ಕನ್ನಡ ಚಿತ್ರರಂಗಕ್ಕೆ ಜನವರಿಯಲ್ಲಿ 40 ಕೋಟಿಗೂ ಹೆಚ್ಚು ನಷ್ಟ! ಗೆಲುವಿಗಿಂತ ಸೋತ ಸಿನಿಮಾ ಪಟ್ಟಿಯೇ ದೊಡ್ಡದು
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡ ಚಿತ್ರರಂಗಕ್ಕೆ ಜನವರಿಯಲ್ಲಿ 40 ಕೋಟಿಗೂ ಹೆಚ್ಚು ನಷ್ಟ! ಗೆಲುವಿಗಿಂತ ಸೋತ ಸಿನಿಮಾ ಪಟ್ಟಿಯೇ ದೊಡ್ಡದು

ಕನ್ನಡ ಚಿತ್ರರಂಗಕ್ಕೆ ಜನವರಿಯಲ್ಲಿ 40 ಕೋಟಿಗೂ ಹೆಚ್ಚು ನಷ್ಟ! ಗೆಲುವಿಗಿಂತ ಸೋತ ಸಿನಿಮಾ ಪಟ್ಟಿಯೇ ದೊಡ್ಡದು

ಜನವರಿ ತಿಂಗಳಲ್ಲಿ 22 ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ಈ ಪೈಕಿ ಗೆದ್ದಿದ್ದು ಯಾವುದು? ನಿರ್ಮಾಪಕರಿಗೆ ದುಡ್ಡು ತಂದು ಕೊಟ್ಟ ಚಿತ್ರ ಯಾವುದು? ಒಟ್ಟಾರೆ ನಿರ್ಮಾಪಕರು ಕಳೆದುಕೊಂಡ ದುಡ್ಡೆಷ್ಟು? ಇಲ್ಲಿದೆ ಹೀಗೊಂದು ಲೆಕ್ಕ.

ಕನ್ನಡ ಚಿತ್ರರಂಗಕ್ಕೆ ಜನವರಿಯಲ್ಲಿ 40 ಕೋಟಿಗೂ ಹೆಚ್ಚು ನಷ್ಟ!
ಕನ್ನಡ ಚಿತ್ರರಂಗಕ್ಕೆ ಜನವರಿಯಲ್ಲಿ 40 ಕೋಟಿಗೂ ಹೆಚ್ಚು ನಷ್ಟ!

Kannada Film industry: ಕಳೆದ ವರ್ಷ ಸಾಕಷ್ಟು ಸೋಲು ಮತ್ತು ನಷ್ಟವನ್ನು ಕಂಡಿದ್ದ ಕನ್ನಡ ಚಿತ್ರರಂಗ, ವರ್ಷಾಂತ್ಯಕ್ಕೆ ಒಂದಿಷ್ಟು ಚಿತ್ರಗಳಿಗೆ ಪ್ರೇಕ್ಷಕರು ಬಂದ ಕಾರಣ, ಸ್ವಲ್ಪ ಆಶಾಭಾವನೆ ಮೂಡಿತ್ತು. ಹೊಸ ವರ್ಷದಲ್ಲಿ ಇನ್ನೊಂದಿಷ್ಟು ಗೆಲುವು ನೋಡಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಜನವರಿ ತಿಂಗಳಲ್ಲಿ ಒಟ್ಟು 22 ಕನ್ನಡ ಚಿತ್ರಗಳು ಬಿಡಗುಡೆಯಾಗಿದ್ದು, ಬಹುತೇಕ ಚಿತ್ರಗಳು ಹೆಚ್ಚು ಸದ್ದು ಮಾಡದೆ ಮರೆಯಾಗಿವೆ.

ಜನವರಿ ತಿಂಗಳಲ್ಲಿ 22 ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ಈ ಪೈಕಿ ಗೆದ್ದಿದ್ದು ಯಾವುದು? ನಿರ್ಮಾಪಕರಿಗೆ ದುಡ್ಡು ತಂದು ಕೊಟ್ಟ ಚಿತ್ರ ಯಾವುದು? ಎಂದು ಹುಡುಕಿದರೆ, ಉತ್ತರ ಸಿಗುವುದಿಲ್ಲ. ವರ್ಷದ ಮೊದಲ ಶುಕ್ರವಾರ (ಜನವರಿ 03) ‘ಗನ್ಸ್ ಆ್ಯಂಡ್‍ ರೋಸಸ್’, ‘ಸ್ವೇಚ್ಛಾ’ ಮತ್ತು ‘ಆಫ್ಟರ್ ಬ್ರೇಕಪ್‍’ ಎಂಬ ಚಿತ್ರಗಳು ಬಿಡುಗಡೆಯಾದವು. ಮೂರಕ್ಕೆ ಮೂರೂ ಹೊಸಬರ ಚಿತ್ರಗಳಾಗಿದ್ದವು. ಹೆಚ್ಚು ಪ್ರಚಾರವಿಲ್ಲದೆ ಬಿಡುಗಡೆಯಾದ ಈ ಚಿತ್ರಗಳು, ಕೆಲವೇ ದಿನಗಳಲ್ಲಿ ಮರೆಯಾದವು. 

