ನನ್ನ ಲವರ್‌ಗೆ I Love you ಹೇಳೋಕೆ ನನಗೆ ಒಂದು ವರ್ಷ ಬೇಕಾಯ್ತು; ಕಾಲೇಜು ಪ್ರೀತಿ ಬಗ್ಗೆ ಬಾಯ್ಬಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
ಪ್ರೀತಿ ಪ್ರೇಮದ ಸಾಕಷ್ಟು ಸಿನಿಮಾ ಮಾಡಿದ ನಟ ರವಿಚಂದ್ರನ್‌ಗೆ ಲವರ್ ಯಾರೂ ಇರಲಿಲ್ವಾ? ಎಂಬ ಪ್ರಶ್ನೆ ಇಂದಿಗೂ ಎಲ್ಲರನ್ನು ಕಾಡಬಹುದು. ಆದರೆ, “ನಾನೂ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೆ. ಒಂದು ವರ್ಷದ ಬಳಿಕ ಆಕೆಗೆ ಐ ಲವ್ ಯೂ ಹೇಳಿದ್ದೆ” ಎಂದು ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಶೋನಲ್ಲಿ ಹಳೇ ಲವ್‌ಸ್ಟೋರಿ ಬಾಯ್ಬಿಟ್ಟಿದ್ದಾರೆ ರವಿಚಂದ್ರನ್.

Crazy star Ravichandran: ಚಂದನವನದ ಸಿನಿಮಾಗಳಲ್ಲಿ ಪ್ರೀತಿಗೆ ತಮ್ಮದೇ ಆದ ಹೊಸ ವ್ಯಾಖ್ಯಾನ ನೀಡಿದವರು ಕ್ರೇಜಿಸ್ಟಾರ್ ರವಿಚಂದ್ರನ್. ಗುಲಾಬಿ ಹಿಡಿದು, ಎಷ್ಟೋ ಯುವ ಮನಸ್ಸುಗಳನ್ನು ಕದ್ದು ಗೆದ್ದವರು ಈ ಕ್ರೇಜಿಸ್ಟಾರ್. ಇಂತಿಪ್ಪ ರವಿಚಂದ್ರನ್, ತಮ್ಮ ಹಳೇ ಪ್ರೀತಿ ಬಗ್ಗೆ ಮಾತನಾಡಿದರೆ ಹೇಗಿರಬಹುದು. ಹೌದು, ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಶೋನಲ್ಲಿ ಈ ವಾರ ರೀ- ಕ್ರಿಯೇಟ್ ರೌಂಡ್ ನಡೆಯುತ್ತಿದೆ. ಅದರಲ್ಲೂ ರವಿಚಂದ್ರನ್ ಸೇರಿ ಹಲವು ನಟರ ಸಿನಿಮಾಗಳ ಎವರ್‌ಗ್ರೀನ್ ದೃಶ್ಯಗಳನ್ನ ಮರುಸೃಷ್ಟಿ ಮಾಡಲಾಗಿದೆ. ಆ ಪೈಕಿ ರಾಮಾಚಾರಿ, ರಣಧೀರ ಸಿನಿಮಾಗಳ ಸೀನ್‌ಗಳು ಸ್ವತಃ ರವಿಮಾಮನಿಗೆ ಇಷ್ಟವಾಗಿವೆ. ಆ ನೆಪದಲ್ಲಿಯೇ ತಮ್ಮ ಲವ್‌ಸ್ಟೋರಿ ಬಿಚ್ಚಿಟ್ಟಿದ್ದಾರೆ.
