ನನಗೆ ದುಡ್ಡಿನ ಬೆಲೆ ಆಗಲೂ ಗೊತ್ತಿಲ್ಲ, ಈಗಲೂ ಗೊತ್ತಿಲ್ಲ; ಅಜೇಯ್ ರಾವ್ ʻಯುದ್ಧಕಾಂಡʼ ಚಿತ್ರದ ಸಾಲದ ಬಗ್ಗೆ ರವಿಚಂದ್ರನ್ ಮಾತು
‘ಯುದ್ಧಕಾಂಡ’ ಚಿತ್ರದ ಟ್ರೇಲರ್ ನೋಡಿದಾಗ ರವಿಚಂದ್ರನ್ ಅವರಿಗೆ ‘ಮಂಜಿನ ಹನಿ’ ನೆನಪಾಯಿತಂತೆ. ‘ಅದರಲ್ಲೂ ಹೆಣ್ಣಿನ ಕೂಗಿದೆ. ಮಗುವಿನ ಆಕ್ರಂದನವಿದೆ. ಅದನ್ನು ನೋಡಿ ಕಾಪಿ ಹೊಡೆದಿದ್ದೀಯ ಅಂತನಿಸಿತು ಎಂದಿದ್ದಾರೆ. ಜತೆಗೆ ತಮ್ಮ ಸಾಲದ ಬಗ್ಗೆಯೂ ಮಾತನಾಡಿದ್ದಾರೆ ಕ್ರೇಜಿಸ್ಟಾರ್.

Yuddhakaanda Trailer: ಅಜೇಯ್ ರಾವ್ ಅಭಿನಯದ ಮತ್ತು ನಿರ್ಮಾಣದ ‘ಯುದ್ಧಕಾಂಡ’ ಚಿತ್ರವು ಏಪ್ರಿಲ್ 18ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಭಾನುವಾರ ಬಿಡುಗಡೆಯಾಗಿದೆ. ಹಿರಿಯ ನಟ- ನಿರ್ದೇಶಕ ರವಿಚಂದ್ರನ್ ಶಂಖ ಊದುವ ಮೂಲಕ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಚಿತ್ರದ ಮೊದಲ ಐದು ಟಿಕೆಟ್‍ಗಳನ್ನು ಖರೀದಿಸುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಸಾಲದ ಬಗ್ಗೆ ರವಿಚಂದ್ರನ್ ಹೇಳಿದ್ದೇನು?
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ರವಿಚಂದ್ರನ್, ‘ನಾನು ಬರುವಾಗ ಅಜೇಯ್ ಅವರ ಒಂದಿಷ್ಟು ಸಂದರ್ಶನಗಳನ್ನು ನೋಡಿಕೊಂಡು ಬಂದೆ. ಕೆಲವು ಸಂದರ್ಶನಗಳಲ್ಲಿ ಸಾಲ ಮಾಡಿದ್ದೇನೆ ಎಂದು ಅಜೇಯ್ ಹಲವು ಬಾರಿ ಹೇಳಿಕೊಂಡಿದ್ದಾರೆ. ಅದನ್ನು ಕೇಳಿ ನನಗೆ ನನ್ನ ಸಾಲದ ನೆನಪಾಯಿತು. ಇಲ್ಲಿ ಸಾಲ ತೀರಿಸುವ ತಾಕತ್ತು ಬೇಕು. ಇಷ್ಟಕ್ಕೂ ಸಾಲ ಮಾಡಿದ್ದೀನಿ ಎಂದು ಯಾಕೆ ಹೇಳ್ತೀಯಾ. ನಾನು ಕೋಟಿಗಟ್ಟಲೆ ಹಾಕಿ ಸಿನಿಮಾ ಮಾಡಿದವನು. ನನಗೆ ದುಡ್ಡು ದುಡ್ಡಿನ ಬೆಲೆ ಆಗಲೂ ಗೊತ್ತಿಲ್ಲ. ಈಗಲೂ ಗೊತ್ತಿಲ್ಲ. ನನಗೆ 100 ಡ್ಯಾನ್ಸರ್ಸ್ ಬೇಕು, 100 ಫೈಟರ್ಸ್ ಬೇಕು ಎಂದು ಹೇಳಿಬಿಡುತ್ತಿದೆ. ಅಪ್ಪ ಎಲ್ಲಿಂದ ಹಣ ತರುತ್ತಿದ್ದರು ಅಂತ ನನಗೆ ಗೊತ್ತಿಲ್ಲ. ಒಂದು ದಿವಸ ಅವರು ಇಲ್ಲದಾಗ ಗೊತ್ತಾಯಿತು. ದುಡ್ಡಿಲ್ಲದಿದ್ದರೂ ಇಲ್ಲಿ ಕನಸು ಮುಖ್ಯ. ಎಷ್ಟು ದುಡ್ಡಿದೆಯೋ, ಅಷ್ಟರಲ್ಲಿ ಸಿನಿಮಾ ಮಾಡುವುದನ್ನು ಕಲಿಯಬೇಕು. ಇಲ್ಲಿ ಕಂಟೆಂಟ್ ಮುಖ್ಯ, ಏನು ಹೇಳುತ್ತಿದ್ದೀವಿ ಅನ್ನೋದು ಮುಖ್ಯ’ ಎಂದರು.
ʻನನ್ನ ಸಿನಿಮಾನ ಕಾಪಿ ಮಾಡಿದ್ದಾರೆ ಅನಿಸುತ್ತೆʼ
‘ಯುದ್ಧಕಾಂಡ’ ಚಿತ್ರದ ಟ್ರೇಲರ್ ನೋಡಿದಾಗ ರವಿಚಂದ್ರನ್ ಅವರಿಗೆ ‘ಮಂಜಿನ ಹನಿ’ ನೆನಪಾಯಿತಂತೆ. ‘ಅದರಲ್ಲೂ ಹೆಣ್ಣಿನ ಕೂಗಿದೆ. ಮಗುವಿನ ಆಕ್ರಂದನವಿದೆ. ಅದನ್ನು ನೋಡಿ ಕಾಪಿ ಹೊಡೆದಿದ್ದೀಯ ಅಂತನಿಸಿತು. ಆದರೆ, ಆ ಚಿತ್ರವನ್ನು ನನಗೆ ಕಾರಣಾಂತರಗಳಿಂದ ಮುಗಿಸೋಕೆ ಸಾಧ್ಯವಾಗಲಿಲ್ಲ. ನಿಮ್ಮ ಚಿತ್ರತಂಡ ನೋಡಿದರೆ, ನಿಮ್ಮಲ್ಲಿ ಒಂದು ಶ್ರದ್ಧೆ ಕಾಣುತ್ತಿದೆ. ನಿಮ್ಮ ತಂಡದಲ್ಲಿ ಒಂದು ತೃಪ್ತಿ ಮತ್ತು ಆತ್ಮವಿಶ್ವಾಸವಿದೆ. ನೀವು ಇಷ್ಟೆಲ್ಲಾ ಮಾಡಿ ಸಿನಿಮಾ ಮಾಡಿದ್ದೀರಾ. ನಾನು ಪ್ರೇಕ್ಷಕನಾಗಿ ಸಿನಿಮಾ ನೋಡುತ್ತೇನೆ. ಈಗಲೇ ಐದು ಗೋಲ್ಡ್ ಕ್ಲಾಸ್ ಟಿಕೆಟ್ ತೆಗೆದುಕೊಳ್ಳುತ್ತೇನೆ. ಸಿನಿಮಾ ನೋಡಿ ಫೋನ್ ಮಾಡುತ್ತೇನೆ’ ಎಂದು ತಕ್ಷಣವೇ ಜೇಬಿನಿಂದ ದುಡ್ಡು ತೆಗೆದು ಅಜೇಯ್‍ಗೆ ಕೊಟ್ಟರು.