ಜನವರಿ 10ರಂದು ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತವೆ ಎಂದು ಸುದ್ದಿಯಾದರೂ, ಕೊನೆಯ ಕ್ಷಣದಲ್ಲಿ ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಕಾರಣಾಂತರಗಳಿಂದ ಬಿಡುಗಡೆಯಾಗಿಲ್ಲ. ಅದನ್ನು ಹೊರತುಪಡಿಸಿದರೆ, ಶರಣ್ ಅಭಿನಯದ ‘ಛೂ ಮಂತರ್’, ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಮತ್ತು ‘ಟೆಡ್ಡಿ ಬೇರ್’ ಚಿತ್ರಗಳು ಬಿಡುಗಡೆಯಾದವು. ಈ ಪೈಕಿ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಚಿತ್ರವು ತನ್ನ ವಿಭಿನ್ನ ಕಥಾಹಂದರದಿಂದ ಗಮನಸೆಳೆಯಿತು. ಚಿತ್ರ 25 ದಿನ ಪ್ರದರ್ಶನ ಕಂಡಿದೆ ಎಂಬ ಸುದ್ದಿ ಸೋಷಿಯಲ್‍ ಮೀಡಿಯಾದಲ್ಲಿ ಓಡಾಡಿತ್ತು. ಅದೇ ರೀತಿ ‘ಛೂ ಮಂತರ್’ ಸಹ 25 ದಿನ ಓಡಿದ್ದಿಕ್ಕೆ ಚಿತ್ರತಂಡ ಸಂಭ್ರಮಿಸಿದೆ. ಆದರೆ, ಚಿತ್ರದ ಗಳಿಕೆ ಎಷ್ಟಾಯಿತು? ಹಾಕಿದ ಹಣ ಬಂತಾ? ಎಂಬ ಪ್ರಶ್ನೆಗಳಿಗೆ ಚಿತ್ರತಂಡದಿಂದ ಯಾವುದೇ ಉತ್ತರವಿಲ್ಲ.

ಬಹುನಿರೀಕ್ಷಿತ ಸಿನಿಮಾಗಳ ಸೋಲು

ಜನವರಿ 10ರಂದು ಮಿಸ್‍ ಆಗಿದ್ದ ‘ಸಂಜು ವೆಡ್ಸ್ ಗೀತಾ 2’, 17ರಂದು ಬಿಡುಗಡೆಯಾಯಿತು. ಚಿತ್ರ ಅಷ್ಟರಲ್ಲಾಗಲೇ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿ ಬಿಡುಗಡೆಯಾಯಿತು. ಆದರೆ, ಚಿತ್ರ ನೋಡಿದ ಪ್ರೇಕ್ಷಕರು ಖುಷಿಯಾಗಲಿಲ್ಲ. ಚಿತ್ರದ ಛಾಯಾಗ್ರಹಣ ಮತ್ತು ಸಂಗೀತದ ಬಗ್ಗೆ ಮೆಚ್ಚುಗೆ ಕೇಳಿಬಂದರೂ, ಒಟ್ಟಾರೆ ಕಥೆ, ನಿರೂಪಣೆ, ಅಭಿನಯದ ಬಗ್ಗೆ ಸಾಕಷ್ಟು ಅಪಸ್ವರಗಳು ಕೇಳಿ ಬಂದವು. ‘ಸಂಜು ವೆಡ್ಸ್ ಗೀತಾ’ ತರಹ ಈ ಚಿತ್ರ ಸಹ ಗೆಲ್ಲಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದ ಚಿತ್ರತಂಡಕ್ಕೆ ನಿರಾಸೆಯಾಗಿದ್ದು ಸುಳ್ಳಲ್ಲ. ಕೊನೆಗೆ ಚಿತ್ರವನ್ನು ಚಿತ್ರಮಂದಿರಗಳಿಂದ ಹಿಂಪಡೆದ ಚಿತ್ರತಂಡ, ಸದ್ಯದಲ್ಲೇ ಇನ್ನಷ್ಟು ಹೊಸ ದೃಶ್ಯಗಳನ್ನು ಸೇರಿಸಿ ಮರುಬಿಡುಗಡೆ ಮಾಡುವುದಾಗಿ ಘೋಷಿಸಿತು. ಚಿತ್ರ ನಿಜಕ್ಕೂ ಮರುಬಿಡುಗಡೆಯಾಗುತ್ತದಾ? ಎಂಬುದನ್ನು ಕಾದು ನೋಡಬೇಕು. ಇನ್ನು, ‘ಸಂಜು ವೆಡ್ಸ್ ಗೀತಾ 2’ ಜೊತೆಗೆ ಬಿಡುಗಡೆಯಾದ ‘ರಾವಣಾಪುರ’ ಮತ್ತು ‘ಕಣ್ಣಾಮುಚ್ಚೆ ಕಾಡೇಗೂಡೇ’ ಬಿಡುಗಡೆಯಾಗಿದ್ದೇ ಗೊತ್ತಾಗಲಿಲ್ಲ.