ಪ್ರೀತಿ ಪ್ರೇಮದ ಸಾಕಷ್ಟು ಸಿನಿಮಾ ಮಾಡಿದ ರವಿಚಂದ್ರನ್‌ಗೆ ಲವರ್ ಯಾರೂ ಇರಲಿಲ್ವಾ? ಎಂಬ ಪ್ರಶ್ನೆ ಇಂದಿಗೂ ಎಲ್ಲರನ್ನು ಕಾಡಬಹುದು. ಆದರೆ, ನಾನೂ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೆ. ಒಂದು ವರ್ಷದ ಬಳಿಕ ಆಕೆಗೆ ಐ ಲವ್ ಯೂ ಹೇಳಿದ್ದೆ ಎಂದು ಹೇಳಿಕೊಂಡಿದ್ದಾರೆ ರವಿಚಂದ್ರನ್. ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಶೋನಲ್ಲಿ ಈ ಅಂದಿನ ಮತ್ತು ಇಂದಿನ ಪ್ರೀತಿ ನಡುವಿನ ವ್ಯತ್ಯಾಸ ಏನು ಎಂಬ ಪ್ರಶ್ನೆಗೆ ಉತ್ತರ ನೀಡಿದ ಕ್ರೇಜಿಸ್ಟಾರ್, ತಮ್ಮ ಹಳೇ ದಿನಗಳಿಗೆ ಜಾರಿದ್ದಾರೆ.
ಪ್ರೀತಿ ಒಂದೇ, ಎಕ್ಸ್‌ಪ್ರೆಸ್ ಮಾಡೋ ರೀತಿ ಬದಲಾಗಿದೆ
ಆಗಿನ ಜನರೇಷನ್ ಲವ್‌ಗೆ ಈಗಿನ ಜನರೇಷನ್‌ನ ಲವ್‌ಗೆ ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನ ನೀಡಿದ ಕ್ರೇಜಿಸ್ಟಾರ್ ರವಿಚಂದ್ರನ್, "ಲವ್‌ಗೆ ಡಿಫರೆನ್ಸ್ ಬರಲು ಸಾಧ್ಯನೇ ಇಲ್ಲ. ಟೆಕ್ನಾಲಜಿ ಪ್ರಕಾರ ಎಲ್ಲವೂ ಫಾಸ್ಟಾಗಿ ಬೆಳೆದುಬಿಡ್ತಾರೆ ಅಷ್ಟೇ. ಲವ್ ಅಷ್ಟೇ.. ಯಾರನ್ನು ನೋಡಿದ ಮೇಲೆ ಅವ್ರ್ಯಾಕೆ ಇಷ್ಟ ಆಗ್ತಾರೆ ಅಂತ ಹೇಳೋಕೆ ಆಗಲ್ಲ. ಕ್ಯಾರೆಕ್ಟರ್‌ನ ನೋಡಿ ಇಷ್ಟ ಪಡ್ತಾರೆ, ಇನ್ನೊಂದು ಗುಣ ನೋಡಿ ಇಷ್ಟಪಡ್ತಾರೆ. ಯಾವುದೋ ಒಂದು ಹುಡುಗಿಯನ್ನ ಕಾರಣ ಇಲ್ಲದೆ ನೋಡಿ ಇಷ್ಟಪಡ್ತಾರೆ. ಯಾಕೆ ಅನ್ನೋದು ಯಾರಿಗೂ ಗೊತ್ತಿರಲ್ಲ" ಎಂದಿದ್ದಾರೆ.
ನನ್ನ ಹುಡುಗಿಗೆ ಲವ್ ಯೂ ಹೇಳಲು ವರ್ಷ ಬೇಕಾಯ್ತು
"ಕಾಲೇಜಿನಲ್ಲಿ ನನ್ನ ಲವ್ ಸ್ಟೋರಿ ಶುರುವಾಗಿದ್ದೂ ಅದೇ ರೀತಿ. ನಾನು ಕಾಲೇಜಿನಲ್ಲಿ ಬೈಕ್ ತೆಗೊಂಡು ಎಂಟರ್ ಆಗಬೇಕಾದರೆ, ಅಲ್ಲೆಲ್ಲೋ ನಿಂತಿದ್ದ ಹುಡುಗಿ ಹೀಗೆ ತಿರುಗ್ತಾಳೆ ಅಷ್ಟೇ. ಅಷ್ಟಕ್ಕೆ ನನ್ನ ಲವ್ ಸ್ಟೋರಿ ಸ್ಟಾರ್ಟ್ ಆಗಿಹೋಯ್ತು. ಆದರೆ, ನಾನು ಅವಳಿಗೆ ಐ ಲವ್ ಯೂ ಹೇಳೋಕೆ ಒಂದು ವರ್ಷ ತೆಗೊಂಡೆ. ಇವತ್ತು ನಿಮಗೆ ಒಂದು ಸೆಕೆಂಡ್ ಸಾಕು. ಯಾಕೆಂದ್ರೆ ಟೆಕ್ನಾಲಜಿ ನಿಮ್ಮ ಕೈಯಲ್ಲಿದೆ. ಟಕ್ ಅಂತ ಒಂದು ಮೆಸೆಜ್ ಹೋಗುತ್ತೆ"ಎಂಬುದು ರವಿಚಂದ್ರನ್ ಮಾತು.