ಯುದ್ಧಕಾಂಡ ಶೀರ್ಷಿಕೆ ಬಗ್ಗೆ ಅಜಯ್ ರಾವ್
ನಮಗೆಲ್ಲಾ ರವಿಚಂದ್ರನ್ ನಿಜವಾದ ಸ್ಫೂರ್ತಿ ಎಂದ ಅಜೇಯ್ ರಾವ್, ‘ಅವರು ನಮ್ಮ ತಂದೆ, ಅಣ್ಣನ ಸ್ಥಾನದಲ್ಲಿದ್ದಾರೆ. ನಾನು ‘ಕೃಷ್ಣ ಲೀಲಾ’ ಚಿತ್ರ ಮಾಡಿದಾಗ, ಆ ಚಿತ್ರದ ಕಲೆಕ್ಷನ್ ಇಳಿಯುತ್ತಿತ್ತು. ರವಿಚಂದ್ರನ್ ಅವರು ತಾವಾಗಿ ಬಂದು ಸಿನಿಮಾ ನೋಡಿ, ನಮ್ಮನ್ನ ಮನೆಗೆ ಕರೆದು ಒಂದಿಷ್ಟು ವಿಚಾರಗಳನ್ನು ಹೇಳಿದರು. ಸಿನಿಮಾ ಬಗ್ಗೆ ನಮಗೆ ಗೊತ್ತಿಲ್ಲದ ಒಂದಿಷ್ಟು ವಿಚಾರಗಳನ್ನು ಹೇಳಿದರು. ಆ ನಂತರ ಕಲೆಕ್ಷನ್ ಕ್ರಮೇಣ ಹೆಚ್ಚಾಯಿತು. ನಾನು ‘ಯುದ್ಧಕಾಂಡ’ ಮಾಡುವಾಗ ಮೊದಲು ಹೋಗಿ ಅವರ ಬಳಿ ಶೀರ್ಷಿಕೆ ಕೇಳಿದೆ. ಅವರು ಆಶೀರ್ವಾದ ಮಾಡಿ ಕಳಿಸಿದರು. ಈ ಚಿತ್ರದ ಪ್ರತಿಯೊಂದು ದೃಶ್ಯ ಮಾಡುವಾಗಲೂ, ನಾನು ಸೋಲಬಾರದು ಅಂತ ಹೆದರಿಕೊಂಡು ಸಿನಿಮಾ ಮಾಡಿದ್ದೇನೆ. ನಾನು ಜೀವನಪೂರ್ತಿ ಅವರ ತರಹ ಕನಸುಗಾರನಾಗಿ, ಹಠವಾದಿಯಾಗಿ ಅವರನ್ನು ಕಾಪಿ ಮಾಡಿಕೊಂಡಿರಲು ಇಷ್ಟಪಡುತ್ತೇನೆ. ಅವರು ಚಿತ್ರದ ಮೊದಲ ಐದು ಟಿಕೆಟ್‍ಗಳನ್ನು ಖರೀದಿಸಿದ್ದಾರೆ. ಈ ಚಿತ್ರ ನಿಜಕ್ಕೂ ದಾಖಲೆ ಮಾಡುತ್ತದೆ ಎಂಬ ನಂಬಿಕ ಇದೆ. ಈ ಚಿತ್ರದ ನಂತರ ಇನ್ನಷ್ಟು ಚಿತ್ರಗಳನ್ನು ಮಾಡುತ್ತೇನೆ ಮತ್ತು ಕನ್ನಡ ಚಿತ್ರಗಳನ್ನೇ ಮಾಡುತ್ತೇನೆ’ ಎಂದರು.
‘ಯುದ್ಧಕಾಂಡ’ ಚಿತ್ರಕ್ಕೆ ಪವನ್ ಭಟ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಅಜೇಯ್ ರಾವ್, ಅರ್ಚನಾ ಜೋಯಿಸ್, ಪ್ರಕಾಶ್ ಬೆಳವಾಡಿ, ಟಿ.ಎಸ್. ನಾಗಾಭರಣ ಮುಂತಾದವರು ನಟಿಸಿದ್ದಾರೆ.
ಬರಹ: ಚೇತನ್ ನಾಡಿಗೇರ್
