ಜಾಗ ಸಿಗದಿದ್ದಕ್ಕೆ ರಚಿತಾ ರಾಮ್‌ಗೆ ಬೇಸರ; ‘ಅಯೋಗ್ಯ 2’ ಮುಹೂರ್ತದಲ್ಲಿ ಹುಸಿಮುನಿಸು, ಕೊನೆಗೂ ರಾಜಿಯಾದ್ರ ಟಾಮ್ ಆ್ಯಂಡ್ ಜೆರ್ರಿ
ಅಯೋಗ್ಯ 2 ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಸತೀಶ್ ನೀನಾಸಂ ಬಗ್ಗೆ ರಚಿತಾ ರಾಮ್ ಕೋಪಿಸಿಕೊಂಡರು. ಇವರಿಬ್ಬರ ನಡುವೆ ಹುಸಿಮುನಿಸು, ಜಗಳಕ್ಕೆ ಕಾರಣವಾದ ಅಂಶವೇನು? ನಂತರ ಇವರಿಬ್ಬರು ರಾಜಿಯಾದ್ರ? ತಿಳಿಯೋಣ ಬನ್ನಿ. (ವರದಿ: ಚೇತನ್ ನಾಡಿಗೇರ್)
ಬೆಂಗಳೂರು: ‘ಅಯೋಗ್ಯ’ ಚಿತ್ರದ ಯಶಸ್ಸಿನ ನಂತರ, ಆ ಚಿತ್ರದ ಮುಂದುವರೆದ ಭಾಗವಾದ ‘ಅಯೋಗ್ 2’ ಇಂದು ದೊಡ್ಡ ಗಣಪತಿ ದೇವಸ್ಥಾನದಲ್ಲಿ ಪ್ರಾರಂಭವಾಗಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮುಖ್ಯ ಅತಿಥಿಯಾಗಿ ಬಂದು, ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭಕೋರಿ ಹೋಗಿದ್ದಾರೆ.
ಈ ಮಧ್ಯೆ, ಚಿತ್ರದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಮಧ್ಯೆ ಒಂದು ಸಣ್ಣ ಜಗಳವಾಗಿದೆ. ಪತ್ರಿಕಾಗೋಷ್ಠಿಗೆ ಬಂದ ಸಂದರ್ಭದಲ್ಲಿ ಸತೀಶ್ ಮೊದಲ ಸಾಲಿನ ಸೋಫಾದಲ್ಲಿ ಕುಳಿತರು. ಅವರ ಪಕ್ಕಕ್ಕೆ ಇನ್ನೊಂದಿಷ್ಟು ಜನ ಬಂದು ಕುಳಿತರು. ಈ ಸಂದರ್ಭದಲ್ಲಿ ರಚಿತಾಗೆ ಕುಳಿತುಕೊಳ್ಳುವುದಕ್ಕೆ ಜಾಗವಿರಲಿಲ್ಲ. ಅವರು ವೇದಿಕೆಯ ಒಂದು ಮೂಲೆಯಲ್ಲಿ ನಿಂತಿದ್ದರು. ಈ ಬಗ್ಗೆ ರಚಿತಾಗೆ ಬೇಸರವಾಗಿದೆ ಎಂದು ಹೇಳಲಾಗಿದೆ. ಆ ನಂತರ ವೇದಿಕೆಯ ಮೇಲೆ ಆಸನ ಹಾಕಿಕೊಟ್ಟಾಗ, ಸತೀಶ್ ಮತ್ತು ರಚಿತಾ ನಡುವೆ ಮುನಿಸು ಮುಂದುವರೆದು, ಈ ಕುರಿತು ಗುಸುಗುಸು ನಡೆದಿತ್ತು. ನಿರ್ದೇಶಕ ಮಹೇಶ್ ಸಮಾಧಾನ ಮಾಡುವುದಕ್ಕೆ ಮುಂದಾದರು. ಆ ನಂತರ ಪರಿಸ್ಥಿತಿ ಸ್ವಲ್ಪ ತಣ್ಣಗಾಯಿತು. ಆದರೂ ರಚಿತಾ ಮುಖದಲ್ಲಿ ಸ್ವಲ್ಪ ಹೊತ್ತು ಸಿಟ್ಟು ಮುಂದುವರೆದಿತ್ತು.