ಸೆಕೆಂಡ್‌ನಲ್ಲಿಯೇ ಈ ಎಲ್ಲವೂ ಮುಗಿದೋಗುತ್ತೆ..
"ಮೊದಲ ಮೆಸೆಜ್‌ನಲ್ಲಿ ಗುಡ್ ಮಾರ್ನಿಂಗ್ ಕಳಿಸ್ತೀರಾ. ಅದಾದ ಮೇಲೆ ಗುಡ್ ಮಾರ್ನಿಂಗ್ ಡಿಯರ್ ಅಂತ ಕಳಿಸ್ತೀರಾ. ಅಲ್ಲಿಂದ ಒಂದು ಹಾರ್ಟ್ ಬರುತ್ತೆ. ಅದಾದ ಮೇಲೆ ಇನ್ನೊಂದು ಮತ್ತೊಂದು ಮಗದೊಂದು ಬರುತ್ತೆ. ಆಮೇಲೆ ಏನಾಗುತ್ತೆ ಅನ್ನೋದನ್ನು ನಾನು ಹೇಳೋದೆ ಬೇಕಾಗಿಲ್ಲ. ಅರ್ಧ ಸ್ಟೋರಿ ಮೊಬೈಲ್‌ನಲ್ಲಿಯೇ ಮುಗಿದು ಹೋಗಿರುತ್ತೆ. ವಾಟ್ಸಾಪ್ ಇನ್‌ಸ್ಟಾಗ್ರಾಂನಲ್ಲಿಯೂ ಮುಗಿದು ಹೋಗಿರುತ್ತೆ. ಕಣ್ಣಲ್ಲಿ ಕಣ್ಣಿಟ್ಟು ನೋಡುವ ಪ್ರೀತಿ ಇದ್ಯಲ್ಲ, ಅದರ ಬೆಲೆನೇ ಬೇರೆ" ಎಂದಿದ್ದಾರೆ ಕ್ರೇಜಿಸ್ಟಾರ್.
"ಕಣ್ಣಲ್ಲಿ ಕಣ್ಣಿಟ್ಟು ನೋಡುವ ಪ್ರೀತಿ ಇದ್ಯಲ್ಲ, ಅದರ ಲೋಕವೇ ಬೇರೆ. ಪ್ರೇಮಲೋಕ, ರಣಧೀರ, ಯಾರೇ ನೀನು ಚೆಲುವೆ, ಪ್ರೀತ್ಸೋದ್ ತಪ್ಪಾ ಸಿನಿಮಾ ಇಂದಿಗೂ ಚೆನ್ನಾಗಿವೆ ಅಂತ ಅನಿಸೋದು ಇದೇ ಕಾರಣಕ್ಕೆ. ಯಾಕಂದ್ರೆ, ಅಲ್ಲಿ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದ ಪ್ರೀತಿ ಅಲ್ಲಿತ್ತು" ಎಂದು ತಮ್ಮದೇ ಶೈಲಿಯಲ್ಲಿ ಅಂದಿನ ಪ್ರೀತಿ ಮತ್ತು ಇಂದಿನ ಪ್ರೀತಿಯ ಬಗ್ಗೆ ವ್ಯಾಖ್ಯಾನ ನೀಡಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್.

ವಿಭಾಗ