇಕು. ಅಂದರೆ ಈ ಸಿನಿಮಾ ಆಗಸ್ಟ್ 15ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಅದರಂತೆ, ಅರೈವಲ್ ಸಾಂಗ್ ಟೀಸರ್‌ಅನ್ನು ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಆನಂದ್ ಆಡಿಯೋ ಸಂಸ್ಥೆ ಖರೀದಿಸಿದೆ.
ತಾಂತ್ರಿಕ ವರ್ಗ ಹೀಗಿದೆ
ಛಾಯಾಗ್ರಹಣ: ಸತ್ಯ ಹೆಗಡೆ
ಸಂಕಲನ: ಕೆ ಎಂ ಪ್ರಕಾಶ್
ಸಾಹಸ: ಡಾ ಕೆ ರವಿವರ್ಮ, ಜಾಲಿ ಬಾಸ್ಟಿಯನ್, ಡಿಫರೆಂಟ್ ಡ್ಯಾನಿ, ಚೇತನ್ ಡಿಸೋಜಾ
ನೃತ್ಯ ನಿರ್ದೇಶಕರು: ಚಿನ್ನಿ ಪ್ರಕಾಶ್, ಬಿ ಧನಂಜಯ್
ಸಂಭಾಷಣೆ: ಅನಿಲ್ ಕುಮಾರ್
ಕಲಾ ನಿರ್ದೇಶಕ: ಮೋಹನ್ ಪಂಡಿತ್