ಆ ನಂತರ ಮಾತನಾಡಿದ ರಚಿತಾ ರಾಮ್, ‘ಟಾಮ್ ಆ್ಯಂಡ್ ಜೆರ್ರಿ ಕಾರ್ಟೂನ್ ತರಹ ನಾವಿಬ್ಬರೂ ರಿಯಲ್ ಲೈಫ್ ಟಾಮ್ ಆ್ಯಂಡ್ ಜೆರ್ರಿಗಳು. ನಾವಿಬ್ಬರೂ ಮೂರನೇ ಬಾರಿಗೆ ಒಟ್ಟಿಗೆ ಈ ಚಿತ್ರದಲ್ಲಿ ನಟಿಸುತ್ತಿದ್ದೇವೆ. ನಾವಿಬ್ಬರೂ ಒಬ್ಬರಿಗೊಬ್ಬರಿಗೆ ಅಭಿನಂದಿಸುತ್ತಿರುತ್ತೇವೆ, ಕಿತ್ತಾಡಿಕೊಳ್ಳುತ್ತಿರುತ್ತೇವೆ. ನಮ್ಮಿಬ್ಬರ ನಡುವೆ ಅಂಥದ್ದೊಂದು ಸ್ನೇಹ, ಸ್ವಾತಂತ್ರ್ಯವಿದೆ. ಫೋಟೋಶೂಟ್ ಸಂದರ್ಭದಲ್ಲಿ ಅವರನ್ನು ನೋಡಿದಾಗ, ಆರು ವರ್ಷಗಳ ಹಿಂದೆ ನೀವು ಹೇಗಿದ್ದಿರೋ, ಈಗಲೂ ಹಾಗೆಯೇ ಇದ್ದಿರಿ ಎಂದು ಕಾಂಪ್ಲಿಮೆಂಟ್ ಮಾಡಿದ್ದೆ. ಅದೇ ಮೈಕಟ್ಟನ್ನು ಸಂಭಾಳಿಸಿಕೊಂಡು ಅವರು ಬಂದಿದ್ದಾರೆ. ನೀವು ಹಾಗೆಯೇ ಇದ್ದೀರಾ ಎಂದರು. ಮೂರನೆಯ ಭಾಗ ಮಾಡಿದರೂ, ನಾವಿಬ್ಬರೂ ಹಾಗೆಯೇ ಇರುತ್ತೀವಿ’ ಎಂದರು.
ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಮಹೇಶ್ ಗೌಡ, ‘ಸಿದ್ದೇಗೌಡನ ಪಾತ್ರ ಈ ಚಿತ್ರದಲ್ಲಿ ಮುಂದುವರೆಯಲಿದೆ. ಸಿದ್ದೇಗೌಡ ಗ್ರಾಮಪಂಚಾಯ್ತಿ ಸದಸ್ಯನಾಗುವುದರ ಜೊತೆಗೆ ನಂದಿನಿಯನ್ನು ಮದುವೆಯಾಗುವಲ್ಲಿಗೆ ಚಿತ್ರ ಮುಗಿದಿತ್ತು. ಗ್ರಾಮ ಪಂಚಾಯ್ತಿ ಸದಸ್ಯನಾದ ಮೇಲೆ ಆತ ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾನೆ ಎನ್ನುವುದು ಈ ಚಿತ್ರದ ಕಥೆ’ ಎಂದರು.
‘ಅಯೋಗ್ಯ’ ಚಿತ್ರದ ಬಹುತೇಕ ತಂಡ ಇಲ್ಲೂ ಮುಂದುವರೆಯಲಿದೆ ‘ಶಾಖಾಹಾರಿ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ವಿಶ್ವಜಿತ್ ರಾವ್ ಈ ಚಿತ್ರತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಚಿತ್ರದಲ್ಲಿ ಸತೀಶ್ ನೀನಾಸಂ, ರಚಿತಾ ರಾಮ್, ಸುಂದರ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಅರುಣಾ ಬಾಲರಾಜ್ ಮುಂತಾದವರು ಮುಂದುವರೆಯಲಿದ್ದು, ಮಂಜು ಪಾವಗಡ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ, ‘ಬಹದ್ದೂರ್’ ಚೇತನ್ ಸಾಹಿತ್ಯವಿದೆ.
‘ಭುವನಂ ಗಗನಂ’ ಚಿತ್ರವನ್ನು ನಿರ್ಮಿಸುತ್ತಿರುವ ಎಂ. ಮುನೇಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
- ವರದಿ: ಚೇತನ್ ನಾಡಿಗೇರ್