ಬಿಳಿಚುಕ್ಕಿ ಹಳ್ಳಿಹಕ್ಕಿ ಸಿನಿಮಾದ ನಾಯಕಿ ಅಗ್ನಿಸಾಕ್ಷಿ ವೈಷ್ಣವಿ ಗೌಡ ಅಲ್ಲ! ತೊನ್ನು ಸಮಸ್ಯೆಯ ಕಥೆಗೆ ಕಾಜಲ್ ಹೀರೋಯಿನ್
bili chukki halli hakki movie: ತೊನ್ನು ಸಮಸ್ಯೆಯ ಕಥೆ ಹೊಂದಿರುವ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರದ ನಾಯಕಿ ಕಾರಣಾಂತರಗಳಿಂದ ಬದಲಾಗಿದ್ದಾರೆ. ಈ ಸಿನಿಮಾಕ್ಕೆ ಅಗ್ನಿಸಾಕ್ಷಿ ಸೀರಿಯಲ್ ಖ್ಯಾತಿಯ ವೈಷ್ಣವಿ ಗೌಡ ಬದಲು ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. (ವರದಿ: ಚೇತನ್ ನಾಡಿಗೇರ್)
ಬೆಂಗಳೂರು: ಎರಡೂವರೆ ವರ್ಷಗಳ ಹಿಂದೆ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ (bili chukki halli hakki movie) ಎಂಬ ಚಿತ್ರದ ಘೋಷಣೆಯಾಗಿ, ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಆದಾಗ, ಮೊದಲು ನಾಯಕಿಯಾಗಿದ್ದವರು ‘ಅಗ್ನಿಸಾಕ್ಷಿ’ ಖ್ಯಾತಿಯ ವೈಷ್ಣವಿ ಗೌಡ. ಆಗಷ್ಟೇ, ವೈಷ್ಣವಿ ಅಭಿನಯದ ‘ಬಹುಕೃತ ವೇಷಂ’ ಎಂಬ ಚಿತ್ರ ಬಿಡುಗಡೆಯಾಗಿತ್ತು. ಆ ಚಿತ್ರದ ಮುಗಿಸಿ, ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರಕ್ಕೆ ನಾಯಕಿಯಾಗಿದ್ದರು ವೈಷ್ಣವಿ.
ಇದೀಗ ಚಿತ್ರೀಕರಣ ಮುಗಿದು, ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಇದೀಗ ನಾಯಕಿಯ ಸ್ಥಾನದಲ್ಲಿರುವವರು ಕಾಜಲ್ ಕುಂದರ್. ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರದ ನಾಯಕಿ ಕಾರಣಾಂತರಗಳಿಂದ ಬದಲಾಗಿದ್ದು, ಈಗ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದಲ್ಲಿನ ಆಕೆಯ ಮೊದಲ ಪೋಸ್ಟರ್ ಸಹ ಬಿಡುಗಡೆಯಾಗಿದೆ.
ಪೆಪ್ಪೆ ಸಿನಿಮಾದ ನಾಯಕಿ
ಕಾಜಲ್ ಕುಂದರ್ ಇದಕ್ಕೂ ಮೊದಲು ‘ಮೇಘ’, ‘ಪೆಪ್ಪೆ’, ‘ಲೈನ್‍ಮ್ಯಾನ್’, ‘ಬಾಂಡ್ ರವಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಕೆಲವು ದಿನಗಳ ಹಿಂದೆ ಕಾಜಲ್ ಅಭಿನಯದ ‘ಮೇಘ’ ಚಿತ್ರ ಬಿಡುಗಡೆಯಾಗಿತ್ತು. ಇದೇ ವರ್ಷ ಆಕೆಯ ಅಭಿನಯದ ಮೂರ್ನಾಲ್ಕು ಚಿತ್ರಗಳು ಬಿಡುಗಡೆಯಾಗಿವೆ. ಈಗ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರದಲ್ಲಿ ಕವಿತಾ ಎಂಬ ಪಾತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿಟಿಲಿಗೋ ಸಮಸ್ಯೆ ಇರುವ ಮನುಷ್ಯನನ್ನು ಮದುವೆಯಾಗುವ ಹೆಣ್ಣೊಬ್ಬಳ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರದ ಮೂಲಕ ಹೇಳಲಾಗಿದೆ.
ಕನ್ನಡದಲ್ಲಿ ತೊನ್ನು ರೋಗದ ಕುರಿತಾಗಿ ನಿರ್ಮಾಣವಾಗಿರುವ ಚಿತ್ರ ‘ಬಿಳಿಚುಕ್ಕಿ ಹಳ್ಳಿಹಕ್ಕಿ’. ಈ ಹಿಂದೆ ರಾಜ್ ಬಿ. ಶೆಟ್ಟಿ, ಚೈತ್ರಾ ಆಚಾರ್ ಮುಂತಾದವರು ನಟಿಸಿದ್ದ `ಮಾಹಿರಾ' ಚಿತ್ರವನ್ನು ನಿರ್ದೇಶನ ಮಾಡಿದ್ದ ಮಹೇಶ್ ಗೌಡ, ಇದೀಗ ತಾವೇ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ, ಅದರಲ್ಲಿ ನಾಯಕನಾಗಿಯೂ ನಟಿಸಿದ್ದಾರೆ.
ಇಡೀ ದೇಶದಲ್ಲಿಯೇ ಮೊದಲ ಬಾರಿ ಈ ಚಿತ್ರದ ಮೂಲಕ ವಿಟಿಲಿಗೋ (ತೊನ್ನು) ಸಮಸ್ಯೆ ಕುರಿತು ಹೇಳಲಾಗಿದೆಯಂತೆ. ಇಲ್ಲಿ ಸ್ವತಃ ವಿಟಿಲಿಗೋ ಸಮಸ್ಯೆ ಎದುರಿಸುತ್ತಿರುವ ಮಹೇಶ್ ಗೌಡ ಅವರೇ ನಾಯಕನ ಪಾತ್ರ ನಿರ್ವಹಿಸಿದ್ದಾರೆ. ಒಂದು ಸೂಕ್ಷ್ಮ ಕಥೆಯನ್ನು ಅವರು ಮನೋರಂಜನೆಯ ಅಂಶಗಳೊಂದಿಗೆ ಹೇಳುವ ಪ್ರಯತ್ನ ಮಾಡಿದ್ದಾರಂತೆ.
ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆ ದಿನಾಂಕ ಹೊರಬೀಳಲಿದೆ.
- ವರದಿ: ಚೇತನ್ ನಾಡಿಗೇರ್