ಗಮನ ಸೆಳೆದ ರುದ್ರ ಗರುಡ ಪುರಾಣ

ಜನವರಿಯ ನಾಲ್ಕನೇ ಶುಕ್ರವಾರ (ಜನವರಿ 24) ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’, ದಿನಕರ್ ತೂಗುದೀಪ ನಿರ್ದೇಶನದ ‘ರಾಯಲ್‍’, ಚಿಕ್ಕಣ್ಣ ಮುಂತಾದವರು ನಟಿಸಿದ್ದ ‘ಫಾರೆಸ್ಟ್’ ಮತ್ತು ಹೊಸಬರ ‘ರೈಡ್‍’ ಚಿತ್ರಗಳು ಬಿಡುಗಡೆಯಾದವು. ಈ ಪೈಕಿ ‘ರುದ್ರ ಗರುಡ ಪುರಾಣ’ ಚಿತ್ರವು ಸ್ವಲ್ಪ ಗಮನಸೆಳೆಯಿತು. ‘ರಾಯಲ್‍’ ಹೇಳಹೆಸರಿಲ್ಲದೆ ಮಾಯವಾಯಿತು. ‘ಫಾರೆಸ್ಟ್’ ಬಗ್ಗೆಯೂ ಅದ್ಭುತವಾದ ಪ್ರತಿಕ್ರಿಯೆಯೇನೂ ಸಿಗಲಿಲ್ಲ. ಒಂದಿಷ್ಟು ಹೆಸರು ಮಾಡಿರುವವರ ಚಿತ್ರಗಳಿಗೇ ಕಷ್ಟವಾಗಿರುವಾಗ, ‘ರೈಡ್‍’ನಂಥ ಹೊಸಬರ ಎಷ್ಟು ದೂರ ಸಾಗಿತೋ ಗೊತ್ತಿಲ್ಲ.

ಇನ್ನು, ಜನವರಿಯ ಕೊನೆಯ ವಾರ ಒಂಬತ್ತು ಚಿತ್ರಗಳು ಬಿಡುಗಡೆಯಾಗಿವೆ. ‘ಹೈನ’, ‘ಗಣ’, ‘ನೋಡಿದವರು ಏನಂತಾರೆ’, ‘ಪಾರು ಪಾರ್ವತಿ’, ‘ಬೇಗೂರು ಕಾಲೋನಿ’, ‘ಕಾಡುಮಳೆ’, ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’, ‘ರಾವುತ’ ಮತ್ತು ‘ಇಟ್ಟಿಗೆ ಗೂಡಿನಲ್ಲಿ ರಾಜ-ರಾಣಿ’ ಚಿತ್ರಗಳು ಬಿಡುಗಡೆಯಾಗಿದ್ದು, ಈ ಪೈಕಿ ‘ಗಣ’, ‘ನೋಡಿದವರು ಏನಂತಾರೆ’ ಮತ್ತು ‘ಪಾರು ಪಾರ್ವತಿ’ ವಿಭಿನ್ನ ಶೈಲಿಯ ಚಿತ್ರಗಳು ಅಂತನಿಸಿಕೊಂಡರೂ, ಯಾವುದು ಎರಡನೇ ವಾರಕ್ಕೂ ಮುಂದುವರೆಯುತ್ತದೆ ಎಂದು ಇನ್ನೂ ಸ್ಪಷ್ಟವಿಲ್ಲ. ಮಿಕ್ಕಂತೆ ಕಳೆದ ವಾರ ಬಿಡುಗಡೆಯಾದ ಕೆಲವು ಚಿತ್ರಗಳು, ವಾರದ ಮಧ್ಯೆಯೇ ನಾಪತ್ತೆಯಾಗಿವೆ.

ಅಂದಾಜು 40 ಕೋಟಿ ನಷ್ಟ

ಈ 22 ಚಿತ್ರಗಳಿಂದ ಆಗಿರುವ ನಷ್ಟವೆಷ್ಟು? ಎಂಬ ಪ್ರಶ್ನೆ ಬರುವುದು ಸಹಜ. ಚಿತ್ರರಂಗದ ಮೂಲಗಳ ಪ್ರಕಾರ ಕನಿಷ್ಠ 40 ಕೋಟಿ ರೂ. ಕಳೆದುಕೊಂಡಿದ್ದಾರಂತೆ ನಿರ್ಮಾಪಕರು. ಫೆಬ್ರವರಿ ತಿಂಗಳಲ್ಲೂ ಹಲವು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದ್ದು, ಈ ಪೈಕಿ ಎಷ್ಟು ಚಿತ್ರಗಳು ಗೆಲ್ಲಬಹುದು? ಹಾಕಿದ ದುಡ್ಡನ್ನು ಪಡೆಯಬಹುದು? ಎಂಬುದರತ್ತ ಎಲ್ಲರ ಗಮನವಿದೆ.

ವರದಿ: ಚೇತನ್‌ ನಾಡಿಗೇರ್

Whats_app_banner